ಸಿಎಸ್‌ಕೆ ನನ್ನ ಫ್ರಾಂಚೈಸ್, ವೀಲ್‌ಚೇರ್‌ನಲ್ಲಿದ್ರೂ ನನ್ನನ್ನು ಆಡಿಸ್ತಾರೆ; ನಿವೃತ್ತಿ ವದಂತಿ ತಳ್ಳಿಹಾಕಿದ ಎಂಎಸ್ ಧೋನಿ
ಐಪಿಎಲ್‌ನಲ್ಲಿ ಎಂಎಸ್ ಧೋನಿ ಸಿಎಸ್‌ಕೆ ಪರ ಆಡುವುದನ್ನು ಮುಂದುವರೆಸುವ ಸುಳಿವು ನೀಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತನ್ನ ಫ್ರಾಂಚೈಸ್ ಎಂದಿರುವ ಅವರು, ತಾನು ವೀಲ್‌ಚೇರ್‌ನಲ್ಲಿದ್ದರೂ ಫ್ರಾಂಚೈಸ್ ಆಡಿಸಲು ಸಿದ್ಧವಿದೆ ಎಂದು ಹೇಳಿದ್ದಾರೆ.

ಪ್ರತಿ ಬಾರಿಯ ಐಪಿಎಲ್ ಸಮಯದಲ್ಲೂ, ಸಿಎಸ್‌ಕೆ ತಂಡ ಹಾಗೂ ಎಂಎಸ್ ಧೋನಿ ಅಭಿಮಾನಿಗಳ ಪ್ರಶ್ನೆ ಒಂದೇ. ಎಂಎಸ್ ಧೋನಿ ಈ ಆವೃತ್ತಿ ಬಳಿಕ ವಿದಾಯ ಹೇಳುತ್ತಾರೋ ಏನೋ ಎಂಬ ಗೊಂದಲ ಅವರದ್ದು. ಹೀಗಾಗಿ ಪ್ರತಿ ಆವೃತ್ತಿಯಲ್ಲೂ ಸಿಎಸ್‌ಕೆ ತಂಡದ ಕೊನೆಯ ಪಂದ್ಯದ ಸಮಯದಲ್ಲಿ ಮಾಹಿ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಸ್ಟೇಡಿಯಂನಲ್ಲಿ ಬಂದು ಸೇರುತ್ತಾರೆ. ಈ ಬಾರಿ ಚೆನ್ನೈ ಕ್ಯಾಂಪ್ ಸೇರುವ ಸಮಯದಲ್ಲಿ "ಒನ್ ಲಾಸ್ಟ್ ಟೈಮ್" ಎಂಬ ಪದಗಳಿರುವ ಟಿ-ಶರ್ಟ್ ಧರಿಸಿದ್ದ ಮಾಹಿ, ನಿವೃತ್ತಿಯ ಸುಳಿವನ್ನು ಬಿಟ್ಟುಕೊಟ್ಟರು. ಇದು ಅವರ ಅಭಿಮಾನಿಗಳಲ್ಲಿ ಸಾಕಷ್ಟು ಕೋಲಾಹಲವನ್ನು ಹುಟ್ಟುಹಾಕಿತು. ಆದರೆ, ಭಾನುವಾರ (ಮಾ.23) ಚೆನ್ನೈನಲ್ಲಿ ನಡೆಯಲಿರುವ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯಕ್ಕೆ ಮುಂಚಿತವಾಗಿ ನಿವೃತ್ತಿ ಕುರಿತ ಎಲ್ಲಾ ಊಹಾಪೋಹಗಳ ಬಗ್ಗೆ ಮಾಹಿ ಮೌನ ಮುರಿದಿದ್ದಾರೆ.
ಧೋನಿಗೆ ಈಗ 43 ವರ್ಷ ವಯಸ್ಸು. ಈಗಲೂ ಅವರ ಫಿಟ್‌ನೆಸ್‌ಗೆ ಸರಿಸಾಟಿ ಇಲ್ಲ. ಸಿಎಸ್‌ಕೆ ಪರ ಹಲವು ವರ್ಷಗಳ ಕಾಲ ಆಡಿರುವ ಅವರು, ಸಿಎಸ್‌ಕೆ ಫ್ರಾಂಚೈಸಿ ಪರ ಆಡುವುದು ಸದ್ಯಕ್ಕೆ ನಿಲ್ಲಿಸಲ್ಲ ಎಂದು ಹೇಳಿದ್ದಾರೆ. ವಿದಾಯ ಹೇಳಲು ಸಿದ್ಧರಿಲ್ಲ ಎಂದು ಹೇಳಿದರು.
ಜಿಯೋ ಹಾಟ್‌ಸ್ಟಾರ್ ಜೊತೆಗೆ ಮಾತನಾಡಿದ ಧೋನಿ, ತಾನು ಬಯಸಿದಷ್ಟು ಕಾಲ ಚೆನ್ನೈ ಪರ ಆಡಬಹುದು ಎಂದು ಹೇಳಿಕೊಂಡಿದ್ದಾರೆ. ಇನ್ನೂ ಮುಂದುವರಿದು, ಗಾಯಗೊಂಡು ಗಾಲಿಕುರ್ಚಿಯಲ್ಲಿ ಹೋಗುವಂತಿದ್ದರೂ, ಮತ್ತೊಂದು ಋತುವಿನಲ್ಲಿ ಆಡಲು ಫ್ರಾಂಚೈಸಿ ತನ್ನ ಮನವೊಲಿಸುತ್ತದೆ ಎಂದು ಹೇಳಿಕೊಂಡಿದ್ದಾರೆ.
ವೀಲ್‌ಚೇರ್‌ನಲ್ಲಿದ್ದರೂ ಆಡಿಸ್ತಾರೆ
“ಸಿಎಸ್‌ಕೆ ಪರ ನಾನು ಬಯಸಿದಷ್ಟು ಕಾಲ ಆಡಬಲ್ಲೆ. ಅದು ನನ್ನ ಫ್ರ್ಯಾಂಚೈಸ್. ನಾನು ಗಾಲಿಕುರ್ಚಿಯಲ್ಲಿದ್ದರೂ, ಅವರು ನನ್ನನ್ನು ಕರೆತಂದು ಆಡಿಸುತ್ತಾರೆ” ಎಂದು ಅವರು ಹೇಳಿದರು.
2023ರ ಐಪಿಎಲ್ ಋತುವಿನ ಸಮಯದಲ್ಲಿ ಭಾರತೀಯ ಕ್ರಿಕೆಟ್‌ನ ದಿಗ್ಗಜ ಎಂಎಸ್ ಧೋನಿ ಮೊಣಕಾಲು ಗಾಯದಿಂದ ಬಳಲುತ್ತಿದ್ದರು. ನಂತರ ಅವರು ಋತುವಿನ ಕೊನೆಗೆ ಶಸ್ತ್ರಚಿಕಿತ್ಸೆಗೆ ಒಳಗಾದರು. ಐಪಿಎಲ್‌ನ 17ನೇ ಆವೃತ್ತಿಗೂ ಮುನ್ನ ಸಂಪೂರ್ಣ ಚೇತರಿಸಿಕೊಂಡರು. ತಂಡಕ್ಕಾಗಿ ನಾಯಕತ್ವವನ್ನು ರುತುರಾಜ್ ಗಾಯಕ್ವಾಡ್‌ಗೆ ಬಿಟ್ಟುಕೊಟ್ಟ ಧೋನಿ, 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದರು. ಆದರೂ 220ರ ಸ್ಟ್ರೈಕ್ ರೇಟ್‌ನಲ್ಲಿ 161 ರನ್ ಬಾರಿಸಿದರು.
ಈ ಬಾರಿ ಮಾಹಿ ಸಿಎಸ್‌ಕೆ ಪರ ಮತ್ತೊಂದು ಆವೃತ್ತಿಯಲ್ಲಿ ಆಡಲು ಸಜ್ಜಾಗಿದ್ದಾರೆ. ಇದರೊಂದಿಗೆ ಇತಿಹಾಸ ನಿರ್ಮಿಸುವ ಹೊಸ್ತಿಲಲ್ಲಿದ್ದಾರೆ. ಈ ಋತುವಿನ ಚೆನ್ನೈನ ಆರಂಭಿಕ ಪಂದ್ಯದಲ್ಲಿ ಧೋನಿ ಐಪಿಎಲ್ ಇತಿಹಾಸದಲ್ಲಿ ತಮ್ಮ ಹೆಸರನ್ನು ಬರೆಯುವ ಅವಕಾಶವಿದೆ. ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಲು ಕೇವಲ 19 ರನ್‌ಗಳ ಅಗತ್ಯವಿದೆ. ಇದೀಗ ಮಾಜಿ ಕ್ರಿಕೆಟಿಗ ಸುರೇಶ್ ರೈನಾ 4687 ರನ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.
