ಕನ್ನಡ ಸುದ್ದಿ  /  ಕ್ರಿಕೆಟ್  /  ಸಿಕ್ಸರ್ ಬಾರಿಸಿದ ಚೆಂಡನ್ನು ಯುವ ಅಭಿಮಾನಿಗೆ ಗಿಫ್ಟ್ ನೀಡಿದ ಎಂಎಸ್ ಧೋನಿ; ಮಾಹಿ ನಡೆಗೆ ಫ್ಯಾನ್ ಹರ್ಷ

ಸಿಕ್ಸರ್ ಬಾರಿಸಿದ ಚೆಂಡನ್ನು ಯುವ ಅಭಿಮಾನಿಗೆ ಗಿಫ್ಟ್ ನೀಡಿದ ಎಂಎಸ್ ಧೋನಿ; ಮಾಹಿ ನಡೆಗೆ ಫ್ಯಾನ್ ಹರ್ಷ

MS Dhoni: ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ವೇಳೆ ಎಂಎಸ್ ಧೋನಿ ಹ್ಯಾಟ್ರಿಕ್‌ ಸಿಕ್ಸರ್‌ ಸಿಡಿಸಿ ಗಮನ ಸೆಳೆದರು. ತಮ್ಮ ಅಮೋಘ ಇನ್ನಿಂಗ್ಸ್‌ ಬಳಿಕ, ಮಾಹಿಯ ಮತ್ತೊಂದು ನಡೆಯು ಯುವ ಅಭಿಮಾನಿಯೊಬ್ಬರಿಗೆ ಖುಷಿ ಕೊಟ್ಟಿದೆ.

ಸಿಕ್ಸರ್ ಬಾರಿಸಿದ ಚೆಂಡನ್ನು ಯುವ ಅಭಿಮಾನಿಗೆ ಗಿಫ್ಟ್ ನೀಡಿದ ಎಂಎಸ್ ಧೋನಿ
ಸಿಕ್ಸರ್ ಬಾರಿಸಿದ ಚೆಂಡನ್ನು ಯುವ ಅಭಿಮಾನಿಗೆ ಗಿಫ್ಟ್ ನೀಡಿದ ಎಂಎಸ್ ಧೋನಿ (IPL)

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಏಪ್ರಿಲ್‌ 14ರ ಭಾನುವಾರ ನಡೆದ ಪಂದ್ಯದಲ್ಲಿ ತಲಾ ಅಬ್ಬರ ಕಾಣಿಸಿತು. ಮುಂಬೈ ಇಂಡಿಯನ್ಸ್ ವಿರುದ್ಧ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ರನ್‌ಗಳ ಭರ್ಜರಿ ಜಯ ಸಾಧಿಸಿತು. ವಾಂಖೆಡೆಯಲ್ಲಿ ಅಭಿಮಾನಿಗಳನ್ನು ರಂಜಿಸಿದ್ದು ಎಂಎಸ್‌ ಧೋನಿ ಸ್ಫೋಟಕ ಬ್ಯಾಟಿಂಗ್‌. ಮೊದಲ ಇನ್ನಿಂಗ್ಸ್‌ನ ಅಂತಿಮ ಓವರ್‌ನಲ್ಲಿ ಬ್ಯಾಟಿಂಗ್‌ಗೆ ಬಂದ ಮಾಹಿ, ಹಾರ್ದಿಕ್ ಪಾಂಡ್ಯ ಎಸೆತಗಳಿಗೆ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದರು. ಕೊನೆಯ ಎಸೆತದಲ್ಲಿ ಎರಡು ರನ್‌ ಗಳಿಸುವ ಮೂಲಕ ಕೇವಲ ನಾಲ್ಕು ಎಸೆತಗಳಲ್ಲಿ 20 ರನ್‌ ಪೇರಿಸಿದರು. ಇದು ಪಂದ್ಯದಲ್ಲೇ ಅಭಿಮಾನಿಗಳ ನೆಚ್ಚಿನ ಕ್ಷಣವಾಯ್ತು.

ಟ್ರೆಂಡಿಂಗ್​ ಸುದ್ದಿ

ಪಂದ್ಯದಲ್ಲಿ ಸಿಎಸ್‌ಕೆ ತಂಡವು 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 206 ರನ್ ಗಳಿಸಿತು. 207 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಮುಂಬೈ, 20 ಓವರ್‌ಳಲ್ಲಿ 6 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಲಷ್ಟೇ ಶಕ್ತವಾಯಿತು. ಇಂಡಿಯನ್ಸ್ ಪರ ಮಾಜಿ ನಾಯಕ ರೋಹಿತ್ ಶರ್ಮಾ ಏಕಾಂಗಿ ಹೋರಾಟ ನಡೆಸಿದರು. ಕೇವಲ 63 ಎಸೆತಗಳಲ್ಲಿ 105 ರನ್ ಸಿಡಿಸಿ ಅಜೇಯರಾಗಿ ಉಳಿದರು. ಸೆಂಚುರಿ ಬಾರಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಅವರಿಂದಾಗಲಿಲ್ಲ.

ಮೊದಲ ಇನ್ನಿಂಗ್ಸ್ ನಂತರ ಎಂಎಸ್‌ ಧೋನಿ ಅವರ ನಡೆ ಎಲ್ಲರ ಗಮನ ಸೆಳೆಯಿತು. ಸ್ಫೋಟಕ ಬ್ಯಾಟಿಂಗ್‌ ಮುಗಿಸಿ ಡ್ರೆಸ್ಸಿಂಗ್ ರೂಮ್ ಕಡೆಗೆ ಮೆಟ್ಟಿಲುಗಳನ್ನು ಹತ್ತಿ ನಡೆಯುತ್ತಿರುವಾಗ, ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಹುಡುಗಿಯೊಬ್ಬರನ್ನು ಕಂಡರು. ಹಾರ್ದಿಕ್ ಓವರ್‌ನಲ್ಲಿ ಸಿಕ್ಸರ್‌ ಸಿಡಿಸಿದ್ದ ಚೆಂಡು ಮೆಟ್ಟಿಲ ಬಳಿ ಬಿದ್ದಿತ್ತು. ಅದನ್ನು ಎತ್ತಿಕೊಂಡು ಆ ಯುವ ಅಭಿಮಾನಿಗೆ ಕೊಟ್ಟರು. ಧೋನಿಯಿಂದ ಚೆಂಡನ್ನು ಪಡೆದ ಹುಡುಗಿ ಖುಷಿಪಟ್ಟಳು. ಮಾಹಿಯ ನಡೆ ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಯ್ತು.

ಇದನ್ನೂ ಓದಿ | ನಾಲ್ಕೇ ನಿಮಿಷ ಬ್ಯಾಟಿಂಗ್ ನಡೆಸಿ ಸಿಎಸ್​ಕೆ ಪರ ಎಂಎಸ್ ಧೋನಿ ವಿಶೇಷ ದಾಖಲೆ; ಈ ಸಾಧನೆ ಮಾಡಿದ ಎರಡನೇ ಬ್ಯಾಟರ್

ಈ ಆವೃತ್ತಿಯ ಆರಂಭಕ್ಕೂ ಮುನ್ನವೇ, ಮಾಹಿ ಸಿಎಸ್‌ಕೆ ನಾಯಕತ್ವವನ್ನು ರುತುರಾಜ್ ಗಾಯಕ್ವಾಡ್ ಅವರಿಗೆ ಹಸ್ತಾಂತರಿಸಿದ್ದರು. ಟೂರ್ನಿಯಲ್ಲಿ ಈ ಬಾರಿ ಆಡುತ್ತಿರುವ ಧೋನಿ, ಮುಂದಿನ ರುತುವಿನಲ್ಲಿ ಕಣಕ್ಕಿಳಿಯುವುದು ಅನುಮಾನ. ಈಗಾಗಲೇ 42 ವರ್ಷ ವಯಸ್ಸಾಗಿರುವುದರಿಂದ ಇದು ಅವರ ಪಾಲಿನ ಕೊನೆಯ ಐಪಿಎಲ್ ಋತು ಎನ್ನಲಾಗುತ್ತಿದೆ. ಆಟಗಾರನಾಗಿ ಗೆಲುವಿನೊಂದಿಗೆ ಅಭಿಯಾನಕ್ಕೆ ಪೂರ್ಣವಿರಾಮ ನೀಡುವುದು ಮಾಹಿ ಇರಾದೆ. ಇದೇ ವೇಳೆ ಮುಂದಿನ ಆವೃತ್ತಿಯಿಂದ ಇದೇ ಫ್ರಾಂಚೈಸಿ‌ ಪರ ಕೋಚ್ ಆಗಿ ಮುಂದುವರೆಯುವ ಸಾಧ್ಯತೆ ಹೆಚ್ಚಾಗಿದೆ.

ಬಲಿಷ್ಠ ಬ್ಯಾಟಿಂಗ್‌ ಹಾಗೂ ಮತೀಶಾ ಪತಿರಾಣ ಅವರ (28/4) ಖಡಕ್ ಬೌಲಿಂಗ್ ನೆರವಿನಿಂದ ಸಿಎಸ್‌ಕೆ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿತು. ಪ್ರಸಕ್ತ ಆವೃತ್ತಿಯಲ್ಲಿ ತವರಿನಿಂದ ಹೊರಗೆ ಚೆನ್ನೈ ಇದೇ ಮೊದಲ ಬಾರಿಗೆ ಜಯ ಸಾಧಿಸಿದೆ. ಹಾರ್ದಿಕ್ ಪಡೆಗೆ ಟೂರ್ನಿಯಲ್ಲಿ ಇದು 4ನೇ ಸೋಲಾಗಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಸಿಎಸ್​ಕೆ ಬೃಹತ್ ಮೊತ್ತ ಕಲೆ ಹಾಕಿತು. ಋತುರಾಜ್ ಮತ್ತು ದುಬೆ ತಲಾ ಅರ್ಧಶತಕ ಸಿಡಿಸಿದರು. ಚೇಸಿಂಗ್‌ ವೇಳೆ ಹಿಟ್‌ಮ್ಯಾನ್ ಶತಕ ಕೂಡ ಸಿಡಿಸಿದರೂ, ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಟೂರ್ನಿಯಲ್ಲಿ ನಾಲ್ಕನೇ ಗೆಲುವು ಸಾಧಿಸಿದ ಚೆನ್ನೈ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

IPL_Entry_Point