ಟೀಮ್ ಇಂಡಿಯಾ ವಿರುದ್ಧ 6 ವಿಕೆಟ್ ಕಬಳಿಸಿ ಹೊಸ ಇತಿಹಾಸ ನಿರ್ಮಿಸಿದ ಮಿಚೆಲ್ ಸ್ಟಾರ್ಕ್; 70 ವಿಕೆಟ್ ಕಿತ್ತ ಮೊದಲ ಬೌಲರ್
ಕನ್ನಡ ಸುದ್ದಿ  /  ಕ್ರಿಕೆಟ್  /  ಟೀಮ್ ಇಂಡಿಯಾ ವಿರುದ್ಧ 6 ವಿಕೆಟ್ ಕಬಳಿಸಿ ಹೊಸ ಇತಿಹಾಸ ನಿರ್ಮಿಸಿದ ಮಿಚೆಲ್ ಸ್ಟಾರ್ಕ್; 70 ವಿಕೆಟ್ ಕಿತ್ತ ಮೊದಲ ಬೌಲರ್

ಟೀಮ್ ಇಂಡಿಯಾ ವಿರುದ್ಧ 6 ವಿಕೆಟ್ ಕಬಳಿಸಿ ಹೊಸ ಇತಿಹಾಸ ನಿರ್ಮಿಸಿದ ಮಿಚೆಲ್ ಸ್ಟಾರ್ಕ್; 70 ವಿಕೆಟ್ ಕಿತ್ತ ಮೊದಲ ಬೌಲರ್

Mitchell Starc: ಟೀಮ್ ಇಂಡಿಯಾ ವಿರುದ್ಧದ ಪಿಂಕ್ ಬಾಲ್ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್​ ಅವರು 6 ವಿಕೆಟ್ ಉರುಳಿಸಿ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.

ಟೀಮ್ ಇಂಡಿಯಾ ವಿರುದ್ಧ 6 ವಿಕೆಟ್ ಕಬಳಿಸಿ ಹೊಸ ಇತಿಹಾಸ ನಿರ್ಮಿಸಿದ ಮಿಚೆಲ್ ಸ್ಟಾರ್ಕ್
ಟೀಮ್ ಇಂಡಿಯಾ ವಿರುದ್ಧ 6 ವಿಕೆಟ್ ಕಬಳಿಸಿ ಹೊಸ ಇತಿಹಾಸ ನಿರ್ಮಿಸಿದ ಮಿಚೆಲ್ ಸ್ಟಾರ್ಕ್ (AP)

ಅಡಿಲೇಡ್ ಓವಲ್‌ನಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ 2024-25ರ 2ನೇ ಟೆಸ್ಟ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಸೆಣಸಾಟ ನಡೆಸುತ್ತಿವೆ. ಪಿಂಕ್​ ಬಾಲ್ ಟೆಸ್ಟ್ ಪಂದ್ಯದಲ್ಲಿ ಬೌಲಿಂಗ್ ಪರಾಕ್ರಮ ತೋರಿದ ಯಾರ್ಕರ್ ಸ್ಪೆಷಲಿಸ್ಟ್ ಮಿಚೆಲ್ ಸ್ಟಾರ್ಕ್​​, ಭಾರತೀಯ ಬ್ಯಾಟರ್​ಗಳ ಮೇಲೆ ದಂಡಯಾತ್ರೆ ನಡೆಸಿ ಬೃಹತ್ ಮೈಲಿಗಲ್ಲನ್ನು ತಲುಪಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ಆಟಗಾರನು ಸಾಧಿಸದ ಸಾಧನೆಯನ್ನು ಸ್ಟಾರ್ಕ್ ಮಾಡಿದ್ದಾರೆ. ಸ್ಟಾರ್ಕ್ ವೇಗವನ್ನು ತಡೆಯಲು ವಿಫಲವಾದ ರೋಹಿತ್​ ಪಡೆ ಅಲ್ಪ ಮೊತ್ತಕ್ಕೆ ಕುಸಿಯಿತು.

ಪಿಂಕ್​ ಬಾಲ್ ಟೆಸ್ಟ್​ನಲ್ಲಿ ಮಿಚೆಲ್ ಸ್ಟಾರ್ ಧೂಳೆಬ್ಬಿಸಿದ್ದಾರೆ. ಇನ್ನಿಂಗ್ಸ್​​ನ ಮೊದಲ ಎಸೆತದಲ್ಲೇ ಯಶಸ್ವಿ ಜೈಸ್ವಾಲ್ ಅವರನ್ನು ಔಟ್ ಮಾಡುವ ಮೂಲಕ ವಿಕೆಟ್ ಬೇಟೆ ಆರಂಭಿಸಿದರು. ಕೆಎಲ್ ರಾಹುಲ್ ಮತ್ತು ಶುಭ್ಮನ್ ಗಿಲ್ ಭರ್ಜರಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಆಸೀಸ್​ಗೆ ಮತ್ತೊಮ್ಮೆ ಮೇಲುಗೈ ತಂದುಕೊಟ್ಟ ಸ್ಟಾರ್ಕ್​, ಇಬ್ಬರ ಅದ್ಬುತ ಜೊತೆಯಾಟಕ್ಕೆ ಫುಲ್​ಸ್ಟಾಪ್ ಇಟ್ಟರು. ಕೆಎಲ್ ರಾಹುಲ್​ರನ್ನು ಔಟ್ ಮಾಡಿದ ಬೆನ್ನಲ್ಲೇ ವಿರಾಟ್ ಕೊಹ್ಲಿಗೂ ಫೆವಿಲಿಯನ್ ದಾರಿ ತೋರಿಸಿದರು. ಅಶ್ವಿನ್, ಹರ್ಷಿತ್ ರಾಣಾ, ನಿತೀಶ್ ರೆಡ್ಡಿಯನ್ನೂ ಬಲಿ ಪಡೆದರು.

14.1 ಓವರ್​​ಗಳಲ್ಲಿ 2 ಓವರ್ ಮೇಡಿನ್ ಸಹಿತ 48 ರನ್ ಬಿಟ್ಟುಕೊಟ್ಟ ಒಟ್ಟು 6 ವಿಕೆಟ್​ ಉರುಳಿಸಿ ವಿಶೇಷ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡರು. ಆ ಮೂಲಕ ಪಿಂಕ್ ಬಾಲ್‌ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 4 ಬಾರಿ ಐದು ವಿಕೆಟ್​ ಗೊಂಚಲು ಪಡೆದ ಜಗತ್ತಿನ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಯಾವುದೇ ಆಟಗಾರ ಹಗಲು-ರಾತ್ರಿ ಟೆಸ್ಟ್ ಪಂದ್ಯಗಳಲ್ಲಿ 2 ಬಾರಿಗಿಂತ ಹೆಚ್ಚು 5 ವಿಕೆಟ್ ಗೊಂಚಲು ಪಡೆದಿಲ್ಲ.

ಪಿಂಕ್​ ಬಾಲ್ ಟೆಸ್ಟ್​ನಲ್ಲಿ ಹೆಚ್ಚು ಸಲ 5 ವಿಕೆಟ್ ಗೊಂಚಲು ಪಡೆದವರು

ಮಿಚೆಲ್ ಸ್ಟಾರ್ಕ್ - 4

ಜೋಶ್ ಹೇಜಲ್‌ವುಡ್ - 2

ಯಾಸಿರ್ ಶಾ - 2

ಟ್ರೆಂಟ್ ಬೌಲ್ಟ್ - 2

ಅಕ್ಷರ್ ಪಟೇಲ್ - 2

ಪಿಂಕ್ ಬಾಲ್ ಟೆಸ್ಟ್ ಇತಿಹಾಸದಲ್ಲಿ ಸಾರ್ವಕಾಲಿಕವಾಗಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೂ ಮಿಚೆಲ್ ಸ್ಟಾರ್ಕ್ ಪಾತ್ರರಾಗಿದ್ದಾರೆ. ಭಾರತ ವಿರುದ್ಧದ 2ನೇ ಟೆಸ್ಟ್‌ನಲ್ಲಿ 5 ವಿಕೆಟ್​​ಗಳೊಂದಿಗೆ ಪಿಂಕ್​ಬಾಲ್ ಟೆಸ್ಟ್​ನಲ್ಲಿನ ವಿಕೆಟ್​ಗಳ ಸಂಖ್ಯೆಯನ್ನು 71ಕ್ಕೆ ಏರಿಸಿದ್ದಾರೆ. ಆ ಮೂಲಕ ಹಗಲು-ರಾತ್ರಿ ಟೆಸ್ಟ್ ಪಂದ್ಯಗಳಲ್ಲಿ 70 ವಿಕೆಟ್‌ ಪಡೆದ ಇತಿಹಾಸದಲ್ಲಿ ಮೊದಲ ಆಟಗಾರರಾಗಿದ್ದಾರೆ.

ಪಿಂಕ್​ ಬಾಲ್​ನಲ್ಲಿ ಹೆಚ್ಚು ವಿಕೆಟ್ ಪಡೆದವರು

ಮಿಚೆಲ್ ಸ್ಟಾರ್ಕ್ - 71

ನಾಥನ್ ಲಿಯಾನ್ - 43

ಜೋಶ್ ಹೇಜಲ್‌ವುಡ್ - 37

ಪ್ಯಾಟ್ ಕಮಿನ್ಸ್ - 34

ಜೇಮ್ಸ್ ಆಂಡರ್ಸನ್ - 24

ಭಾರತ ತಂಡ 180ಕ್ಕೆ ಆಲೌಟ್

ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ 180ಕ್ಕೆ ಆಲೌಟ್ ಆಗಿದೆ. ನಿತೀಶ್ ರೆಡ್ಡಿ 42 ರನ್ ಗಳಿಸಿದ್ದೇ ಗರಿಷ್ಠ ಸ್ಕೋರ್. ಯಶಸ್ವಿ ಜೈಸ್ವಾಲ್ 0, ಕೆಎಲ್ ರಾಹುಲ್ 37, ಶುಭ್ಮನ್ ಗಿಲ್ 31, ಕೊಹ್ಲಿ 7, ಪಂತ್ 21, ರೋಹಿತ್ 3, ಅಶ್ವಿನ್ 22, ಹರ್ಷಿತ್ 0, ಬುಮ್ರಾ 0, ಸಿರಾಜ್ 4 ರನ್ ಗಳಿಸಿದರು. ಮೊದಲ ದಿನದ ಅಂತ್ಯಕ್ಕೆ ಆಸೀಸ್ 1 ವಿಕೆಟ್ ನಷ್ಟಕ್ಕೆ 86 ರನ್​ಗಳಿಸಿ 94 ರನ್​ಗಳ ಹಿನ್ನಡೆಯಲ್ಲಿದೆ.

Whats_app_banner