ಗುಜರಾತ್ ಟೈಟಾನ್ಸ್ಗೆ ಬಹುದೊಡ್ಡ ಆಘಾತ; ಐಪಿಎಲ್ನಿಂದ ಮೊಹಮ್ಮದ್ ಶಮಿ ಔಟ್, ಟಿ20 ವಿಶ್ವಕಪ್‌ಗೆ ಡೌಟ್
Mohammed Shami : ಪಾದದ ಗಾಯದ ಸಮಸ್ಯೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಲಿರುವ ಕಾರಣ ಮುಂಬರುವ 17ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಗುಜರಾತ್ ಟೈಟಾನ್ಸ್ ವೇಗಿ ಮೊಹಮ್ಮದ್ ಶಮಿ ಹೊರಬಿದ್ದಿದ್ದಾರೆ.
17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಆರಂಭಕ್ಕೆ ದಿನಾಂಕ ಫಿಕ್ಸ್ ಆಗಿದೆ. ಅಧಿಕೃತವಾಗಿ ಬಿಸಿಸಿಐ ವೇಳಾಪಟ್ಟಿ ಪ್ರಕಟಿಸಿದೆ. ಮಾರ್ಚ್ 22ರಿಂದ ಟೂರ್ನಿಗೆ ಚಾಲನೆ ಸಿಗಲಿದೆ. ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ (RCB vs CSK) ನಡುವೆ ಕಾದಾಟ ನಡೆಯಲಿದೆ. ಆದರೆ ಟೂರ್ನಿಗೆ ಮುಹೂರ್ತ ನಿಗದಿಯಾದ ಬೆನ್ನಲ್ಲೇ ಗುಜರಾತ್ ಟೈಟಾನ್ಸ್ (Gujarat Titans) ತಂಡಕ್ಕೆ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.
ಐಪಿಎಲ್ನಿಂದ ಶಮಿ ಔಟ್
ಶುಭ್ಮನ್ ಗಿಲ್ ನೇತೃತ್ವದ ಗುಜರಾತ್ ತಂಡಕ್ಕೆ ಭಾರಿ ಹೊಡೆತವೊಂದು ಬಿದ್ದಿದೆ. ಟೀಮ್ ಇಂಡಿಯಾ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ (Mohammed Shami) ಅವರು ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ. 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನಕಾರನಾಗಿದ್ದ ಮೊಹಮ್ಮದ್ ಶಮಿ, ಗಾಯದ ಸಮಸ್ಯೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಈ ಬಾರಿಯ ಐಪಿಎಲ್ನಲ್ಲಿ ಅವರು ಆಡುವುದಿಲ್ಲ. ಇದು ಗುಜರಾತ್ ಪಾಲಿಗೆ ದೊಡ್ಡ ಕಹಿ ಸುದ್ದಿಯಾಗಿದೆ.
ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾದದ ಗಾಯದ ನೋವಿಗೆ ಪೇನ್ ಕಿಲ್ಲರ್ ಬಳಸುತ್ತಿದ್ದ ಮೊಹಮ್ಮದ್ ಶಮಿ, ಆ ಬಳಿಕ ಭಾರತ ತಂಡದ ಪರ ಕಣಕ್ಕಿಳಿದಿಲ್ಲ. ಇಂಗ್ಲೆಂಡ್ ಟೆಸ್ಟ್ ಸರಣಿಗೆ ಮರಳುವ ನಿರೀಕ್ಷೆ ಇತ್ತು. ಆದರೆ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳದ ಕಾರಣ ಟೆಸ್ಟ್ ಸರಣಿಗೆ ಅವಕಾಶ ಪಡೆಯಲು ವಿಫಲರಾದರು. ಹಾಗಾಗಿ ಅವರೀಗ ಶಸ್ತ್ರ ಚಿಕಿತ್ಸೆಗೆ ಒಳಪಡಲಿದ್ದು, ಆ ಬಳಿಕ ಎರಡರಿಂದ ಮೂರು ತಿಂಗಳ ಕಾಲ ವಿಶ್ರಾಂತಿ ಪಡೆಯಬೇಕಾಗುತ್ತದೆ. ಐಪಿಎಲ್ ಜೊತೆಗೆ ಟಿ20 ವಿಶ್ವಕಪ್ ಕಳೆದುಕೊಂಡರೂ ಅಚ್ಚರಿ ಇಲ್ಲ.
ಶಮಿ ಅವರ ಪ್ರಸ್ತುತ ಚಿಕಿತ್ಸೆಯು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ಖಚಿತಪಡಿಸಿದ್ದಾರೆ. ಐಪಿಎಲ್ 2023ರಲ್ಲಿ 17 ಪಂದ್ಯಗಳಲ್ಲಿ 28 ವಿಕೆಟ್ ಗಳಿಸಿದ್ದ ಶಮಿ, ಗುಜರಾತ್ ಪರ ಪರ್ಪಲ್ ಕ್ಯಾಪ್ ಗೆದ್ದಿದ್ದರು. ಗುಜರಾತ್ ಸತತ 2ನೇ ಫೈನಲ್ ತಲುಪಲು ನೆರವಾಗಿದ್ದ ವೇಗಿ ತನ್ನ ಗಾಯಕ್ಕೆ ಜನವರಿ ಕೊನೆಯಲ್ಲಿ ಲಂಡನ್ನಲ್ಲಿ ಚುಚ್ಚುಮದ್ದು ಪಡೆದಿದ್ದರು. ಆದರೆ ಅದು ಸರಿಯಾಗಿ ಕೆಲಸ ಮಾಡಲಿಲ್ಲ ಎಂದಿದ್ದಾರೆ ಅಧಿಕಾರಿ.
ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ವೇಗಿ, ತಂಡಕ್ಕೆ ಮರಳುವುದು ಯಾವಾಗ?
ಚುಚ್ಚುಮದ್ದು ಕೆಲಸ ಮಾಡದ ಕಾರಣ ಈಗ ಉಳಿದಿರುವ ಏಕೈಕ ಆಯ್ಕೆಯು ಶಸ್ತ್ರಚಿಕಿತ್ಸೆಯಾಗಿದೆ. ಅವರು ಶೀಘ್ರದಲ್ಲೇ ಶಸ್ತ್ರಚಿಕಿತ್ಸೆಗಾಗಿ ಯುಕೆಗೆ ತೆರಳುತ್ತಾರೆ. ಶಸ್ತ್ರಚಿಕಿತ್ಸೆಯ ನಂತರ ಹಲವು ತಿಂಗಳ ಕಾಲ ವಿಶ್ರಾಂತಿ ಪಡೆಯಬೇಕಾಗುತ್ತದೆ. ಹಾಗಾಗಿ ಐಪಿಎಲ್ ಆಡುವುದು ಕಷ್ಟ ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿವೆ. ಐಪಿಎಲ್ ನಂತರ ನಡೆಯುವ ಟಿ20 ವಿಶ್ವಕಪ್‌ಗೆ ವೇಗಿ ಲಭ್ಯತೆ ಬಗ್ಗೆ ಗಂಭೀರ ಅನುಮಾನಗಳನ್ನು ಹುಟ್ಟುಹಾಕಿದೆ. ಬಹುತೇಕ ವಿಶ್ವಕಪ್‌ಗೆ ಮರಳುವುದು ಕೂಡ ಅನುಮಾನ ಇದೆ. ವಿಶ್ವಕಪ್‌ಗೆ ಮರಳದಿದ್ದರೆ ಅಕ್ಟೋಬರ್-ನವೆಂಬರ್‌ನಲ್ಲಿ ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಶಮಿ ಮರಳುವ ಸಾಧ್ಯತೆ ಇದೆ.
ಗುಜರಾತ್ ಟೈಟಾನ್ಸ್ ಈ ಬಾರಿ ನೂತನ ನಾಯಕನೊಂದಿಗೆ ಕಣಕ್ಕಿಳಿಯಲಿದೆ. ಹಾರ್ದಿಕ್ ಪಾಂಡ್ಯ ಟ್ರೇಡ್ ಮೂಲಕ ಮುಂಬೈ ಇಂಡಿಯನ್ಸ್ ಸೇರಿರುವ ಪರಿಣಾ ಶುಭ್ಮನ್ ಗಿಲ್ ತಂಡವನ್ನು ಮುನ್ನಡೆಸಲಿದ್ದಾರೆ. ಸದ್ಯ ಶಮಿ ಅಲಭ್ಯತೆ ಗುಜರಾತ್ಗೆ ದೊಡ್ಡ ಹೊಡೆತ ನೀಡುತ್ತದೆ ಎಂದರೆ ತಪ್ಪಾಗಲ್ಲ. 2022ರಲ್ಲಿ ಐಪಿಎಲ್ಗೆ ಹೊಸದಾಗಿ ಪ್ರವೇಶಿಸಿದ ಗುಜರಾತ್ ಟೈಟಾನ್ಸ್ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಿದ್ದರು. ತಂಡದ ಚೊಚ್ಚಲ ಐಪಿಎಲ್ನಲ್ಲೇ ಟ್ರೋಫಿಗೆ ಮುತ್ತಿಕ್ಕಿತು. 2023ರ ಆವೃತ್ತಿಯಲ್ಲೂ ಪಾಂಡ್ಯ ಕ್ಯಾಪ್ಟನ್ಸಿಯಲ್ಲೇ ಗುಜರಾತ್ ಫೈನಲ್ ಪ್ರವೇಶಿಸಿ ರನ್ನರ್ಅಪ್ ಆಗಿತ್ತು.