ಕೊಹ್ಲಿ-ರೋಹಿತ್ ಅಲ್ಲವೇ ಅಲ್ಲ; ಎಲ್ಲರ ಫೇವರಿಟ್ ಧೋನಿಗೆ ನೆಚ್ಚಿನ ಆಟಗಾರ ಯಾರು? ಇಲ್ಲಿದೆ ಉತ್ತರ
MS Dhoni: ವಿಶ್ವ ಕ್ರಿಕೆಟ್ನಲ್ಲಿ ಎಲ್ಲರ ಫೇವರಿಟ್ ಆಟಗಾರ ಎಂಎಸ್ ಧೋನಿ ಅವರಿಗೆ ನೆಚ್ಚಿನ ಆಟಗಾರ ಯಾರು? ಯಾರನ್ನು ತನ್ನ ನೆಚ್ಚಿನ ಆಟಗಾರ ಎಂದು ಹೇಳಿದ್ದಾರೆ
ನಾಯಕನಾಗಿ 3 ಐಸಿಸಿ ಟ್ರೋಫಿಗಳನ್ನು ಗೆದ್ದಿರುವ ಏಕೈಕ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ (MS Dhoni) ಅವರನ್ನು ಇಷ್ಟಪಡದವರ ಸಂಖ್ಯೆಯೇ ಕಡಿಮೆ. ಹಾಲಿ-ಮಾಜಿ ಕ್ರಿಕೆಟಿಗರು ಸೇರಿದಂತೆ ಎಲ್ಲಾ ವರ್ಗಗಳಲ್ಲೂ ಧೋನಿಯೇ ಫೇವರಿಟ್ ಆಟಗಾರ. ಕೋಟ್ಯಂತರ ಮಂದಿ ಅವರನ್ನು ಆರಾಧಿಸುತ್ತಾರೆ. ಆದರೆ, ಮಾಹಿಗೆ ನೆಚ್ಚಿನ ಆಟಗಾರ ಯಾರು? ಇದೀಗ ಆ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ ನೋಡಿ.
ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಭಾರತದ ಮಾಜಿ ನಾಯಕ ಧೋನಿಯನ್ನು ನಿಮ್ಮ ಪ್ರಸ್ತುತ ನೆಚ್ಚಿನ ಆಟಗಾರ ಯಾರೆಂದು ಬಗ್ಗೆ ಪ್ರಶ್ನಿಸಲಾಯಿತು. ಆದರೆ ಅವರು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ತಿರಸ್ಕರಿಸಿ ಸ್ಟಾರ್ ಬೌಲರ್ ಅನ್ನು ಆಯ್ಕೆ ಮಾಡಿದ್ದಾರೆ. ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ನೆಚ್ಚಿನ ಆಟಗಾರನನ್ನಾಗಿ ಆಯ್ಕೆ ಮಾಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ನಾಯಕ ಧೋನಿ ಇತ್ತೀಚೆಗೆ ಮುಕ್ತಾಯಗೊಂಡ ಪ್ರಚಾರ ಕಾರ್ಯಕ್ರಮದ ಸಂವಾದದಲ್ಲಿ ಈ ಬಗ್ಗೆ ವಿವರಿಸಿದ್ದಾರೆ.
ಬುಮ್ರಾ ಧೋನಿಯ ಪ್ರಸ್ತುತ ಫೇವರಿಟ್ ಏಕೆ?
ಜಸ್ಪ್ರೀತ್ ಬುಮ್ರಾ ನನ್ನ ಫೇವರಿಟ್ ಆಟಗಾರ ಎಂದು ಹೇಳಿದ್ದಾರೆ. ಅವರನ್ನು ಪ್ರಸ್ತುತ ಫೇವರಿಟ್ ಆಟಗಾರ ಎಂದು ಆಯ್ಕೆ ಮಾಡುವುದು ಸುಲಭ. ಆದರೆ, ಭಾರತದ ಬ್ಯಾಟರ್ಗಳನ್ನು ಆಯ್ಕೆ ಮಾಡುವುದು ನಿಜವಾಗಿಯೂ ಕಷ್ಟ. ಏಕೆಂದರೆ ನಮ್ಮಲ್ಲಿ ಎಲ್ಲರೂ ಉತ್ತಮ ಬ್ಯಾಟರ್ಗಳಿದ್ದಾರೆ. ಹಾಗಂತ ಬೌಲರ್ಗಳು ಉತ್ತಮವಾಗಿಲ್ಲ ಎಂದರ್ಥವಲ್ಲ. ಬ್ಯಾಟರ್ಗಳಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ಕಷ್ಟವಾಗಿದೆ ಎಂದು ಹೇಳಿದ್ದಾರೆ.
ಏಕೆಂದರೆ ನಾನು ಯಾರ ಬ್ಯಾಟಿಂಗ್ ನೋಡಿದರೂ, ಅವರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಬಳಿಕ ಬೇರೊಬ್ಬರ ಬ್ಯಾಟಿಂಗ್ ನೋಡಿದಾಗ ಅವರೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ನೋಡಿದವರೆಲ್ಲರ ಬ್ಯಾಟ್ನಿಂದ ರನ್ ಹರಿದು ಬರುತ್ತಿದೆ. ಹಾಗಾಗಿ ಬ್ಯಾಟರ್ಗಳನ್ನು ಆಯ್ಕೆ ಮಾಡಲು ಬಯಸುವುದಿಲ್ಲ. ಅವರು ಮುಂದೆಯೂ ರನ್ ಗಳಿಸುತ್ತಲೇ ಇರುತ್ತಾರೆ ಎಂದು ನಾನು ಭಾವಿಸುತ್ತೇನೆ. ಹೀಗಾಗಿ, ನಾನು ನನ್ನ ನೆಚ್ಚಿನ ಬೌಲರ್ ಅನ್ನು ಆಯ್ಕೆ ಮಾಡಿದ್ದೇನೆ ಎಂದು ಧೋನಿ ಹೇಳಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಬುಮ್ರಾ ಅಸಾಧಾರಣ ಬೌಲಿಂಗ್
ಬುಮ್ರಾ ಅವರನ್ನು ಆಧುನಿಕ ಕ್ರಿಕೆಟ್ನಲ್ಲಿ ಶ್ರೇಷ್ಠ ಬೌಲರ್ಗಳಲ್ಲಿ ಒಬ್ಬರು ಎಂದು ಕರೆಯಲಾಗುತ್ತದೆ. 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಜಸ್ಪ್ರೀತ್ ಬುಮ್ರಾ ದಾಳಿಗೆ ಎದುರಾಳಿ ತಂಡಗಳು ಪತರಗುಟ್ಟಿದವು. ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಗೆಲುವಿನಲ್ಲಿ ಬುಮ್ರಾ ನಿರ್ಣಾಯಕ ಪಾತ್ರ ವಹಿಸಿದರು. ಟೂರ್ನಿಯಲ್ಲಿ ಅಗ್ರ ವಿಕೆಟ್ ಟೇಕರ್‌ಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದರೂ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದರು. ಕೇವಲ 4.17ರ ಎಕಾನಮಿಯಲ್ಲಿ 8 ಪಂದ್ಯಗಳಲ್ಲಿ 15 ವಿಕೆಟ್ ಪಡೆದರು.
ಬುಮ್ರಾ ಪುನರಾಗಮನ ಯಾವಾಗ?
ಕೊಹ್ಲಿ ನಂತರ ಐಸಿಸಿ ಟೂರ್ನಿಯಲ್ಲಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಗೆದ್ದ 2ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಬುಮ್ರಾ, ಭಾರತ ಮತ್ತು ಆತಿಥೇಯ ಶ್ರೀಲಂಕಾ ನಡುವಿನ ಅವಳಿ ವೈಟ್-ಬಾಲ್ ಸರಣಿಯಿಂದ ವಿಶ್ರಾಂತಿ ಪಡೆದಿದ್ದಾರೆ. ಟಿ20 ವಿಶ್ವಕಪ್ ನಂತರ ಕಣಕ್ಕಿಳಿಯದ ಭಾರತೀಯ ವೇಗದ ಬೌಲರ್, ಬಾಂಗ್ಲಾದೇಶ ವಿರುದ್ದದ ಸರಣಿಗೆ ಕಣಕ್ಕಿಳಿಯುವ ನಿರೀಕ್ಷೆ ಇದೆ.