ಕೊನೆಗೂ ಗೆಲುವಿನ ಹಳಿಗೆ ಮರಳಿದ ಪಾಕಿಸ್ತಾನ; ದುರ್ಬಲ ಕೆನಡಾ ವಿರುದ್ಧ ಬಾಬರ್ ಪಡೆಗೆ 7 ವಿಕೆಟ್ ಗೆಲುವು
ಪಾಕಿಸ್ತಾನ ಕ್ರಿಕೆಟ್ ತಂಡವು ಟಿ20 ವಿಶ್ವಕಪ್ 2024ರಲ್ಲಿ ಕೊನೆಗೂ ಗೆಲುವಿನ ಖಾತೆ ತೆರೆದಿದೆ. ದುರ್ಬಲ ಕೆನಡಾ ವಿರುದ್ಧ ಗೆದ್ದ ಬಾಬರ್ ಅಜಮ್ ಬಳಗವು, ಸೂಪರ್ 8ರ ಘಟ್ಟಕ್ಕೆ ಪ್ರವೇಶಿಸುವ ಆಸೆ ಜೀವಂತವಾಗಿರಿಸಿಕೊಂಡಿದೆ.

ಟಿ20 ವಿಶ್ವಕಪ್ 2024ರಲ್ಲಿ ಕೊನೆಗೂ ಪಾಕಿಸ್ತಾನ ತಂಡ ಗೆಲುವಿನ ಹಳಿಗೆ ಮರಳಿದೆ. ಯುಎಸ್‌ಎ ಹಾಗೂ ಭಾರತದ ವಿರುದ್ಧ ಸತತ ಎರಡು ಪಂದ್ಯಗಳಲ್ಲಿ ಸೋತಿದ್ದ ತಂಡವು, ಕೆನಡಾ ವಿರುದ್ಧದ ಮಾಡು ಇಲ್ಲವೆ ಮಡಿ ಪಂದ್ಯದಲ್ಲಿ ಜಯದ ನಗೆ ಬೀರಿದೆ. ಆ ಮೂಲಕ ಗ್ರೂಪ್ ಹಂತದಲ್ಲಿ ಎಲಿಮನೇಟ್ ಆಗುವ ಭೀತಿಯಿಂದ ಹೊರಬಂದಿದೆ. ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಕ್ರಿಕೆಟ್ ಮೈದಾನದಲ್ಲಿ ನಡೆದ ಮತ್ತೊಂದು ಲೋ ಸ್ಕೋರ್ ಪಂದ್ಯದಲ್ಲಿ ಬಾಬರ್ ಅಜಮ್ ಪಡೆಯು 7 ವಿಕೆಟ್‌ಗಳಿಂದ ಗೆದ್ದು ಬೀಗಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕೆನಡಾ, ಆ್ಯರೋನ್ ಜಾನ್ಸನ್ ಆಕರ್ಷಕ ಅರ್ಧಶತಕದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 106 ರನ್ ಪೇರಿಸಿತು. ಸಾಧಾರಣ ಗುರಿ ಬೆನ್ನಟ್ಟಿದ ಪಾಕಿಸ್ತಾನ, 17.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿ ಜಯಭೇರಿ ಬಾರಿಸಿತು. ಇದು ನಸ್ಸೌ ಕೌಂಟಿ ಮೈದಾನದಲ್ಲಿ ಗರಿಷ್ಟ ಮೊತ್ತದ ಯಶಸ್ವಿ ಚೇಸಿಂಗ್ ಆಗಿದೆ.
ನಿಧಾನಗತಿಯ ಆರಂಭ ಪಡೆದ ಪಾಕ್ ಪರ, ಆರಂಭಿಕರಾದ ಸೈಮ್ ಅಯುಬ್ 6 ರನ್ ಗಳಿಸಿ ಔಟಾದರು. ಈ ವೇಳೆ ಒಂದಾದ ಸ್ಟಾರ್ ಜೋಡಿಯಾದ ಮೊಹಮ್ಮದ್ ರಿಜ್ವಾನ್ ಹಾಗೂ ಬಾಬರ್ ಅಜಮ್, ಅರ್ಧಶತಕದ ಜೊತೆಯಾಟವಾಡಿದರು. ಎಸೆತಕ್ಕೊಂದರಂತೆ 33 ರನ್ ಗಳಿಸಿದ ಪಾಕ್ ನಾಯಕ, ದಿಲ್ಲನ್ ಹೇಲಿಗರ್ ಎಸೆತದಲ್ಲಿ ಔಟಾದರು. ಜವಾಬ್ದಾರಿಯುತ ಆಟ ಮುಂದೂವರೆಸಿದ ರಿಜ್ವಾನ್ ಆಕರ್ಷಕ ಅರ್ಧಶತಕ ಸಿಡಿಸಿದರು. ಗೆಲುವಿಗೆ 3 ರನ್ ಅಗತ್ಯವಿದ್ದಾಗ ದೊಡ್ಡ ಹೊಡೆತಕ್ಕೆ ಕೈಹಾಕಿದ ಫಕರ್ ಜಮಾನ್ 4(6) ರನ್ ಗಳಿಸಿ ಔಟಾದರು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕೆನಡಾ, 7 ವಿಕೆಟ್ ನಷ್ಟಕ್ಕೆ 106 ರನ್ ಕಲೆ ಹಾಕಿತು. ಸವಾಲಿನ ಪಿಚ್‌ನಲ್ಲಿ ಪಾಕಿಸ್ತಾನದ ಘಟಾನುಘಟಿ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಆ್ಯರೋನ್ ಜಾನ್ಸನ್ 44 ಎಸೆತಗಳಲ್ಲಿ 52 ರನ್ ಗಳಿಸಿ ಮಿಂಚಿದರು. ಇದರಲ್ಲಿ ನಾಲ್ಕು ಸ್ಫೋಟಕ ಸಿಕ್ಸರ್ ಹಾಗೂ 4 ಬೌಂಡರಿಗಳು ಸೇರಿವೆ. ಪಾಕ್ ಬೌಲರ್‌ಗಳನ್ನು ನಿರಂತರವಾಗಿ ಕಾಡಿದ ಏಕೈಕ ಆಟಗಾರ ಇವರು. ಆರಂಭಿಕರಾಗಿ ಕಣಕ್ಕಿಳಿದ ಜಾನ್ಸನ್, ಆರನೆಯವರಾಗಿ ಔಟಾದರು. ತಂಡದ ಒಟ್ಟು ಮೊತ್ತ 73 ರನ್ ಆಗಿದ್ದಾಗ ವಿಕೆಟ್ ಒಪ್ಪಿಸಿದರು. ರಿಜ್ವಾನ್ ಅಜೇಯ 53 ರನ್ ಪೇರಿಸಿದರು.
ಕೆನಡಾ ಪರ ನಾಯಕ ಸಾದ್ ಬಿನ್ ಜಾಫರ್ 10 ರನ್ ಗಳಿಸಿದರೆ, ಕಲೀಮ್ ಸನಾ 13 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು 100 ರನ್ ಗಡಿ ದಾಟಿಸಿದರು. ಆರಂಭಿಕ ಆಟಗಾರ ನವನೀತ್ (4) ಮೊದಲನೆಯವರಾಗಿ ಔಟಾದರು. ಪರ್ಗತ್ ಸಿಂಗ್ ಗಳಿಕೆ 2 ರನ್‌ಗೆ ನಿಂತಿತು. ಆರಂಭದಲ್ಲಿ ವೇಗದ ಆಟಕ್ಕೆ ಕೈಹಾಕಿದ್ದ ಕೆನಡಾ, ಮೊದಲ ವಿಕೆಟ್ ಪತನವಾಗುತ್ತಿದ್ದಂತೆಯೇ ಆಟ ನಿಧಾನಗೊಳಿಸಿತು. ನಿಕೋಲಸ್ ಕಿರ್ಟನ್ (1) ಔಟಾಗುವುದರೊಂದಿಗೆ ಜಾನ್ಸನ್ ಮೇಲೆ ಒತ್ತಡವನ್ನು ಹೆಚ್ಚಿಸಿತು.
ಹ್ಯಾರಿಸ್ ರೌಫ್ ಎಸೆದ 10ನೇ ಓವರ್‌ಲ್ಲಿ ಶ್ರೇಯಸ್ ಮೊವ್ವಾ (2) ಹಾಗೂ ರವೀಂದರ್ಪಾಲ್ ಸಿಂಗ್ (0) ವಿಕೆಟ್ ಒಪ್ಪಿಸಿದರು. ಅಷ್ಟರಲ್ಲಿ ಕೆನಡಾ 5 ವಿಕೆಟ್ ನಷ್ಟಕ್ಕೆ 54 ರನ್ ಗಳಿಸಿತು. ಇದರೊಂದಿಗೆ ಹ್ಯಾರಿಸ್ ರೌಫ್ ಟಿ20 ಸ್ವರೂಪದಲ್ಲಿ 100 ವಿಕೆಟ್‌ಗಳನ್ನು ಪೂರೈಸಿದರು.
ಪಾಕ್ ಪರ ಮೊಹಮ್ಮದ್ ಅಮೀರ್ 13 ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆದರೆ, ಹ್ಯಾರಿಸ್ ರೌಫ್ 26ಕ್ಕೆ 2 ಹಾಗೂ ಶಾಹೀನ್ ಶಾ ಅಫ್ರಿದಿ 21ಕ್ಕೆ 1 ವಿಕೆಟ್ ಪಡೆದರು.
ಕ್ರಿಕೆಟ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಯಶಸ್ವಿ ಜೈಸ್ವಾಲ್ ಇನ್, ಶಿವಂ ದುಬೆ ಔಟ್; ಯುಎಸ್‌ಎ ವಿರುದ್ಧದ ವಿಶ್ವಕಪ್ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ
