ಕಂಬ್ಯಾಕ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಡಕೌಟ್; ಫಾರ್ಮ್ ಸಮಸ್ಯೆಯಲ್ಲಿ ವಿಶ್ವದ ನಂಬರ್ 1 ಬ್ಯಾಟರ್‌
ಕನ್ನಡ ಸುದ್ದಿ  /  ಕ್ರಿಕೆಟ್  /  ಕಂಬ್ಯಾಕ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಡಕೌಟ್; ಫಾರ್ಮ್ ಸಮಸ್ಯೆಯಲ್ಲಿ ವಿಶ್ವದ ನಂಬರ್ 1 ಬ್ಯಾಟರ್‌

ಕಂಬ್ಯಾಕ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಡಕೌಟ್; ಫಾರ್ಮ್ ಸಮಸ್ಯೆಯಲ್ಲಿ ವಿಶ್ವದ ನಂಬರ್ 1 ಬ್ಯಾಟರ್‌

Suryakumar Yadav: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಕಂಬ್ಯಾಕ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಬ್ಯಾಟರ್ ಡಕ್ ಔಟ್ ಆಗಿ ನಿರಾಶೆ ಮೂಡಿಸಿದ್ದಾರೆ. ವಿಶ್ವದ ನಂಬರ್‌ ವನ್‌ ಟಿ20 ಬ್ಯಾಟರ್‌, ಕೇವಲ ಎರಡು ಎಸೆತ ಮಾತ್ರ ಎದುರಿಸಿದರು.

ಕಂಬ್ಯಾಕ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಡಕೌಟ್
ಕಂಬ್ಯಾಕ್ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಡಕೌಟ್ (IPL)

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್‌ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡುತ್ತಿದೆ. ಪಂದ್ಯದಲ್ಲಿ ವಿಶ್ವದ ನಂಬರ್‌ ವನ್‌ ಟಿ20 ಆಟಗಾರ ಸೂರ್ಯಕುಮಾರ್‌ ಯಾದವ್ ಡಕೌಟ್‌‌ ಆಗಿದ್ದಾರೆ. ಎದುರಿಸಿದ ಎರಡನೇ ಎಸೆತದಲ್ಲಿಯೇ, ಕ್ಯಾಚ್‌ ನೀಡಿದ ಸೂರ್ಯ, ಬಹುನಿರೀಕ್ಷಿತ ಕಮ್‌ಬ್ಯಾಕ್‌ ಪಂದ್ಯದಲ್ಲಿ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ದಾರೆ. ಸುದೀರ್ಘ ಅವಧಿ ಬಳಿಕ ಮೊದಲ ಪಂದ್ಯ ಆಡುತ್ತಿರುವ ಅವರು, ಫಾರ್ಮ್‌ ಕಂಡುಕೊಳ್ಳುವ ಒತ್ತಡದಲ್ಲಿದ್ದಾರೆ.

ಪ್ರಸಕ್ತ ಆವೃತ್ತಿಯಲ್ಲಿ ಮುಂಬೈ ತಂಡವು ಹ್ಯಾಟ್ರಿಕ್‌ ಸೋಲುಗಳೊಂದಿಗೆ ಕಂಗೆಟ್ಟಿದೆ. ಪಂದ್ಯಾವಳಿಯ ನಾಲ್ಕನೇ ಪಂದ್ಯದಲ್ಲಿ ತಂಡಕ್ಕೆ ಗೆಲುವು ಅನಿವಾರ್ಯವಾಗಿದೆ. ತಂಡದ ಆರಂಭಿಕ ಮೂರು ಪಂದ್ಯಗಳಿಂದ ಸೂರ್ಯಕುಮಾರ್ ಯಾದವ್‌ ಹೊರಗುಳಿದಿದ್ದರು. ಎನ್‌ಸಿಎ ಕಡೆಯಿಂದ ಫಿಟ್‌ನೆಸ್‌ ಟೆಸ್ಟ್‌ ಪಾಸ್‌ ಆದ ಬಳಿ ಇದೇ ಮೊದಲ ಬಾರಿ ಅವರು ಮೈದಾನಕ್ಕಿಳಿದಿದ್ದಾರೆ. ಆದರೆ, ಈ ವರ್ಷದ ಜನವರಿ ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಏಪ್ರಿಲ್‌ 7ರ ಭಾನುವಾರ ಮೈದಾನಕ್ಕಿಳಿದ ಸೂರ್ಯ ಭಾರಿ ನಿರಾಶೆ ಮೂಡಿಸಿದ್ದಾರೆ.

ವಾಂಖೆಡೆ ಕ್ರೀಡಾಂಗಣದಲ್ಲಿ ತಾವು ಎದುರಿಸಿದ ಎರಡನೇ ಎಸೆತದಲ್ಲಿಯೇ ಸುಲಭ ಕ್ಯಾಚ್ ನೀಡಿ ವಿಕೆಟ್‌ ಒಪ್ಪಿಸಿದರು. ರೋಹಿತ್‌ ಶರ್ಮಾ ಮೊದಲನೆಯವರಾಗಿ ಔಟಾದ ಬಳಿಕ, ಮೂರನೇ ಕ್ರಮಾಂಕದಲ್ಲಿ ಸೂರ್ಯ ಮೈದಾನಕ್ಕಿಳಿದರು. ಅನ್ರಿಚ್ ನಾರ್ಟ್ಜೆ ಎಸೆತವನ್ನು ಎದುರಿಸಿದ ಸೂರ್ಯಕುಮಾರ್‌, ದೊಡ್ಡ ಹೊಡೆತಕ್ಕೆ ಕೈ ಹಾಕಿದರು. ಗಾಳಿಯಲ್ಲಿ ಹಾರಿದ ಚೆಂಡು ನೇರವಾಗಿ ಜೇಕ್ ಫ್ರೇಸರ್-ಮೆಕ್ಗುರ್ಕ್ ಕೈಸೇರಿತು. ತಮ್ಮ ಎರಡೂ ಕೈಗಳನ್ನು ಮೇಲಕ್ಕೆತ್ತಿ ಅದ್ಭುತ ಕ್ಯಾಚ್‌ ಪಡೆದ ಫ್ರೇಸರ್, ತಂಡಕ್ಕೆ ಮೇಲುಗೈ ತಂದುಕೊಟ್ಟರು.

ಇದನ್ನೂ ಓದಿ | ವಿರಾಟ್ ಬಿಟ್ಟು ಟಾಪ್-5 ಬ್ಯಾಟರ್ಸ್ ಅಬ್ಬರಿಸ್ತಿಲ್ಲ; ನಮ್ಮವರಿಗೆ ಫಾರ್ಮ್ ಜತೆಗೆ ಆತ್ಮವಿಶ್ವಾಸ ಕೊರತೆ ಇದೆ ಎಂದ ಆರ್‌ಸಿಬಿ ಕೋಚ್

ಸೂರ್ಯಕುಮಾರ್ ಯಾದವ್ ಅವರು ಕೊನೆಯ ಬಾರಿಗೆ ಆಡಿದ್ದು, ಕಳೆದ ವರ್ಷದ ಡಿಸೆಂಬರ್‌ ತಿಂಗಳಲ್ಲಿ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಆಡಿದ್ದ ಸ್ಕೈ, ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ 56 ಎಸೆತಗಳಲ್ಲಿ 100 ರನ್ ಸಿಡಿಸಿದ್ದರು. ಆಗ ಪಾದದ ಗಾಯಕ್ಕೆ ತುತ್ತಾಗಿ, ತಂಡದಿಂದ ಹೊರಗುಳಿದರು.

ಗಾಯದಿಂದಾಗಿ ಪಾದ ಮತ್ತು ಸ್ಪೋರ್ಟ್ಸ್‌ ಹರ್ನಿಯಾ ಶಸ್ತ್ರಚಿಕಿತ್ಸೆಗೆ ಒಳಗಾದ ಸೂರ್ಯ, ಎನ್‌ಸಿಎನಲ್ಲಿ ಚೇತರಿಸಿಕೊಳ್ಳುತ್ತಿದ್ದರು. ಇದೀಗ ಐಪಿಎಲ್‌ನಲ್ಲಿ ಆಡುತ್ತಿರುವ ಅವರು, ಮುಂದೆ ಜೂನ್ 1ರಿಂದ ಆರಂಭವಾಗಲಿರುವ 2024ರ ಟಿ20 ವಿಶ್ವಕಪ್‌ ಪಂದ್ಯಾವಳಿಗೆ ಆಯ್ಕೆಯಾಗಲು ತಮ್ಮ ಫಾರ್ಮ್ ಉಳಿಸಿಕೊಳ್ಳಬೇಕಿದೆ. ಪ್ರಸ್ತುತ ಟಿ20 ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಅವರು, ಭಾರತ ವೈಟ್‌ ಬಾಲ್‌ ತಂಡದ ಪ್ರಮುಖ ಸದಸ್ಯರಾಗಿದ್ದಾರೆ.

ಡೆಲ್ಲಿ ವಿರುದ್ಧ ಮುಂಬೈ ಇಂಡಿಯನ್ಸ್ ಆಡುವ ಬಳಗ

ರೋಹಿತ್ ಶರ್ಮಾ, ಇಶಾನ್ ಕಿಶನ್ (ವಿಕೆಟ್‌ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಟಿಮ್ ಡೇವಿಡ್, ಮೊಹಮ್ಮದ್ ನಬಿ, ರೊಮಾರಿಯೊ ಶೆಫರ್ಡ್, ಪಿಯೂಷ್ ಚಾವ್ಲಾ, ಜೆರಾಲ್ಡ್ ಕೋಟ್ಜಿ, ಜಸ್ಪ್ರೀತ್ ಬುಮ್ರಾ.

ಡೆಲ್ಲಿ ಕ್ಯಾಪಿಟಲ್ಸ್ ತಂಡ

ಡೇವಿಡ್ ವಾರ್ನರ್, ಪೃಥ್ವಿ ಶಾ, ಅಭಿಷೇಕ್ ಪೊರೆಲ್, ರಿಷಬ್ ಪಂತ್ (ವಿಕೆಟ್‌ ಕೀಪರ್), ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್, ಲಲಿತ್ ಯಾದವ್,‌ ಜೇ ರಿಚರ್ಡ್ಸನ್, ಅನ್ರಿಚ್ ನಾರ್ಟ್ಜೆ, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್.

Whats_app_banner