ಭಾರತ ತಂಡಕ್ಕೆ ಗುಡ್ನ್ಯೂಸ್; ಬಾಕ್ಸಿಂಗ್ ಟೆಸ್ಟ್ನಲ್ಲಿ ಆಸ್ಟ್ರೇಲಿಯಾಗೆ ಪಂಚ್ ಕೊಡಲು ಬರ್ತಿದ್ದಾರೆ ಮೊಹಮ್ಮದ್ ಶಮಿ?
Mohammed Shami: ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ಮೊಹಮ್ಮದ್ ಶಮಿ ಲಭ್ಯರಾಗುವುದು ಖಚಿತವಾಗಿದೆ. ಕಿಟ್ ಮತ್ತು ವೀಸಾ ಸಿದ್ದವಾಗಿದ್ದು, ಎನ್ಸಿಎ ಕ್ಲಿಯರೆನ್ಸ್ ಸರ್ಟಿಫಿಕೇಟ್ ನೀಡುವುದು ಮಾತ್ರ ಬಾಕಿ ಉಳಿದಿದೆ.
ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಅಡಿಲೇಡ್ ಓವಲ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಸೋಲಿನ ಭೀತಿಗೆ ಸಿಲುಕಿರುವ ಟೀಮ್ ಇಂಡಿಯಾಗೆ ಗುಡ್ನ್ಯೂಸ್ ಸಿಕ್ಕಿದೆ. ಆದರೆ ಈ ಸಿಹಿ ಸುದ್ದಿ ಪ್ರಸ್ತುತ ನಡೆಯುತ್ತಿರುವ ಪಂದ್ಯಕ್ಕಲ್ಲ, ಮುಂದಿನ ಪಂದ್ಯಗಳಿಗೆ.! ಹೌದು, ಸ್ಟಾರ್ ವೇಗಿ ಮೊಹಮ್ಮದ್ ಶಮಿ ಅವರು ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಗೆ ಲಭ್ಯರಾಗುವುದು ಖಚಿತವಾಗಿದೆ. ಕಿಟ್ ಮತ್ತು ವೀಸಾ ಸಿದ್ದವಾಗಿದ್ದು, ಎನ್ಸಿಎ ಕ್ಲಿಯರೆನ್ಸ್ ಸರ್ಟಿಫಿಕೇಟ್ ನೀಡುವುದು ಮಾತ್ರ ಬಾಕಿ ಉಳಿದಿದೆ.
ಶಮಿ ಅವರನ್ನು ಆದಷ್ಟು ಬೇಗ ಆಸ್ಟ್ರೇಲಿಯಾಕ್ಕೆ ಕರೆದೊಯ್ಯಲು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಉತ್ಸುಕವಾಗಿದೆ ಎಂದು ವರದಿಯಾಗಿದೆ. ಆದರೆ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ಅನುಭವಿ ವೇಗಿಗೆ ಕ್ಲಿಯರೆನ್ಸ್ ಸರ್ಟಿಫಿಕೇಟ್ ಇನ್ನೂ ನೀಡಿಲ್ಲ. ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಶಮಿ ಅವರು, ಚೇತರಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಮೊಣಕಾಲು ಗಾಯದಿಂದ ಬಳಲುತ್ತಿದ್ದರು. ರಣಜಿ ಟ್ರೋಫಿಯಲ್ಲಿ ಪಶ್ಚಿಮ ಬಂಗಾಳ ಪರ ಕಣಕ್ಕಿಳಿಯುವ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿದ್ದರು. ಬಲಗೈ ವೇಗಿ ಆಡಿದ ಪಂದ್ಯದಲ್ಲಿ 8 ವಿಕೆಟ್ ಪಡೆದಿದ್ದರು.
ಬಿಸಿಸಿಐ ಅಧಿಕಾರಿ ಹೇಳಿದ್ದೇನು?
ಪ್ರಸ್ತುತ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಬಂಗಾಳ ತಂಡದ ಪರ ವೇಗದ ದಾಳಿಯನ್ನು ಮುನ್ನಡೆಸಿದ 34 ವರ್ಷದ ಆಟಗಾರ, 7 ಪಂದ್ಯಗಳಲ್ಲಿ 7.67 ಎಕಾನಮಿಯಲ್ಲಿ 8 ವಿಕೆಟ್ ಪಡೆದಿದ್ದು, ತಂಡವನ್ನು ನಾಕೌಟ್ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎನ್ಸಿಎ ವೈದ್ಯಕೀಯ ತಂಡವು 64 ಟೆಸ್ಟ್ ಆಡಿರುವ ಅನುಭವಿ ಆಟಗಾರನನ್ನು ಆಸ್ಟ್ರೇಲಿಯಾಕ್ಕೆ ಕಳುಹಿಸಲು ಆತುರಪಡುತ್ತಿಲ್ಲ. ಆಸ್ಟ್ರೇಲಿಯಾದಲ್ಲಿರುವ ಭಾರತ ತಂಡ ಶಮಿಯನ್ನು ಸ್ವಾಗತಿಸಲು ಸಿದ್ಧವಾಗಿದೆ. ವೀಸಾ ಪ್ರಕ್ರಿಯೆಗಳು ಮುಗಿದಿವೆ. ಅವರು ಈಗಾಗಲೇ ಅವರ ಕಿಟ್ ಅನ್ನು ಸಿದ್ಧಪಡಿಸಿದ್ದಾರೆ. ಅವರಿಗೆ ಬೇಕಾಗಿರುವುದು ಎನ್ಸಿಎಯಿಂದ ಗ್ರೀನ್ ಸಿಗ್ನಲ್ ಮಾತ್ರ.
ಈ ಬಗ್ಗೆ ಬಿಸಿಸಿಐ ಅಧಿಕಾರಿಯೊಬ್ಬರು ಇಂಡಿಯನ್ ಎಕ್ಸ್ಪ್ರೆಸ್ಗೆ ಮಾಹಿತಿ ನೀಡಿದ್ದು, ಶಮಿ ಬಗ್ಗೆ ಎನ್ಸಿಎಯ ಫಿಟ್ನೆಸ್ ಕ್ಲಿಯರೆನ್ಸ್ ರಿಪೋರ್ಟ್ಗಾಗಿ ಆಯ್ಕೆ ಸಮಿತಿ ಕಾಯುತ್ತಿದೆ. ಅವರು ರಣಜಿ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಆಡಿದ್ದು, ಫಿಟ್ ಆಗಿದ್ದಾರೆ. ಅವರ ಕಿಟ್ ಕೂಡ ಸಿದ್ಧವಾಗಿದೆ ಎಂದಿದ್ದಾರೆ. ಪ್ರಸ್ತುತ ಟೀಮ್ ಇಂಡಿಯಾ ಅಡಿಲೇಡ್ನಲ್ಲಿ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ನಲ್ಲಿ ಭಾರತ ತಂಡ ಸೋಲಿನ ಭೀತಿಗೆ ಸಿಲುಕಿದೆ. ವೇಗದ ದಾಳಿಯಲ್ಲಿ ಅನುಭವಿಗಳ ಕೊರತೆ ಇದೆ. ಜಸ್ಪ್ರೀತ್ ಬುಮ್ರಾ ಮಾತ್ರ ವಿಕೆಟ್ ಬೇಟೆಯಾಡುತ್ತಿದ್ದಾರೆ.
ಕೊನೆಯ ಎರಡು ಪಂದ್ಯಗಳಿಗೆ ಲಭ್ಯ?
ಒಂದು ವೇಳೆ ಮೊಹಮ್ಮದ್ ಶಮಿ ಅವರು ಆಸ್ಟ್ರೇಲಿಯಾಗೆ ಪ್ರಯಾಣಿಸಿದರೆ ಕೊನೆಯ ಎರಡು ಪಂದ್ಯಗಳಿಗೆ ಲಭ್ಯರಾಗಲಿದ್ದಾರೆ. ಏಕೆಂದರೆ ಪ್ರಯಾಣ ಬೆಳೆಸಿದ ನಂತರ ಅವರು ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲು ಮತ್ತು ಸತತ ಅಭ್ಯಾಸ ನಡೆಸಲು ಸಮಯ ಬೇಕಿರುವ ಕಾರಣ ಡಿಸೆಂಬರ್ 26ರಂದು ನಡೆಯುವ ಬಾಕ್ಸಿಂಗ್ ಟೆಸ್ಟ್ ಪಂದ್ಯಕ್ಕೆ ಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ. 2023ರ ನವೆಂಬರ್ನಲ್ಲಿ ಕೊನೆಯದಾಗಿ ಭಾರತ ತಂಡದ ಪರ ಆಡಿರುವ ಶಮಿ, ಒಂದು ವರ್ಷದ ನಂತರ ತಂಡದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.
ಭಾರತದ ವೇಗದ ದಾಳಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮಾಜಿ ಹೆಡ್ಕೋಚ್ ರವಿ ಶಾಸ್ತ್ರಿ ಅವರು, ಉಳಿದ ಮೂರು ಟೆಸ್ಟ್ ಪಂದ್ಯಗಳಿಗೆ ಶಮಿ ತಂಡಕ್ಕೆ ಮರಳುವುದರಿಂದ ಮಾತ್ರ ತಂಡಕ್ಕೆ ಬಲ ಬರಲಿದೆ. ಶಮಿ ಎಷ್ಟು ಬೇಗ ಇಲ್ಲಿಗೆ ತಲುಪುತ್ತಾರೋ ಅಷ್ಟು ಒಳ್ಳೆಯದು ಎಂದು ರವಿಶಾಸ್ತ್ರಿ ಕಾಮೆಂಟರಿ ವೇಳೆ ಹೇಳಿದ್ದಾರೆ.