ಏಕದಿನ ಕ್ರಿಕೆಟ್​ನಲ್ಲಿ 346 ರನ್ ಬಾರಿಸಿದ 14 ವರ್ಷದ ಆಟಗಾರ್ತಿ; ಬೌಂಡರಿ-ಸಿಕ್ಸರ್​ಗಳಿಂದಲೇ 264 ರನ್, ವಿಶ್ವದಾಖಲೆ, VIDEO
ಕನ್ನಡ ಸುದ್ದಿ  /  ಕ್ರಿಕೆಟ್  /  ಏಕದಿನ ಕ್ರಿಕೆಟ್​ನಲ್ಲಿ 346 ರನ್ ಬಾರಿಸಿದ 14 ವರ್ಷದ ಆಟಗಾರ್ತಿ; ಬೌಂಡರಿ-ಸಿಕ್ಸರ್​ಗಳಿಂದಲೇ 264 ರನ್, ವಿಶ್ವದಾಖಲೆ, Video

ಏಕದಿನ ಕ್ರಿಕೆಟ್​ನಲ್ಲಿ 346 ರನ್ ಬಾರಿಸಿದ 14 ವರ್ಷದ ಆಟಗಾರ್ತಿ; ಬೌಂಡರಿ-ಸಿಕ್ಸರ್​ಗಳಿಂದಲೇ 264 ರನ್, ವಿಶ್ವದಾಖಲೆ, VIDEO

Ira Jadhav: ಮುಂಬೈ ಕ್ರಿಕೆಟ್‌ನಲ್ಲಿ ಉದಯೋನ್ಮುಖ ಆಟಗಾರ್ತಿ ಇರಾ ಜಾಧವ್ ಕೇವಲ 157 ಎಸೆತಗಳಲ್ಲಿ ಅಜೇಯ 346 ರನ್ ಗಳಿಸುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.

ಏಕದಿನ ಕ್ರಿಕೆಟ್​ನಲ್ಲಿ 346 ರನ್ ಬಾರಿಸಿದ 14 ವರ್ಷದ ಆಟಗಾರ್ತಿ; ಬೌಂಡರಿ-ಸಿಕ್ಸರ್​ಗಳಿಂದಲೇ 264 ರನ್, ವಿಶ್ವದಾಖಲೆ
ಏಕದಿನ ಕ್ರಿಕೆಟ್​ನಲ್ಲಿ 346 ರನ್ ಬಾರಿಸಿದ 14 ವರ್ಷದ ಆಟಗಾರ್ತಿ; ಬೌಂಡರಿ-ಸಿಕ್ಸರ್​ಗಳಿಂದಲೇ 264 ರನ್, ವಿಶ್ವದಾಖಲೆ

53 ವರ್ಷಗಳ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ದ್ವಿಶತಕ ಸಿಡಿಸಿದವರ ಸಂಖ್ಯೆ 14 (ಪುರುಷರು-ಮಹಿಳೆಯರು). ಡಬಲ್ ಸೆಂಚುರಿ ಬಾರಿಸುವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸು. ಆದರೆ ಈ ಸಾಧನೆ ಮಾಡಿದವರ ಸಂಖ್ಯೆ ಬೆರಳೆಣಿಕೆ ಮಾತ್ರ. ಆದರೆ, ಇಲ್ಲೊಬ್ಬ ಯುವತಿ ಏಕದಿನ ಕ್ರಿಕೆಟ್​​ನಲ್ಲಿ ತ್ರಿಶತಕವನ್ನೇ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಹೆಸರು ಇರಾ ಜಾಧವ್ (Ira Jadhav). ವಯಸ್ಸು 14 ವರ್ಷ. ಹೌದು, ಈಕೆಯೇ ಭಾರತದ ದೇಶೀಯ ಕ್ರಿಕೆಟ್​​ನಲ್ಲಿ ಜರುಗುತ್ತಿರುವ ಅಂಡರ್-19 ಮಹಿಳಾ ಏಕದಿನ ಕ್ರಿಕೆಟ್ ಟ್ರೋಫಿಯಲ್ಲಿ (U19 ODI Cricket Trophy) ಐತಿಹಾಸಿಕ ದಾಖಲೆ ನಿರ್ಮಿಸಿರೋದು.

346 ರನ್ ಬಾರಿಸಿದ ಇರಾ ಜಾಧವ್

ಮುಂಬೈನ ಯುವ ಆಟಗಾರ್ತಿ ಇರಾ ಜಾಧವ್ ಏಕದಿನ ಕ್ರಿಕೆಟ್​​ನಲ್ಲಿ ತ್ರಿಶತಕ ಬಾರಿಸಿದ ಭಾರತೀಯ ಬ್ಯಾಟರ್ ಎನ್ನುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಭಾನುವಾರ (ಜನವರಿ 12) ನಡೆದ ಅಂಡರ್-19 ಮಹಿಳೆಯರ ಏಕದಿನ ಟ್ರೋಫಿಯಲ್ಲಿ ಬೆಂಗಳೂರಿನ ಆಲೂರ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ತಂಡ ಪ್ರತಿನಿಧಿಸಿದ ಜಾಧವ್, 157 ಎಸೆತಗಳಲ್ಲೇ ಅಜೇಯ 346 ರನ್ ಗಳಿಸಿ ಕ್ರಿಕೆಟ್ ಅಭಿಮಾನಿಗಳನ್ನು ದಂಗುಬಡಿಸಿದ್ದಾರೆ. ತಮ್ಮ ಮ್ಯಾರಥಾನ್ ಇನ್ನಿಂಗ್ಸ್​​ನಲ್ಲಿ 42 ಬೌಂಡರಿ, 16 ಸಿಕ್ಸರ್ ಬಾರಿಸಿ ಮೇಘಾಲಯದ ಬೌಲಿಂಗ್​ ದಾಳಿಯನ್ನು ಹೊಡೆದುರುಳಿಸಿದರು.

ಜಾಧವ್ ಅಬ್ಬರದ ಆಟದ ನೆರವಿನಿಂದ ಮುಂಬೈ 50 ಓವರ್​​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 563 ರನ್​​ಗಳ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಯಿತು. ಅಂತಾರಾಷ್ಟ್ರೀಯ ಪುರುಷ-ಮಹಿಳಾ ಏಕದಿನ ಕ್ರಿಕೆಟ್ ಮತ್ತು ವಿಶ್ವದ ಲಿಸ್ಟ್​ ಎ ಕ್ರಿಕೆಟ್​​ನಲ್ಲಿ ಯಾವುದೇ ತಂಡವು ಇಷ್ಟು ಸ್ಕೋರ್ ದಾಖಲಿಸಿದ ಇತಿಹಾಸ ಇಲ್ಲ. ಪುರುಷರ ಕ್ರಿಕೆಟ್​ನಲ್ಲಿ ತಮಿಳುನಾಡು 506 ರನ್ ಗಳಿಸಿದ್ದು ಬೃಹತ್ ಮೊತ್ತವಾಗಿದೆ. ಈ ಸಾಧನೆಯೊಂದಿಗೆ ಸ್ಮೃತಿ ಮಂಧಾನ ಅವರ ಅತ್ಯಧಿಕ ಅಂಡರ್-19 ಸ್ಕೋರ್‌ ದಾಖಲೆಯನ್ನೂ ಜಾಧವ್ ಮುರಿದಿದ್ದಾರೆ.

ಸ್ಮೃತಿ ಮಂಧಾನ ದಾಖಲೆ ಬ್ರೇಕ್

ಇರಾ ಜಾಧವ್​ಗಿಂತ ಮೊದಲು ಅಂಡರ್​​-19 ಏಕದಿನ ಟ್ರೋಫಿಯಲ್ಲಿ ಭಾರತದ ಪರ ವೈಯಕ್ತಿಕ ಗರಿಷ್ಠ ಸ್ಕೋರ್ ಸಿಡಿಸಿದ್ದ ದಾಖಲೆ ಸ್ಮೃತಿ ಮಂಧಾನ ಹೆಸರಿನಲ್ಲಿತ್ತು. ಮಂಧಾನ 224 ರನ್‌ಗಳ ಅಜೇಯ ಇನ್ನಿಂಗ್ಸ್‌ ಕಟ್ಟಿದ್ದರು. ಇದೀಗ ಟ್ರಿಪಲ್ ಸೆಂಚುರಿ ಬಾರಿಸಿದ ಜಾಧವ್ ಅವರು ಮಂಧಾನ ಅವರ ದಾಖಲೆಯನ್ನು ಪುಡಿಗಟ್ಟಿದ್ದಾರೆ. ಅವರಲ್ಲದೆ ಜೆಮಿಮಾ ರೋಡ್ರಿಗಸ್, ರಾಘವಿ ಬಿಸ್ಟ್​, ಸಾನಿಕಾ ಚಲ್ಕೆ ಅವರೂ ಅಂಡರ್-19 ಏಕದಿನದಲ್ಲಿ ಡಬಲ್ ಸೆಂಚುರಿ ಬಾರಿಸಿದ್ದಾರೆ.

8ನೇ ವಯಸ್ಸಿನಿಂದಲೇ ಕ್ರಿಕೆಟ್​ ಆಡುವುದನ್ನು ಪ್ರಾರಂಭಿಸಿದ ಜಾಧವ್, ಮಹಿಳಾ ಪ್ರೀಮಿಯರ್ ಲೀಗ್ (WPL) 2025ರ ಹರಾಜಿನಲ್ಲಿ ಅತ್ಯಂತ ಕಿರಿಯ ಆಟಗಾರ್ತಿಯಾಗಿ ಪ್ರವೇಶಿಸಿದರೂ ಖರೀದಿಯಾಗಲಿಲ್ಲ. ಭಾರತದ ಸ್ಟಾರ್​ ಆಟಗಾರ್ತಿ ಜೆಮಿಮಾ ರಾಡ್ರಿಗಸ್​​ ಅವರು ಇರಾ ಜಾಧವ್​​ಗೆ ಸ್ಫೂರ್ತಿಯಂತೆ. ಭಾರತ ತಂಡದ ಜೆರ್ಸಿ ಧರಿಸುವ ಕನಸು ಹೊಂದಿರುವ ಇರಾ, ವಿಶ್ವಕಪ್‌ನಲ್ಲಿ ರಾಷ್ಟ್ರವನ್ನು ಪ್ರತಿನಿಧಿಸುವ ಹಂಬಲವನ್ನು ಹೊಂದಿರುವುದಾಗಿ ತಿಳಿಸಿದ್ದಾರೆ.

Whats_app_banner