ನಾಲ್ಕೇ ಎಸೆತಗಳಲ್ಲಿ ಧೋನಿ 20 ರನ್; ಮಹೇಂದ್ರನ ರೌದ್ರಾವತಾರಕ್ಕೆ ದಾಖಲೆಗಳು ಛಿದ್ರ! ಬೆಂಕಿ ಬ್ಯಾಟಿಂಗ್ ವಿಡಿಯೋ ನೋಡಿ
MS Dhoni : ಮುಂಬೈ ಇಂಡಿಯನ್ಸ್ ವಿರುದ್ಧ ಕೊನೆಯ ಓವರ್ನಲ್ಲಿ ಆರ್ಭಟಿಸಿದ ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ನಾಯಕ ಎಂಎಸ್ ಧೋನಿ, ನಾಲ್ಕೇ ಎಸೆತಗಳಲ್ಲಿ 20 ರನ್ ಸಿಡಿಸಿ ಹಲವು ದಾಖಲೆ ಬರೆದಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೊನೆಯ ನಾಲ್ಕು ಎಸೆತಗಳಲ್ಲಿ ಕ್ರೀಸ್ಗೆ ಬಂದ ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ, ಧಮಾಕ ಸೃಷ್ಟಿಸಿದರು. ಮುಂಬೈನ ಐಕಾನಿಕ್ ವಾಂಖೆಡೆ ಮೈದಾನದಲ್ಲಿ ಸಿಕ್ಸರ್ಸ್ ಸುರಿಮಳೆಗೈದ 42ರ ಹರೆಯದ ಮಹೇಂದ್ರ, ನೆರೆದಿದ್ದ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಉಣಬಡಿಸಿದರು. ಅಲ್ಲದೆ, ಹಲವು ದಾಖಲೆಗಳನ್ನೂ ಧೂಳೀಪಟಗೊಳಿಸಿದ್ದಾರೆ.
20ನೇ ಓವರ್‌ಗೂ ಮುನ್ನ 180/3 ಇದ್ದ ಸ್ಕೋರ್, 200ರ ಗಡಿ ದಾಟುತ್ತದೆ ಎಂಬುದು ಸಿಎಸ್‌ಕೆಗೆ ದೂರದ ಕನಸಾಗಿ ಕಾಣುತ್ತಿತ್ತು. ಕೊನೆಯ ಓವರ್ನಲ್ಲಿ ಡೇರಿಲ್ ಮಿಚೆಲ್ ಬೌಂಡರಿ ಸಿಡಿಸಿ ಔಟಾದರು. ಹಾರ್ದಿಕ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಇದು ಸಿಎಸ್‌ಕೆಗೆ ವರವಾಗಿ ಪರಿಣಮಿಸಿತು. ಧೋನಿ, ಪಾಂಡ್ಯ ಬೌಲಿಂಗ್ನಲ್ಲಿ 3 ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಿ 200ರ (206/4) ಗಡಿ ದಾಟಿಸಿದರು. ಅಂತಿಮ ಎಸೆತದಲ್ಲಿ 2 ರನ್ ಪಡೆದ ಧೋನಿ, ನಾಲ್ಕೇ ಎಸೆತದಲ್ಲಿ 20 ರನ್ ಚಚ್ಚಿದರು.
ಸಿಎಸ್‌ಕೆ ಪರ 5000 ರನ್, ರೈನಾ ಬಳಿಕ 2ನೇ ಆಟಗಾರ
ಮಹೇಂದ್ರನ ಬ್ಯಾಟಿಂಗ್ ರೌದ್ರಾವತಾರಕ್ಕೆ ಹಲವು ದಾಖಲೆಗಳು ಸಹ ಧ್ವಂಸಗೊಂಡಿವೆ. ಧೋನಿ ಮೊದಲ ಸಿಕ್ಸರ್ ಅನ್ನು ಲಾಂಗ್-ಆಫ್ ಕಡೆಗೆ ಬಾರಿಸಿದ ಬೆನ್ನಲ್ಲೇ ದೊಡ್ಡ ಮೈಲಿಗಲ್ಲನ್ನು ತಲುಪಿದರು. ಸಿಎಸ್‌ಕೆ ತಂಡದ ಪರ 5,000 ರನ್ ಗಳಿಸಿದ 2ನೇ ಆಟಗಾರ ಎಂಬ ದಾಖಲೆಗೆ ಪಾತ್ರರಾದರು. ಈ ಪಂದ್ಯಕ್ಕೂ ಮುನ್ನ ಧೋನಿಗೆ ಈ ದಾಖಲೆ ಬರೆಯಲು ನಾಲ್ಕು ರನ್ಗಳ ಕೊರತೆ ಇತ್ತು. ಇದೀಗ ಸುರೇಶ್ ರೈನಾ ನಂತರ ಮಾಹಿ ಈ ಸಾಧನೆ ಮಾಡಿದ್ದಾರೆ.
ಸಿಎಸ್‌ಕೆ ಪರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಸುರೇಶ್ ರೈನಾ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಅವರು 200 ಪಂದ್ಯಗಳಲ್ಲಿ 5529 ರನ್ ಗಳಿಸಿದ್ದಾರೆ. ಧೋನಿ 250, ಪಂದ್ಯಗಳಲ್ಲಿ 5016 ರನ್ ಗಳಿಸಿದ್ದಾರೆ. ಚಾಂಪಿಯನ್ಸ್ ಲೀಗ್‌ನಲ್ಲಿ ಸಿಎಸ್‌ಕೆ ಪರ ಬಾರಿಸಿದ ರನ್ಗಳು ಸಹ ಒಳಗೊಂಡಿವೆ. 100 ಪಂದ್ಯಗಳಲ್ಲಿ 2932 ರನ್ ಗಳಿಸಿರುವ ಫಾಫ್ ಡು ಪ್ಲೆಸಿಸ್ ಮೂರನೇ ಸ್ಥಾನದಲ್ಲಿದ್ದು, ಪ್ರಸ್ತುತ ಐಪಿಎಲ್‌ನಲ್ಲಿ ಆರ್ಸಿಬಿ ಪರ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಮೈಕಲ್ ಹಸ್ಸಿ 2213 ರನ್ ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇವರ ನಂತರ ಮುರಳಿ ವಿಜಯ್ 89 ಪಂದ್ಯಗಳಲ್ಲಿ 2205 ರನ್ ಗಳಿಸಿದ್ದಾರೆ. ಋತುರಾಜ್ ಗಾಯಕ್ವಾಡ್ 58 ಪಂದ್ಯಗಳಲ್ಲಿ 2021 ರನ್ ಗಳಿಸಿ 6ನೇ ಸ್ಥಾನದಲ್ಲಿದ್ದಾರೆ. 2024ರ ಐಪಿಎಲ್ಗೂ ಮುನ್ನ ಸಿಎಸ್‌ಕೆ ನಾಯಕರಾಗಿ ಧೋನಿ ಅವರಿಂದ ಅಧಿಕಾರ ಹಸ್ತಾಂತರ ಮಾಡಿಕೊಂಡರು. ಪ್ರಸ್ತುತ ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಭಾರತದ ಮೊದಲ ಆಟಗಾರ
17 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಎದುರಿಸಿದ ಮೊದಲ 3 ಎಸೆತಗಳಲ್ಲಿ ಸತತ 3 ಸಿಕ್ಸರ್ ಸಿಡಿಸಿದ ಮೊದಲ ಭಾರತೀಯ ಹಾಗೂ ವಿಶ್ವದ 3ನೇ ಆಟಗಾರ ಎಂಬ ಹೆಗ್ಗಳಿಕೆಗೆ ಧೋನಿ ಪಾತ್ರರಾಗಿದ್ದಾರೆ. ವೆಸ್ಟ್ ಇಂಡೀಸ್ನ ಸುನಿಲ್ ನರೈನ್, ನಿಕೋಲಸ್ ಪೂರನ್ ನಂತರ ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ವಿಶ್ವದ 3ನೇ ಆಟಗಾರ ಎಂಬ ದಾಖಲೆಗೆ ಧೋನಿ ಪಾತ್ರರಾಗಿದ್ದಾರೆ. ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ವಿಶ್ವದಾದ್ಯಂತ ಮೊದಲ ಬಲಗೈ ಬ್ಯಾಟರ್ ಕೂಡ ಧೋನಿ.
2024ರ ಐಪಿಎಲ್ ಎಲಿಮಿನೇಟರ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಬ್ಯಾಟರ್ ಸುನಿಲ್ ನರೈನ್, ಡೇನಿಯಲ್ ಕ್ರಿಸ್ಟಿಯನ್ ಬೌಲಿಂಗ್ನಲ್ಲಿ ಈ ಸಾಧನೆ ಮಾಡಿದರು. 2023ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಬ್ಯಾಟ್ಸ್ಮನ್ ನಿಕೋಲಸ್ ಪೂರನ್, ಅಭಿಷೇಕ್ ಶರ್ಮಾ ಎದುರಿಸಿದ ಮೊದಲ 3 ಎಸೆತಗಳಲ್ಲೂ 3 ಸಿಕ್ಸರ್ ಬಾರಿಸಿದ್ದರು.
ಸಿಎಸ್‌ಕೆ ಪರ ಧೋನಿ 250 ಪಂದ್ಯ
ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಪರ 250 ಟಿ20 ಪಂದ್ಯಗಳನ್ನು ಆಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಚಾಂಪಿಯನ್ಸ್ ಲೀಗ್‌ನಲ್ಲಿ ಆಡಿದ ಪಂದ್ಯಗಳು ಕೂಡ ಸೇರಿವೆ. ಒಟ್ಟಾರೆಯಾಗಿ, ವಿರಾಟ್ ಕೊಹ್ಲಿ ನಂತರ ಒಂದೇ ಐಪಿಎಲ್ ಫ್ರಾಂಚೈಸಿಗಾಗಿ 250 ಪಂದ್ಯಗಳನ್ನು ಆಡಿದ 2ನೇ ಆಟಗಾರ ಎನಿಸಿಕೊಂಡರು.