ಅಬ್ಬಬ್ಬಾ 181.6 ಕಿಮೀ ವೇಗದಲ್ಲಿ ಚೆಂಡೆಸೆದ ಮೊಹಮ್ಮದ್ ಸಿರಾಜ್; ಕ್ರಿಕೆಟ್ ಚರಿತ್ರೆಯಲ್ಲೇ ಇದು ವೇಗದ ಬಾಲ್, ಆದರೆ ಅಸಲಿಯತ್ತೇ ಬೇರೆ!
Mohammed Siraj: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಂದು ಭಾರತದ ವೇಗಿ ಮೊಹಮ್ಮದ್ ಸಿರಾಜ್ ಗಂಟೆಗೆ 181.6 ಕಿಮೀ ವೇಗದಲ್ಲಿ ಚೆಂಡೆಯುವ ಮೂಲಕ ಕ್ರಿಕೆಟ್ ಲೋಕವನ್ನೇ ತಲ್ಲಣಗೊಳಿಸಿದ್ದಾರೆ. ಆದರೆ ಇದು ನಿಜಾನಾ, ಸುಳ್ಳಾ?
ಅಡಿಲೇಡ್ ಓವಲ್ ಕ್ರಿಕೆಟ್ ಮೈದಾನದಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ 2ನೇ ಟೆಸ್ಟ್ನ ಮೊದಲ ದಿನದಂದು ಅಚ್ಚರಿಯ ಘಟನೆಯೊಂದು ನಡೆಯಿತು. ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಅವರು ಕ್ರಿಕೆಟ್ ಚರಿತ್ರೆಯಲ್ಲೇ ಅತ್ಯಂತ ವೇಗದ ಎಸೆತವನ್ನು ಎಸೆದಿದ್ದಾರೆ. ಹೌದು, ಗಂಟೆಗೆ 181.6 ಕಿಮೀ ವೇಗದಲ್ಲಿ ಚೆಂಡೆಯುವ ಮೂಲಕ ಕ್ರಿಕೆಟ್ ಲೋಕವನ್ನೇ ತಲ್ಲಣಗೊಳಿಸಿದ್ದಾರೆ. ಅಚ್ಚರಿ ಏನೆಂದರೆ ಈ ವಿಶ್ವ ದಾಖಲೆಯನ್ನು ಖುದ್ದು ಮೊಹಮ್ಮದ್ ಸಿರಾಜ್ ಕೂಡ ನಂಬುತ್ತಿಲ್ಲ. ಏಕೆಂದರೆ ಅದರ ಅಸಲಿಯತ್ತೇ ಬೇರೆ ಇದೆ.
ಬೌಲರ್ಗಳ ವೇಗವನ್ನು ಅಳೆಯುವ ಸ್ಪೀಡ್ ಮೀಟರ್ ಮಾಡಿರುವ ಎಡವಟ್ಟಿನಿಂದ ಗಂಟೆಗೆ 181.6 ಕಿಮೀ ವೇಗದಲ್ಲಿ ಚೆಂಡೆಸದಂತೆ ತೋರಿಸಲಾಗಿದೆ. ಗಂಟೆಗೆ 130 ರಿಂದ 140ರ ನಡುವೆ ಚೆಂಡು ಎಸೆಯುವ ಸಾಮರ್ಥ್ಯ ಹೊಂದಿರುವ ಭಾರತದ ವೇಗಿ ಗಂಟೆಗೆ 180+ ವೇಗದಲ್ಲಿ ಚೆಂಡು ಹಾಕಿದ್ದು ಎಲ್ಲರನ್ನೂ ದಿಗ್ಭ್ರಮೆ ಮೂಡಿಸಿತ್ತು. ಇದು ಪ್ರಸ್ತುತ ಕ್ರಿಕೆಟ್ ದಾಖಲೆಗಳಲ್ಲಿ ಇರುವ ಶೋಯೆಬ್ ಅಖ್ತರ್ ಅವರ ಗಂಟೆಗೆ 161.3 ಕಿಮೀ ಬೌಲಿಂಗ್ ವೇಗದ ದಾಖಲೆಗಿಂತ 20 ಕಿಮೀ ವೇಗವಾಗಿತ್ತು. ಮೈದಾನದಲ್ಲಿದ್ದ ಪ್ರೇಕ್ಷಕರು, ಅಭಿಮಾನಿಗಳು ಒಂದು ಕ್ಷಣ ದಂಗಾಗಿ ಹೋದರು.
ಸಿರಾಜ್ ಎಸೆದ 25ನೇ ಓವರ್ನ 5ನೇ ಎಸೆತದ ವೇಗವನ್ನು ಅಡಿಲೇಡ್ ಮೈದಾನದ ಪರದೆಯಲ್ಲಿ ಗಂಟೆಗೆ 181.6 ಕಿಮೀ ವೇಗ ಎಂದು ತಪ್ಪಾಗಿ ತೋರಿಸಲಾಗಿತ್ತು. ಮಾರ್ನಸ್ ಲಬುಶೇನ್ ಅವರಿಗೆ ಎಸೆದಾಗ ಈ ಕ್ಷಣ ಸಂಭವಿಸಿದೆ. ಕಳಿಕ ಸ್ಪೀಡ್ ಮೀಟರ್ನಲ್ಲಿ ಉಂಟಾದ ದೋಷವನ್ನು ಸರಿಪಡಿಸಿಕೊಳ್ಳಲಾಗಿದೆ. ಸಿರಾಜ್ ಎಸೆದಿರುವ ಚೆಂಡು 135ರ ಆಸುಪಾಸಿನಲ್ಲಿ ತಿಳಿಸಲಾಗಿದೆ. ಆದರೆ ವಿಚಾರವಾಗಿ ಜಾಲತಾಣಗಳಲ್ಲಿ ಫನ್ನಿ ಮೀಮ್ಸ್ಗಳು ವೈರಲ್ ಆಗುತ್ತಿವೆ. ಕೆಲವು ತಮಾಷೆಯ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ.
ಡಿಎಸ್ಪಿ ಸಿರಾಜ್ ಬಂದ್ರ ನೋಡಿ ಎಂದ ನೆಟ್ಟಿಗರು
ಮೊಹಮ್ಮದ್ ಸಿರಾಜ್ ವೇಗದ ಚೆಂಡು ದಾಖಲಾದ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ತರಹೇವಾರಿ ಮೀಮ್ಸ್ಗಳು ಹುಟ್ಟಿಕೊಂಡಿವೆ. ಇನ್ಮುಂದೆ ಡಿಎಸ್ಪಿ ಸಿರಾಜ್ರದ್ದೇ ಹವಾ ಎಂದು ಪೋಸ್ಟ್ ಹಾಕುತ್ತಿದ್ದಾರೆ. ಇಷ್ಟು ವೇಗವಾಗಿ ಬೌಲಿಂಗ್ ಮಾಡುವ ವ್ಯಕ್ತಿ ಈ ಗ್ರಹದ ಮೇಲೆಯೇ ಇಲ್ಲ ಎನ್ನುತ್ತಿದ್ದಾರೆ. ಶೋಯೆಬ್ ಅಖ್ತರ್ ಅವರ ಪರಂಪರೆಯನ್ನು ಧ್ವಂಸ ಮಾಡಿದ್ದಾರೆ. ಸಿರಾಜ್ ಭಾಯ್, ಸ್ಪೀಡ್ ಮೀಟರ್ ಕೂಡ ಭಯಪಟ್ಟಿದೆ ಎಂದು ನೆಟ್ಟಿಗರು ಮೀಮ್ಸ್ ಕ್ರಿಯೇಟ್ ಮಾಡಿದ್ದಾರೆ.
ಕ್ರಿಕೆಟ್ ಇತಿಹಾಸದಲ್ಲಿ ವೇಗದ ಚೆಂಡು ಎಸೆದವರು
ಶೋಯೆಬ್ ಅಖ್ತರ್: 2003 ರಲ್ಲಿ 161.3 km/h
ಶಾನ್ ಟೈಟ್: 2010 ರಲ್ಲಿ 161.1 km/h
ಬ್ರೆಟ್ ಲೀ: 2005 ರಲ್ಲಿ 161.1 km/h
ಜೆಫ್ ಥಾಮ್ಸನ್: 1975 ರಲ್ಲಿ 160.6 km/h
ಮಿಚೆಲ್ ಸ್ಟಾರ್ಕ್: 2015 ರಲ್ಲಿ 160.4 km/h
ಟೀಮ್ ಇಂಡಿಯಾ ಎರಡನೇ ಟೆಸ್ಟ್ ಮೊದಲ ಇನ್ನಿಂಗ್ಸ್ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿತು. ತೀವ್ರ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಕೆಎಲ್ ರಾಹುಲ್ 37, ಶುಭ್ಮನ್ ಗಿಲ್ 31, ನಿತೀಶ್ ಕುಮಾರ್ ರೆಡ್ಡಿ 42 ರನ್ ಸಿಡಿಸಿದ್ದು ಹೊರತುಪಡಿಸಿ ಉಳಿದವರು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. 180 ರನ್ಗಳಿಗೆ ಆಲೌಟ್ ಆಯಿತು. ಇದೀಗ ಆಸೀಸ್ ಮುನ್ನಡೆ ಸಾಧಿಸಿದೆ.