ಮೊಹಮ್ಮದ್ ಶಮಿ ಇನ್, ವರುಣ್ ಚಕ್ರವರ್ತಿ ಔಟ್; ಚಾಂಪಿಯನ್ಸ್ ಟ್ರೋಫಿಯಲ್ಲಿ ಬಾಂಗ್ಲಾದೇಶ ಪಂದ್ಯಕ್ಕೆ ಭಾರತದ ಸಂಭಾವ್ಯ 11
Indias Likely XI: ಚಾಂಪಿಯನ್ಸ್ ಟ್ರೋಫಿಯಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಭಾರತ ಸಂಭಾವ್ಯ ಪ್ಲೇಯಿಂಗ್ 11 ಹೇಗಿರಲಿದೆ? ಯಾರಿಗೆಲ್ಲಾ ಅವಕಾಶ ಸಿಗಬಹುದು? ಇಲ್ಲಿದೆ ಮಾಹಿತಿ.

3ನೇ ಬಾರಿಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ (ICC Champions Trophy 2025) ಗೆಲ್ಲುವ ವಿಶ್ವಾಸದೊಂದಿಗೆ ದುಬೈನಲ್ಲಿ ಭರ್ಜರಿ ಸಿದ್ಧತೆ ನಡೆಸುತ್ತಿರುವ ಟೀಮ್ ಇಂಡಿಯಾ (Team India), ಫೆ 20 ರಂದು ನಮ್ಮ ನೆರೆಯ ರಾಷ್ಟ್ರ ಬಾಂಗ್ಲಾದೇಶ ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. 2017ರಲ್ಲಿ ರನ್ನರ್ಅಪ್ಗೆ ತೃಪ್ತಿಪಟ್ಟುಕೊಂಡಿದ್ದ ಭಾರತ ತಂಡ ಸತತ ಮೂರನೇ ಬಾರಿಗೆ ಫೈನಲ್ ಪ್ರವೇಶಿಸುವುದರ ಜೊತೆಗೆ 2013ರ ನಂತರ ಟ್ರೋಫಿಗೆ ಮುತ್ತಿಕ್ಕುವ ಗುರಿ ಹೊಂದಿದೆ. ತನ್ನೆಲ್ಲಾ ಪಂದ್ಯಗಳನ್ನು ದುಬೈನಲ್ಲೇ ಆಡಲಿರುವ ಮೆನ್ ಇನ್ ಬ್ಲ್ಯೂ, ನೂತನ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ. ನಾಯಕ ರೋಹಿತ್ ಶರ್ಮಾ (Rohit Sharma), ಹೆಡ್ ಕೋಚ್ ಗೌತಮ್ ಗಂಭೀರ್ (Gautam Gambhir) ಅವರು ವಿಭಿನ್ನ ಆಲೋಚನೆಗಳ ಮೂಲಕ ತಂಡವನ್ನು ಕಣಕ್ಕಿಳಿಸಲು ಚಿಂತಿಸಿದ್ದಾರೆ. ಬಾಂಗ್ಲಾ ವಿರುದ್ಧದ ಪಂದ್ಯಕ್ಕೆ ಭಾರತ ಸಂಭಾವ್ಯ ಪ್ಲೇಯಿಂಗ್ 11 (India Playing XI) ಹೇಗಿರಲಿದೆ? ಯಾರಿಗೆಲ್ಲಾ ಅವಕಾಶ ಸಿಗಬಹುದು? ಇಲ್ಲಿದೆ ಮಾಹಿತಿ.
ರೋಹಿತ್-ಗಿಲ್ ಆರಂಭಿಕರು
ನಾಯಕ ರೋಹಿತ್ ಶರ್ಮಾ ಮತ್ತು ಉಪನಾಯಕ ಶುಭ್ಮನ್ ಗಿಲ್ ಎಂದಿನಿಂತೆ ತಮ್ಮ ಸ್ಥಾನದಲ್ಲಿ ಕಣಕ್ಕಿಳಿಯುವುದು ಖಚಿತ. ಇದರಲ್ಲಿ ಯಾವುದೇ ಅನುಮಾನವೂ ಇಲ್ಲ, ಬದಲಾವಣೆಯೂ ಇಲ್ಲ. ಈ ಹಿಂದೆ ಬ್ಯಾಕಪ್ ಓಪನರ್ ಸ್ಥಾನಕ್ಕೆ ಆಯ್ಕೆ ಮಾಡಲಾಗಿತ್ತು. ಒಂದು ವೇಳೆ ರೋಹಿತ್ ಅಥವಾ ಗಿಲ್ ಗಾಯಗೊಂಡರೆ ಅವರ ಸ್ಥಾನ ತುಂಬಲು ಜೈಸ್ವಾಲ್ ಇದ್ದಾರೆ ಎಂಬ ನಂಬಿಕೆ ಇತ್ತು. ಆದರೀಗ ಅವರನ್ನು ತಂಡದಿಂದಲೇ ಕೈಬಿಡಲಾಗಿದೆ. ಇಂತಹದ್ದೊಂದು ಪರಿಸ್ಥಿತಿ ಎದುರಾದರೆ ಮತ್ತೊಬ್ಬ ಆರಂಭಿಕ ಸ್ಥಾನಕ್ಕೆ ಕೆಎಲ್ ರಾಹುಲ್ಗೆ ಅವಕಾಶ ಸಿಗಬಹುದು ಎನ್ನಲಾಗಿದೆ.
ಕೊಹ್ಲಿ, ಅಯ್ಯರ್, ರಾಹುಲ್ ಖಚಿತ
ಬ್ಯಾಟಿಂಗ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ವಿಕೆಟ್ ಕೀಪರ್ ಬ್ಯಾಟರ್ ಕೆಎಲ್ ರಾಹುಲ್ ಕ್ರಮವಾಗಿ 3, 4, 5ನೇ ಸ್ಥಾನದಲ್ಲಿ ಕಣಕ್ಕಿಳಿಯೋದು ಖಚಿತ. ವಿಕೆಟ್ ಕೀಪರ್ ಸ್ಥಾನಕ್ಕೆ ರಿಷಭ್ ಪಂತ್ ಕಣಕ್ಕಿಳಿಯುವುದು ಬಹುತೇಕ ಅನುಮಾನ. ಕೆಎಲ್ ರಾಹುಲ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಎಂದು ಈ ಹಿಂದೆ ಗೌತಮ್ ಗಂಭೀರ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ಮತ್ತೊಂದೆಡೆ ಉತ್ತಮ ಲಯದಲ್ಲಿರುವ ಕೊಹ್ಲಿ ಮತ್ತು ಅಯ್ಯರ್ ಅವರ ಸ್ಥಾನ ಕಾಯಂ ಆಗಿದ್ದು, ಬೇರೆಯವರನ್ನು ಆಯ್ಕೆ ಮಾಡುವುದು ಅಸಾಧ್ಯ.
ಹಾರ್ದಿಕ್ ಪಾಂಡ್ಯ-ಜಡೇಜಾ ಫಿಕ್ಸ್, ಮತ್ತೊಬ್ಬ ಯಾರು?
ವೇಗದ ಆಲ್ರೌಂಡರ್ ಕೋಟಾಗೆ ಹಾರ್ದಿಕ್ ಪಾಂಡ್ಯ ಮತ್ತು ಸ್ಪಿನ್ ಆಲ್ರೌಂಡರ್ ಕೋಟಾಗೆ ರವೀಂದ್ರ ಜಡೇಜಾ ಫಿಕ್ಸ್. ಆದರೆ ಮತ್ತೊಬ್ಬ ಸ್ಪಿನ್ ಆಲ್ರೌಂಡರ್ ಸ್ಥಾನಕ್ಕೆ ಇನ್ನಿಬ್ಬರ ನಡುವೆ ಪೈಪೋಟಿ ಏರ್ಪಟ್ಟಿದೆ. ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ಮತ್ತೊಂದು ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದರೂ ಅಕ್ಷರ್ ಮುಂಚೂಣಿಯಲ್ಲಿ ಇದ್ದಾರೆ ಎನ್ನುವುದು ಇತ್ತೀಚಿನ ನಿರ್ಧಾರಗಳು ಸ್ಪಷ್ಟಪಡಿಸುತ್ತವೆ. ಅವರು ಸಿಕ್ಕ ಅವಕಾಶದಲ್ಲಿ ತನ್ನ ಸಾಮರ್ಥ್ಯ ಸಾಬೀತುಪಡಿಸಿ ಟೀಮ್ ಮ್ಯಾನೇಜ್ಮೆಂಟ್ ನಂಬಿಕೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬೌಲಿಂಗ್ ಜೊತೆಗೆ ಬ್ಯಾಟಿಂಗ್ನಲ್ಲೂ ಖದರ್ ತೋರಿಸಿದ್ದಾರೆ.
ಸ್ಪೆಷಲಿಸ್ಟ್ ಸ್ಪಿನ್ನರ್ ಯಾರು? ಶಮಿಗೆ ಸಾಥ್ ಕೊಡೋಡು ಯಾರು?
ಜಡೇಜಾ, ಅಕ್ಷರ್ ಪಟೇಲ್ ಇಬ್ಬರು ಸ್ಪಿನ್ನರ್ ಆಲ್ರೌಂಡರ್ಗಳಾದರೆ, ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿ ಮತ್ತೊಬ್ಬರನ್ನು ಕಣಕ್ಕಿಳಿಸಲು ಮ್ಯಾನೇಜ್ಮೆಂಟ್ ಚಿಂತಿಸಿದೆ. ಅದಕ್ಕಾಗಿ ಚೈನಾಮೆನ್ ಕುಲ್ದೀಪ್ ಯಾದವ್ ಹಾಗೂ ಕೊನೆ ಕ್ಷಣದಲ್ಲಿ ಜೈಸ್ವಾಲ್ ಬದಲಿಗೆ ತಂಡವನ್ನು ಸೇರಿಕೊಂಡ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಪೈಪೋಟಿಯಲ್ಲಿದ್ದು, ಇಬ್ಬರಲ್ಲಿ ಒಬ್ಬರ ಆಯ್ಕೆ ಸವಾಲಾಗಿದೆ. ಹೀಗಿದ್ದರೂ ಮೊದಲ ಆಯ್ಕೆ ಕುಲ್ದೀಪ್ ಎಂದು ಹೇಳಬಹುದು. ಮತ್ತೆ ವರುಣ್ ಇತ್ತೀಚೆಗೆ ಅದ್ಭುತ ಪ್ರದರ್ಶನ ನೀಡಿದ ಹಿನ್ನೆಲೆ ಅವರಿಗೂ ಅವಕಾಶ ಸಿಗಬಹುದು ಎಂದರೂ ಅಚ್ಚರಿ ಇಲ್ಲ. ಇನ್ನು ವೇಗದ ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ ಬದಲಿಗೆ ತಂಡದಲ್ಲಿ ಅವಕಾಶ ಪಡೆದುಕೊಂಡಿರುವ ಹರ್ಷಿತ್ ರಾಣಾ ಅವರನ್ನು ಕೈಬಿಡುವುದು ಖಚಿತ ಎನ್ನಲಾಗುತ್ತಿದೆ. ಮೊಹಮ್ಮದ್ ಶಮಿ ಮತ್ತು ಅರ್ಷದೀಪ್ ಸಿಂಗ್ ಮೊದಲ ಆಯ್ಕೆಯಾಗಿದ್ದಾರೆ ಎನ್ನಬಹುದು. ಆದರೆ ಕೊನೆ ಕ್ಷಣದಲ್ಲಿ ಹರ್ಷಿತ್ ತಂಡ ಕೂಡಿಕೊಂಡರೂ ಅಚ್ಚರಿ ಇಲ್ಲ.
ಬಾಂಗ್ಲಾದೇಶ ವಿರುದ್ಧದ ಪಂದ್ಯಕ್ಕೆ ಭಾರತದ ಸಂಭಾವ್ಯ 11
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್.
