ಅಡಿಲೇಡ್ನಲ್ಲಿ ಮಿಚೆಲ್ ಸ್ಟಾರ್ಕ್ ಪರಾಕ್ರಮ, ಕುಸಿದ ಭಾರತಕ್ಕೆ ರೆಡ್ಡಿ ಆಸರೆ; ಟೀಮ್ ಇಂಡಿಯಾ 180ಕ್ಕೆ ಆಲೌಟ್, ಮುಂದಿರುವ ಸವಾಲೇನು?
India vs Australia 2nd test: ಅಡಿಲೇಡ್ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 180ಕ್ಕೆ ಆಲೌಟ್ ಆಗಿದೆ. ಮಿಚೆಲ್ ಸ್ಟಾರ್ಕ್ 6 ವಿಕೆಟ್ ಉರುಳಿಸಿ ಪರಾಕ್ರಮ ಮೆರೆದಿದ್ದಾರೆ.
ಅಡಿಲೇಡ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಮತ್ತೊಮ್ಮೆ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಪರ್ತ್ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಕುಸಿದಂತೆ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲೂ 200ರೊಳಗೆ ಭಾರತ ತಂಡ ಕುಸಿದಿದೆ. ಪ್ರಮುಖ ಬ್ಯಾಟರ್ಗಳು ತಂಡಕ್ಕೆ ಮರಳಿದರೂ ಬ್ಯಾಟಿಂಗ್ನಲ್ಲಿ ಖದರ್ ತೋರಿಸಲಿಲ್ಲ. ಆಸೀಸ್ನ ಮಿಚೆಲ್ ಸ್ಟಾರ್ಕ್ ದಾಳಿಗೆ ತತ್ತರಿಸಿದ ರೋಹಿತ್ ಪಡೆ, ಪೆವಿಲಿಯನ್ ಪರೇಡ್ ನಡೆಸಿತು. ಮೊದಲ ಇನ್ನಿಂಗ್ಸ್ನಲ್ಲಿ 180 ರನ್ಗಳ ಅಲ್ಪ ಮೊತ್ತ ಗಳಿಸಿದೆ. ಭಾರತದ ಯಾವೊಬ್ಬ ಬ್ಯಾಟರ್ ಸಹ 50 ಮುಟ್ಟಲಿಲ್ಲ.
ಮೊದಲ ಸೆಷನ್ ಅಂತ್ಯಕ್ಕೆ ಭಾರತ ಅಗ್ರ ಕ್ರಮಾಂಕದ ನಾಲ್ವರನ್ನು ಕಳೆದುಕೊಂಡಿತು. ಇದೇ ಮೊದಲ ಪಿಂಕ್ ಟೆಸ್ಟ್ ಆಡಿದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರು ಇನ್ನಿಂಗ್ಸ್ನ ಮೊದಲ ಎಸೆತದಲ್ಲೇ ಮಿಚೆಲ್ ಸ್ಟಾರ್ಕ್ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. ಆದರೆ ಬಳಿಕ ಕೆಎಲ್ ರಾಹುಲ್-ಶುಭ್ಮನ್ ಗಿಲ್ ಜೋಡಿ 2ನೇ ವಿಕೆಟ್ಗೆ 69 ರನ್ಗಳ ಕಾಣಿಕೆ ನೀಡಿದರು. ಜವಾಬ್ದಾರಿಯುತ ಬ್ಯಾಟಿಂಗ್ ಮೂಲಕ ಆಸೀಸ್ ಬೌಲರ್ಗಳಿಗೆ ಕಾಡಿದರು. ಸುಗಮವಾಗಿ ಸಾಗುತ್ತಿದ್ದ ತಂಡಕ್ಕೆ ಸ್ಟಾರ್ಕ್ ಮತ್ತೆ ಶಾಕ್ ನೀಡಿದರು. 37 ರನ್ ಬಾರಿಸಿದ್ದ ರಾಹುಲ್, ಸ್ಲಿಪ್ನಲ್ಲಿ ಕ್ಯಾಚ್ ನೀಡಿ ಹೊರನಡೆದರು.
ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ, ಭರ್ಜರಿ ಆರಂಭ ಒದಗಿಸಿದರು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿ ಭರವಸೆ ಮೂಡಿಸಿದ್ದ ವಿರಾಟ್ 8 ಎಸೆತಗಳಲ್ಲಿ 7 ರನ್ ಗಳಿಸಿ ನಿರಾಸೆ ಮೂಡಿಸಿದರು. ಮತ್ತೊಂದೆಡೆ ತಂಡಕ್ಕೆ ಆಸರೆಯಾಗುತ್ತಿದ್ದ ಗಿಲ್ ಸಹ 30ರ ಗಡಿ ದಾಟುತ್ತಿದ್ದಂತೆ ಬೋಲ್ಯಾಂಡ್ಗೆ ವಿಕೆಟ್ ಒಪ್ಪಿಸಿದರು. ಕೆಎಲ್ ರಾಹುಲ್, ವಿರಾಟ್ ಕೊಹ್ಲಿ ಮತ್ತು ಶುಭ್ಮನ್ ಗಿಲ್ ಅವರು 16 ಎಸೆತಗಳ ಅಂತರದಲ್ಲಿ ಔಟ್ ಆದರು. ಭೋಜನ ವಿರಾಮದ ಬಳಿಕ ಒಂದಾದ ರಿಷಭ್ ಪಂತ್ ಮತ್ತು ರೋಹಿತ್ ಶರ್ಮಾ ಸಹ ತಂಡಕ್ಕೆ ನೆರವಾಗಲಿಲ್ಲ. ಕ್ರಮವಾಗಿ 21, 3 ರನ್ ಗಳಿಸಿ ಔಟಾದರು.
ಕುಸಿದ ಭಾರತಕ್ಕೆ ರೆಡ್ಡಿ ಆಸರೆ
109 ರನ್ ಗಳಿಸಿ ಟಾಪ್-6 ವಿಕೆಟ್ಗಳನ್ನು ಕಳೆದುಕೊಂಡು 150ರ ಒಳಗೆ ಕುಸಿಯುವ ಭೀತಿಗೆ ಸಿಲುಕಿದ್ದ ಭಾರತ ತಂಡಕ್ಕೆ ನಿತೀಶ್ ಕುಮಾರ್ ರೆಡ್ಡಿ ಆಸರೆಯಾದರು. ಅವರಿಗೆ ರವಿಚಂದ್ರನ್ ಅಶ್ವಿನ್ 22 ರನ್ ಸಿಡಿಸಿ ಸಾಥ್ ಕೊಟ್ಟರು. ಒಂದೆಡೆ ಸತತ ವಿಕೆಟ್ ಪತನ ಆಗುತ್ತಿದ್ದರೂ ಸಿಕ್ಸರ್-ಬೌಂಡರಿಗಳ ಮೂಲಕ ಅಬ್ಬರಿಸಿದ ರೆಡ್ಡಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿ 180ರ ತನಕ ಕೊಂಡೊಯ್ದರು. 54 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಸಹಿತ 42 ರನ್ ಬಾರಿಸಿ ಮಿಚೆಲ್ ಸ್ಟಾರ್ಕ್ ಬೌಲಿಂಗ್ನಲ್ಲಿ ಔಟಾದರು. ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ ಡಕೌಟ್ ಆದರೆ, ಮೊಹಮ್ಮದ್ ಸಿರಾಜ್ 4 ರನ್ ಸಿಡಿಸಿದರು.
ಮಿಚೆಲ್ ಮಿಂಚಿಗೆ ಭಾರತ 180ಕ್ಕೆ ಆಲೌಟ್
ಪಿಂಕ್ ಬಾಲ್ ಟೆಸ್ಟ್ನಲ್ಲಿ ಮಿಂಚಿನ ದಾಳಿ ನಡೆಸಿದ ಮಿಚೆಲ್ ಸ್ಟಾರ್ಕ್, ಭಾರತ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಸ್ವಿಂಗ್, ಬೌನ್ಸಿ ಮತ್ತು ಯಾರ್ಕರ್ ಎಸೆತಗಳ ಮೂಲಕ ಭಾರತೀಯ ಬ್ಯಾಟರ್ಗಳನ್ನು ಕಾಡಿದ ಸ್ಟಾರ್ಕ್, ಪ್ರಮುಖ ಆರು ವಿಕೆಟ್ ಕಿತ್ತರು. ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ಅಶ್ವಿನ್ ಅವರನ್ನು ಔಟ್ ಮಾಡಿದರು. 14.1 ಓವರ್ಗಳಲ್ಲಿ 2 ಮೇಡಿನ್ ಸಹಿತ 48 ರನ್ ಬಿಟ್ಟು 6 ವಿಕೆಟ್ ಬುಟ್ಟಿಗೆ ಹಾಕಿಕೊಂಡರು. ಪ್ಯಾಟ್ ಕಮಿನ್ಸ್, ಸ್ಕಾಟ್ ಬೊಲ್ಯಾಂಡ್ ತಲಾ 2 ವಿಕೆಟ್ ಉರುಳಿಸಿದರು.
ಟೀಮ್ ಇಂಡಿಯಾ ಮುಂದಿರುವ ಗುರಿ ಏನೆಂದರೆ ಪರ್ತ್ ಟೆಸ್ಟ್ನಲ್ಲಿ ಮಾಡಿದಂತೆ ಆಸೀಸ್ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕಿ ಮುನ್ನಡೆ ಪಡೆಯಬೇಕು. ಆಗ ಭಾರತ ತಂಡದ ಆತ್ಮವಿಶ್ವಾಸ ಹೆಚ್ಚಾಗಲಿದೆ. ಆದರೀಗ ಬೌಲರ್ಗಳು ಮಿಂಚಿನ ದಾಳಿ ನಡೆಸಿ ಆಸೀಸ್ ಬ್ಯಾಟರ್ಗಳನ್ನು ಒತ್ತಡಕ್ಕೆ ಸಿಲುಕಿಸಬೇಕು. ಆಗ ರೋಹಿತ್ ಪಡೆ ಪಂದ್ಯದ ಮೇಲೆ ಹಿಡಿತ ಸಾಧಿಸಲಿದೆ.