2019ರ ಐಪಿಎಲ್‌ ನೋ ಬಾಲ್ ವಿವಾದ: ಅಂದು ಮೈದಾನಕ್ಕೆ ನುಗ್ಗಿದ್ದು ದೊಡ್ಡ ತಪ್ಪು ಎಂದು ಒಪ್ಪಿಕೊಂಡ ಧೋನಿ
ಕನ್ನಡ ಸುದ್ದಿ  /  ಕ್ರಿಕೆಟ್  /  2019ರ ಐಪಿಎಲ್‌ ನೋ ಬಾಲ್ ವಿವಾದ: ಅಂದು ಮೈದಾನಕ್ಕೆ ನುಗ್ಗಿದ್ದು ದೊಡ್ಡ ತಪ್ಪು ಎಂದು ಒಪ್ಪಿಕೊಂಡ ಧೋನಿ

2019ರ ಐಪಿಎಲ್‌ ನೋ ಬಾಲ್ ವಿವಾದ: ಅಂದು ಮೈದಾನಕ್ಕೆ ನುಗ್ಗಿದ್ದು ದೊಡ್ಡ ತಪ್ಪು ಎಂದು ಒಪ್ಪಿಕೊಂಡ ಧೋನಿ

ಐಪಿಎಲ್ 2019ರಲ್ಲಿ ನಡೆದ ಘಟನೆಯ ಬಗ್ಗೆ ಎಂಎಸ್ ಧೋನಿ ಪ್ರತಿಕ್ರಿಯೆ ನೀಡಿದ್ದಾರೆ. ಅಂದು ಅಂಪೈರ್‌ ನಿರ್ಧಾರದ ವಿರುದ್ಧ ಮೈದಾನಕ್ಕೆ ನುಗ್ಗಿದ್ದು ತಪ್ಪು ಎಂದು ಮಾಹಿ ಒಪ್ಪಿಕೊಂಡಿದ್ದಾರೆ. ಈ ವಿವಾದದ ಕುರಿತ ವಿವರವಾದ ಮಾಹಿತಿ ಇಲ್ಲಿದೆ.

2019ರ ಐಪಿಎಲ್‌ ನೋ ಬಾಲ್ ವಿವಾದ: ಅಂದು ಮೈದಾನಕ್ಕೆ ನುಗ್ಗಿದ್ದು ತಪ್ಪು ಎಂದು ಒಪ್ಪಿಕೊಂಡ ಧೋನಿ
2019ರ ಐಪಿಎಲ್‌ ನೋ ಬಾಲ್ ವಿವಾದ: ಅಂದು ಮೈದಾನಕ್ಕೆ ನುಗ್ಗಿದ್ದು ತಪ್ಪು ಎಂದು ಒಪ್ಪಿಕೊಂಡ ಧೋನಿ (PTI, IPL)

ಅದು ಐಪಿಎಲ್‌ ಪಂದ್ಯಾವಳಿಯ 2019ರ ಆವೃತ್ತಿ. ಜೈಪುರದಲ್ಲಿ ನಡೆದ ಗ್ರೂಪ್ ಹಂತದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಪಂದ್ಯವು ರೋಚಕ ಅಂತ್ಯವನ್ನು ಕಂಡಿದ್ದು ಒಂದೆಡೆಯಾದರೆ, ಪಂದ್ಯದ ಅಂತಿಮ ಓವರ್‌ನಲ್ಲಿ, ಸಿಎಸ್‌ಕೆ ತಂಡದ ನಾಯಕ ಎಂಎಸ್ ಧೋನಿ ಅವರ ನಡೆಯು ಭಾರಿ ವಿವಾದ ಹಾಗೂ ಚರ್ಚೆಗೆ ಕಾರಣವಾಗಿತ್ತು. ಸಿಎಸ್‌ಕೆ ತಂಡ ಹಾಗೂ ಎಂಎಸ್‌ ಧೋವಿ ವಿರುದ್ಧ ವ್ಯಾಪಕ ಟೀಕೆ, ಆಕ್ರೋಶವೂ ವ್ಯಕ್ತವಾಗಿತ್ತು. ಇದೀಗ, ಅಂದು ತಾನು ನಡೆದುಕೊಂಡ ರೀತಿ ನಿಜಕ್ಕೂ ಸರಿ ಇರಲಿಲ್ಲ ಎಂದು ಧೋನಿ ಹೇಳಿಕೊಂಡಿದ್ದಾರೆ.

ಆ ಪಂದ್ಯದಲ್ಲಿ ಆಗಿದ್ದಿಷ್ಟು. ಚೇಸಿಂಗ್‌ ಮಾಡುತ್ತಿದ್ದ ಸಿಎಸ್‌ಕೆ ತಂಡಕ್ಕೆ ಅಂತಿಮ ಓವರ್‌ನಲ್ಲಿ 18 ರನ್‌ಗಳು ಬೇಕಾಗಿದ್ದವು. ಓವರ್‌ನ ಮೂರನೇ ಎಸೆತದಲ್ಲಿ ಧೋನಿ ಔಟಾದರು. ಕೊನೆಯ ಮೂರು ಎಸೆತಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸುವ ಜವಾಬ್ದಾರಿ ರವೀಂದ್ರ ಜಡೇಜಾ ಹಾಗೂ ಮಿಚೆಲ್ ಸ್ಯಾಂಟ್ನರ್ ಮೇಲೆ ಬಿತ್ತು. ಬೆನ್ ಸ್ಟೋಕ್ಸ್ ಅವರ ನಾಲ್ಕನೇ ಎಸೆತವು ಸೊಂಟದಷ್ಟು ಎತ್ತರದ ಫುಲ್ ಟಾಸ್ ಎಸೆತವಾಗಿತ್ತು. ಇದನ್ನು ಆನ್ ಫೀಲ್ಡ್ ಅಂಪೈರ್ ಉಲ್ಲಾಸ್ ಗಾಂಧೆ ಅವರು ಆರಂಭದಲ್ಲಿ ನೋ-ಬಾಲ್ ಎಂದು ಘೋಷಿಸಿದರು. ಆದರೆ, ಸ್ಕ್ವೇರ್-ಲೆಗ್ ಅಂಪೈರ್ ಬ್ರೂಸ್ ಆಕ್ಸೆನ್ಫೋರ್ಡ್ ಅವರು ನೋಬಾಲ್‌ ಕರೆಯನ್ನು ತಳ್ಳಿಹಾಕಿ ಸರಿಯಾದ ಎಸೆತವೆಂದು ಹೇಳಿದರು. ಇದು ಸಿಎಸ್‌ಕೆ ಬಳಗದಲ್ಲಿ ಗೊಂದಲ ಮತ್ತು ಹತಾಶೆಗೆ ಕಾರಣವಾಯಿತು.

ಅಂಪೈರ್‌ಗಳ ನಡೆಯಿಂದ ಕೋಪಗೊಂಡ ಧೋನಿ, ಅಂಪೈರ್‌ಗಳೊಂದಿಗೆ ಮಾತನಾಡಲು ಡಗೌಟ್‌ನಿಂದ ನೇರವಾಗಿ ಮೈದಾನಕ್ಕೆ ಕಾಲಿಟ್ಟರು. ಸಾಮಾನ್ಯವಾಗಿ ಇಂತಹ ಸಂದರ್ಭ ಕಂಡುಬರುವುದು ಅಪರೂಪ. ಅದರಲ್ಲೂ ಕೂಲ್‌ ಕ್ಯಾಪ್ಟನ್‌ ಎಂದೇ ಅಭಿಮಾನಿಗಳಿಂದ ಕರೆಸಿಕೊಳಳುವ ಮಾಹಿ ನಡೆ ಅಚ್ಚರಿ ಮೂಡಿಸುವಂತಿತ್ತು. ಅಂಪೈರ್‌ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ ಅವರೊಂದಿಗೆ ಮಾತನಾಡಿದರೂ ಪ್ರಯೋಜನವಾಗಲಿಲ್ಲ. ಎಸೆತ ನೋಬಾಲ್‌ ಅಲ್ಲ ಎಂದು ಅಂತಿಮ ತೀರ್ಪು ಬಂತು. ಧೋನಿ ಮೈದಾನಕ್ಕೆ ಬಂದರೂ ನಿರ್ಧಾರ ಬದಲಾಗಲಿಲ್ಲ. ಆದರೂ, ಪಂದ್ಯದಲ್ಲಿ ಸಿಎಸ್‌ಕೆ ಗೆಲುವನ್ನು ತಡೆಹಿಡಿಯಲು ಸಾಧ್ಯವಾಗಲಿಲ್ಲ. ಕೊನೆಯ ಎಸೆತದಲ್ಲಿ ಸ್ಯಾಂಟ್ನರ್ ಬಾರಿಸಿದ ಸಿಕ್ಸರ್ ನೆರವಿಂದ ಚೆನ್ನೈ ರೋಚಕ ಗೆಲುವು ತನ್ನದಾಗಿಸಿತು.

ಧೋನಿಗೆ ದಂಡ

ಪಂದ್ಯದ ನಂತರ, ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಧೋನಿಗೆ ಪಂದ್ಯದ ಶುಲ್ಕದ ಶೇಕಡಾ 50ರಷ್ಟು ದಂಡ ವಿಧಿಸಲಾಯಿತು. ಇದು ಮಾಹಿ ಕ್ರಿಕೆಟ್‌ ವೃತ್ತಿಜೀವನದ ಅತ್ಯಂತ ವಿವಾದಾತ್ಮಕ ಕ್ಷಣಗಳಲ್ಲಿ ಒಂದಾಗಿದೆ. ಅಲ್ಲದೆ ಎಂದಿಗೂ ಒಂದು ಕಪ್ಪುಚುಕ್ಕಿಯಾಗಿಯೇ ಉಳಿದಿದೆ.

ಘಟನೆ ನಡೆದು ಸುಮಾರು ಆರು ವರ್ಷಗಳ ನಂತರ, ಈ ಬಗ್ಗೆ ಧೋನಿ ಮಾತನಾಡಿದ್ದಾರೆ. ಮಂದಿರಾ ಬೇಡಿ ಅವರೊಂದಿಗಿನ ಮುಕ್ತ ಸಂಭಾಷಣೆ ವೇಳೆ ಮಾತನಾಡಿದ ಧೋನಿ ಆ ಕ್ಷಣವನ್ನು ನೆನಪಿಸಿಕೊಂಡರು. ಅಲ್ಲದೆ ಅದನ್ನು "ದೊಡ್ಡ ತಪ್ಪು" ಎಂದು ಹೇಳಿದರು.

ಮೈದಾನಕ್ಕೆ ಕಾಲಿಟ್ಟಿದ್ದು ದೊಡ್ಡ ತಪ್ಪು

“ಅದು ಐಪಿಎಲ್ ಪಂದ್ಯವೊಂದರಲ್ಲಿ ನಡೆದು ಹೋಯಿತು. ನಾನು ಮೈದಾನಕ್ಕೆ ಕಾಲಿಟ್ಟಿದ್ದು ದೊಡ್ಡ ತಪ್ಪು. ಅದನ್ನು ಹೊರತುಪಡಿಸಿಯೂ ಮೈದಾನದಲ್ಲಿ ಇಂತಹ ಪ್ರಚೋದನಕಾರಿ ಸನ್ನಿವೇಶ ನಡೆಯುತ್ತವೆ. ಪ್ರತಿ ಪಂದ್ಯವನ್ನು ಗೆಲ್ಲಬೇಕು ಎಂದು ಆಡುವಾಗ ಆಟಗಾರರು ಬಹಳಷ್ಟು ವಿಷಯಗಳನ್ನು ನಿಭಾಯಿಸಬೇಕು,” ಎಂದು ಧೋನಿ ಮಾಸ್ಟರ್ ಕಾರ್ಡ್ ಆಯೋಜಿಸಿದ್ದ ಮಾತುಕತೆ ವೇಳೆ ಹೇಳಿದರು.

“ಯಾವಾಗ ನೀವು ಸ್ವಲ್ಪ ಕೋಪಗೊಳ್ಳುತ್ತೀರಿ ಅಥವಾ ನಿರಾಶೆಗೊಂಡಿರುತ್ತೀರೋ, ಆಗ ಬಾಯಿ ಮುಚ್ಚಿಕೊಂಡು ಸುಮ್ಮನಿರುವುದು ಉತ್ತಮ. ಸ್ವಲ್ಪ ಸಮಯದವರೆಗೆ ಅದರಿಂದ ದೂರವಿರಿ, ದೀರ್ಘ ಉಸಿರಾಟವನ್ನು ತೆಗೆದುಕೊಳ್ಳಲು ಪ್ರಯತ್ನಿಸಿ. ಇದು ಒತ್ತಡ ನಿಭಾಯಿಸುವ ಪ್ರಯತ್ನ. ನಿಮ್ಮ ಭಾವನೆಗಳು ನಿಮ್ಮ ನಿರ್ಧಾರ ತೆಗೆದುಕೊಳ್ಳುವಿಕೆಯ ಮೇಲೆ ಪರಿಣಾಮ ಬೀರಬಾರದು” ಎಂದು ಮಾಹಿ ಹೇಳಿದ್ದಾರೆ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
Whats_app_banner