ಧೋನಿ ಚಾಣಾಕ್ಷ ಸ್ಟಂಪಿಂಗ್‌ಗೆ ದಂಗಾದ ಸೂರ್ಯಕುಮಾರ್; ಅಂಪೈರ್ ಔಟ್ ಘೋಷಿಸುವ ಮುನ್ನವೇ ಕ್ರೀಸ್‌ನಿಂದ ಹೊರನಡೆದ ಮುಂಬೈ ನಾಯಕ
ಐಪಿಎಲ್ 2025ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಸಿಎಸ್‌ಕೆ ತಂಡದ ಮಾಜಿ ನಾಯಕ ಎಂಎಸ್ ಧೋನಿ ಚಾಣಾಕ್ಷತನ ತೋರಿದ್ದಾರೆ. ಎಂಐ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಔಟ್ ಮಾಡಲು ಧೋನಿ ಮಿಂಚಿನ ವೇಗದಲ್ಲಿ ಸ್ಟಂಪಿಂಗ್ ಮಾಡಿದ್ದಾರೆ.

ಎಂಎಸ್ ಧೋನಿ ಕ್ರಿಕೆಟ್ ಆಡೋದು ಐಪಿಎಲ್‌ನಿಂದ ಐಪಿಎಲ್ ಸಮಯದಲ್ಲಿ ಮಾತ್ರ. ಕೊನೆಯ ಬಾರಿ ಕ್ರಿಕೆಟ್ ಆಡಿ ಸುಮಾರು 10 ತಿಂಗಳ ನಂತರ, ಮತ್ತೆ ಮೈದಾನಕ್ಕಿಳಿದಿರುವ ಮಾಹಿ, ಮತ್ತೆ ಅದೇ ಫಿಟ್‌ನೆಸ್‌ನೊಂದಿಗೆ ಆಡುತ್ತಿದ್ದಾರೆ. ಟೀಮ್ ಇಂಡಿಯಾದಿಂದ ನಿವೃತ್ತಿ ಪಡೆದು ಹಲವು ವರ್ಷಗಳಾದರೂ ಈಗಲೂ ಐಪಿಎಲ್‌ನಲ್ಲಿ ಆಡುತ್ತಿರುವ ಧೋನಿ, ಸಿಎಸ್‌ಕೆ ಪರ ಕಣಕ್ಕಿಳಿಯುತ್ತಿದ್ದಾರೆ. ವಿಶ್ವದ ಅತ್ಯಂತ ಚಾಣಾಕ್ಷ ಹಾಗೂ ತೀಕ್ಷ್ಣ ವಿಕೆಟ್ ಕೀಪರ್‌ಗಳಲ್ಲಿ ಒಬ್ಬರಾಗಿರುವ ಧೋನಿ, ಈ ಬಾರಿ ಮತ್ತೆ ಸ್ಟಂಪ್ಸ್ ಹಿಂದೆ ತಮ್ಮ ಚಾಣಾಕ್ಷ ನಡೆ ತೋರುತ್ತಿದ್ದಾರೆ. 43ನೇ ವಯಸ್ಸಿನಲ್ಲಿಯೂ, ವಯಸ್ಸೇ ನಾಚುವಂತೆ ಫಿಟ್ ಆಗಿ ಆಡುತ್ತಿದ್ದಾರೆ.
ಪ್ರತಿ ಬಾರಿಯೂ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಮಾಹಿ ಪುನರಾಗಮನವನ್ನು ಸಂಭ್ರಮಿಸುತ್ತಾರೆ. ಅಭಿಮಾನಿಗಳನ್ನು ಮಾಹಿ ಯಾವತ್ತೂ ನಿರಾಶೆಗೊಳಿಸಲ್ಲ. ಐಪಿಎಲ್ 18ನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ ಇಂದು (ಮಾ.23) ಮುಂಬೈ ಇಂಡಿಯನ್ಸ್ ವಿರುದ್ಧ ಸಿಎಸ್‌ಕೆ ಕಣಕ್ಕಿಳಿದಿದೆ. ಪಂದ್ಯದಲ್ಲಿ ಮಾಹಿ ಸ್ಟಂಪಿಂಗ್ ಅಭಿಮಾನಿಗಳ ಗಮನ ಸೆಳೆದಿದೆ.
ನೂರ್ ಅಹ್ಮದ್ ಬೌಲಿಂಗ್‌ನಲ್ಲಿ ಧೋನಿ ಅದ್ಭುತ ಸ್ಟಂಪಿಂಗ್ ಮಾಡುವ ಮೂಲಕ ಎದುರಾಳಿ ತಂಡದ ನಾಯಕನ ವಿಕೆಟ್ ಕಿತ್ತಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಸ್ಟ್ಯಾಂಡ್-ಇನ್ ನಾಯಕ ಸೂರ್ಯಕುಮಾರ್ ಯಾದವ್, ಯುವ ಎಡಗೈ ಮಣಿಕಟ್ಟು ಸ್ಪಿನ್ನರ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿದರು. ಆದರೆ, ಚೆಂಡು ಸೂರ್ಯ ಬ್ಯಾಟ್‌ಗೆ ಸಿಗಲಿಲ್ಲ. ಕ್ಷಣಮಾತ್ರದಲ್ಲಿ ಚೆಂಡನ್ನು ಎತ್ತಿಕೊಂಡ ಧೋನಿ, ಸ್ಟಂಪ್ಸ್‌ಗೆ ಮುಟ್ಟಿಸಿದರು. ಅವರ ಕೈಗಳು ಎಂದಿನಂತೆಯೇ ನಿಖರವಾಗಿದ್ದವು.
ಅಂಪೈರ್ ತೀರ್ಪಿಗೆ ಕಾಯದೆ ಪಿಚ್‌ನಿಂದ ಹೊರನಡೆದ ಸೂರ್ಯ
ಈ ವೇಳೆ ಸೂರ್ಯಕುಮಾರ್‌ಗೆ ಚೇತರಿಸಿಕೊಳ್ಳುವ ಅವಕಾಶವೇ ಸಿಗಲಿಲ್ಲ. ಕನಿಷ್ಠ ಪ್ರತಿಕ್ರಿಯಿಸಲು ಕೂಡಾ ಸಮಯವಿರಲಿಲ್ಲ. ಅಂಪೈರ್ ಔಟ್ ಎಂದು ತೀರ್ಪು ನೀಡುವ ಮುನ್ನವೇ ಸೂರ್ಯ ಡಗೌಟ್‌ನತ್ತ ಹೆಜ್ಜೆ ಹಾಕಿದರು. ಕನಿಷ್ಠ ರಿಪ್ಲೈ ಕೂಡಾ ನೋಡಲಿಲ್ಲ. ವಿಕೆಟ್ ಹಿಂದೆ ಧೋನಿ ನಿಖರತೆ ಏನು ಎಂಬುದು ಸ್ಕೈಗೆ ಸ್ಪಷ್ಟವಾಗಿ ಗೊತ್ತಿರುವಂತಿದೆ. ಹೀಗಾಗಿ ತಾನು ಔಟ್ ಎಂದು ನಿರ್ಧರಿಸಿ ಪಿಚ್‌ನಿಂದ ಹೊರನಡೆದಿದ್ದಾರೆ.
ನೂರ್ ಅಹ್ಮದ್ ಇದೇ ಮೊದಲ ಬಾರಿಗೆ ಸಿಎಸ್‌ಕೆ ಪರ ಆಡುತ್ತಿದ್ದಾರೆ. ಮೊದಲ ಪಂದ್ಯದಲ್ಲೇ ನಾಲ್ಕು ವಿಕೆಟ್ ಪಡೆದು ಮಿಂಚಿದ್ದಾರೆ. ಇದೇ ವೇಳೆ ಖಲೀಲ್ ಅಹ್ಮದ್ 3 ವಿಕೆಟ್ ಪಡೆದರು.
ಚೆನ್ನೈನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್‌ಕೆ ನಾಯಕ ಋತುರಾಜ್ ಗಾಯಕ್ವಾಡ್ ಬೌಲಿಂಗ್ ಆಯ್ಕೆ ಮಾಡಿಕೊಂಡರು.
