14 ತಿಂಗಳ ನಂತರ ಟೀಮ್ ಇಂಡಿಯಾಗೆ ಮರಳಿದ ಮೊಹಮ್ಮದ್ ಶಮಿ; ಸುದೀರ್ಘ 2 ವರ್ಷಗಳ ಬಳಿಕ ಮೊದಲ ಟಿ20 ಪಂದ್ಯ
ವೇಗದ ಬೌಲರ್ ಮೊಹಮ್ಮದ್ ಶಮಿ ಕೊನೆಗೂ ಟೀಮ್ ಇಂಡಿಯಾ ಪುನರಾಗಮನ ಮಾಡಿದ್ದಾರೆ. ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯಕ್ಕೆ ವೇಗಿ ಆಡುವ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.

ಕೊನೆಗೂ ಮೊಹಮ್ಮದ್ ಶಮಿ (Mohammed Shami) ಟೀಮ್ ಇಂಡಿಯಾ ಕಂಬ್ಯಾಕ್ ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯ ಮೊದಲ ಎರಡು ಟಿ20 ಪಂದ್ಯಗಳಲ್ಲಿ ಬೆಂಚ್ ಬೆಚ್ಚಗಾಗಿಸಿದ್ದ ವೇಗದ ಬೌಲರ್, ರಾಜ್‌ಕೋಟ್‌ನ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡದ ಆಡುವ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ. ಅರ್ಷದೀಪ್ ಸಿಂಗ್ ಬದಲಿಗೆ ಶಮಿ ಸ್ಥಾನ ಪಡೆದ್ದಾರೆ. ಇದರೊಂದಿಗೆ ಶಮಿ 14 ತಿಂಗಳುಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದಾರೆ. ಇದೇ ವೇಳೆ ಬರೋಬ್ಬರಿ ಎರಡು ವರ್ಷಗಳ ನಂತರ ಭಾರತದ ಪರ ಟಿ20 ಆಡುತ್ತಿದ್ದಾರೆ. ಕೊನೆಯದಾಗಿ 2022ರ ನವೆಂಬರ್‌ನಲ್ಲಿ ಶಮಿ ಕೊನೆಯ ಟಿ20 ಪಂದ್ಯವನ್ನಾಡಿದ್ದರು.
2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಶಮಿ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದರು. ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯಕ್ಕೂ ಮುಂಚಿತವಾಗಿ, ಭಾರತದ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಅವರು ಶಮಿ ಫಿಟ್ ಆಗಿದ್ದಾರೆ ಎಂದು ಹೇಳಿದ್ದರು. ಇದೇ ವೇಳೆ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದರು.
ಆಂಗ್ಲರ ವಿರುದ್ಧದ ಸರಣಿಗೆ ಶಮಿ ತಂಡದಲ್ಲಿ ಸ್ಥಾನ ಪಡೆದ ನಂತರ, ಕೋಲ್ಕತ್ತಾದಲ್ಲಿ ನಡೆದ ಮೊದಲ ಪಂದ್ಯದಲ್ಲಿಯೇ ಆಡುತ್ತಾರೆ ಎಂದೇ ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಸರಣಿಯ ಮೊದಲ ಎರಡು ಟಿ20 ಪಂದ್ಯಗಳಿಂದಲೂ ಅನುಭವಿ ವೇಗಿಯನ್ನು ಹೊರಗಿಡಲಾಯ್ತು.
ದೇಶೀಯ ಕ್ರಿಕೆಟ್‌ಗೆ ಕಂಬ್ಯಾಕ್
ಏಕದಿನ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಆಟಗಾರ, ಐಸಿಸಿ ಚಾಂಪಿಯನ್ಸ್ ಟ್ರೋಫಿ ತಂಡದ ಭಾಗವಾಗಿದ್ದಾರೆ. ಹೀಗಾಗಿ ಆಟಗಾರನಿಗೆ ಸದ್ಯ ಅಭ್ಯಾಸದ ಅಗತ್ಯವಿದೆ. ಪಾದದ ಗಾಯದಿಂದ ಚೇತರಿಸಿಕೊಂಡ ನಂತರ 34 ವರ್ಷದ ಆಟಗಾರ ಕಳೆದ ವರ್ಷದ ಕೊನೆಗೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ್ದರು. ರಣಜಿ ಟ್ರೋಫಿ, ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲಿ ಅವರು ಬಂಗಾಳ ಪರ ಆಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಐದು ಪಂದ್ಯಗಳ ಸರಣಿಯಲ್ಲಿ ಭಾರತ ಈಗಾಗಲೇ 2-0 ಅಂತರದಿಂದ ಮುನ್ನಡೆ ಸಾಧಿಸಿದೆ. ರಾಜ್‌ಕೋಟ್‌ನಲ್ಲಿ ಪಂದ್ಯ ಗೆದ್ದರೆ ಆತಿಥೇಯ ತಂಡ ಸರಣಿ ಗೆಲುವು ಸಾಧಿಸಿದಂತಾಗುತ್ತದೆ. ನಿರ್ಣಾಯಕ ಪಂದ್ಯಕ್ಕಾಗಿ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಅರ್ಷದೀಪ್ ಸಿಂಗ್‌ಗೆ ವಿಶ್ರಾಂತಿ ನೀಡಿ ಶಮಿಯನ್ನು ಆಯ್ಕೆ ಮಾಡಲಾಗಿದೆ.
ಭಾರತದ ಆಡುವ ಬಳಗ
ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಧ್ರುವ್ ಜುರೆಲ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ.
ಇಂಗ್ಲೆಂಡ್ ತಂಡ
ಜೋಸ್ ಬಟ್ಲರ್ (ನಾಯಕ), ಫಿಲಿಪ್ ಸಾಲ್ಟ್, ಬೆನ್ ಡಕೆಟ್, ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟನ್, ಜೇಮಿ ಸ್ಮಿತ್ (ವಿಕೆಟ್ ಕೀಪರ್), ಜೇಮಿ ಓವರ್ಟನ್, ಬ್ರೈಡನ್ ಕಾರ್ಸ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್.
