ಐಪಿಎಲ್ ಕಪ್ ಗೆಲುವಿಗೆ ಆರ್‌ಸಿಬಿ ಹೊಸ ತಂತ್ರ; ತಂಡದ ಕ್ರಿಕೆಟ್ ನಿರ್ದೇಶಕರಾಗಿ ಮೊ ಬೊಬಾಟ್ ನೇಮಕ
ಇಂಗ್ಲೆಂಡ್ ತಂಡದ ಪ್ರದರ್ಶನ ನಿರ್ದೇಶಕರಾಗಿ ಮಹತ್ವದ ಪಾತ್ರ ನಿರ್ವಹಿರುವ ಮೊ ಬೊಬಾಟ್, ಇನ್ಮುಂದೆ ಆರ್‌ಸಿಬಿ ಬಳಗದಲ್ಲಿಯೂ ಮಹತ್ವದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

2024ರ ಆವೃತ್ತಿಯ ಐಪಿಎಲ್ (IPL) ಆವೃತ್ತಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಫ್ರಾಂಚೈಸಿಯು ತಂಡದ ನಿರ್ದೇಶಕರನ್ನು ಬದಲಾಯಿಸಿದೆ. ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ(Indian Premier League) ಮೊ ಬೊಬಾಟ್ (Mo Bobat) ಅವರನ್ನು ಆರ್‌ಸಿಬಿ (RCB) ಫ್ರಾಂಚೈಸಿಯ ಕ್ರಿಕೆಟ್ ನಿರ್ದೇಶಕರನ್ನಾಗಿ ನೇಮಿಸಿದೆ.
ಈ ಕುರಿತು ಆರ್‌ಸಿಬಿ ಫ್ರಾಂಚೈಸಿಯು ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಇಂಗ್ಲೆಂಡ್ ತಂಡದ ಪ್ರದರ್ಶನ ನಿರ್ದೇಶಕರಾಗಿ ಮಹತ್ವದ ಪಾತ್ರ ನಿರ್ವಹಿರುವ ಬೊಬಾಟ್, ಇನ್ಮುಂದೆ ಆರ್‌ಸಿಬಿ ಬಳಗದಲ್ಲಿಯೂ ಮಹತ್ವದ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ಈ ಹಿಂದೆ ಮೈಕ್ ಹೆಸ್ಸನ್ ಆರ್‌ಸಿಬಿ ತಂಡದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಅವರ ಸ್ಥಾನಕ್ಕೆ ಬೊಬಾಟ್ ಬಂದಿದ್ದಾರೆ. ಪ್ರಸ್ತುತ ಇಸಿಬಿಯಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಬೊಬಾಬ್, ತಮ್ಮ ಸ್ಥಾನವನ್ನು ತೊರೆದ ಬಳಿಕ ಆರ್‌ಸಿಬಿ ಬಳಗ ಸೇರಿಕೊಳ್ಳಲಿದ್ದಾರೆ.
ಇಂಗ್ಲೆಂಡ್ ತಂಡದ ಯಶಸ್ಸಿನಲ್ಲಿ ಬೊಬಾಟ್ ಪಾಲು
ಬೊಬಾಟ್ 2019ರಿಂದ ಇಂಗ್ಲೆಂಡ್ ಕ್ರಿಕೆಟ್ ತಂಡದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಒಟ್ಟು 12 ವರ್ಷಗಳ ಕಾಲ ಇಸಿಬಿಯಲ್ಲಿ ಕೆಲಸ ಮಾಡಿದ್ದಾರೆ. ಇಂಗ್ಲೆಂಡ್ ತಂಡದ ಯಶಸ್ಸಿನಲ್ಲಿ ಬೊಬಾಟ್ ಪ್ರಮುಖ ಪಾತ್ರ ವಹಿಸಿದ್ದಾರೆ. ತಂಡದ ಯಶಸ್ಸಿಗೆ ಭಿನ್ನ ಮಂತ್ರ ಪಟಿಸಿದ್ದ ಬೊಬಾಟ್ ಪ್ರಯತ್ನದ ಫಲವಾಗಿ ಆಂಗ್ಲರು ಟಿ20 ಮತ್ತು ಏಕದಿನ ವಿಶ್ವಕಪ್ ಗೆದ್ದಿದ್ದಾರೆ.
ಆರ್‌ಸಿಬಿ ತಂಡದಲ್ಲಿ ಬೊಬಾಟ್ ಜವಾಬ್ದಾರಿಗಳೇನು?
ಬೊಬಾಟ್ ಮತ್ತು ಆರ್‌ಸಿಬಿಯ ಮುಖ್ಯ ಕೋಚ್ ಆಂಡಿ ಫ್ಲವರ್, ಈ ಹಿಂದೆ ಇಂಗ್ಲೆಂಡ್ ತಂಡದೊಂದಿಗೆ ಜೊತೆಯಾಗಿ ಕೆಲಸ ಮಾಡಿದ್ದಾರೆ. ಆರ್‌ಸಿಬಿ ನೀಡಿರುವ ಮಾಹಿತಿಯ ಪ್ರಕಾರ, ಹೊಸ ಪ್ರತಿಭೆಗಳ ನೇಮಕಾತಿ ಮತ್ತು ಕಾರ್ಯಕ್ಷಮತೆಯ ಯೋಜನೆಗಳನ್ನು ಮೇಲ್ವಿಚಾರಣೆ ಮಾಡುವುದು ಬೊಬಾಟ್ ಅವರ ಜವಾಬ್ದಾರಿಯಾಗಿರುತ್ತದೆ.
ಆರ್‌ಸಿಬಿ ಬಳಗ ಸೇರಲು ಉತ್ಸುಕನಾಗಿದ್ದೇನೆ
ಆರ್‌ಸಿಬಿ ಫ್ರಾಂಚೈಸಿಯಲ್ಲಿ ಹೊಸ ಜವಾಬ್ದಾರಿ ವಹಿಸುತ್ತಿರುವ ಬಗ್ಗೆ ಮಾತನಾಡಿದ ಬೊಬಾಟ್, ಆಂಡಿ ಫ್ಲವರ್ ಅವರೊಂದಿಗೆ ಮತ್ತೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ. “ಆರ್‌ಸಿಬಿಗೆ ಕ್ರಿಕೆಟ್ ನಿರ್ದೇಶಕರಾಗಿ ಸೇರಲು ನಾನು ಉತ್ಸುಕನಾಗಿದ್ದೇನೆ. ಅಲ್ಲದೆ ಸಾಕಷ್ಟು ಹೆಮ್ಮೆಪಡುತ್ತೇನೆ. ಆರ್‌ಸಿಬಿ ವಿಶ್ವದಲ್ಲೇ ಅತಿ ಹೆಚ್ಚು ಜನರು ಗುರುತಿಸುವ ಫ್ರಾಂಚೈಸಿಗಳಲ್ಲಿ ಒಂದು. ಅಲ್ಲದೆ ದೊಡ್ಡ ಮಟ್ಟದ ಅಭಿಮಾನಿ ಬಳಗದಿಂದಲೇ ಹೆಸರುವಾಸಿಯಾಗಿದೆ. ಇಂಥಾ ತಂಡದಲ್ಲಿ ಸೇವೆ ಮಾಡುವುದೇ ದೊಡ್ಡ ಗೌರವ,”ಎಂದು ಬೊಬಾಟ್ ಹೇಳಿದ್ದಾರೆ.
“ನಾನು ಆಂಡಿ ಫ್ಲವರ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ. ಸಮಯ ಬಂದಾಗ ನಾನು ಇಸಿಬಿಯನ್ನು ಭಾರವಾದ ಹೃದಯದಿಂದ ತೊರೆಯುತ್ತೇನೆ. ಹಲವು ವರ್ಷಗಳಲ್ಲಿ ನಾನು ಇಸಿಬಿಯಲ್ಲಿ ಪಡೆದ ಎಲ್ಲಾ ಅವಕಾಶ ಮತ್ತು ಅಪಾರ ಬೆಂಬಲಕ್ಕೆ ಸದಾ ಕೃತಜ್ಞರಾಗಿರುತ್ತೇನೆ. ಆಂಡಿ ಮತ್ತು ನಾನು ಮುಂಬರುವ ಸವಾಲುಗಳನ್ನು ಆನಂದಿಸುತ್ತಿದ್ದೇವೆ. ಫಾಫ್ ಮತ್ತು ಬಳಗದ ಆಟಗಾರರಿಗೆ ಅವರ ಸಾಮರ್ಥ್ಯವನ್ನು ಪೂರೈಸಲು ಸಹಾಯ ಮಾಡಲು ನಾವು ಎದುರು ನೋಡುತ್ತಿದ್ದೇವೆ” ಎಂದು ಅವರು ಹೇಳಿಕೊಂಡಿದ್ದಾರೆ.
