ಭಾರತ ಗೆಲ್ಲಲ್ಲ, ಅದು ಕಡಿಮೆ ಸಾಧಿಸಿದ ತಂಡ; ಟೀಮ್ ಇಂಡಿಯಾವನ್ನು ಮತ್ತೆ ಕೆಣಕಿದ ವಾನ್
Michael Vaughan: ಭಾರತ ಗೆಲ್ಲಲ್ಲ. ಅದು ಕಡಿಮೆ ಸಾಧಿಸಿದ ತಂಡ ಎಂದು ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಮೈಕೆಲ್ ವಾನ್ ಮತ್ತೆ ಜರಿದಿದ್ದಾರೆ.
ಸೆಂಚುರಿಯನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತವು ಹೀನಾಯ ಸೋಲು ಕಂಡಿತು. ಸೋಲಿನ ಬಳಿಕ ಭಾರತ ತಂಡದ ಕುರಿತು ವ್ಯಾಪಕ ಟೀಕೆಗಳು ಕೇಳಿ ಬರುತ್ತಿವೆ. ಈ ನಡುವೆ ಸದಾ ಭಾರತವನ್ನು ಕಣಕುವುದನ್ನೇ ಬದುಕಿನ ಭಾಗವಾಗಿಸಿಕೊಂಡಿರುವ ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾನ್, ಮತ್ತೊಮ್ಮೆ ಟೀಮ್ ಇಂಡಿಯಾವನ್ನು ಜರಿದಿದ್ದಾರೆ. ಭಾರತವು “ಅಂಡರ್‌ಚೀವಿಂಗ್ ತಂಡ” ಎಂದು ಕರೆದು ಮತ್ತೊಮ್ಮೆ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆ ಮೂಲಕ ತಮ್ಮ ಹಳೆಯ ಹೇಳಿಕೆಯನ್ನು ಪುನರುಚ್ಛರಿಸಿದ್ದಾರೆ.
ಹರಿಣಗಳ ನಾಡಿನಲ್ಲಿ ಭಾರತದ ಪಾಲಿಗೆ ಗಗನ ಕುಸುಮವಾಗಿರುವ ಸರಣಿ ಗೆಲುವು, ಈ ಬಾರಿಯೂ ಕನಸಾಗಿಯೇ ಉಳಿಯಿತು. ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ಇನ್ನಿಂಗ್ಸ್ ಮತ್ತು 32 ರನ್‌ಗಳ ಸೋಲಿನಿಂದ ಭಾರತಕ್ಕೆ ಸರಣಿ ಕೈತಪ್ಪಿತು. ದಕ್ಷಿಣ ಆಫ್ರಿಕಾ ಮುನ್ನಡೆ ಸಾಧಿಸಿತು. ಕೇವಲ ಮೂರೇ ದಿನಕ್ಕೆ ಮುಕ್ತಾಯಗೊಂಡ ಟೆಸ್ಟ್ ಪಂದ್ಯದ ಫಲಿತಾಂಶದ ಕುರಿತು ಫಾಕ್ಸ್ ಸ್ಪೋರ್ಟ್ಸ್‌ನಲ್ಲಿ ಮಾತನಾಡಿದ ವಾನ್, ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿದ್ದರೂ ಭಾರತ ತಂಡದ ಸಾಧನೆಯ ಕೊರತೆಯನ್ನು ಎತ್ತಿ ತೋರಿಸಿದ್ದಾರೆ.
ಇದನ್ನೂ ಓದಿ | ದಕ್ಷಿಣ ಆಫ್ರಿಕಾಗೆ ಗಾಯದ ಮೇಲೆ ಬರೆ; ಭಾರತ ವಿರುದ್ಧದ ಎರಡನೇ ಟೆಸ್ಟ್‌ನಿಂದ ಸ್ಟಾರ್ ವೇಗಿ ಹೊರಕ್ಕೆ
ಫಾಕ್ಸ್ ಸ್ಪೋರ್ಟ್ಸ್‌ನ ಚರ್ಚೆಯ ಪ್ಯಾನೆಲ್‌ನ ಭಾಗವಾಗಿರುವ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮಾರ್ಕ್ ವಾ ಅವರಲ್ಲಿ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ವಾನ್ ಪ್ರಶ್ನೆ ಕೇಳಿದ್ದಾರೆ. “ಕ್ರಿಕೆಟ್‌ನಲ್ಲಿ ಭಾರತವು ವಿಶ್ವದ ಅತ್ಯಂತ ಕಡಿಮೆ ಸಾಧನೆ ಮಾಡಿದ ಕ್ರೀಡಾ ತಂಡಗಳಲ್ಲಿ ಒಂದು ಎಂದು ನೀವು ಭಾವಿಸುತ್ತೀರಾ?” ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಯನ್ನು ವಾನ್ ಅವರಿಗೆ ತಿರುಗಿಸಿ ಕೇಳಲಾಯ್ತು. ಇದಕ್ಕೆ ಉತ್ತರಿಸಿದ ಅನುಭವಿ ಬ್ಯಾಟರ್, “ಇತ್ತೀಚಿನ ದಿನಗಳಲ್ಲಿ ಭಾರತ ಹೆಚ್ಚು ಗೆದ್ದಿಲ್ಲ. ನನ್ನ ಪ್ರಕಾರ ಭಾರತ ಕಡಿಮೆ ಸಾಧನೆ ಮಾಡಿದ ತಂಡ (ಅಂಡರ್ ಅಚೀವಿಂಗ್ ಟೀಮ್). ಅವರು ಏನನ್ನೂ ಗೆಲ್ಲುವುದಿಲ್ಲ. ಅವರು ಕೊನೆಯ ಬಾರಿಗೆ ಗೆದ್ದದ್ದು ಯಾವಾಗ? ಅವರಲ್ಲಿ ಪ್ರತಿಭೆಗ ಕೌಶಲ್ಯ ಏಲ್ಲವೂ ಇದ್ದರೂ ಗೆದ್ದಿಲ್ಲ” ಎಂದು ವಾನ್ ಕೊಂಕು ಮಾತನಾಡಿದ್ದಾರೆ.
“ಆಸ್ಟ್ರೇಲಿಯಾದಲ್ಲಿ ಭಾರತ ಎರಡು ಬಾರಿ ಗೆದ್ದಿದೆ. ಕಳೆದ ಕೆಲವು ವಿಶ್ವಕಪ್‌ಗಳಲ್ಲಿ ಇಲ್ಲ. ಟಿ20 ವಿಶ್ವಕಪ್‌ಗಳಲ್ಲಿ ಎಲ್ಲಿಯೂ ಇರಲಿಲ್ಲ. ಅವರದ್ದು ಉತ್ತಮ ತಂಡ. ಸಾಕಷ್ಟು ಪ್ರತಿಭೆಗಳಿವೆ. ಆದರೆ ಅವರಲ್ಲಿ ಪ್ರತಿಭೆ ಮತ್ತು ಸಂಪನ್ಮೂಲಗಳಿದ್ದರೂ ಅವರು ಗೆಲ್ಲುತ್ತಾರೆ ಎಂದು ನಾನು ಭಾವಿಸುವುದಿಲ್ಲ” ಎಂದು ಕುಟುಕಿದ್ದಾರೆ.
2022ರ ನವೆಂಬರ್ ತಿಂಗಳಲ್ಲಿ, ಭಾರತವು ಇಂಗ್ಲೆಂಡ್ ವಿರುದ್ಧ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ 10 ವಿಕೆಟ್‌ಗಳಿಂದ ಸೋತಿತ್ತು. ಆಗ ಮೊದಲ ಬಾರಿಗೆ ವಾನ್ ಭಾರತ ತಂಡವನ್ನು "ಅಂಡರ್ ಅಚೀವರ್ಸ್" ಎಂದು ಲೇವಡಿ ಮಾಡಿದ್ದರು. ಇದೀಗ ಮತ್ತೆ ಅದೇ ಮಾತನ್ನು ಪುನರುಚ್ಛರಿಸಿದ್ದಾರೆ.
ಮೊದಲ ಟೆಸ್ಟ್ ಪಂದ್ಯದ ಸೋಲಿನ ಬಳಿಕವು ಭಾರತವು ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ಜನವರಿ 3ರಿಂದ ನ್ಯೂಲ್ಯಾಂಡ್ಸ್‌ನಲ್ಲಿ ಪ್ರಾರಂಭವಾಗುವ ಎರಡನೇ ಟೆಸ್ಟ್‌ನಲ್ಲಿ ಕಣಕ್ಕಿಳಿಯಲಿದೆ. ಈ ಪಂದ್ಯದಲ್ಲಿ ಗೆದ್ದು ಸರಣಿ ಸಮಬಲಗೊಳಿಸುವ ಆಯ್ಕೆ ಮಾತ್ರ ಭಾರತದ ಮುಂದಿದೆ.