ಅಸಂಘಟಿತ ಹೋರಾಟಕ್ಕೆ ಸೋಲಿನ ದಂಡ ತೆತ್ತ ಮುಂಬೈ ಇಂಡಿಯನ್ಸ್; ಡೆಲ್ಲಿ ಕ್ಯಾಪಿಟಲ್ಸ್​ಗೆ ಭರ್ಜರಿ ಜಯ
ಕನ್ನಡ ಸುದ್ದಿ  /  ಕ್ರಿಕೆಟ್  /  ಅಸಂಘಟಿತ ಹೋರಾಟಕ್ಕೆ ಸೋಲಿನ ದಂಡ ತೆತ್ತ ಮುಂಬೈ ಇಂಡಿಯನ್ಸ್; ಡೆಲ್ಲಿ ಕ್ಯಾಪಿಟಲ್ಸ್​ಗೆ ಭರ್ಜರಿ ಜಯ

ಅಸಂಘಟಿತ ಹೋರಾಟಕ್ಕೆ ಸೋಲಿನ ದಂಡ ತೆತ್ತ ಮುಂಬೈ ಇಂಡಿಯನ್ಸ್; ಡೆಲ್ಲಿ ಕ್ಯಾಪಿಟಲ್ಸ್​ಗೆ ಭರ್ಜರಿ ಜಯ

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 9 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು.

ಅಸಂಘಟಿತ ಹೋರಾಟಕ್ಕೆ ಸೋಲಿನ ದಂಡ ತೆತ್ತ ಮುಂಬೈ ಇಂಡಿಯನ್ಸ್; ಡೆಲ್ಲಿ ಕ್ಯಾಪಿಟಲ್ಸ್​ಗೆ ಭರ್ಜರಿ ಜಯ
ಅಸಂಘಟಿತ ಹೋರಾಟಕ್ಕೆ ಸೋಲಿನ ದಂಡ ತೆತ್ತ ಮುಂಬೈ ಇಂಡಿಯನ್ಸ್; ಡೆಲ್ಲಿ ಕ್ಯಾಪಿಟಲ್ಸ್​ಗೆ ಭರ್ಜರಿ ಜಯ

ಜೆಸ್ ಜೊನಾಸೆನ್ (25ಕ್ಕೆ 3), ಮಿನ್ನು ಮಣಿ (17ಕ್ಕೆ 3) ಅವರ ಬೌಲಿಂಗ್ ಬಲ ಮತ್ತು ನಾಯಕಿ ಮೆಗ್​ ಲ್ಯಾನಿಂಗ್ ಅವರ ಅಜೇಯ ಅರ್ಧಶತಕದ (60*) ಸಹಾಯದಿಂದ ಹ್ಯಾಟ್ರಿಕ್​ ಗೆಲುವು ಸಾಧಿಸಿ ಬೀಗುತ್ತಿದ್ದ ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) 9 ವಿಕೆಟ್ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಮರಳಿದ್ದು, ಪ್ಲೇಆಫ್ ಹಾದಿಯನ್ನು ಸುಗಮಗೊಳಿಸಿದೆ. ಹರ್ಮನ್ ಪಡೆಯ ಅಸಂಘಟಿತ ಹೋರಾಟಕ್ಕೆ ಸೋಲಿನ ಬೆಲೆ ತೆರುವಂತಾಗಿದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ, ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲಿಲ್ಲ. ಘಟಾನುಘಟಿ ಬ್ಯಾಟರ್​ಗಳೇ ಡೆಲ್ಲಿ ಬೌಲರ್​ಗಳ ಎದುರು ಮಂಡಿಯೂರಿದರು. ಪರಿಣಾಮ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 123 ರನ್​ಗಳ ಸಾಧಾರಣ ಗುರಿ ನೀಡಿತು. ಹೀಲಿ ಮ್ಯಾಥ್ಯೂಸ್ ಮತ್ತು ಹರ್ಮನ್​ಪ್ರೀತ್ ಕೌರ್​ ತಲಾ 22 ರನ್ ಗಳಿಸಿದ್ದೇ ತಂಡದ ಪರ ಗರಿಷ್ಠ ಸ್ಕೋರ್. ಈ ಗುರಿ ಬೆನ್ನಟ್ಟಿದ ಡೆಲ್ಲಿ 14.3 ಓವರ್​​ಗಳಲ್ಲೇ ಗೆಲುವಿನ ನಗಾರಿ ಬಾರಿಸಿತು.

ಮುಂಬೈ  ನೀರಸ ಬ್ಯಾಟಿಂಗ್

ಬ್ಯಾಟಿಂಗ್ ಆರಂಭಿಸಿದ ಮುಂಬೈ ಕೆಟ್ಟ ಆರಂಭ ಪಡೆಯಿತು. ಯಾಸ್ತಿಕಾ ಭಾಟಿಯಾ ತನ್ನ ಐದನೇ ಪಂದ್ಯದಲ್ಲೂ ನಿರಾಸೆ ಮೂಡಿಸಿದರು. ಶಿಖಾ ಪಾಂಡೆ ಆರಂಭದಲ್ಲೇ ವಿಕೆಟ್ ಉರುಳಿಸಿ ಡೆಲ್ಲಿಗೆ ಮುನ್ನಡೆ ತಂದುಕೊಟ್ಟರು. ಬಳಿಕ ಹೀಲಿ ಮ್ಯಾಥ್ಯೂಸ್​ಗೆ ಅನ್ನಾಬೆಲ್ ಸದರ್ಲ್ಯಾಂಡ್ ಗೇಟ್​ಪಾಸ್ ಕೊಟ್ಟರು. ಬಳಿಕ ಜೆಸ್ ಜೊನಾಸೆನ್​ ಮತ್ತು ಮಿನ್ನು ಮಣಿ ಮುಂಬೈಗೆ ಇನ್ನಿಲ್ಲದಂತೆ ಕಾಡಿದರು. ಜಿದ್ದಿಗೆ ಬಿದ್ದವರಂತೆ ವಿಕೆಟ್ ಉರುಳಿಸಿದರು. ನ್ಯಾಟ್ ಸೀವರ್ (18), ಹರ್ಮನ್​ಪ್ರೀತ್ (22) ಮತ್ತು ಜಿ ಕಮಲಿನಿ (1) ಅವರನ್ನು ಜೊನಾಸೆನ್ ಹೊರದಬ್ಬಿದರು.

ಅಮೆಲಿಯಾ ಕೇರ್ (17), ಸಜೀವನ್ ಸಜನಾ (5) ಮತ್ತು ಸಂಸ್ಕೃತಿ ಗುಪ್ತಾಗೆ (3) ಮಿನ್ನು ಮಣಿ ಶಾಕ್ ಕೊಟ್ಟರು. ಆರಂಭಿಕರಿಂದ ಕೆಳ ಕ್ರಮಾಂಕದ ತನಕವೂ ಯಾವೊಬ್ಬ ಆಟಗಾರ್ತಿಯೂ ತಂಡಕ್ಕೆ ನೆರವಾಗಲಿಲ್ಲ. ಅಲ್ಪಮೊತ್ತಕ್ಕೆ ಕಟ್ಟಿ ಹಾಕಿದ ಡೆಲ್ಲಿ ಮತ್ತೊಮ್ಮೆ ಮಾರಕ ಬೌಲಿಂಗ್ ದಾಳಿಯನ್ನು ಪ್ರದರ್ಶಿಸುವಲ್ಲಿ ಯಶಸ್ವಿಯಾಯಿತು.

ಶಫಾಲಿ ಮಾಸ್, ಲ್ಯಾನಿಂಗ್ ಕ್ಲಾಸ್ ಬ್ಯಾಟಿಂಗ್

ಮುಂಬೈ ಕೊಟ್ಟಿದ್ದ 124 ರನ್​ಗಳ ಸಾಧಾರಣ ಗುರಿ ಬೆನ್ನಟ್ಟಿದ ಡೆಲ್ಲಿ ನೆಟ್​ ರನ್ ರೇಟ್ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿತು. ಅದರಲ್ಲೂ ಶಫಾಲಿ ವರ್ಮಾ ಮಾಸ್ ಬ್ಯಾಟಿಂಗ್ ನಡೆಸಿ ಓವರ್​ಗಳ ಅಂತರವನ್ನು ಕಡಿಮೆ ಮಾಡಿದರು. ಮುಂಬೈ ಬೌಲರ್​​​ಗಳ ವಿರುದ್ಧ ದಂಡಯಾತ್ರೆ ನಡೆಸಿದರು. 28 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಿತ 43 ರನ್ ಚಚ್ಚಿ ಔಟಾದರು. ಅದಾಗಲೇ ಗೆಲುವು ಸನಿಹವಾಗಿತ್ತು. ಮತ್ತೊಂದೆಡೆ ಮೆಗ್ ಲ್ಯಾನಿಂಗ್ 49 ಎಸೆತಗಳಲ್ಲಿ 9 ಬೌಂಡರಿ ಸಹಿತ ಅಜೇಯ 60 ರನ್ ಗಳಿಸಿದರು. ಮೊದಲ ವಿಕೆಟ್​ಗೆ 85 ರನ್ ಹರಿದು ಬಂತು. ಕೊನೆಯಲ್ಲಿ ಜೆಮಿಮಾ ರೋಡ್ರಿಗಸ್ ಅಜೇಯ 15 ರನ್ ಗಳಿಸಿದರು.

Prasanna Kumar P N

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner