ಗೆದ್ದು ಅಭಿಯಾನ ಮುಗಿಸಲು ಲಕ್ನೋ-ಮುಂಬೈ ಸಜ್ಜು; ಪ್ಲೇಯಿಂಗ್ XI, ಹವಾಮಾನ ವರದಿ, ಪಿಚ್ ರಿಪೋರ್ಟ್ ಇಲ್ಲಿದೆ
MI vs LSG IPL 2024 : 17ನೇ ಆವೃತ್ತಿಯ ಐಪಿಎಲ್ನ 67ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಎರಡೂ ತಂಡಗಳ ಪ್ಲೇಯಿಂಗ್ ಇಲೆವೆನ್, ಮುಖಾಮುಖಿ ದಾಖಲೆ, ಪಿಚ್ ರಿಪೋರ್ಟ್ ವಿವರ ಇಲ್ಲಿದೆ.

67ನೇ ಐಪಿಎಲ್ 2024 ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್, ಮುಂಬೈ ಇಂಡಿಯನ್ಸ್ (MI vs LSG) ವಿರುದ್ಧ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮೇ 17ರಂದು ಮುಖಾಮುಖಿಯಾಗಲಿದೆ. ಮುಂಬೈಗೆ ಈ ಪಂದ್ಯ ಔಪಚಾರಿಕವಾಗಿದೆ. ಆದರೆ ಎಲ್‌ಎಸ್‌ಜಿಗೆ ಮಹತ್ವವಾಗಿದೆ. ತಮ್ಮ ಪ್ಲೇಆಫ್ ಭರವಸೆ ಜೀವಂತವಾಗಿಡಲು ಗಣನೀಯ ಅಂತರದಿಂದ ಜಯ ಸಾಧಿಸಬೇಕು. ಪಂದ್ಯಾವಳಿಯಿಂದ ಈಗಾಗಲೇ ಹೊರಹಾಕಲ್ಪಟ್ಟ ಎಂಐ, ತಮ್ಮ ಅಭಿಯಾನವನ್ನು ತಮ್ಮ ತವರಿನ ಪ್ರೇಕ್ಷಕರ ಮುಂದೆ ಗೆದ್ದು ಅಭಿಯಾನ ಮುಗಿಸಲು ಕಸರತ್ತು ನಡೆಸುತ್ತಿದೆ.
ಎಸ್ಆರ್ಹೆಚ್ ಮತ್ತು ಡಿಸಿ ವಿರುದ್ಧದ ಇತ್ತೀಚಿನ ಪಂದ್ಯಗಳಲ್ಲಿ ಎಲ್‌ಎಸ್‌ಜಿ ಹಿನ್ನಡೆ ಎದುರಿಸಿತು. ಹೀಗಾಗಿ ಪ್ಲೇಆಫ್ ರೇಸ್ನಿಂದ ಬಹುತೇಕ ಹೊರ ಬಿದ್ದಿತು. ಆದರೂ ಕೊನೆಯ ಅವಕಾಶವನ್ನು ಹೊಂದಿದೆ. ಆದರೆ ಬೃಹತ್ ಅಂತರದಿಂದ ಗೆಲ್ಲಲೇಬೇಕಿದೆ. ಏಕೆಂದರೆ ಮೈನಸ್ ರನ್ರೇಟ್ ಹೊಂದಿದೆ. ಎಲ್‌ಎಸ್‌ಜಿ ಪ್ಲೇ ಆಫ್ ಪ್ರವೇಶಿಸಲು ಗುಲಗಂಜಿಯಷ್ಟು ಅವಕಾಶ ಇದ್ದರೂ ಅಗ್ರ-4 ರೊಳಗೆ ಅವಕಾಶ ಪಡೆಯುವುದು ಬಹುತೇಕ ಅನುಮಾನ. ಹೀಗಾಗಿ, ಎಲ್‌ಎಸ್‌ಜಿ ಆಟಗಾರರು 5 ಬಾರಿಯ ಚಾಂಪಿಯನ್‌ಗಳ ವಿರುದ್ಧ ಸ್ಫೋಟಕ ಪ್ರದರ್ಶನ ನೀಡಲೇಬೇಕು.
ಎಂಐ ಈಗಾಗಲೇ ಪಂದ್ಯಾವಳಿಯಿಂದ ಹೊರಗುಳಿದಿರುವುದರಿಂದ ಯಾವುದೇ ಒತ್ತಡ ಇಲ್ಲದೆ ಕಣಕ್ಕಿಳಿಯಲಿದ್ದು, ಎಲ್ಎಸ್ಜಿಯ ಕನಸಿಗೆ ತಣ್ಣೀರೆರಚಲು ಭರ್ಜರಿ ತಯಾರಿ ನಡೆಸುತ್ತಿದೆ. ಎಂಐ ತನ್ನ ಕಳೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಸೋತಿತ್ತು. ಇದೀಗ ಅಂತಿಮ ಪಂದ್ಯದಲ್ಲಿ ಗೆದ್ದು ಅಭಿಯಾನ ಮುಗಿಸುವ ಲೆಕ್ಕಾಚಾರದಲ್ಲಿದೆ. ಎರಡೂ ತಂಡಗಳಲ್ಲೂ ಉನ್ನತ ಶ್ರೇಣಿ ಆಟಗಾರರಿದ್ದು, ಜಿದ್ದಾಜಿದ್ದಿನ ಪೈಪೋಟಿಯನ್ನು ನಿರೀಕ್ಷಿಸಬಹುದಾಗಿದೆ. ಪ್ಲೇಯಿಂಗ್ XI, ಪಿಚ್ ರಿಪೋರ್ಟ್, ಹವಾಮಾನ ವರದಿ ಕುರಿತು ಮುಂದೆ ನೋಡೋಣ.
ಎಂಐ vs ಎಲ್‌ಎಸ್‌ಜಿ ಪಿಚ್ ವರದಿ
ಬ್ಯಾಟರ್‌ಗಳು ಮತ್ತು ಬೌಲರ್‌ಗಳಿಗೆ ಇಬ್ಬರಿಗೂ ನೆರವಾಗುವ ವಾಂಖೆಡೆ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಇಲ್ಲಿ ಟಾಸ್ ಗೆದ್ದ ನಾಯಕರು ಮೊದಲು ಬೌಲಿಂಗ್ ಆಯ್ಕೆ ಮಾಡಿದರೆ ಅನುಕೂಲಕರವಾಗಿರುತ್ತದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಇಬ್ಬನಿಯು ದೊಡ್ಡ ಪಾತ್ರ ವಹಿಸಲಿದೆ. ಹೀಗಾಗಿ ಪವರ್‌ಪ್ಲೇನಲ್ಲಿ ಚೆಂಡು ಸ್ವಿಂಗ್ ಆಗಬಹುದು.
ಮುಂಬೈ ಹವಾಮಾನ ಮುನ್ಸೂಚನೆ
ಐಪಿಎಲ್ನ ಅಂತಿಮ ಹಂತದ ಪಂದ್ಯಗಳಿಗೆ ಮಳೆ ಕಾಟ ಆವರಿಸಿದೆ. ಈಗಾಗಲೇ ಎರಡು ಪಂದ್ಯಗಳು ವರುಣನ ಅವಕೃಪೆಯಿಂದ ರದ್ದಾಗಿವೆ. ಇದೀಗ ಎಂಐ ಮತ್ತು ಎಲ್‌ಎಸ್‌ಜಿ ಪಂದ್ಯಕ್ಕೂ ಮಳೆ ಅಡಚಣೆ ಉಂಟು ಮಾಡುವ ನಿರೀಕ್ಷೆ ಇದೆ ಎಂದು ಹವಾಮಾನ ಮುನ್ಸೂಚನೆ ಹೇಳಿದೆ. ಆದರೆ ಇದು ಜೋರು ಮಳೆಯಲ್ಲ. ಹೀಗಾಗಿ ಪಂದ್ಯ ಜರುಗುವ ಸಾಧ್ಯತೆ ದಟ್ಟವಾಗಿದೆ.
ವಾಂಖೆಡೆ ಸ್ಟೇಡಿಯಂನಲ್ಲಿ ಐಪಿಎಲ್-2024 ಅಂಕಿ-ಅಂಶ
ಪಂದ್ಯಗಳು - 06
ಮೊದಲು ಬ್ಯಾಟಿಂಗ್ ಗೆದ್ದ ಪಂದ್ಯಗಳು - 03
ಎರಡನೇ ಬ್ಯಾಟಿಂಗ್‌ನಲ್ಲಿ ಗೆದ್ದ ಪಂದ್ಯಗಳು - 03
ಮೊದಲ ಇನಿಂಗ್ಸ್‌ನ ಸರಾಸರಿ ಮೊತ್ತ - 184
ಎರಡನೇ ಇನಿಂಗ್ಸ್‌ನ ಸರಾಸರಿ ಮೊತ್ತ - 173
ಲಕ್ನೋ vs ಮುಂಬೈ ಮುಖಾಮುಖಿ ದಾಖಲೆ
ಪಂದ್ಯಗಳು - 05
ಎಂಐ ಗೆಲುವು - 01
ಎಲ್‌ಎಸ್‌ಜಿ ಗೆಲುವು - 04
ಎಂಐ ಸಂಭಾವ್ಯ ಪ್ಲೇಯಿಂಗ್ XI
ಇಶಾನ್ ಕಿಶನ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ನೇಹಾಲ್ ವಧೇರಾ, ಹಾರ್ದಿಕ್ ಪಾಂಡ್ಯ (ನಾಯಕ), ಟಿಮ್ ಡೇವಿಡ್, ಅನ್ಶುಲ್ ಕಾಂಬೋಜ್, ಪಿಯೂಷ್ ಚಾವ್ಲಾ, ಜಸ್ಪ್ರೀತ್ ಬುಮ್ರಾ, ನುವಾನ್ ತುಷಾರ.
ಎಲ್‌ಎಸ್‌ಜಿ ಸಂಭಾವ್ಯ ಪ್ಲೇಯಿಂಗ್ XI
ಕ್ವಿಂಟನ್ ಡಿ ಕಾಕ್, ಕೆಎಲ್ ರಾಹುಲ್ (ನಾಯಕ), ದೀಪಕ್ ಹೂಡಾ, ಮಾರ್ಕಸ್ ಸ್ಟೋಯ್ನಿಸ್, ನಿಕೋಲಸ್ ಪೂರನ್, ಆಯುಷ್ ಬದೋನಿ, ಕೃನಾಲ್ ಪಾಂಡ್ಯ, ಅರ್ಷದ್ ಖಾನ್, ರವಿ ಬಿಷ್ಣೋಯ್, ಯಶ್ ಠಾಕೂರ್, ನವೀನ್-ಉಲ್-ಹಕ್.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)