ಐಪಿಎಲ್ ಮಧ್ಯದಲ್ಲೇ ಧೋನಿ ಕ್ರಿಕೆಟ್ಗೂ ವಿದಾಯ? ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಿದ್ಧವಾದ ಸಿಎಸ್ಕೆ ಮಾಜಿ ನಾಯಕ
MS Dhoni : ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಸಿಎಸ್ಕೆ ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿ ಶೀಘ್ರದಲ್ಲೇ ಹೊರ ಬೀಳುವ ಸಾಧ್ಯತೆ ಇದೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಅತ್ಯಂತ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಅವರು ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ನಾಯಕತ್ವದಿಂದ ಅಧಿಕೃತವಾಗಿ ಕೆಳಗಿಳಿದಿದ್ದಾರೆ. ನೂತನ ನಾಯಕನಾಗಿ ಋತುರಾಜ್ ಗಾಯಕ್ವಾಡ್ (Ruturaj Gaikwad) ನೇಮಕಗೊಂಡಿದ್ದಾರೆ. ಆದರೆ ಕ್ಯಾಪ್ಟನ್ಸಿಯಿಂದ ಕಣಕ್ಕಿಳಿದ ಬಳಿಕ ಧೋನಿ ಮುಂದಿನ ನಡೆ ಏನು? ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ.
2008ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಿ ನೇಮಕಗೊಂಡಿದ್ದ ಧೋನಿ, ಅತ್ಯಂತ ಯಶಸ್ವಿ ನಾಯಕ ಎಂಬ ದಾಖಲೆ ಬರೆದಿದ್ದಾರೆ. ಅವರ ನಾಯಕತ್ವದಲ್ಲಿ 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಸಿಎಸ್ಕೆ, ಮುಂಬೈ ಇಂಡಿಯನ್ಸ್ ಜೊತೆಗೆ ಜಂಟಿ ದಾಖಲೆ ಹೊಂದಿದೆ. ಐಪಿಎಲ್ನಲ್ಲಿ ಕ್ಯಾಪ್ಟನ್ ಆಗಿ ಚೆನ್ನೈಯನ್ನು 212 ಪಂದ್ಯಗಳಲ್ಲಿ ಮುನ್ನಡೆಸಿದ್ದು, 128 ಗೆಲುವು, 82 ಸೋಲು ಕಂಡಿದ್ದಾರೆ. 2 ಪಂದ್ಯಗಳಿಂದ ಫಲಿತಾಂಶವಿಲ್ಲ.
ಪ್ರಸ್ತುತ ಅವರ ನಾಯಕತ್ವ ಯುಗಾಂತ್ಯ ಕಂಡಿದ್ದು, ಕೋಟ್ಯಂತರ ಅಭಿಮಾನಿಗಳಿಗೆ ಆಘಾತವುಂಟು ಮಾಡಿದೆ. ಆದರೆ, ನಾಯಕನಾಗಿ ಕೆಳಗಿಳಿದರೂ ಆಟಗಾರನಾಗಿ ತಂಡದಲ್ಲಿರಲಿದ್ದಾರೆ. ಈ ಕುರಿತು ಹಲವು ದಿನಗಳ ಹಿಂದೆ ಫೇಸ್ಬುಕ್ನಲ್ಲಿ ಅಚ್ಚರಿಯ ಪೋಸ್ಟ್ ಮಾಡಿ ಸುಳಿವು ನೀಡಿದ್ದರು. ಆದರೆ ಮತ್ತೊಂದು ಆಘಾತಕಾರಿ ಸುದ್ದಿ ಶೀಘ್ರದಲ್ಲೇ ಹೊರ ಬೀಳುವ ಸಾಧ್ಯತೆ ಇದೆ. ಇದೇ ವರ್ಷದ ಐಪಿಎಲ್ ಮಧ್ಯದಲ್ಲಿ ಧೋನಿ ಕ್ರಿಕೆಟ್ಗೂ ವಿದಾಯ ಹೇಳುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.
ಹೆಡ್ಕೋಚ್ ಆಗಲಿದ್ದಾರೆ ಎಂಎಸ್ ಧೋನಿ?
ಹೌದು, 42 ವರ್ಷದ ಹಿರಿಯ ಆಟಗಾರ ಪ್ರಸಕ್ತ ಐಪಿಎಲ್ ಮಧ್ಯದಲ್ಲಿ ಕ್ರಿಕೆಟ್ ಲೋಕಕ್ಕೆ ವಿದಾಯ ಹೇಳುತ್ತಾರೆ ಎಂದು ಹೇಳಲಾಗಿದೆ. ನಿವೃತ್ತಿ ಘೋಷಿಸಿದ ತಕ್ಷಣವೇ ತಂಡದ ಕೋಚ್ ಆಗಿ ಅಧಿಕಾರಕ್ಕೇರಲಿದ್ದಾರೆ ಎಂದು ಸುದ್ದಿಯಾಗಿದೆ. ಹಾಗಾದರೆ, ಪ್ರಸ್ತುತ ತಂಡದ ಹೆಡ್ಕೋಚ್ ಸ್ಟೀಫನ್ ಫ್ಲೆಮಿಂಗ್ ಕಥೆ ಏನು? ಎಂಬ ಪ್ರಶ್ನೆ ಕೂಡ ಎದ್ದಿದೆ. ಧೋನಿ ಹೇಗೆ ಕೋಚ್ ಆಗಲಿದ್ದಾರೆ ಎಂದು ಎಂಬುದಕ್ಕೆ ಕಾರಣ ಇಲ್ಲಿದೆ.
ನ್ಯೂಜಿಲೆಂಡ್ ಕ್ರಿಕೆಟ್ ಟಿ20 ವಿಶ್ವಕಪ್ಗೆ ತನ್ನ ಕೋಚಿಂಗ್ ಸಿಬ್ಬಂದಿ ಹೆಚ್ಚಿಸಲು ಗುರಿ ಹೊಂದಿದ್ದು, ಐಸಿಸಿ ಟ್ರೋಫಿ ಗೆಲ್ಲುವ ಪಣತೊಟ್ಟಿದೆ. ಹೀಗಾಗಿ ಪ್ರಸ್ತುತ ಹೆಡ್ಕೋಚ್ ಸ್ಟೀಫನ್ ಫ್ಲೆಮಿಂಗ್ ಚೆನ್ನೈ ತಂಡವನ್ನು ತೊರೆಯಲು ಸಜ್ಜಾಗಿದ್ದು, ಟಿ20 ವಿಶ್ವಕಪ್ 2024 ಟೂರ್ನಿಗೂ ಮುನ್ನ ನ್ಯೂಜಿಲೆಂಡ್ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ನ್ಯೂಜಿಲೆಂಡ್ನ ಹೆರಾಲ್ಡ್ ವರದಿ ಮಾಡಿದೆ.
ಸ್ಟೀಫನ್ ಫ್ಲೆಮಿಂಗ್ ಜೊತೆಗೆ ಶೇನ್ ಬಾಂಡ್ ಕೂಡ ರಾಷ್ಟ್ರೀಯ ತಂಡದ ಕೋಚಿಂಗ್ ಸಿಬ್ಬಂದಿಯ ಭಾಗವಾಗಲಿದ್ದಾರೆ. ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಏಪ್ರಿಲ್ನಲ್ಲಿ ನಡೆಯುವ ಪಾಕಿಸ್ತಾನ ವಿರುದ್ಧದ ಟಿ20 ಸರಣಿಗೆ ಕೋಚ್ ಆಗಿ ನೇಮಕಗೊಳ್ಳಲಿದ್ದಾರೆ ಎಂದು ವರದಿಯಾಗಿದೆ. ನ್ಯೂಜಿಲೆಂಡ್ ಐಸಿಸಿ ಈವೆಂಟ್‌ಗಳಲ್ಲಿ ಸೆಮಿ-ಫೈನಲ್ನಲ್ಲಿ ಸೋತು ನಿರಾಸೆ ಅನುಭವಿಸುತ್ತಿದೆ.
ಜೂನ್‌ನಲ್ಲಿ ಕೆರಿಬಿಯನ್ ಮತ್ತು ಯುಎಸ್‌ಎಯಲ್ಲಿ ನಡೆಯಲಿರುವ ಈವೆಂಟ್‌ನಲ್ಲಿ ತಮ್ಮ ಪ್ರದರ್ಶನವನ್ನು ಹೆಚ್ಚಿಸಲು ಕೋಚಿಂಗ್ ವಿಭಾಗವನ್ನು ಬಲಪಡಿಸುವ ಗುರಿಯೊಂದಿಗೆ ಕಿವೀಸ್, ಫ್ಲೆಮಿಂಗ್ ಮತ್ತು ಶೇನ್ ಬಾಂಡ್ಗೆ ಮಣೆ ಹಾಕಿದೆ. ಪ್ರಸ್ತುತ ಕಿವೀಸ್ ಮುಖ್ಯ ಕೋಚ್ ಆಗಿರುವ ಗ್ಯಾರಿ ಸ್ಟೆಡ್ ಅವರನ್ನು ಸಹಾಯಕ ಸಿಬ್ಬಂದಿ ಸ್ಥಾನ ನೀಡಲು ಕೀವಿಸ್ ನಿರ್ಧರಿಸಿದೆ. ರಾಷ್ಟ್ರೀಯ ಕ್ರಿಕೆಟ್ ತಂಡದ ಯಶಸ್ಸು ಹೆಚ್ಚಿಸಲು ಫ್ಲೆಮಿಂಗ್ ಮತ್ತು ಬಾಂಡ್ಗೆ ಅವಕಾಶ ನೀಡಲಾಗುತ್ತಿದೆ.
ಫ್ಲೆಮಿಂಗ್ ಮತ್ತು ಬಾಂಡ್ ತರಬೇತಿ ಹಿನ್ನೆಲೆ
ಫ್ರಾಂಚೈಸ್ ಕ್ರಿಕೆಟ್‌ನಲ್ಲಿ ಕೋಚಿಂಗ್ ಪರಾಕ್ರಮಕ್ಕೆ ಹೆಸರುವಾಸಿಯಾದ ಫ್ಲೆಮಿಂಗ್ ಅವರು ಕ್ರಮವಾಗಿ ಐಪಿಎಲ್, ಎಸ್ಎಟಿ20 ಮತ್ತು ಎಂಎಸ್ಸಿ ಲೀಗ್‌ಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಜೋಬರ್ಗ್ ಸೂಪರ್ ಕಿಂಗ್ಸ್ ಮತ್ತು ಟೆಕ್ಸಾಸ್ ಸೂಪರ್ ಕಿಂಗ್ಸ್ ತಂಡಗಳಿಗೆ ಮಾರ್ಗದರ್ಶನ ನೀಡಿದ್ದಾರೆ. 2021ರ ಟಿ20 ವಿಶ್ವಕಪ್‌ನಲ್ಲಿ ಕಿವೀಸ್ಗೆ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ಅಂದು ಕಿವೀಸ್ ಫೈನಲ್ ಪ್ರವೇಶಿಸಿತ್ತು.
ಬಾಂಡ್ ಈ ಹಿಂದೆ 2024ರ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ಸೇರುವ ಮೊದಲು ಮುಂಬೈ ಇಂಡಿಯನ್ಸ್ ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ್ದರು. ಎಂಐ ಎಮಿರೇಟ್ಸ್, ಪರ್ಲ್ ರಾಯಲ್ಸ್ ಮತ್ತು ಸಿಡ್ನಿ ಥಂಡರ್ ತಂಡಗಳ ಪರ ಕೋಚಿಂಗ್ ನೀಡಿದ ಅನುಭವ ಹೊಂದಿದ್ದಾರೆ. 2012 ರಿಂದ 2015 ರವರೆಗೆ ಕಿವೀಸ್ ತಂಡಕ್ಕೆ ಮಾಜಿ ವೇಗದ ಬೌಲರ್ ಬೌಲಿಂಗ್ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದರು.