ಎಕಾನಮಿ ಕ್ಲಾಸ್‌ ವಿಮಾನದಲ್ಲಿ ಬೆಂಗಳೂರಿನಿಂದ ರಾಂಚಿಗೆ ಪ್ರಯಾಣಿಸಿದ ಧೋನಿ; ಸರಳತೆಯ ಸಾಹುಕಾರ ಅಂದ್ರು ಫ್ಯಾನ್ಸ್‌ -Video
ಕನ್ನಡ ಸುದ್ದಿ  /  ಕ್ರಿಕೆಟ್  /  ಎಕಾನಮಿ ಕ್ಲಾಸ್‌ ವಿಮಾನದಲ್ಲಿ ಬೆಂಗಳೂರಿನಿಂದ ರಾಂಚಿಗೆ ಪ್ರಯಾಣಿಸಿದ ಧೋನಿ; ಸರಳತೆಯ ಸಾಹುಕಾರ ಅಂದ್ರು ಫ್ಯಾನ್ಸ್‌ -Video

ಎಕಾನಮಿ ಕ್ಲಾಸ್‌ ವಿಮಾನದಲ್ಲಿ ಬೆಂಗಳೂರಿನಿಂದ ರಾಂಚಿಗೆ ಪ್ರಯಾಣಿಸಿದ ಧೋನಿ; ಸರಳತೆಯ ಸಾಹುಕಾರ ಅಂದ್ರು ಫ್ಯಾನ್ಸ್‌ -Video

MS Dhoni: ಐಪಿಎಲ್‌ 2024ರ ಟೂರ್ನಿಯಿಂದ ಸಿಎಸ್‌ಕೆ ತಂಡ ಹೊರಬಿದ್ದ ಬಳಿಕ, ತಂಡದ ಹಿರಿಯ ಆಟಗಾರ ಎಂಎಸ್‌ ಧೋನಿ ರಾಂಚಿಗೆ ಮರಳಿದ್ದಾರೆ. ಬೆಂಗಳೂರಿನಿಂದ ಎಕಾನಮಿ ಕ್ಲಾಸ್‌ ವಿಮಾನದಲ್ಲಿ ಪ್ರಯಾಣಿಸಿ ಸರಳತೆ ಮೆರೆದಿದ್ದಾರೆ.

ಎಕಾನಮಿ ಕ್ಲಾಸ್‌ ವಿಮಾನದಲ್ಲಿ ಬೆಂಗಳೂರಿನಿಂದ ರಾಂಚಿಗೆ ಪ್ರಯಾಣಿಸಿದ ಧೋನಿ
ಎಕಾನಮಿ ಕ್ಲಾಸ್‌ ವಿಮಾನದಲ್ಲಿ ಬೆಂಗಳೂರಿನಿಂದ ರಾಂಚಿಗೆ ಪ್ರಯಾಣಿಸಿದ ಧೋನಿ

ಎಂಎಸ್‌ ಧೋನಿ ಸರಳತೆಯ ಸಾಕಾರಮೂರ್ತಿ. ಐಶಾರಾಮಿ ಜೀವನ ನಡೆಸಬಹುದಾದರೂ, ರಾಂಚಿಯ ಫಾರ್ಮ್‌ಹೌಸ್‌ನಲ್ಲಿ ಮಾಹಿ ತಮ್ಮ ಕುಟುಂಬದೊಂದಿಗೆ ಸರಳ ಜೀವನ ನಡೆಸುತ್ತಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡದ ಪರ ಆಡಿದ ಧೋನಿ, ಮುಂದಿನ ವರ್ಷವೂ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಆಡುತ್ತಾರೋ ಇಲ್ಲವೋ ಎಂಬುದು ಸ್ಪಷ್ಟವಿಲ್ಲ. ಐಪಿಎಲ್ 2024ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಲೀಗ್‌ ಹಂತದಲ್ಲೇ ಸೋತು ಹೊರಬಿದ್ದಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಕೊನೆಯ ಪಂದ್ಯದಲ್ಲಿ ಸಿಎಸ್‌ಕೆ ಸೋಲುತ್ತಿದ್ದಂತೆಯೇ, ಎಂಎಸ್‌ ಧೋನಿಯ ಐಪಿಎಲ್‌ ಪಯಣವೂ ಅಂತ್ಯವಾಯ್ತು ಎಂದು ಹೇಳಲಾಗುತ್ತಿದೆ.

ಟೂರ್ನಿಯಲ್ಲಿ ಸಿಎಸ್‌ಕೆ ಎಲಿಮಿನೇಟ್ ಆಗುತ್ತಿದ್ದಂತೆಯೇ, ಎಂಎಸ್ ಧೋನಿ ಮುಂದೆ ಏನು ಮಾಡಲಿದ್ದಾರೆ ಎಂಬ ಕುರಿತು ಅಭಿಮಾನಿಗಳಿಗೆ ಇನ್ನೂ ಗೊಂದಲವಿದೆ. 42 ವರ್ಷದ ಮಾಜಿ ನಾಯಕ, ಮೊಣಕಾಲಿನ ಗಾಯದ ನಡುವೆಯೂ ಟೂರ್ನಿಯಲ್ಲಿ ಆಡಿದ್ದರು. ಸಿಎಎಸ್‌ಕೆ ತಂಡವನ್ನು ಟ್ರೋಫಿ ಗೆಲುವಿನತ್ತ ಕೊಂಡೊಯ್ಯುವ ಕನಸು ಕಂಡಿದ್ದ ಮಾಹಿಯ ಆಸೆಗೆ, ಆರ್‌ಸಿಬಿ ತಣ್ಣೀರೆರಚಿತು. ಹೀಗಾಗಿ ಧೋನಿಗೆ ಗೆಲುವಿನ ವಿದಾಯ ಸಿಕ್ಕಿಲ್ಲ. ಇದೇ ಕಾರಣಕ್ಕೆ ಅವರು ಮುಂದಿನ ಆವೃತ್ತಿಯಲ್ಲೂ ತಂಡದ ಪರ ಆಡುತ್ತಾರೆ ಎಂದು ಹೇಳಲಾಗುತ್ತಿದೆ.

ಸಿಎಸ್‌ಕೆ ಅಭಿಯಾನ ಅಂತ್ಯವಾದ ಬಳಿಕ ಧೋನಿ ಬೆಂಗಳೂರಿನಿಂದ ರಾಂಚಿಗೆ ಪ್ರಯಾಣಿಸಿದ್ದಾರೆ. ಮುಂದೆ ಕ್ರಿಕೆಟ್‌ನಿಂದ ದೂರ ಉಳಿಯಲಿರುವ ಅವರು, ಫಾರ್ಮ್‌ ಹೌಸ್‌ನಲ್ಲಿ ಕಾಲ ಕಳೆಯಲಿದ್ದಾರೆ.

ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣ

ಸಿಎಸ್‌ಕೆ ಮಾಜಿ ನಾಯಕನು ಬೆಂಗಳೂರಿನಿಂದ ರಾಂಚಿಗೆ ವಿಮಾನದಲ್ಲಿ ಪ್ರಯಾಣಿದ ವಿಡಿಯೋ ಎನ್ನಲಾದ ದೃಶ್ಯವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಎಲ್ಲಾ ಕ್ರಿಕೆಟಿಗರು ಬಿಸಿನೆಸ್‌ ಕ್ಲಾಸ್‌ನಲ್ಲಿ ಪ್ರಯಾಣಿಸಿದರೆ, ಮಾಹಿ ಜನಸಾಮಾನ್ಯರಂತೆ ಎಕಾನಮಿ ಕ್ಲಾಸ್‌ ವಿಮಾನದಲ್ಲಿ ಕುಳಿತು ಪ್ರಯಾಣಿಸಿದ್ದಾರೆ. ಈ ವೇಳೆ ಅದೇ ವಿಮಾನದಲ್ಲಿ ಕುಳಿತಿದ್ದ ಸಹ ಪ್ರಯಾಣಿಕರು, ಮಾಹಿಯನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ವಿಡಿಯೋದಲ್ಲಿ, ಧೋನಿ ತಮ್ಮ ಲಗೇಜ್‌ ಅನ್ನು ವಿಮಾನದಲ್ಲಿರುವ ಓವರ್‌ಹೆಡ್ ಕಂಪಾರ್ಟ್‌ಮೆಂಟ್‌ನಲ್ಲಿ ಇರಿಸುತ್ತಿರುವುದನ್ನು ಕಾಣಬಹುದು. ಆ ಬಳಿಕ ತಮ್ಮ ಸೀಟ್‌ನಲ್ಲಿ ಅವರು ಕುಳಿತುಕೊಳ್ಳುತ್ತಾರೆ. ಈ ವೇಳೆ ಸಹ ಪ್ರಯಾಣಿಕರು ಮಾಹಿಯನ್ನು ನೋಡಿ ಆ ದೃಶ್ಯಗಳನ್ನು ತಮ್ಮ ಫೋನ್‌ಗಳಲ್ಲಿ ಸೆರೆಹಿಡಿದಿದ್ದಾರೆ. ಅಷ್ಟೇ ಅಲ್ಲ ಧೋನಿಗೆ ಚಪ್ಪಾಳೆ ತಟ್ಟಿ ಅಭಿನಂದಿಸಿದ್ದಾರೆ.

ವಿಡಿಯೋ ಇಲ್ಲಿದೆ

ಈ ದೃಶ್ಯವು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ತಲಾ ನೋಡಿ ಫ್ಯಾನ್ಸ್‌ ಖುಷಿಯಾಗಿದ್ದಾರೆ. ಅದರಲ್ಲೂ ಜನ ಸಾಮಾನ್ಯರ ನಡುವೆ ಎಕಾನಮಿ ಕ್ಲಾಸ್‌ನಲ್ಲಿ ಮಾಹಿ ಪ್ರಯಾಣಿಸಿದ್ದನ್ನು ನೋಡಿದ ಫ್ಯಾನ್ಸ್‌, ಅವರ ಸರಳತೆಗೆ ಮೆಚ್ಚಿದ್ದಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner