ಎಂಎಸ್ ಧೋನಿ ಶೀಘ್ರವೇ ರಾಜಕೀಯ ರಂಗ ಪ್ರವೇಶ? ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಕೊಟ್ರು ಉತ್ತರ
MS Dhoni: ಎಂಎಸ್ ಧೋನಿ ರಾಜಕೀಯಕ್ಕೆ ಬರುತ್ತಾರಾ? ಈ ಪ್ರಶ್ನೆ ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ. ಮಾಹಿ ಪಾಲಿಟಿಕ್ಸ್ಗೆ ಬರುತ್ತಾ ಇಲ್ಲವೇ ಎಂಬುದಕ್ಕೆ ಸಂಬಂಧಿಸಿ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಪ್ರತಿಕ್ರಿಯಿಸಿದ್ದಾರೆ.

ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಕ್ರಿಕೆಟ್‌ಗೆ 2020ರ ಆಗಸ್ಟ್ 15ರಂದು ವಿದಾಯ ಹೇಳಿದ್ದರೂ ಅವರ ಕ್ರೇಜ್ ಕಿಂಚಿತ್ತೂ ಕುಗ್ಗಿಲ್ಲ. ಕ್ರಿಕೆಟ್ ಅಭಿಮಾನಿಗಳಲ್ಲಿ ಧೋನಿ ಹೆಸರು ಇನ್ನೂ ಪ್ರತಿಧ್ವನಿಸುತ್ತಿದೆ. ಪ್ರಸ್ತುತ 43ನೇ ವಯಸ್ಸಿನಲ್ಲೂ ಐಪಿಎಲ್ ಆಡಲು ಸಜ್ಜಾಗುತ್ತಿರುವ ಮಾಜಿ ನಾಯಕ ಶೀಘ್ರವೇ ರಾಜಕೀಯಕ್ಕೆ (Politics) ಬರುತ್ತಾರೆ ಎನ್ನುವ ಚರ್ಚೆ ಹುಟ್ಟಿಕೊಂಡಿದೆ. ಅನೇಕ ಕ್ರಿಕೆಟಿಗರು ನಿವೃತ್ತಿಯ ಬಳಿಕ ರಾಜಕೀಯ ರಂಗ ಪ್ರವೇಶಿಸಿದ ಉದಾಹರಣೆಗಳು ನಮ್ಮ ಮುಂದಿವೆ. ಇದೀಗ ಧೋನಿಯೂ ಇದೇ ದಿಕ್ಕಿನಲ್ಲಿ ಸಾಗುತ್ತಾರಾ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಎಂಎಸ್ ಧೋನಿ ರಾಜಕೀಯ ಪ್ರವೇಶಿಸುವುದಕ್ಕೆ ಸಂಬಂಧಿಸಿ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ (Rajeev Shukla) ಅವರು ಪ್ರತಿಕ್ರಿಯಿಸಿದ್ದಾರೆ. 'ಮಾಹಿಗೆ ರಾಜಕಾರಣಿಯಾಗಿ ಉಜ್ವಲ ಭವಿಷ್ಯವಿದೆ. ಆದರೆ ಸಂಪೂರ್ಣವಾಗಿ ಅವರ ವೈಯಕ್ತಿಕ ನಿರ್ಧಾರ' ಎಂದು ಹೇಳಿದ್ದಾರೆ. ಇದೇ ವೇಳೆ ಮಾಜಿ ಕ್ರಿಕೆಟಿಗ ರಾಜಕೀಯ ಪ್ರವೇಶಿಸಿದರೆ ಏನಾಗಬಹುದು ಎನ್ನುವುದಕ್ಕೆ ಸಂಬಂಧಿಸಿ ಭವಿಷ್ಯ ನುಡಿದ ಶುಕ್ಲಾ ಅವರು, 'ಧೋನಿ ರಾಜಕೀಯಕ್ಕೆ ಬಂದರೆ ಸುಲಭವಾಗಿ ಗೆಲ್ಲುತ್ತಾರೆ. ಅವರ ಜನಪ್ರಿಯತೆ ಅಭೂತಪೂರ್ವ ಮಟ್ಟದಲ್ಲಿದೆ. ಅವರು ಪ್ರಬಲ ಸ್ಪರ್ಧಿಯಾಗಬಹುದು, ವಿಶೇಷವಾಗಿ ಬಂಗಾಳ ರಾಜಕೀಯದಲ್ಲಿ' ಎಂದು ಹೇಳಿದ್ದಾರೆ.
ಆದಾಗ್ಯೂ, ರಾಜೀವ್ ಶುಕ್ಲಾ ಅವರು ಹಿಂದೆ ಧೋನಿ ಜೊತೆ ರಾಜಕೀಯದ ಬಗ್ಗೆ ಮಾತನಾಡಿದ್ದನ್ನು ನೆನಪಿಸಿಕೊಂಡಿದ್ದಾರೆ. '2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬ ವದಂತಿ ಇದ್ದ ಬಗ್ಗೆ ಧೋನಿಯನ್ನು ಕೇಳಿದಾಗ, ಅದನ್ನು ನಿರಾಕರಿಸಿದ್ದರು. ವಾಸ್ತವವಾಗಿ ಪ್ರಚಾರದಿಂದ ದೂರವೇ ಇರುವ ಅವರ ಬಳಿ ಕನಿಷ್ಠ ಪಕ್ಷ ಮೊಬೈಲ್ ಫೋನ್ ಕೂಡ ಇರುವುದಿಲ್ಲ. ಬಿಸಿಸಿಐ ಆಯ್ಕೆದಾರರು ಸಹ ಅವರನ್ನು ಸಂಪರ್ಕಿಸಲು ಕಷ್ಟಪಡುತ್ತಾರೆ' ಎಂದು ವಿವರಿಸಿದ್ದಾರೆ.
ಧೋನಿ ಸದ್ಯಕ್ಕೆ ರಾಜಕೀಯದತ್ತ ಮುಖ ಮಾಡುವ ಸಾಧ್ಯತೆ ಕಡಿಮೆ ಇದ್ದರೂ ಭವಿಷ್ಯದಲ್ಲಿ ಏನಾಗುತ್ತದೆ ಎಂದು ಹೇಳುವುದು ಕಷ್ಟ. ಅವರು ಕ್ರಿಕೆಟ್ ಕ್ಷೇತ್ರದಲ್ಲಿ ತೋರಿಸಿರುವ ತಾಳ್ಮೆ, ನಾಯಕತ್ವದ ಗುಣಗಳು ಅವರನ್ನು ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತವೆ ಎಂಬುದು ಅನೇಕರ ಮಾತಾದರೂ ಧೋನಿ ರಾಜಕೀಯಕ್ಕೆ ಬರುತ್ತಾರಾ? ಅಥವಾ ಇಲ್ಲವೇ? ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರವಿಲ್ಲ.
ಧೋನಿ ರಾಜಕೀಯಕ್ಕೆ ಬಂದರೆ ಪಯಣ ಹೇಗಿರುತ್ತದೆ?
ಅನೇಕ ವಿಶ್ಲೇಷಕರು ಈ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಕ್ರಿಕೆಟ್‌ನಲ್ಲಿ ಅವರು ಎಷ್ಟು ಜಾಗರೂಕತೆಯಿಂದ ನಿರ್ಧಾರ ತೆಗೆದುಕೊಳ್ಳುತ್ತಿದ್ದರೋ, ಅಷ್ಟೇ ಜಾಗರೂಕತೆವಾಗಿ ರಾಜಕೀಯದಲ್ಲೂ ತಂತ್ರಗಳನ್ನು ಕಾರ್ಯಗತಗೊಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ, ಗಂಭೀರ್ ಅವರಂತೆ ಸಂಸತ್ತಿನಲ್ಲಿ ಧ್ವನಿ ಎತ್ತುತ್ತಾರೆಯೇ? ಅಥವಾ ಅಜರುದ್ದೀನ್ ಅವರಂತೆ ನಿರ್ದಿಷ್ಟ ರಾಜ್ಯದ ರಾಜಕೀಯಕ್ಕೆ ಸೀಮಿತರಾಗುತ್ತಾರೆಯೇ? ಎಂಬ ಪ್ರಶ್ನೆಗಳು ಫ್ಯಾನ್ಸ್ಗೆ ಕಾಡುವಂತೆ ಮಾಡಿವೆ.
ಒಂದು ವೇಳೆ ಧೋನಿ ರಾಜಕೀಯ ಪ್ರವೇಶಿಸಿದರೆ, ಜಾರ್ಖಂಡ್‌ನಲ್ಲಿ ಜನರಲ್ಲಿ ಬಲವಾದ ಹಿಡಿತ ಸಾಧಿಸುವುದು ಖಚಿತ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಮಾಧ್ಯಮ ಮತ್ತು ಸೋಷಿಯಲ್ ಮೀಡಿಯಾಗಳಿಂದ ಸದಾ ದೂರವಿರುವ ಧೋನಿ, ಪ್ರಸ್ತುತ ಕೃಷಿ, ವ್ಯವಹಾರ, ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯುತ್ತಿದ್ದಾರೆ. ಅಲ್ಲದೆ, ಐಪಿಎಲ್ನಲ್ಲಿ ಕಣಕ್ಕಿಳಿಯಲಿದ್ದಾರೆ. ಧೋನಿ ಭವಿಷ್ಯದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ!
2018ರಲ್ಲಿ ಬಿಜೆಪಿ ಅಧ್ಯಕ್ಷರಾಗಿದ್ದ ಅಮಿತ್ ಶಾ ಅವರು ಎನ್‌ಡಿಎ ಸರ್ಕಾರದ ಸಾಧನೆಗಳ ಬಗ್ಗೆ ಜಾಗೃತಿ ಮೂಡಿಸಲು 'ಸಂಪರ್ಕ್ ಫಾರ್ ಸಮರ್ಥನ್' ಅಭಿಯಾನದ ಸಂದರ್ಭದಲ್ಲಿ ಎಂಎಸ್ ಧೋನಿ ಅವರನ್ನು ಸಂಪರ್ಕಿಸಿದ್ದರು. ಆಗ ಎಂಎಸ್ ಧೋನಿ ಬಿಜೆಪಿ ಸೇರುತ್ತಾರೆ ಎಂದು ದೊಡ್ಡ ಸುದ್ದಿ ಹಬ್ಬಿತ್ತು.
ರಾಜಕೀಯ ಪ್ರವೇಶಿಸಿದ ಕ್ರಿಕೆಟಿಗರು
ಅನೇಕ ಕ್ರಿಕೆಟಿಗರು ತಮ್ಮ ನಿವೃತ್ತಿಯ ಬಳಿಕ ರಾಜಕೀಯ ರಂಗ ಪ್ರವೇಶಿಸಿದ ಉದಾಹರಣೆಗಳು ನಮ್ಮ ಮುಂದಿವೆ. ಗೌತಮ್ ಗಂಭೀರ್, ಮನೋಜ್ ತಿವಾರಿ, ಮೊಹಮ್ಮದ್ ಕೈಫ್, ಅಜರುದ್ದೀನ್ ಮತ್ತು ಅಂಬಟಿ ರಾಯುಡು ಸೇರಿ ಅನೇಕ ಕ್ರಿಕೆಟಿಗರು ರಾಜಕೀಯ ಪ್ರವೇಶಿಸಿ ಉತ್ತಮ ಸಾಧನೆ ಮಾಡಿದ್ದಾರೆ.
