MS Dhoni: ಆರ್‌ಸಿಬಿ ವಿರುದ್ಧ ಸೋತಿದ್ದಕ್ಕೆ ಟಿವಿ ಒಡೆದು ಹಾಕಿದ್ದ ಧೋನಿ: ಶಾಕಿಂಗ್ ವಿಚಾರ ಬಹಿರಂಗ
ಐಪಿಎಲ್ 2024ರ ಮೇ 18 ರಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಹೈವೋಲ್ಟೇಜ್ ಪಂದ್ಯ ನಡೆದಿತ್ತು. ಆದರೆ ಆ ಪಂದ್ಯದಲ್ಲಿ ಚೆನ್ನೈ 27 ರನ್‌ಗಳ ಬೃಹತ್ ಅಂತರದಿಂದ ಸೋತಿತ್ತು. ಈ ಸಂದರ್ಭ ಧೋನಿ ಕೋಪದಿಂದ ಟಿವಿ ಕೂಡ ಒಡೆದು ಹಾಕಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮೈದಾನದಲ್ಲಿ ತಾಳ್ಮೆಯ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಹೀಗಾಗಿಯೇ ಅವರನ್ನು ‘ಕ್ಯಾಪ್ಟನ್ ಕೂಲ್’ ಎಂದು ಕರೆಯುತ್ತಾರೆ. ಧೋನಿ ಕೋಪಗೊಳ್ಳುವುದನ್ನು ನೋಡಿರುವವರು ಬಹಳ ಕಡಿಮೆ. ಧೋನಿಯ ಉಗ್ರ ರೂಪವನ್ನು ನೋಡಿದವರಲ್ಲಿ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿರುವ ಹರ್ಭಜನ್ ಸಿಂಗ್ ಕೂಡ ಒಬ್ಬರು. ಇದೀಗ ಅವರು ಧೋನಿ ಅಭಿಮಾನಿಗಳಿಗೂ ಅಚ್ಚರಿ ಮೂಡಿಸುವ ಘಟನೆಯೊಂದನ್ನು ಬಹಿರಂಗಪಡಿಸಿದ್ದಾರೆ.
ಐಪಿಎಲ್ 2024ರ ಮೇ 18 ರಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಹೈವೋಲ್ಟೇಜ್ ಪಂದ್ಯ ನಡೆದಿತ್ತು. ಇದು ಲೀಗ್ ಹಂತದಲ್ಲಿ ಎರಡೂ ತಂಡಗಳ ಕೊನೆಯ ಪಂದ್ಯವಾಗಿತ್ತು ಮತ್ತು ಪ್ಲೇಆಫ್‌ಗಳಿಗೆ ಹೋಗುವ ಅವಕಾಶಗಳನ್ನು ಜೀವಂತವಾಗಿಡಲು ಉಭಯ ತಂಡಗಳಿಗೆ ಈ ಪಂದ್ಯವನ್ನು ಗೆಲ್ಲುವುದು ಬಹಳ ಮುಖ್ಯವಾಗಿತ್ತು. ಆದರೆ ಆ ಪಂದ್ಯದಲ್ಲಿ ಚೆನ್ನೈ 27 ರನ್‌ಗಳ ಬೃಹತ್ ಅಂತರದಿಂದ ಸೋತಿತ್ತು.
ಹೀಗಾಗಿ ಸಿಎಸ್ಕೆ ಲೀಗ್ನಿಂದ ಔಟಾದರೆ, ಆರ್‌ಸಿಬಿ ಪ್ಲೇ ಆಫ್ ಸುತ್ತಿಗೆ ಎಂಟ್ರಿ ನೀಡಿತು. ಸಾಮಾನ್ಯವಾಗಿ ಪಂದ್ಯದ ನಂತರ ಉಭಯ ತಂಡಗಳ ಆಟಗಾರರು ಹಸ್ತಲಾಘವ ಮಾಡುತ್ತಾರೆ, ಇದು ವಾಡಿಕೆ. ಆದರೆ ಆ ಪಂದ್ಯದ ನಂತರ ಧೋನಿ ಹಸ್ತಲಾಘವ ಮಾಡದೆ ಡ್ರೆಸ್ಸಿಂಗ್ ರೂಮ್‌ಗೆ ಮರಳಿದರು. ಇದು ಎಲ್ಲರ ಅಚ್ಚರಿಗೂ ಕಾರಣವಾಗಿತ್ತು.
ಟಿವಿ ಒಡೆದರು ಧೋನಿ
ಭಾರತೀಯ ಮಾಜಿ ಸ್ಪಿನ್ ಬೌಲರ್ ಹರ್ಭಜನ್ ಸಿಂಗ್ ಆರ್‌ಸಿಬಿ ಗೆಲುವಿನ ನಂತರ ಎಂಎಸ್ ಧೋನಿ ಕೋಪ ಉತ್ತುಂಗಕ್ಕೇರಿತು ಎಂದು ಹೇಳಿದ್ದಾರೆ. ನಿಜವಾಗಿ ಹೇಳಬೇಕೆಂದರೆ ಧೋನಿ ತಮ್ಮ ಕೋಪದಿಂದ ಬೆಂಗಳೂರು ಆಟಗಾರರಿಗೆ ಕೈಕುಲುಕದೆ ಮೈದಾನದಿಂದ ನಿರ್ಗಮಿಸಿದ್ದಾರೆ. ಧೋನಿ ಕೋಪದಿಂದ ಟಿವಿ ಕೂಡ ಒಡೆದು ಹಾಕಿದ್ದರು ಎಂದು ಹರ್ಭಜನ್ ಹೇಳಿದ್ದಾರೆ.
ಧೋನಿ ಕೋಪಕ್ಕೆ ಏನು ಕಾರಣ?
ಆ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 218 ರನ್ ಗಳಿಸಿತು. ಒಂದು ವೇಳೆ ಚೆನ್ನೈ ಸೋತರೂ ಕನಿಷ್ಠ 18 ರನ್ ಅಥವಾ ಇದಕ್ಕಿಂತ ಹೆಚ್ಚಿನ ರನ್‌ಗಳ ಅಂತರದಿಂದ ಬೆಂಗಳೂರಿಗೆ ಗೆಲ್ಲಲು ಅವಕಾಶ ನೀಡಬಾರದಿತ್ತು. ಆಗ ಸಿಎಸ್ಕೆ ಪ್ಲೇ ಆಫ್ ಪ್ರವೇಶಿಸಬಹುದು ಎಂಬ ಲೆಕ್ಕಚಾರವಿತ್ತು. ಕೊನೆಯ ಓವರ್‌ನಲ್ಲಿ ಚೆನ್ನೈ ಗೆಲುವಿಗೆ 35 ರನ್‌ಗಳ ಅಗತ್ಯವಿತ್ತು, ಪ್ಲೇಆಫ್‌ಗೆ ಹೋಗಲು 16 ರನ್‌ಗಳ ಅಗತ್ಯವಿತ್ತು. ಆದರೆ ಕೊನೆಯ ಓವರ್‌ನಲ್ಲಿ ಚೆನ್ನೈ 7 ರನ್ ಗಳಿಸಲಷ್ಟೇ ಶಕ್ತವಾಯಿತು.
ಸ್ಪೋರ್ಟ್ಸ್ ಯಾರಿ ಎಂಬ ಕ್ರೀಡಾ ಕಾರ್ಯಕ್ರಮದಲ್ಲಿ ಮಾತನಾಡಿದ ಪತ್ರಕರ್ತರೊಬ್ಬರು, ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರಿಂದ ನನಗೆ ಈ ಮಾಹಿತಿ ಬಂದಿದೆ ಎಂದು ಹೇಳಿದ್ದಾರೆ.
ಅನ್ಕ್ಯಾಪ್ಡ್ ಪಟ್ಟಿಯಲ್ಲಿ ಧೋನಿ
ಐಪಿಎಲ್ 2025 ಮೆಗಾ ಆಕ್ಷನ್ಗೂ ಮುನ್ನ ಒಟ್ಟು ಆರು ಆಟಗಾರರನ್ನು ರಿಟೈನ್ ಮಾಡಿಕೊಳ್ಳಬಹುದು ಎಂದು ಬಿಸಿಸಿಐ ಹೇಳಿದೆ. ಇದರಲ್ಲಿ ಇಬ್ಬರು ಅನ್ಕ್ಯಾಪ್ಡ್ ಆಟಗಾರರಿಗೂ ಅವಕಾಶ ನೀಡಬಹುದು. ಈ ನಿಯಮದಲ್ಲೂ ಬಿಸಿಸಿಐ ಬದಲಾವಣೆ ತಂದಿದೆ. ಓರ್ವ ಆಟಗಾರ ಅಂತರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾದ 5 ವರ್ಷಗಳ ಬಳಿಕ ಆತನನ್ನು ಅನ್ಕ್ಯಾಪ್ಡ್ ಪ್ಲೇಯರ್ಸ್ ಪಟ್ಟಿಗೆ ಸೇರಿಸಲಾಗುತ್ತದೆ. ಈ ನಿಯಮ ಸಿಎಸ್ಕೆ ಮತ್ತು ಧೋನಿಗೆ ಪ್ಲಸ್ ಆಗಿದೆ. ಯಾಕೆಂದರೆ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿ 5 ವರ್ಷ ಆಗಿದೆ.
ವರದಿ: ವಿನಯ್ ಭಟ್
ಇದನ್ನೂ ಓದಿ: ಈತ ಕೊಹ್ಲಿಯಂತೆ ಸಸ್ಯಾಹಾರಿ; ಗಂಟೆಗೆ 156 ಕಿಮೀ ವೇಗದಲ್ಲಿ ಬೌಲಿಂಗ್, ಟೀಮ್ ಇಂಡಿಯಾಕ್ಕೆ ಸ್ಫೋಟಕ ಬೌಲರ್ ಎಂಟ್ರಿ