IND vs AUS: ರಣಜಿ ಮೂಲಕ ಖತರ್ನಾಕ್ ಎಂಟ್ರಿ ಕೊಟ್ಟ ಮೊಹಮ್ಮದ್ ಶಮಿ: ಆಸೀಸ್​ಗೆ ತೆರಳಲು ಏನು ಮಾಡಬೇಕು?
ಕನ್ನಡ ಸುದ್ದಿ  /  ಕ್ರಿಕೆಟ್  /  Ind Vs Aus: ರಣಜಿ ಮೂಲಕ ಖತರ್ನಾಕ್ ಎಂಟ್ರಿ ಕೊಟ್ಟ ಮೊಹಮ್ಮದ್ ಶಮಿ: ಆಸೀಸ್​ಗೆ ತೆರಳಲು ಏನು ಮಾಡಬೇಕು?

IND vs AUS: ರಣಜಿ ಮೂಲಕ ಖತರ್ನಾಕ್ ಎಂಟ್ರಿ ಕೊಟ್ಟ ಮೊಹಮ್ಮದ್ ಶಮಿ: ಆಸೀಸ್​ಗೆ ತೆರಳಲು ಏನು ಮಾಡಬೇಕು?

Mohammed Shami: ಮೊಹಮ್ಮದ್ ಶಮಿ ರಣಜಿ ಟ್ರೋಫಿ ಮೂಲಕ ಮತ್ತೆ ಕಣಕ್ಕಿಳಿದಿದ್ದಾರೆ. ಒಂದು ವರ್ಷದ ನಂತರ ತಮ್ಮ ಮೊದಲ ರೆಡ್ ಬಾಲ್ ಪಂದ್ಯವನ್ನು ಆಡಿದ ಶಮಿ, ಮಧ್ಯಪ್ರದೇಶದ ಮೊದಲ ಇನ್ನಿಂಗ್ಸ್‌ನಲ್ಲಿ 19 ಓವರ್‌ಗಳಲ್ಲಿ ನಾಲ್ಕು ಮೇಡನ್‌ಗಳೊಂದಿಗೆ ನಾಲ್ಕು ವಿಕೆಟ್ ಪಡೆದರು.

ರಣಜಿ ಮೂಲಕ ಖತರ್ನಾಕ್ ಎಂಟ್ರಿ ಕೊಟ್ಟ ಮೊಹಮ್ಮದ್ ಶಮಿ: ಆಸೀಸ್​ಗೆ ತೆರಳಲು ಏನು ಮಾಡಬೇಕು?
ರಣಜಿ ಮೂಲಕ ಖತರ್ನಾಕ್ ಎಂಟ್ರಿ ಕೊಟ್ಟ ಮೊಹಮ್ಮದ್ ಶಮಿ: ಆಸೀಸ್​ಗೆ ತೆರಳಲು ಏನು ಮಾಡಬೇಕು? (PTI)

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ (Border Gavaskar trophy) ನವೆಂಬರ್ 22 ರಿಂದ ಪ್ರಾರಂಭವಾಗಲಿದೆ. ಈ ಸರಣಿಯ ಮೊದಲ ಪಂದ್ಯ ಪರ್ತ್‌ನಲ್ಲಿ ನಡೆಯಲಿದ್ದು, ಈಗಾಗಲೇ ಅಲ್ಲಿಗೆ ಟೀಂ ಇಂಡಿಯಾ ತಲುಪಿದೆ. ಈ ಪ್ರವಾಸಕ್ಕಾಗಿ ಭಾರತೀಯ ಆಯ್ಕೆದಾರರು 18 ಆಟಗಾರರಿಗೆ ತಂಡದಲ್ಲಿ ಸ್ಥಾನ ನೀಡಿದ್ದಾರೆ. ಆದರೆ, ಅನುಭವಿ ವೇಗಿ ಮೊಹಮ್ಮದ್ ಶಮಿ (Mohammed Shami) ಈ ತಂಡದ ಭಾಗವಾಗಿರಲಿಲ್ಲ. ಕಳೆದ ಋತುವಿನಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ತಂಡ ಪ್ರಕಟಿಸುವವರೆಗೂ ಫಿಟ್ ಆಗಿರಲಿಲ್ಲ.

ಆದರೆ, ಈಗ ಮತ್ತೆ ಕ್ರಿಕೆಟ್ ಕ್ಷೇತ್ರಕ್ಕೆ ಶಮಿ ಮರಳಿದ್ದಾರೆ. ಅವರು ರಣಜಿ ಟ್ರೋಫಿ ಮೂಲಕ ಮತ್ತೆ ಕಣಕ್ಕಿಳಿದಿದ್ದಾರೆ. ಮಧ್ಯಪ್ರದೇಶ ವಿರುದ್ಧ ಶಮಿ ಉತ್ತಮವಾಗಿ ಬೌಲಿಂಗ್ ಮಾಡಿದರು. ಹೀಗಾಗಿ ಆಸ್ಟ್ರೇಲಿಯಾ ಪ್ರವಾಸಕ್ಕೂ ಟೀಂ ಇಂಡಿಯಾ ಬಾಗಿಲು ತಟ್ಟಿದ್ದರು. ಒಂದು ವರ್ಷದ ನಂತರ ತಮ್ಮ ಮೊದಲ ರೆಡ್ ಬಾಲ್ ಪಂದ್ಯವನ್ನು ಆಡಿದ ಶಮಿ, ಮಧ್ಯಪ್ರದೇಶದ ಮೊದಲ ಇನ್ನಿಂಗ್ಸ್‌ನಲ್ಲಿ 19 ಓವರ್‌ಗಳಲ್ಲಿ ನಾಲ್ಕು ಮೇಡನ್‌ಗಳೊಂದಿಗೆ ನಾಲ್ಕು ವಿಕೆಟ್ ಪಡೆದರು.

ಹೀಗಿರುವಾಗ ಸವಾಲಿನ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತ ತಂಡಕ್ಕೆ ಮೊಹಮ್ಮದ್ ಶಮಿ ಲಭ್ಯವಾಗುವ ಸಾಧ್ಯತೆ ಇದೆ. ಆದರೆ ಅದಕ್ಕೂ ಮುನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಶಮಿಗೆ ದೊಡ್ಡ ಪರೀಕ್ಷೆ ಎದುರಾಗಲಿದೆ. ಇಂದೋರ್‌ನ ಹೋಳ್ಕರ್ ಸ್ಟೇಡಿಯಂನಲ್ಲಿ ಅವರು ಎರಡನೇ ಇನ್ನಿಂಗ್ಸ್‌ನಲ್ಲಿ ಹೇಗೆ ಬೌಲಿಂಗ್ ಮಾಡುತ್ತಾರೆ ಎಂಬುದನ್ನು ಆಯ್ಕೆ ಸಮಿತಿ ವೀಕ್ಷಿಸಲಿದೆ. ಆ ಬಳಿಕ ನೋವು, ಊತ ಕಂಡು ಬರುತ್ತಿದೆಯೇ ಎಂಬುದನ್ನು ನೋಡಿ ಆಸೀಸ್​ಗೆ ಕಳುಹಿಸಲಾಗುವುದು ಎಂಬ ವರದಿಗಳಿವೆ.

ಪಿಂಕ್ ಬಾಲ್ ಟೆಸ್ಟ್ ಆಡಲಿದ್ದಾರೆಯೇ?

ಶಮಿ ಎಲ್ಲಾ ಮಾನದಂಡಗಳನ್ನು ಪೂರೈಸಿದರೆ, ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಸೇರುವುದು ಬಹುತೇಕ ಖಚಿತವಾಗಿದೆ. ಈ ರಣಜಿ ಪಂದ್ಯ ನವೆಂಬರ್ 16 ರಂದು ಕೊನೆಗೊಳ್ಳಲಿದೆ. ನವೆಂಬರ್ 22 ರಿಂದ ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಶಮಿ ಕಾಂಗರೂ ನಾಡಿಗೆ ತೆರಳಿದರೆ ಪ್ರೈಮ್ ಮಿನಿಸ್ಟರ್ ಇಲೆವೆನ್ ವಿರುದ್ಧದ ಎರಡು ದಿನಗಳ ಹಗಲು-ರಾತ್ರಿ ಟೆಸ್ಟ್ ಅಭ್ಯಾಸ ಪಂದ್ಯ ಆಡಲಿದ್ದಾರೆ.

ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯ ಅಜಯ್ ಮತ್ತು ಎನ್‌ಸಿಎ ವೈದ್ಯಕೀಯ ತಂಡದ ಮುಖ್ಯಸ್ಥ ನಿತಿನ್ ಪಟೇಲ್ ಅವರು ಶಮಿ ಅವರ ಬೌಲಿಂಗ್ ವೀಕ್ಷಿಸಲು ವಿಶೇಷವಾಗಿ ಬಂದಿದ್ದರು ಎಂದು ಬಂಗಾಳ ಕ್ರಿಕೆಟ್ ಸಂಸ್ಥೆಯ ಮೂಲಗಳು ಪಿಟಿಐಗೆ ತಿಳಿಸಿವೆ. ಶಮಿ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು, ಅವರ ಪ್ರತಿಕ್ರಿಯೆಯನ್ನು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್, ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೆ ಕಳುಹಿಸಲಾಗುವುದು.

ಫಿಟ್ನೆಸ್ ಪರಿಶೀಲಿಸಲು ಇದೆ ಒಂದು ಪಂದ್ಯ

ಬಿಸಿಸಿಐನಿಂದ ಬಂದಿರುವ ಸುದ್ದಿಯ ಪ್ರಕಾರ, ಶಮಿಗೆ ಸಹಜ ಆಟವನ್ನು ಆಡುವಂತೆ ಹೇಳಲಾಗಿದೆ. ಏಕೆಂದರೆ ಟೆಸ್ಟ್ ಸೀಸನ್ ಮುಗಿದ ನಂತರ ರಣಜಿ ಟ್ರೋಫಿಯ ಮುಂದಿನ ಸುತ್ತು ಜನವರಿ 23 ರಂದು ಆರಂಭವಾಗಲಿದೆ. ಹಾಗಾಗಿ ಅವರ ಫಿಟ್ನೆಸ್ ಪರಿಶೀಲಿಸಲು ಆಯ್ಕೆದಾರರಿಗೆ ಒಂದೇ ಪಂದ್ಯವಿದೆ. ಶಮಿ ಈಗ ಎರಡನೇ ಇನ್ನಿಂಗ್ಸ್‌ನಲ್ಲಿ ಮತ್ತೆ ಬೌಲಿಂಗ್ ಮತ್ತು ಫೀಲ್ಡಿಂಗ್ ಮಾಡಬೇಕು. ಅವರು ಎರಡನೇ ಇನ್ನಿಂಗ್ಸ್‌ನಲ್ಲಿ ಇನ್ನೂ 15 ರಿಂದ 18 ಓವರ್‌ಗಳನ್ನು ಬೌಲ್ ಮಾಡಿದರೆ, ಅದು ಉತ್ತಮ ಸಂಖ್ಯೆಯಾಗಿದೆ. ಆದರೆ ನಾಲ್ಕು ದಿನಗಳ ನಂತರ ಮತ್ತೆ ನೋವು ಕಾಣಿಸಿಕೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ

Whats_app_banner