12 ಪ್ಲೇಆಫ್, 10 ಫೈನಲ್, 5 ಟ್ರೋಫಿ; ಐಪಿಎಲ್ನ ಯಶಸ್ವಿ ನಾಯಕ ಧೋನಿ; ಟ್ರೋಫಿಯೊಂದಿಗೆ ಆರಂಭ-ವಿದಾಯ
MS Dhoni : ಎಂಎಸ್ ಧೋನಿ ನಾಯಕತ್ವದ ಅಡಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು, ಅತ್ಯಂತ ಯಶಸ್ವಿ ತಂಡವಾಗಿ ಹೊರಹೊಮ್ಮಿದೆ. ಅವರ ಕ್ಯಾಪ್ಟನ್ಸಿ ದಾಖಲೆಗಳ ವಿವರದ ನೋಟ ಇಲ್ಲಿದೆ ನೋಡಿ.
ಐಪಿಎಲ್ನಲ್ಲಿ ಎಂಎಸ್ ಧೋನಿ (MS Dhoni) ನಾಯಕತ್ವ ಯುಗಾಂತ್ಯ ಕಂಡಿದೆ. 2008ರಿಂದ 14 ಆವೃತ್ತಿಗಳಲ್ಲಿ (2 ವರ್ಷ ಬ್ಯಾನ್ ಆಗಿತ್ತು) ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿದ್ದ ಮಾಹಿ, ಇನ್ಮುಂದೆ ಆಟಗಾರನಾಗಿ ಕಣಕ್ಕಿಳಿಯಲಿದ್ದಾರೆ. ನೂತನ ಕ್ಯಾಪ್ಟನ್ ಋತುರಾಜ್ ಗಾಯಕ್ವಾಡ್ ಅವರಿಗೆ ತನ್ನ ನಾಯಕತ್ವದ ಅನುಭವವನ್ನು ಧಾರೆ ಎರೆಯಲಿದ್ದಾರೆ.
ಎಂಎಸ್ ಧೋನಿ ನಾಯಕತ್ವದ ಅಡಿಯಲ್ಲಿ ಯಲ್ಲೋ ಆರ್ಮಿ, ಅತ್ಯಂತ ಯಶಸ್ವಿ ತಂಡವಾಗಿ ಹೊರಹೊಮ್ಮಿದೆ. ಆಡಿದ 14 ಆವೃತ್ತಿಗಳಲ್ಲಿ ಒಟ್ಟು 12 ಬಾರಿ ಪ್ಲೇಆಫ್ ಪ್ರವೇಶಿಸಿದೆ. ಈ ಪೈಕಿ 10 ಬಾರಿ ಫೈನಲ್ ಆಡಿದ್ದು, 5 ಟ್ರೋಫಿ ಗೆದ್ದುಕೊಂಡಿದೆ. 2020 ಮತ್ತು 2022ರ ಸೀಸನ್ಗಳಲ್ಲಿ ಮಾತ್ರ ಸಿಎಸ್ಕೆ ಪ್ಲೇಆಫ್ ಪ್ರವೇಶಿಸಿಲ್ಲ. ಐಪಿಎಲ್ನ ಯಾವ ತಂಡವೂ ಇಷ್ಟು ಬಾರಿ ಪ್ಲೇಆಫ್, ಫೈನಲ್ ಆಡಿಲ್ಲ ಎಂಬುದು ವಿಶೇಷ.
ಧೋನಿ ನಾಯಕತ್ವದಲ್ಲಿ ಸಿಎಸ್ಕೆ ಗೆದ್ದಿದ್ದೆಷ್ಟು?
2008ರಿಂದ 2023ರವರೆಗೂ 16 ಆವೃತ್ತಿಗಳ ಪೈಕಿ 14 ಸೀಸನ್ಗಳಲ್ಲಿ ಚೆನ್ನೈ ತಂಡವನ್ನು ಮುನ್ನಡೆಸಿರುವ ಧೋನಿ, 212 ಪಂದ್ಯಗಳಲ್ಲಿ ಚೆನ್ನೈ ತಂಡವನ್ನು ಮುನ್ನಡೆಸಿದ್ದಾರೆ. 128 ಗೆಲುವು, 82 ಸೋಲು ಕಂಡಿದ್ದಾರೆ. 2 ಪಂದ್ಯಗಳಿಂದ ಫಲಿತಾಂಶವಿಲ್ಲ. ಅಷ್ಟೆ ಅಲ್ಲದೆ, ಚಾಂಪಿಯನ್ಸ್ ಲೀಗ್‌ನಲ್ಲೂ ಮಾಹಿ 23 ಪಂದ್ಯಗಳಲ್ಲಿ ಸಿಎಸ್ಕೆ ತಂಡಕ್ಕೆ ನಾಯಕತ್ವ ವಹಿಸಿದ್ದಾರೆ. ಅವರ ನಾಯಕತ್ವದಲ್ಲಿ 235 ಪಂದ್ಯಗಳಲ್ಲಿ ಸಿಎಸ್ಕೆ 142 ಗೆಲುವು, 90ರಲ್ಲಿ ಸೋತಿದೆ. ನಾಯಕನಾಗಿ ಧೋನಿ ಗೆಲುವಿನ ಶೇಕಡಾವಾರು 60.42 ಇದೆ.
ಐದು ಬಾರಿ ಚಾಂಪಿಯನ್
- 2010ರ ಐಪಿಎಲ್ ಚಾಂಪಿಯನ್ (ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು)
- 2011ರ ಐಪಿಎಲ್ ಚಾಂಪಿಯನ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆಲುವು)
- 2018ರ ಐಪಿಎಲ್ ಚಾಂಪಿಯನ್ (ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯ)
- 2021ರ ಐಪಿಎಲ್ ಚಾಂಪಿಯನ್ (ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ವಿಜಯ)
- 2023ರ ಐಪಿಎಲ್ ಚಾಂಪಿಯನ್ (ಗುಜರಾತ್ ಟೈಟಾನ್ಸ್ ವಿರುದ್ಧ ಗೆಲುವು)
ಐದು ಬಾರಿ ರನ್ನರ್ಅಪ್
- 2008ರ ಐಪಿಎಲ್ ರನ್ನರ್ಅಪ್ (ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲು)
- 2012ರ ಐಪಿಎಲ್ ರನ್ನರ್ಅಪ್ (ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪರಾಜಯ)
- 2013ರ ಐಪಿಎಲ್ ರನ್ನರ್ಅಪ್ (ಮುಂಬೈ ಇಂಡಿಯನ್ಸ್ ಎದುರು ಸೋಲು)
- 2015ರ ಐಪಿಎಲ್ ರನ್ನರ್ಅಪ್ (ಮುಂಬೈ ಇಂಡಿಯನ್ಸ್ ವಿರುದ್ಧ ಸೋಲು)
- 2019ರ ಐಪಿಎಲ್ ರನ್ನರ್ಅಪ್ (ಮುಂಬೈ ಇಂಡಿಯನ್ಸ್ ವಿರುದ್ಧ ಸೋಲು)
ಧೋನಿ ಅತಿ ಹೆಚ್ಚು ಟಿ20ಗಳಿಗೆ ನಾಯಕತ್ವ
ಧೋನಿ ಅಧಿಕ ಟಿ20ಗಳಿಗೆ ಕ್ಯಾಪ್ಟನ್ ಆದ ಕ್ರಿಕೆಟಿಗ ಎಂಬ ವಿಶೇಷ ದಾಖಲೆಯೂ ಅವರ ಹೆಸರಿನಲ್ಲಿದೆ. ಧೋನಿ ಒಟ್ಟು 322 (ಅಂತಾರಾಷ್ಟ್ರೀಯ ಮತ್ತು ಟಿ20 ಲೀಗ್ ಸೇರಿ) ಪಂದ್ಯಗಳಿಗೆ ಕ್ಯಾಪ್ಟನ್ ಆಗಿದ್ದಾರೆ. ಈ ಪೈಕಿ 189 ಪಂದ್ಯಗಳಲ್ಲಿ ಸಿಎಸ್ಕೆ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ಅಲ್ಲದೆ, ಧೋನಿ ಅತಿ ಹೆಚ್ಚು 9 ಫೈನಲ್ಗಳನ್ನು ಜಯಿಸಿದ ನಾಯಕ ಎನಿಸಿದ್ದಾರೆ. ಅವರ ಸಾರಥ್ಯದಲ್ಲಿ ಭಾರತ 2007ರ ಟಿ20 ವಿಶ್ವಕಪ್, 2016ರ ಟಿ10 ಏಷ್ಯಾಕಪ್ ಅನ್ನು ಗೆದ್ದಿದೆ.
ಟ್ರೋಫಿಯೊಂದಿಗೆ ಆರಂಭ, ಟ್ರೋಫಿಯೊಂದಿಗೆ ವಿದಾಯ
2007ರಲ್ಲಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಾಯಕತ್ವ ವಹಿಸಿಕೊಂಡ ಧೋನಿ, ಮೊದಲ ಅಗ್ನಿಪರೀಕ್ಷೆಯಲ್ಲೇ ಯಶಸ್ಸು ಕಂಡಿದ್ದರು. ಭಾರತ ತಂಡಕ್ಕೆ ಟಿ20 ವಿಶ್ವಕಪ್ ಗೆದ್ದುಕೊಟ್ಟು ನಾಯಕತ್ವ ಆರಂಭಿಸಿದ್ದ ಧೋನಿ, 2023ರಲ್ಲಿ ಚೆನ್ನೈಗೆ ಟ್ರೋಫಿ ಗೆದ್ದುಕೊಡುವುದರೊಂದಿಗೆ ನಾಯಕತ್ವ ಮುಗಿಸಿದ್ದಾರೆ. 2007ರಿಂದ 2023ರ ತನಕ ಸಾಕಷ್ಟು ಸಾಧನೆ ಮಾಡಿರುವ ಧೋನಿ ಅವರು ನಾಯಕತ್ವಕ್ಕೆ ವಿದಾಯ ಹೇಳುವ ಮೂಲಕ ಅಭಿಮಾನಿಗಳಿಗೆ ಬೇಸರ ತರಿಸಿದ್ದಾರೆ.
ಸಿಎಸ್ಕೆ ಎರಡು ವರ್ಷ ಬ್ಯಾನ್ ಆಗಿತ್ತು!
ಚೆನ್ನೈ ಸೂಪರ್ ಕಿಂಗ್ಸ್ ಎರಡು ವರ್ಷ ಐಪಿಎಲ್ನಿಂದ ಬ್ಯಾನ್ ಆಗಿತ್ತು. 2016 ಮತ್ತು 2017ರಲ್ಲಿ ನಿಷೇಧವಾಗಿತ್ತು. ಇದು ಐಪಿಎಲ್ ಖ್ಯಾತಿಗೆ ಕಳಂಕ ತಂದಿತ್ತು. 2013ರ ಐಪಿಎಲ್ ಋತುವಿನಲ್ಲಿ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಚಟುವಟಿಕೆಗಳ ಬಗ್ಗೆ ಮಾತುಕತೆ ನಡೆದಿತ್ತು. ಜುಲೈ 2015ರಲ್ಲಿ ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ಆರ್‌ಎಂ ಲೋಧಾ ಅವರ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಯಿತು. ಆರೋಪ ಸಾಬೀತಾದ ಹಿನ್ನೆಲೆ ಚೆನ್ನೈ ಜೊತೆಗೆ ರಾಜಸ್ಥಾನ್ ರಾಯಲ್ಸ್ ತಂಡವನ್ನೂ ನಿಷೇಧ ಮಾಡಲಾಗಿತ್ತು. ರಾಜಸ್ಥಾನ ರಾಯಲ್ಸ್‌ನ ರಾಜ್ ಕುಂದ್ರಾ ಮತ್ತು ಸಿಎಸ್‌ಕೆಯ ಗುರುನಾಥ್ ಮೇಯಪ್ಪನ್ ಬಂಧನಕ್ಕೆ ಒಳಗಾದರು. ಐಪಿಎಲ್ನಿಂದ ಅಜೀವ ಶಿಕ್ಷೆಗೆ ಗುರಿಯಾದರು.