ಚೆನ್ನೈ ಪಾಲಿಗೆ ಎಂಎಸ್ ಧೋನಿ ದೇವರು; ಅಭಿಮಾನಿಗಳು ಅವರ ದೇವಾಲಯ ನಿರ್ಮಿಸಲಿದ್ದಾರೆ ಎಂದ ಅಂಬಟಿ ರಾಯುಡು
ಸಿಎಸ್‌ಕೆ ಎಂದಾಗ ಥಟ್ಟನೆ ನೆನಪಾಗುವುದು ಎಂಎಸ್ ಧೋನಿ ಮತ್ತು ಅವರ ಅಭಿಮಾನಿಗಳು. ಚೆನ್ನೈನಲ್ಲಿ ಲಕ್ಷಾಂತರ ಅಭಿಮಾನಿಗಳು ಮಾಹಿಯನ್ನು ಅಭಿಮಾನಿಸುವುದು ಮಾತ್ರವಲ್ಲದೆ ಆರಾಧಿಸುತ್ತಾರೆ. ಮುಂದಿನ ದಿನಗಳಲ್ಲಿ ಚೆನ್ನೈನಲ್ಲಿ ಧೋನಿ ಅವರ ದೇಗುಲಗಳು ನಿರ್ಮಾಣವಾಗಲಿವೆ ಎಂದು ಮಾಜಿ ಕ್ರಿಕಟಿಗರೊಬ್ಬರು ಹೇಳಿದ್ದಾರೆ.

ಭಾರತ ಕ್ರಿಕೆಟ್ ಇತಿಹಾಸದಲ್ಲೇ ಎಂಎಸ್ ಧೋನಿ ಅವರನ್ನು ಅತ್ಯಂತ ಯಶಸ್ವಿ ನಾಯಕನೆಂದು ಬಣ್ಣಿಸಲಾಗುತ್ತದೆ. ಟೀಮ್ ಇಂಡಿಯಾ ನಾಯಕನಾಗಿ ಅವರ ದಾಖಲೆಗಳು ಹಲವು. ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿರುವ ಮಾಹಿಗೆ, ಚೆನ್ನೈನಲ್ಲಿ ವಿಶೇಷ ಅಭಿಮಾನಿಗಳಿದ್ದಾರೆ. ಇದಕ್ಕೆ ಕಾರಣ ಚೆನ್ನೈ ಸೂಪರ್ ಕಿಂಗ್ಸ್. ಐಪಿಎಲ್‌ನಲ್ಲಿ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾದ ಸಿಎಸ್‌ಕೆ ತಂಡವನ್ನು ಕಳೆದ ಆವೃತ್ತಿಯವರೆಗೂ ಮುನ್ನಡೆಸಿದವರು ಧೋನಿ. ಮಾಹಿಯ ಉಪಸ್ಥಿತಿಯಿಂದಾಗಿ ತಂಡಕ್ಕೆ ದುಪ್ಪಟ್ಟು ಅಭಿಮಾನಿಗಳಿದ್ದಾರೆ. ದೇಶದ ಯಾವ ಮೂಲೆಯಲ್ಲಿ ಸಿಎಸ್‌ಕೆ ತಂಡದ ಪಂದ್ಯ ನಡೆದರೂ, ಅಲ್ಲಿ ಮಾಹಿ ಅಭಿಮಾನಿಗಳ ಸಂಖ್ಯೆಯೇ ಹೆಚ್ಚಿರುತ್ತದೆ. ಇದು ಧೋನಿ ಸಂಪಾದಿಸಿರುವ ಅಮೂಲ್ಯ ಆಸ್ತಿ.
ಟೀಮ್ ಇಂಡಿಯಾದಲ್ಲಿ ಹಲವು ವರ್ಷಗಳ ಕಾಲ ಆಡಿದ್ದ ಮಾಹಿ, ಸಿಎಸ್‌ಕೆ ತಂಡದ ಪರ ಈ ವರ್ಷವೂ ಮೈದಾನಕ್ಕಿಳಿದು ಆಡುತ್ತಿದ್ದಾರೆ. ಮಾಹಿ ಪಾಲಿಗೆ ಈ ವರ್ಷ ಕೊನೆಯ ಐಪಿಎಲ್ ಆವೃತ್ತಿ ಎನ್ನಲಾಗುತ್ತಿದೆ. ಚೆನ್ನೈ ಹಾಗೂ ಧೋನಿ ನಡುವೆ ವಿಶೇಷ ನಂಟಿದೆ. ಹೀಗಾಗಿ ಹಲವು ವರ್ಷಗಳಿಂದ ಎಂಎಸ್ ಧೋನಿ ಅವರ ನಾಯಕತ್ವ ಹಾಗೂ ಆಟವನ್ನು ಮೆಚ್ಚಿ ಆರಾಧಿಸುತ್ತಾ ಬಂದಿರುವ ಚೆನ್ನೈನಲ್ಲಿ, ಶೀಘ್ರದಲ್ಲೇ ಅವರ ದೇವಾಲಯಗಳು ನಿರ್ಮಾಣವಾಗಲಿವೆ ಎಂದು ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ಹೇಳಿದ್ದಾರೆ.
ಮೇ 12ರ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿತು. ತವರು ನೆಲದಲ್ಲಿ ಕೊನೆಯ ಲೀಗ್ ಪಂದ್ಯ ಆಡಿದ ತಂಡವು, 2024ರ ಆವೃತ್ತಿಯ ಪ್ಲೇಆಫ್ ಹಂತಕ್ಕೆ ಮತ್ತಷ್ಟು ಹತ್ತಿರವಾಯ್ತು. ಸದ್ಯ ಅಂಕಪಟ್ಟಿಯಲ್ಲಿ ಸಿಎಸ್‌ಕೆ ಮೂರನೇ ಸ್ಥಾನದಲ್ಲಿದೆ. ಮುಂದೆ ತಂಡವು ಆರ್‌ಸಿಬಿ ವಿರುದ್ಧ ಸೆಣಸಲಿದೆ.
ರಾಯಲ್ಸ್ ವಿರುದ್ಧ ಗೆಲುವಿನ ನಂತರ, ಧೋನಿ ಹಾಗೂ ಸಿಎಸ್‌ಕೆ ತಂಡವು ಚೆಪಾಕ್ ಮೈದಾನದಲ್ಲಿ ವಿಜಯದ ಮೆರವಣಿಗೆ ನಡೆಸಿತು. ನಿರಂತರವಾಗಿ ಬೆಂಬಲಿಸಿದ ಅಭಿಮಾನಿಗಳಿಗೆ ವಂದಿಸಿದರು.
ಇದನ್ನೂ ಓದಿ | Explainer: ಪ್ಲೇಆಫ್ ಪ್ರವೇಶಿಸಲು ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಎಷ್ಟು ಅಂತರದಿಂದ ಗೆಲ್ಲಬೇಕು? ಹೀಗಿದೆ ಲೆಕ್ಕಾಚಾರ
ಧೋನಿ ಈಗಾಗಲೇ ಈ ಋತುವಿನಲ್ಲಿ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದಾರೆ. ಒಂದು ವೇಳೆ ಸಿಎಸ್‌ಕೆ ಪ್ಲೇಆಫ್‌ಗೆ ಅರ್ಹತೆ ಪಡೆಯದಿದ್ದರೂ, ಧೋನಿ ಸಿಎಸ್‌ಕೆ ಅಭಿಮಾನಿಗಳ ಮುಂದೆ ಕೊನೆಯ ಪಂದ್ಯ ಆಡಿದ್ದಾರೆ. ಈಗಾಗಲೇ ರಜನಿಕಾಂತ್ ಮತ್ತು ಖುಶ್ಬೂ ಸೇರಿದಂತೆ ಜನಪ್ರಿಯ ಸೆಲೆಬ್ರಿಟಿಗಳ ದೇವಾಲಯಗಳನ್ನು ಚೆನ್ನೈ ಅಭಿಮಾನಿಗಳು ನಿರ್ಮಿಸಿದ್ದಾರೆ. ಭಾರತ ಮತ್ತು ಚೆನ್ನೈ ಅಭಿಮಾನಿಗಳಿಗೆ ತಂದ ಅದಮ್ಯ ಸಂತೋಷವನ್ನು ಗಮನದಲ್ಲಿಟ್ಟುಕೊಂಡು, ಧೋನಿ ಅವರ ದೇಗುಲ ಕೂಡಾ ಚೆನ್ನೈನಲ್ಲಿ ನಿರ್ಮಾಣವಾಗಬಹುದು ಎಂದು ರಾಯುಡು ಹೇಳಿದ್ದಾರೆ.
ಧೋನಿ ಆರಾಧ್ಯ ದೇವರು
“ಚೆನ್ನೈ ಪಾಲಿಗೆ ಧೋನಿ ಆರಾಧ್ಯ ದೇವರು. ಮುಂಬರುವ ವರ್ಷಗಳಲ್ಲಿ ಎಂಎಸ್ ಧೋನಿಯ ದೇವಾಲಯಗಳು ಚೆನ್ನೈನಲ್ಲಿ ಖಂಡಿತವಾಗಿ ಎದ್ದು ನಿಲ್ಲುತ್ತವೆ” ಎಂದು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ರಾಯುಡು ಹೇಳಿದ್ದಾರೆ.
“ಅವರು ಭಾರತಕ್ಕೆ ಎರಡು ವಿಶ್ವಕಪ್ ಗೆಲುವಿನ ಸಂತೋಷವನ್ನು ಉಣಬಡಿಸಿದವರು. ಚೆನ್ನೈಗೆ ಸಾಕಷ್ಟು ಐಪಿಎಲ್ ಟ್ರೋಫಿ ಗೆದ್ದುಕೊಟ್ಟವರು. ಅಲ್ಲದೆ ಚಾಂಪಿಯನ್ಸ್ ಲೀಗ್ ಪ್ರಶಸ್ತಿಗಳನ್ನು ಕೂಡಾ ಗೆದ್ದಿದ್ದಾರೆ. ತಮ್ಮ ತಂಡದ ಆಟಗಾರರಲ್ಲಿ ಸದಾ ನಂಬಿಕೆ ಇಡುವ ವ್ಯಕ್ತಿ ಮಾಹಿ,” ಎಂದು ರಾಯುಡು ಬಣ್ಣಿಸಿದ್ದಾರೆ.
ಐಪಿಎಲ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಮಳೆಯಿಂದಾಗಿ ಕೆಕೆಆರ್ vs ಗುಜರಾತ್ ಪಂದ್ಯ ರದ್ದು; ಜಿಟಿ ಟೂರ್ನಿಯಿಂದ ಔಟ್, ಕ್ವಾಲಿಫೈಯರ್ಗೆ ಲಗ್ಗೆ ಇಟ್ಟ ಕೋಲ್ಕತ್ತಾ
