ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20 ವಿಶ್ವಕಪ್ ನಡೆಯುತ್ತಿರೋದೇ ಭಾರತಕ್ಕಾಗಿ, ಹಣ ಬರೋದೇ ಅವರಿಂದ; ಐಸಿಸಿ ತರಾಟೆಗೆ ತೆಗೆದುಕೊಂಡ ವಾನ್-ಗಿಲ್‌ಕ್ರಿಸ್ಟ್

ಟಿ20 ವಿಶ್ವಕಪ್ ನಡೆಯುತ್ತಿರೋದೇ ಭಾರತಕ್ಕಾಗಿ, ಹಣ ಬರೋದೇ ಅವರಿಂದ; ಐಸಿಸಿ ತರಾಟೆಗೆ ತೆಗೆದುಕೊಂಡ ವಾನ್-ಗಿಲ್‌ಕ್ರಿಸ್ಟ್

ಟಿ20 ವಿಶ್ವಕಪ್‌ 2024ರಲ್ಲಿ ಭಾರತ ತಂಡಕ್ಕೆ ಆದ್ಯತೆ ನೀಡಲಾಗಿದೆ ಎಂದು ಮೈಕಲ್ ವಾನ್ ಮತ್ತು ಆಡಮ್ ಗಿಲ್‌ಕ್ರಿಸ್ಟ್ ಐಸಿಸಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಟಿ20 ವಿಶ್ವಕಪ್ ನಡೆಯುತ್ತಿರೋದೆ ಭಾರತಕ್ಕಾಗಿ; ಐಸಿಸಿ ತರಾಟೆಗೆ ತೆಗೆದುಕೊಂಡ ವಾನ್
ಟಿ20 ವಿಶ್ವಕಪ್ ನಡೆಯುತ್ತಿರೋದೆ ಭಾರತಕ್ಕಾಗಿ; ಐಸಿಸಿ ತರಾಟೆಗೆ ತೆಗೆದುಕೊಂಡ ವಾನ್ (AP)

ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಮತ್ತು ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಆಡಮ್ ಗಿಲ್‌ಕ್ರಿಸ್ಟ್ ಐಸಿಸಿ ವಿರುದ್ಧ ರೊಚ್ಚಿಗೆದ್ದಿದ್ದಾರೆ. 2024ರ ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕಾಗಿ ವಿಶೇಷ ನಿಯಮಗಳನ್ನು ರೂಪಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಜಾಗತಿಕ ಟೂರ್ನಿಯಲ್ಲಿ ಭಾರತದ ಪರವಾಗಿ ನಿಂತಿದ್ದಕ್ಕೆ ಐಸಿಸಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪಂದ್ಯಾವಳಿಯುದ್ದಕ್ಕೂ 'ಐಸಿಸಿ ಭಾರತವನ್ನು ಬೆಂಬಲಿಸುತ್ತದೆ' ಎಂಬುದಾಗಿ ಹಲವು ಬಾರಿ ಧ್ವನಿ ಎತ್ತಿರುವ ವಾನ್, ಬಾರ್ಬಡೋಸ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಟಿ20 ವಿಶ್ವಕಪ್ ಫೈನಲ್‌ ಪಂದ್ಯಕ್ಕೂ ಮುನ್ನ ಮತ್ತೊಮ್ಮೆ ತಗಾದೆ ಎತ್ತಿದ್ದಾರೆ. ಐಸಿಸಿ ಬೆಂಬಲದಿಂದ ಭಾರತ ಗೆಲ್ಲಲು ಸಜ್ಜಾಗಿದೆ ಎಂದು ಕಿಡಿ ಹಾರಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ವಾನ್ ಅವರ ವಾದದಲ್ಲಿ ಎರಡು ಅಂಶಗಳಿವೆ. ಮೊದಲನೆಯದ್ದು, ಸೂಪರ್ ಎಂಟರ ಘಟ್ಟದಲ್ಲಿ ಭಾರತ ತಂಡವು ಮೊದಲ ಅಥವಾ ಎರಡನೇ ಸ್ಥಾನ ಪಡೆದರೂ, ತಂಡದ ಸೆಮಿಫೈನಲ್ ಪಂದ್ಯವು ಗಯಾನಾದಲ್ಲಿ ನಡೆಯಲಿದೆ ಎಂದು ಭಾರತಕ್ಕೆ ಮೊದಲೇ ತಿಳಿದಿತ್ತು. ಎರಡನೆಯದ್ದು, ಪಂದ್ಯಾವಳಿಯಲ್ಲಿ ತಮ್ಮ ಎಲ್ಲಾ ಪಂದ್ಯಗಳನ್ನು ಒಂದೇ ಸಮಯದಲ್ಲಿ ಆಡುವ ಏಕೈಕ ತಂಡ ಭಾರತ. ಭಾರತದಲ್ಲಿ ವೀಕ್ಷಕರಿಗೆ ಸರಿಹೊಂದುವಂತೆ, ತಂಡದ ಎಲ್ಲಾ ಪಂದ್ಯಗಳನ್ನು ಹಗಲು ಹೊತ್ತಿನಲ್ಲಿ ಆಡಿಸಲಾಗಿದೆ (ಅಮೆರಿಕದಲ್ಲಿ ಹಗಲು ಇದ್ದಾಗ ಭಾರತದಲ್ಲಿ ರಾತ್ರಿ). ಆದರೆ ಇತರ ತಂಡಗಳು ಹಗಲು ಮತ್ತು ರಾತ್ರಿ ಹೊನಲು ಬೆಳಕಿನಲ್ಲಿ ಪಂದ್ಯ ಆಡಬೇಕಾಯ್ತು.

“ದ್ವಿಪಕ್ಷೀಯ ಸರಣಿಗಳಲ್ಲಿ ವಾಣಿಜ್ಯ ಹಿತಾಸಕ್ತಿಗೆ ಆದ್ಯತೆ ನೀಡುವುದು ವಿಶೇಷವೇನಲ್ಲ. ಆದರೆ, ಐಸಿಸಿ ಟೂರ್ನಿಯಲ್ಲಿ ಒಂದು ನಿರ್ದಿಷ್ಟ ತಂಡದ ಬಗ್ಗೆ ಸಹಾನುಭೂತಿ ತೋರುವುದು ಸರಿಯಲ್ಲ. ಐಸಿಸಿಗೆ ವಿಶ್ವಕಪ್‌ನಲ್ಲಿ ಇತರ ತಂಡಗಳಿಗಿಂತ ಭಾರತ ತಂಡ ಉತ್ತಮವಾಗಿರಬೇಕು. ಏಕೆಂದರೆ ಭಾರತ ತಂಡದ ಪಂದ್ಯಗಳು ಉತ್ತಮ ಆದಾಯವನ್ನು ತರುತ್ತವೆ” ಎಂದು ವಾನ್ ಹೇಳಿದ್ದಾರೆ.

ಕ್ರಿಕೆಟ್ ಜಗತ್ತಿನಲ್ಲಿ ಹಣದ ಆಟ

“ಇದು ಭಾರತದ ಪಂದ್ಯಾವಳಿ ಅಲ್ಲವೇ? ನಿಜಕ್ಕೂ ಇದು ಅವರದೇ ಟೂರ್ನಿ. ಭಾರತ ಬಯಸಿದ ಸಮಯಕ್ಕೆ ಆಡುತ್ತದೆ. ಅವರಿಗೆ ತಮ್ಮ ಸೆಮಿಫೈನಲ್ ಪಂದ್ಯ ಎಲ್ಲಿ ನಡೆಯುತ್ತದೆ ಎಂಬುದು ನಿಖರವಾಗಿ ತಿಳಿದಿತ್ತು. ತಂಡವು ಪ್ರತಿಯೊಂದು ಪಂದ್ಯಗಳನ್ನು ಬೆಳಗ್ಗೆ ಆಡಿದೆ. ಆಗ ಭಾರತದಲ್ಲಿ ಜನರು ರಾತ್ರಿಯ ವೇಳೆ ಪಂದ್ಯ ವೀಕ್ಷಿಸಬಹುದು. ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಆಟ ಹಣದ್ದು ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ದ್ವಿಪಕ್ಷೀಯ ಸರಣಿಗಳಲ್ಲಿ ನಾನು ಅದನ್ನು ಒಪ್ಪುತ್ತೇನೆ. ಆದರೆ ವಿಶ್ವಕಪ್‌ ವಿಷಯಕ್ಕೆ ಬಂದಾಗ ಐಸಿಸಿ ಎಲ್ಲ ತಂಡಗಳ ಬಗ್ಗೆಯೂ ಸಮಾನವಾಗಿರಬೇಕು. ಇದು ಕೇವಲ ಭಾರತದ ಪರವಾಗಬಾರದು” ಎಂದು ವಾನ್‌ ಹೇಳಿದ್ದಾರೆ.

ಕ್ರಿಕೆಟ್ ರಾಜಿಯಾಗಿದೆ ಎಂದು ಅರಿತುಕೊಳ್ಳದಷ್ಟು ಭಾರತೀಯ ಅಭಿಮಾನಿಗಳು ಮುಗ್ಧರಲ್ಲ ಎಂದ ಗಿಲ್‌ಕ್ರಿಸ್ಟ್

ತಮ್ಮ ತಂಡಕ್ಕೆ ಅನುಕೂಲವಾಗುವಂತೆ ಆಟವನ್ನು ಸ್ವಲ್ಪ ಮಟ್ಟಿಗೆ ರಾಜಿ ಮಾಡಿಕೊಳ್ಳಲಾಗಿದೆ ಎಂದು ತಿಳಿಯದಷ್ಟು ಭಾರತೀಯ ಅಭಿಮಾನಿಗಳು ಮುಗ್ಧರಲ್ಲ ಎಂದು ಗಿಲ್‌ಕ್ರಿಸ್ಟ್ ಹೇಳಿದ್ದಾರೆ. “ಬಹಳಷ್ಟು ಭಾವೋದ್ರಿಕ್ತ ಭಾರತೀಯ ಅಭಿಮಾನಿಗಳು ಅದರ ಬಗ್ಗೆ ಚೆನ್ನಾಗಿ ತಿಳಿದಿದ್ದಾರೆ. ಪಂದ್ಯದ ವಿಚಾರವಾಗಿ ಸ್ವಲ್ಪ ಮಟ್ಟಿಗೆ ರಾಜಿಯಾಗಿದೆ ಎಂದು ಅವರು ಒಪ್ಪುತ್ತಾರೆ. ಭಾರತ ಅತ್ಯುತ್ತಮ ತಂಡ. ಅವರು ಟೂರ್ನಿಯುದ್ದಕ್ಕೂ ಅತ್ಯಂತ ಸ್ಥಿರ ಪ್ರದರ್ಶನ ನೀಡಿದ್ದಾರೆ. ಬಹುಶಃ ದಕ್ಷಿಣ ಆಫ್ರಿಕಾ ಕೂಡ ಹೌದು,” ಎಂದು ಗಿಲ್‌ಕ್ರಿಸ್ಟ್ ಹೇಳಿದರು.