ಕ್ರಿಕೆಟ್ ತ್ಯಜಿಸಿ ಕೆನಡಾಗೆ ತೆರಳಲು ನಿರ್ಧರಿಸಿದ್ದ ಈ ಆಟಗಾರನಿಗೆ 5.25 ಕೋಟಿ! ಮೆಡಿಕಲ್ ಶಾಪ್​ನಲ್ಲಿ ಕೆಲಸ ಮಾಡುವ ತಂದೆಯ ಕನಸು ನನಸು!
ಕನ್ನಡ ಸುದ್ದಿ  /  ಕ್ರಿಕೆಟ್  /  ಕ್ರಿಕೆಟ್ ತ್ಯಜಿಸಿ ಕೆನಡಾಗೆ ತೆರಳಲು ನಿರ್ಧರಿಸಿದ್ದ ಈ ಆಟಗಾರನಿಗೆ 5.25 ಕೋಟಿ! ಮೆಡಿಕಲ್ ಶಾಪ್​ನಲ್ಲಿ ಕೆಲಸ ಮಾಡುವ ತಂದೆಯ ಕನಸು ನನಸು!

ಕ್ರಿಕೆಟ್ ತ್ಯಜಿಸಿ ಕೆನಡಾಗೆ ತೆರಳಲು ನಿರ್ಧರಿಸಿದ್ದ ಈ ಆಟಗಾರನಿಗೆ 5.25 ಕೋಟಿ! ಮೆಡಿಕಲ್ ಶಾಪ್​ನಲ್ಲಿ ಕೆಲಸ ಮಾಡುವ ತಂದೆಯ ಕನಸು ನನಸು!

Naman Dhir: ಭಾರತದ ಯುವ ಕ್ರಿಕೆಟಿಗ ನಮನ್ ಧೀರ್ ಅವರು ಕ್ರಿಕೆಟ್ ತ್ಯಜಿಸಿ ಕೆನಡಾಕ್ಕೆ ಹೋಗಲು ನಿರ್ಧಾರ ಕೈಗೊಂಡಿದ್ದರಂತೆ! ಆದರೀಗ ಆ ಕ್ರಿಕೆಟಿಗನಿಗೆ ಮುಂಬೈ ಇಂಡಿಯನ್ಸ್ 5.25 ಕೋಟಿ ರೂ ನೀಡಿ ಖರೀದಿಸಿದೆ.

ಕ್ರಿಕೆಟ್ ತ್ಯಜಿಸಿ ಕೆನಡಾಗೆ ತೆರಳಲು ನಿರ್ಧರಿಸಿದ್ದ ಈ ಕ್ರಿಕೆಟಿನಿಗೆ 5.25 ಕೋಟಿ! ಮೆಡಿಕಲ್ ಶಾಪ್​ನಲ್ಲಿ ಕೆಲಸ ಮಾಡುವ ತಂದೆಯ ಕನಸು ನನಸು!
ಕ್ರಿಕೆಟ್ ತ್ಯಜಿಸಿ ಕೆನಡಾಗೆ ತೆರಳಲು ನಿರ್ಧರಿಸಿದ್ದ ಈ ಕ್ರಿಕೆಟಿನಿಗೆ 5.25 ಕೋಟಿ! ಮೆಡಿಕಲ್ ಶಾಪ್​ನಲ್ಲಿ ಕೆಲಸ ಮಾಡುವ ತಂದೆಯ ಕನಸು ನನಸು!

ಐಪಿಎಲ್ 2025 ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಅಳೆದು ತೂಗಿ ಆಟಗಾರರ ಮೇಲೆ ಬಿಡ್ ಸಲ್ಲಿಸಿತು. ಕಡಿಮೆ ಮತ್ತು ಅರ್ಹ ಬೆಲೆಗೆ ಸ್ಟಾರ್​​ ಕ್ರಿಕೆಟಿಗರು ಮತ್ತು ಯುವ ಆಟಗಾರರನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು. ರಿಟೈನ್ ಮಾಡಿಕೊಂಡಿದ್ದ ಐವರನ್ನು ಹೊರತುಪಡಿಸಿ ಹರಾಜಿನಲ್ಲಿ 20 ಆಟಗಾರರನ್ನು ಖರೀದಿಸಿತು. ಈ ಪೈಕಿ ನ್ಯೂಜಿಲೆಂಡ್ ವೇಗಿ ಟ್ರೆಂಟ್ ಬೋಲ್ಟ್ ಮತ್ತು ಟೀಮ್ ಇಂಡಿಯಾ ವೇಗಿ ದೀಪಕ್ ಚಹರ್​ ದುಬಾರಿ ಆಟಗಾರರಾಗಿದ್ದಾರೆ. ಬೌಲ್ಟ್ 12.50 ಕೋಟಿಗೆ ಫ್ರಾಂಚೈಸಿಯೊಂದಿಗೆ ಮತ್ತೆ ಸೇರಿದರೆ, ಚಹರ್ 9.25 ಕೋಟಿಗೆ 5 ಬಾರಿ ಚಾಂಪಿಯನ್ಸ್ ತಂಡದೊಂದಿಗೆ ಸೇರಿಕೊಂಡರು.

ಇದೇ ವೇಳೆ ವಿಲ್ ಜಾಕ್ಸ್ ಮತ್ತು ನಮನ್ ಧೀರ್ ಇಬ್ಬರೂ ತಲಾ 5.25 ಕೋಟಿಗೆ ಮುಂಬೈ ಸೇರಿದರು. ಜಾಕ್ಸ್ ಹೆಚ್ಚು ಪ್ರಸಿದ್ಧಿ ಪಡೆದರೂ ನಮನ್ ಕಥೆ ಆಕರ್ಷಿತವಾಗಿದೆ. 2024ರ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ಪರ 7 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ನಮನ್, ಅಜೇಯ 62 ರನ್ ಗಳಿಸಿದ್ದರು. ಒಟ್ಟು 140 ರನ್ ಬಾರಿಸಿದ್ದರು. 24 ವರ್ಷದ ಯುವ ಆಟಗಾರ, ಕ್ರಿಕೆಟ್ ಅನ್ನು ತ್ಯಜಿಸಲು ನಿರ್ಧರಿಸಿದ್ದರಂತೆ! ಅಂಡರ್-16 ಮಟ್ಟದಲ್ಲಿ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದರೂ ನಮನ್ ಪ್ರತಿಭೆ ತಕ್ಕ ಅವಕಾಶಗಳು ಸಿಗಲಿಲ್ಲ. 4 ವರ್ಷಗಳ ಕಾಲ ಅವಕಾಶಕ್ಕಾಗಿ ಕಾದರು. ಆದರೆ ಅದು ಸಾಧ್ಯವಾಗದಿದ್ದಾಗ ಮತ್ತು ತನ್ನ ವೃತ್ತಿಜೀವನ ಅತಂತ್ರ ಸ್ಥಿತಿಯಲ್ಲಿದ್ದಾಗ ನಮನ್ ಹತಾಶೆಯಿಂದ ಕೆನಡಾಕ್ಕೆ ಹೋಗಲು ನಿರ್ಧರಿಸಿ 2022ರಲ್ಲಿ ಶಾಶ್ವತ ನಿವಾಸಕ್ಕಾಗಿ ಅರ್ಜಿ ಸಲ್ಲಿಸಿದ್ದರಂತೆ!

ಕೆನಡಾಗೆ ಹೋಗಲು ನಿರ್ಧರಿಸಿದ್ದೆ!

ಈ ಬಗ್ಗೆ ಪ್ರತಿಕ್ರಿಯಿಸಿರುವ ನಮನ್, ಪಂಜಾಬ್​ನ ಬಹುತೇಕರು ಜನರು ಕೆನಡಾದಲ್ಲಿ ನೆಲೆಸಲು ಇಷ್ಟಪಡುತ್ತಾರೆ. ನಾನು ಕೂಡ ಅವರಲ್ಲಿ ಒಬ್ಬನಾಗಿದ್ದೆ. 2022ರಲ್ಲಿ ನಾನು ಕ್ರಿಕೆಟ್ ಅನ್ನು ಬಹುತೇಕ ತ್ಯಜಿಸಿದೆ. ನನ್ನ ಸಹೋದರಿ ಕೆನಡಾದ ಎಡ್ಮಂಟನ್​ನಲ್ಲಿ ವಾಸಿಸುತ್ತಿದ್ದಾರೆ. ನಾನು ಕೂಡ ಅಲ್ಲಿಗೆ ಹೋಗಲು ಯೋಜಿಸಿದ್ದೆ. ಆದರೆ ನನ್ನ ತಂದೆ (ನರೇಶ್ ಧೀರ್) ಕ್ರಿಕೆಟ್​ಗೆ ಇನ್ನೊಂದು ವರ್ಷ ಸಮಯ ನೀಡುವಂತೆ ಸಲಹೆ ನೀಡಿದ್ದರು. ನಿಮಗೆ ಒಂದು ವರ್ಷ ಕಾಲಾವಕಾಶ ನೀಡಿ ಎಂದು ನನ್ನ ತಂದೆ ಹೇಳಿದರು. 2022ರ ಡಿಸೆಂಬರ್​​ನಲ್ಲಿ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದೆ. 1 ವರ್ಷದ ನಂತರ 2023ರಲ್ಲಿ ಮುಂಬೈ ನನ್ನನ್ನು ಖರೀದಿಸಿತು ಎಂದು ನಮನ್ ಇಂಡಿಯನ್ ಎಕ್ಸ್​ಪ್ರೆಸ್​ಗೆ ತಿಳಿಸಿದ್ದಾರೆ.

ನನ್ನ ಕ್ರಿಕೆಟ್ ಜೀವನಕ್ಕಾಗಿ ನನ್ನ ತಂದೆ ಸಾಕಷ್ಟು ನಿಂದನೆಗಳನ್ನು ಎದುರಿಸಿದರು. ಆದರೆ ನನ್ನ ತಂದೆ ನನಗೆ ತುಂಬಾ ಸಹಾಯ ಮಾಡಿದರು. ನನಗಿಂತ ಉತ್ತಮ ನಿರ್ಧಾರ ತೆಗೆದುಕೊಂಡರು ಎಂದು ಹೇಳಿದ್ದಾರೆ. ನಮನ್ ಧೀರ್​ ಅವರ ನಂದೆ ನರೇಶ್ ಧೀರ್​ ಫರಿದ್ಕೋಟ್ ಜಿಲ್ಲೆಯ ಮೆಡಿಕಲ್ ಶಾಪ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಪ್ರತಿ ತಿಂಗಳ ಸಂಬಳ 10,000 ರೂಪಾಯಿ. ಇದೇ ಹಣದಲ್ಲಿ ಕುಟುಂಬ ಪೋಷಿಸುತ್ತಿದ್ದರು. ಇದರ ನಡುವೆ ಮಗ ಕ್ರಿಕೆಟಿಗನಾಗಬೇಕೆಂಬ ಕನಸು ಹೊತ್ತಿದ್ದರು. ನಮನ್ ಅವರ ಕ್ರಿಕೆಟ್ ಕನಸನ್ನು ನನಸು ಮಾಡುವಲ್ಲಿ ಅವರ ತಾಯಿಯ ಅಜ್ಜ ಮತ್ತು ಕೋಚ್ ಗಗನ್ ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ ಇಂದು ಇಬ್ಬರೂ ಅವರಿಬ್ಬರೂ ನಮ್ಮೊಂದಿಗಿಲ್ಲ.

ನಿಂದನೆಗಳು ಚಪ್ಪಾಳೆಗಳಾಗಿ ಬದಲಾಗಬೇಕು ಎಂದಿದ್ದೆ

ಮಗ ಐಪಿಎಲ್​ 5.25 ಕೋಟಿಗೆ ಖರೀದಿಯಾಗಿದ್ದರ ಬಗ್ಗೆ ಮಾತನಾಡಿದ ನರೇಶ್, ಸಂತಸ ವ್ಯಕ್ತಪಡಿಸಿದ್ದಾರೆ. ನಾನು ಅವನ ಶಾಲೆಗೆ ಹೋಗಿ ಅವನನ್ನು ಕ್ರಿಕೆಟ್ ಅಭ್ಯಾಸಕ್ಕೆಂದು ಕರೆದುಕೊಂಡು ಹೋಗುತ್ತಿದ್ದೆ. ಆಗ ಪ್ರಾಂಶುಪಾಲರು 'ಧೀರ್ ಸರ್, ನೀವು ನಿಮ್ಮ ಮಗನ ಭವಿಷ್ಯವನ್ನು ಹಾಳು ಮಾಡುತ್ತಿದ್ದೀರಿ ಎಂದಿದ್ದರು. ಫರೀದ್ಕೋಟ್​ನಿಂದ ಯಾರೊಬ್ಬರು ಸಹ ಪಂಜಾಬ್ ತಂಡವನ್ನು ಪ್ರತಿನಿಧಿಸಿಲ್ಲ. ಆದರೆ ಅವನನ್ನು ಕ್ರಿಕೆಟ್​​ಗೆ ಕರೆದುಕೊಂಡು ಹೋದಾಗಲೆಲ್ಲಾ, ಸಿಕ್ಕ ಸಿಕ್ಕವರೆಲ್ಲಾ ಏನಾದರೂ ಒಂದು ಹೇಳುತ್ತಿದ್ದರು. ಇದು ನಮನ್​ಗೆ ಬೇಸರ ತರಿಸುತ್ತಿತ್ತು. ಆಗ ಅವನಿಗೆ ಹೇಳಿದ್ದೆ, ನೀನು ಮೈದಾನದಲ್ಲಿ ಹೊಡೆಯುವಾಗ ಈ ನಿಂದನೆಗಳು ಚಪ್ಪಾಳೆಗಳಾಗಿ ಬದಲಾಗಬೇಕು ಎಂದು. ಇದೀಗ ಕನಸು ನನಸಾಗಿದೆ ಎಂದು ನರೇಶ್, ಈ ಹಿಂದಿನ ದಿನಗಳ ಬಗ್ಗೆ ಮಾತನಾಡುತ್ತಾ ನೆನಪಿಸಿಕೊಳ್ಳುತ್ತಾರೆ.

ಈ ವರ್ಷದ ಐಪಿಎಲ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದಿದ್ದ ನಮನ್, 28 ಎಸೆತಗಳಲ್ಲಿ 62 ರನ್ ಗಳಿಸಿದ್ದರು. ನಮನ್ ಸಿಕ್ಸರ್​ಗಳ ಸುರಿಮಳೆಗೈದಿದ್ದರು. ಆತನ ಹೋರಾಟದ ಹೊರತಾಗಿಯೂ ಮುಂಬೈ 18 ರನ್​ಗಳಿಂದ ಸೋಲು ಕಂಡಿತ್ತು. ಆದರೆ, ನಮನ್ ಆಟ ಎಲ್ಲರ ಮೆಚ್ಚುಗೆಗೆ ಕಾರಣವಾಯಿತು. ಬಿಡ್ಡಿಂಗ್ ವಾರ್​​ನಲ್ಲಿ ನಮನ್ ಖರೀದಿಗೆ ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಪೈಪೋಟಿ ನಡೆಸಿದವು. ಆದರೆ, ಕೊನೆಯಲ್ಲಿ ಬಿಡ್ಡಿಂಗ್​ವಾರ್​​ಗೆ ಧುಮುಕಿದ ಎಂಐ ನಮನ್ ಖರೀದಿಸುವಲ್ಲಿ ಯಶಸ್ವಿಯಾಯಿತು.

ಹೃದಯ ಬಡಿತ ಹೆಚ್ಚಾಗಿತ್ತು ಎಂದ ನಮನ್

ಹರಾಜಿನ ವೇಳೆ ನನ್ನ ಹೃದಯ ಬಡಿತ ಹೆಚ್ಚಾಗಿತ್ತು. ಕಳೆದ ವರ್ಷ ಎಂಐನೊಂದಿಗೆ ಉತ್ತಮ ಆವೃತ್ತಿಯನ್ನು ಹೊಂದಿದ್ದೆ. ನಾನು ಐಪಿಎಲ್ ಒಪ್ಪಂದವನ್ನು ಪಡೆಯುತ್ತೇನೆ ಎಂದು ನಾನು ಭಾವಿಸಿದ್ದೆ. ಆದರೆ ನಾನು ಇಷ್ಟು ಹಣವನ್ನು ಪಡೆಯುತ್ತೇನೆ ಎಂದು ಎಂದಿಗೂ ನನ್ನ ಮನಸ್ಸಿನಲ್ಲಿ ಇರಲಿಲ್ಲ ಎಂದು ನಮನ್ ಹೇಳಿದ್ದಾರೆ. ನಮನ್ ಪ್ರಸ್ತುತ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ರಾಜ್ಕೋಟ್ ಪರ ಆಡುತ್ತಿದ್ದಾರೆ. ಎರಡು ಪಂದ್ಯಗಳಲ್ಲಿ 12 ಮತ್ತು 13 ರನ್ ಗಳಿರುವ ನಮನ್, ಮುಂದಿನ ಪಂದ್ಯಗಳಲ್ಲಿ ಅಬ್ಬರಿಸುವ ನಿರೀಕ್ಷೆಯಿದೆ.

ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ನಮನ್ ಧೀರ್ ಪ್ರದರ್ಶನ

ಪಂದ್ಯ - 17

ರನ್ - 604

50/100 - 02/02

ಸರಾಸರಿ - 25.16

ಟಿ20 ಕ್ರಿಕೆಟ್​ನಲ್ಲಿ ನಮನ್ ಧೀರ್ ಪ್ರದರ್ಶನ (ಐಪಿಎಲ್ ಸೇರಿ)

ಪಂದ್ಯ - 15

ರನ್ - 243

50/100 - 01/00

ಸರಾಸರಿ - 18.69

Whats_app_banner