ಆಸ್ಟ್ರೇಲಿಯಾ ಪರಿಷ್ಕೃತ ತಂಡ ಪ್ರಕಟ; ಕಾಯಂ ನಾಯಕನೂ ಸೇರಿ ಪ್ರಮುಖ ಐದು ಬದಲಾವಣೆ, ಯಾರು ಇನ್, ಯಾರು ಔಟ್?
ಕನ್ನಡ ಸುದ್ದಿ  /  ಕ್ರಿಕೆಟ್  /  ಆಸ್ಟ್ರೇಲಿಯಾ ಪರಿಷ್ಕೃತ ತಂಡ ಪ್ರಕಟ; ಕಾಯಂ ನಾಯಕನೂ ಸೇರಿ ಪ್ರಮುಖ ಐದು ಬದಲಾವಣೆ, ಯಾರು ಇನ್, ಯಾರು ಔಟ್?

ಆಸ್ಟ್ರೇಲಿಯಾ ಪರಿಷ್ಕೃತ ತಂಡ ಪ್ರಕಟ; ಕಾಯಂ ನಾಯಕನೂ ಸೇರಿ ಪ್ರಮುಖ ಐದು ಬದಲಾವಣೆ, ಯಾರು ಇನ್, ಯಾರು ಔಟ್?

Australia Cricket Team: 2025ರ ಚಾಂಪಿಯನ್ಸ್ ಟ್ರೋಫಿಗೆ ಆಸ್ಟ್ರೇಲಿಯಾ ತಂಡದಲ್ಲಿ 5 ಬದಲಾವಣೆ ಮಾಡಲಾಗಿದೆ. ಮೂವರು ವೇಗದ ಬೌಲರ್​ಗಳ ಜತೆಗೆ ಮಿಚೆಲ್ ಮಾರ್ಷ್ ಮತ್ತು ಮಾರ್ಕಸ್ ಸ್ಟೊಯ್ನಿಸ್ ತಂಡದಿಂದ ಹೊರಗುಳಿದಿದ್ದಾರೆ.

ಆಸ್ಟ್ರೇಲಿಯಾ ಪರಿಷ್ಕೃತ ತಂಡ ಪ್ರಕಟ; ಕಾಯಂ ನಾಯಕನೂ ಸೇರಿ ಪ್ರಮುಖ ಐದು ಬದಲಾವಣೆ, ಯಾರು ಇನ್, ಯಾರು ಔಟ್?
ಆಸ್ಟ್ರೇಲಿಯಾ ಪರಿಷ್ಕೃತ ತಂಡ ಪ್ರಕಟ; ಕಾಯಂ ನಾಯಕನೂ ಸೇರಿ ಪ್ರಮುಖ ಐದು ಬದಲಾವಣೆ, ಯಾರು ಇನ್, ಯಾರು ಔಟ್?

ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 (ICC Champions Trophy 2025) ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ತಂಡವು (Australia Cricket Team) ದೊಡ್ಡ ಆಘಾತ ಅನುಭವಿಸಿದೆ. ಒಂದಲ್ಲ, ಎರಡಲ್ಲ, ಐದು ಪ್ರಮುಖ ಹಿನ್ನಡೆ ಅನುಭವಿಸಿದೆ. ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ನಾಲ್ಕು ಬದಲಾವಣೆಗಳನ್ನು ಮಾಡಲಾಗುವುದು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಕೆಲವು ದಿನಗಳ ಹಿಂದೆಯಷ್ಟೇ ಘೋಷಿಸಿತ್ತು. ಆದರೆ ಐಸಿಸಿ ಗಡುವಿನ ಮೊದಲೇ ತಂಡವು ಅಂತಿಮ 15 ಸದಸ್ಯರಲ್ಲಿ ಐದು ಬದಲಾವಣೆ ಮಾಡುವ ಮೂಲಕ ಅಚ್ಚರಿ ಮೂಡಿಸಿದೆ.

ಕಾಯಂ ನಾಯಕ ಪ್ಯಾಟ್ ಕಮಿನ್ಸ್ (Pat Cummins), ವೇಗದ ಬೌಲರ್ ಜೋಶ್ ಹೇಜಲ್​ವುಡ್ (Josh Hazlewood), ಆಲ್​ರೌಂಡರ್ ಮಿಚೆಲ್ ಮಾರ್ಷ್ (Mitchell Marsh), ಮಾರ್ಕಸ್ ಸ್ಟೊಯ್ನಿಸ್ (Marcus Stoinis) ಟೂರ್ನಿಯಿಂದ ಹಿಂದೆ ಸರಿಯುವುದು ಮೊದಲೇ ತಿಳಿದಿತ್ತು. ಈಗ ಅಂತಿಮ ತಂಡವನ್ನು ಘೋಷಿಸುವುದಕ್ಕೂ ಮುನ್ನ ಆಸೀಸ್ ಮತ್ತೊಂದು ದೊಡ್ಡ ಹಿನ್ನಡೆಯನ್ನು ಅನುಭವಿಸಿದೆ. ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ (Mitchell Starc) ಕೂಡ ಹೊರಗುಳಿದಿದ್ದಾರೆ. ಮ್ಯಾಚ್ ವಿನ್ನಿಂಗ್, ಗೇಮ್ ಚೇಂಜಿಂಗ್ ಬೌಲರ್​ಗಳೇ ಟೂರ್ನಿಗೆ ಇಲ್ಲದಿರುವುದು ಆಸೀಸ್​ಗೆ ದೊಡ್ಡ ಹಿನ್ನಡೆಯಾಗಿದೆ.

ಸ್ಟೀವ್​ ಸ್ಮಿತ್​ ನಾಯಕ

ಕಮಿನ್ಸ್, ಹೇಜಲ್​ವುಡ್ ಜೊತೆಗೆ ಸ್ಟಾರ್ಕ್​ ಕೂಡ ಔಟ್ ಆಗಿದ್ದಾರೆ. ಇದು ಮಹತ್ವದ ಟೂರ್ನಿಯಲ್ಲಿ ಆಸೀಸ್​ ಬಲವನ್ನು ಕುಸಿಯುವಂತೆ ಮಾಡಿದೆ. ಕಮಿನ್ಸ್, ಹೇಜಲ್​ವುಡ್ ಗಾಯದಿಂದ ಹೊರಬಿದ್ದಿದ್ದರೆ, ವೈಯಕ್ತಿಕ ಕಾರಣಗಳಿಂದಾಗಿ ಮಿಚೆಲ್ ಸ್ಟಾರ್ಕ್ ಐಸಿಸಿ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಇದೀಗ ಆಸೀಸ್ ತಂಡದಲ್ಲಿ ಐದು ಬದಲಾವಣೆ ಆಗಿದ್ದು, ಯುವ ಆಟಗಾರರು ತಂಡವನ್ನು ಕೂಡಿಕೊಂಡಿದ್ದಾರೆ. ಕಮಿನ್ಸ್ ಅಲಭ್ಯತೆ ಕಾರಣ ಸ್ಟೀವ್ ಸ್ಮಿತ್ ತಂಡದ ಜವಾಬ್ದಾರಿಯನ್ನು ಹೊರಲಿದ್ದಾರೆ.

ನಾಯಕ ಪ್ಯಾಟ್ ಕಮಿನ್ಸ್ ಪಾದದ ಗಾಯ, ವೇಗದ ಬೌಲರ್ ಜೋಶ್ ಹೇಜಲ್​ವುಡ್ ಸೊಂಟದ ಗಾಯ ಮತ್ತು ಆಲ್​ರೌಂಡರ್ ಮಿಚೆಲ್ ಮಾರ್ಷ್ ಬೆನ್ನುನೋವಿನಿಂದ ತೊಂದರೆಗೀಡಾಗಿದ್ದಾರೆ. ಮಾರ್ಕಸ್ ಸ್ಟೊಯ್ನಿಸ್ ಈ ತಿಂಗಳ ಆರಂಭದಲ್ಲಿ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರು. ಹೀಗಾಗಿ, ಇವರೆಲ್ಲದ ಸ್ಥಾನಕ್ಕೆ ಬದಲಿ ಆಟಗಾರರ ಘೋಷಣೆ ಮಾಡಿದೆ. ಸೀನ್ ಅಬಾಟ್, ಬೆನ್ ಡ್ವಾರ್ಶಿಯಿಸ್, ಜೇಕ್ ಫ್ರೇಸರ್-ಮೆಕ್ಗುರ್ಕ್, ಸ್ಪೆನ್ಸರ್ ಜಾನ್ಸನ್ ಮತ್ತು ತನ್ವೀರ್ ಸಂಘಾ ಅಂತಿಮ ಐವತ್ತರಲ್ಲಿ ಸ್ಥಾನ ಪಡೆದಿದ್ದಾರೆ.

ಯಾರು ಇನ್: ಸೀನ್ ಅಬಾಟ್, ಬೆನ್ ಡ್ವಾರ್ಶಿಯಿಸ್, ಜೇಕ್ ಫ್ರೇಸರ್-ಮೆಕ್ಗುರ್ಕ್, ಸ್ಪೆನ್ಸರ್ ಜಾನ್ಸನ್, ತನ್ವೀರ್ ಸಂಘಾ.

ಯಾರು ಔಟ್: ಪ್ಯಾಟ್ ಕಮಿನ್ಸ್, ಜೋಶ್ ಹೇಜಲ್​ವುಡ್, ಮಿಚೆಲ್ ಮಾರ್ಷ್, ಮಾರ್ಕಸ್ ಸ್ಟೊಯ್ನಿಸ್, ಮಿಚೆಲ್ ಸ್ಟಾರ್ಕ್.

ಆಸ್ಟ್ರೇಲಿಯಾ ಚಾಂಪಿಯನ್ಸ್ ಟ್ರೋಫಿ ತಂಡ

ಸ್ಟೀವ್ ಸ್ಮಿತ್ (ನಾಯಕ), ಸೀನ್ ಅಬಾಟ್, ಅಲೆಕ್ಸ್ ಕ್ಯಾರಿ, ಬೆನ್ ಡ್ವಾರ್ಶಿಯಿಸ್, ನಾಥನ್ ಎಲ್ಲಿಸ್, ಜೇಕ್ ಫ್ರೇಸರ್-ಮೆಕ್ಗುರ್ಕ್, ಆರೋನ್ ಹಾರ್ಡಿ, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಸ್ಪೆನ್ಸರ್ ಜಾನ್ಸನ್, ಮಾರ್ನಸ್ ಲಬುಶೇನ್, ಗ್ಲೆನ್ ಮ್ಯಾಕ್ಸ್​ವೆಲ್, ತನ್ವೀರ್ ಸಂಘಾ, ಮ್ಯಾಥ್ಯೂ ಶಾರ್ಟ್, ಆಡಮ್ ಜಂಪಾ. ಮೀಸಲು: ಕೂಪರ್ ಕೊನೊಲಿ.

ಪ್ರಸ್ತುತ ಆಸ್ಟ್ರೇಲಿಯಾ, ಶ್ರೀಲಂಕಾ ವಿರುದ್ಧ ಎರಡು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಂಡಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಫೆಬ್ರವರಿ 22ರಂದು ಇಂಗ್ಲೆಂಡ್ ವಿರುದ್ಧ ಸೆಣಸಾಟ ಆರಂಭಿಸುವ ಮೂಲಕ ಅಭಿಯಾನ ಆರಂಭಿಸಲಿದೆ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner