ಡೆಲ್ಲಿ ಮಣಿಸಿದ ಮುಂಬೈ ಇಂಡಿಯನ್ಸ್ ಮುಡಿಗೆ 2ನೇ ಡಬ್ಲ್ಯುಪಿಎಲ್ ಕಿರೀಟ; ಸತತ 3ನೇ ಬಾರಿಗೆ ಕ್ಯಾಪಿಟಲ್ಸ್ ಕನಸು ಭಗ್ನ
ಕನ್ನಡ ಸುದ್ದಿ  /  ಕ್ರಿಕೆಟ್  /  ಡೆಲ್ಲಿ ಮಣಿಸಿದ ಮುಂಬೈ ಇಂಡಿಯನ್ಸ್ ಮುಡಿಗೆ 2ನೇ ಡಬ್ಲ್ಯುಪಿಎಲ್ ಕಿರೀಟ; ಸತತ 3ನೇ ಬಾರಿಗೆ ಕ್ಯಾಪಿಟಲ್ಸ್ ಕನಸು ಭಗ್ನ

ಡೆಲ್ಲಿ ಮಣಿಸಿದ ಮುಂಬೈ ಇಂಡಿಯನ್ಸ್ ಮುಡಿಗೆ 2ನೇ ಡಬ್ಲ್ಯುಪಿಎಲ್ ಕಿರೀಟ; ಸತತ 3ನೇ ಬಾರಿಗೆ ಕ್ಯಾಪಿಟಲ್ಸ್ ಕನಸು ಭಗ್ನ

Delhi Capitals vs Mumbai Indians: ಬ್ರಬೋರ್ನ್​ ಕ್ರಿಕೆಟ್ ಮೈದಾನದಲ್ಲಿ ನಡೆದ​ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದ ಮುಂಬೈ ಇಂಡಿಯನ್ಸ್ 2ನೇ ಡಬ್ಲ್ಯುಪಿಎಲ್ ಟ್ರೋಫಿಗೆ ಮುತ್ತಿಕ್ಕಿದೆ.

ಮುಂಬೈ ಇಂಡಿಯನ್ಸ್ ಮುಡಿಗೆ 2ನೇ ಡಬ್ಲ್ಯುಪಿಎಲ್ ಕಿರೀಟ; ಸತತ ಮೂರನೇ ಬಾರಿಗೆ ಡೆಲ್ಲಿ ಕನಸು ಭಗ್ನ
ಮುಂಬೈ ಇಂಡಿಯನ್ಸ್ ಮುಡಿಗೆ 2ನೇ ಡಬ್ಲ್ಯುಪಿಎಲ್ ಕಿರೀಟ; ಸತತ ಮೂರನೇ ಬಾರಿಗೆ ಡೆಲ್ಲಿ ಕನಸು ಭಗ್ನ (PTI)

ಮೂರನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್​​ನಲ್ಲೂ ಮುಂಬೈ ಇಂಡಿಯನ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದು ಹರ್ಮನ್ ಪಡೆಗೆ ದೊರೆತ 2ನೇ ಟ್ರೋಫಿ. ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 8 ರನ್​ಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ ಮುಂಬೈ ಬ್ರಿಗೇಡ್, 2023ರ ನಂತರ ಮತ್ತೊಂದು ಕಿರೀಟ ಧರಿಸಿದೆ. ಆದರೆ ಸತತ 3ನೇ ಬಾರಿಯೂ (2023, 2024, 2025) ಫೈನಲ್​ನಲ್ಲಿ ಮುಗ್ಗರಿಸಿದ ಡೆಲ್ಲಿಗೆ ಚೊಚ್ಚಲ ಪ್ರಶಸ್ತಿಯ ಕನಸು ಮತ್ತೆ ಮರೀಚಿಕೆಯಾಯಿತು. ಇದು ಮುಂಬೈ ವಿರುದ್ಧ ಆಡಿದ 2ನೇ ಪ್ರಶಸ್ತಿ ಸುತ್ತಿನ (2023, 2025) ಪಂದ್ಯವಾಗಿದ್ದು, ಎರಡರಲ್ಲೂ ಶರಣಾಗಿದೆ.

ನಾಯಕಿ ಹರ್ಮನ್​ಪ್ರೀತ್ ಕೌರ್​ (66) ಅವರ ಸಿಡಿಲಬ್ಬರದ ಬ್ಯಾಟಿಂಗ್, ನ್ಯಾಟ್ ಸೀವರ್ ಬ್ರಂಟ್ (30ಕ್ಕೆ 3) ಮತ್ತು ಅಮೆಲಿಯಾ ಕೇರ್ (25ಕ್ಕೆ 2)​ ಅವರ ಭರ್ಜರಿ ಬೌಲಿಂಗ್​ ಸಹಾಯದಿಂದ ಮುಂಬೈಗೆ ಈ ಗೆಲುವು ಸಾಧ್ಯವಾಯಿತು. ಮುಂಬೈನ ಬ್ರಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಫೈನಲ್​ ಫೈಟ್​ನಲ್ಲಿ ಟಾಸ್ ಸೋತು ಮುಂಬೈ ಮೊದಲು ಬ್ಯಾಟಿಂಗ್ ನಡೆಸಿತು. ಹರ್ಮನ್​ ಸಿಡಿಸಿದ ಅದ್ಭುತ ಅರ್ಧಶತಕದ ನೆರವಿನಿಂದ 20 ಓವರ್​​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿ 8 ರನ್​ಗಳಿಂದ ಸೋತು ಟ್ರೋಫಿ ಕೈಚೆಲ್ಲಿತು.

ಹರ್ಮನ್ ಆರ್ಭಟಕ್ಕೆ ಡೆಲ್ಲಿ ತತ್ತರ

ಬ್ಯಾಟಿಂಗ್ ಆರಂಭಿಸಿದ ಮುಂಬೈ ಅತ್ಯಂತ ಕೆಟ್ಟ ಆರಂಭ ಪಡೆಯಿತು. ಡೆಲ್ಲಿ ಬೌಲರ್ಸ್​ ಟೈಟ್ ಬೌಲಿಂಗ್​ಗೆ ಬೆದರಿದ ಎಂಐ ಪವರ್​ಪ್ಲೇನಲ್ಲೇ ಆರಂಭಿಕರನ್ನು ಕಳೆದುಕೊಂಡಿತು. ಅದು ಕೂಡ ಕೇವಲ 20 ರನ್​ಗೆ. ಹೀಲಿ ಮ್ಯಾಥ್ಯೂಸ್ (3), ಯಾಸ್ತಿಕಾ ಭಾಟಿಯಾ (8) ನಿರಾಸೆ ಮೂಡಿಸಿದ ನಂತರ ಜೊತೆಯಾದ ನ್ಯಾಟ್ ಸೀವರ್​ ಬ್ರಂಟ್ ಮತ್ತು ನಾಯಕಿ ಹರ್ಮನ್​ಪ್ರೀತ್ ಕೌರ್​ ರಕ್ಷಣಾತ್ಮಕ ಆಟಕ್ಕೆ ಒತ್ತುಕೊಟ್ಟರು. ವಿಕೆಟ್ ಕಾಪಾಡಿದ ಈ ಜೋಡಿ, 3ನೇ ವಿಕೆಟ್​​​ಗೆ ಜೊತೆಯಾಟ ಜೋಡಿಸಿದ್ದು 89 ರನ್. ಅದರಲ್ಲೂ ಹರ್ಮನ್ ಆಟ ನಿಜಕ್ಕೂ ಅದ್ಭುತವಾಗಿತ್ತು. ಮಾರಕ ಬೌಲಿಂಗ್ ನಡುವೆಯೂ ಸಂಕಷ್ಟಕ್ಕೆ ಸಿಲುಕಿದ್ದ ತಂಡವನ್ನು ಸುಸ್ಥಿತಿಗೆ ತಂದು ನಿಲ್ಲಿಸಿ ಬ್ಯಾಟಿಂಗ್ ಗೇರ್​ ಬದಲಿಸಿದರು.

ಆರಂಭದಲ್ಲಿ ಮೇಲುಗೈ ಸಾಧಿಸಿದ್ದ ಡೆಲ್ಲಿ ಬೌಲರ್ಸ್, ಹರ್ಮನ್​ ಆರ್ಭಟಕ್ಕೆ ಪವರ್​ಪ್ಲೇ ನಂತರ ಹಳಿ ತಪ್ಪಿದರು. ಅಲ್ಪಮೊತ್ತಕ್ಕೆ ಕುಸಿಯುವ ಭೀತಿಗೆ ಸಿಲುಕಿದ್ದ ತಂಡಕ್ಕೆ ನೆರವಾದ ಹರ್ಮನ್, 44 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ ಸಹಿತ 66 ರನ್ ಸಿಡಿಸಿ ತಂಡ ಉತ್ತಮ ಮೊತ್ತ ಕಲೆ ಹಾಕಲು ಕಾರಣರಾದರು. ನ್ಯಾಟ್ ಸೀವರ್ 30 ರನ್​ಗಳ ಅಮೋಘ ಕಾಣಿಕೆ ನೀಡಿದರು. ಆದರೆ ಉಳಿದವರು ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲಿಲ್ಲ. ಅಮೆಲಿಯಾ ಕೇರ್ (2), ಸಜೀವನ್ ಸಜನಾ (0), ಜಿ ಕಮಲಿನಿ (10) ನಿರಾಸೆ ಮೂಡಿಸಿದರು. ಅಮನ್​ಜೋತ್ ಕೌರ್ 14, ಸಂಸ್ಕೃತಿ ಗುಪ್ತಾ 8 ರನ್ ಗಳಿಸಿ ಅಜೇಯರಾದರು. ಡೆಲ್ಲಿ ಪರ ಮಾರಿಜನ್ ಕಪ್, ಜೆಸ್ ಜೊನಾಸೆನ್ ಮತ್ತು ಎನ್ ಚರಣಿ ತಲಾ 2 ವಿಕೆಟ್ ಕಿತ್ತು ಮಿಂಚಿದರು.

ಡೆಲ್ಲಿ ಬ್ಯಾಟಿಂಗ್ ವೈಫಲ್ಯ

ಬೌಲಿಂಗ್​ನಲ್ಲಿ ಮಧ್ಯಮ ಓವರ್​​ಗಳಲ್ಲಿ ರನ್ ಲೀಕ್ ಮಾಡಿದರೂ ಉಳಿದಂತೆ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಮುಂಬೈ ತಂಡವನ್ನು 149ಕ್ಕೆ ಕಟ್ಟಿ ಹಾಕಿದರೂ ಈ ಗುರಿ ಬೆನ್ನಟ್ಟಲು ಡೆಲ್ಲಿ ವಿಫಲವಾಯಿತು. ಅದಕ್ಕೆ ಕಾರಣ ಡೆಲ್ಲಿ ಬ್ಯಾಟರ್​​ಗಳ ವೈಫಲ್ಯ. ಮೆಗ್ ಲ್ಯಾನಿಂಗ್ (13), ಶಫಾಲಿ ವರ್ಮಾ (4), ಜೆಸ್ ಜೊನಾಸೆನ್ (13), ಅನ್ನಾಬೆಲ್ ಸದರ್ಲ್ಯಾಂಡ್ (2), ಸಾರಾ ಬೈರ್ಸಿ (5) ಬೇಗನೇ ನಿರ್ಗಮಿಸಿದರು. ಇದು ಮುಂಬೈ ತಂಡದ ಮೇಲೆ ಹಿಡಿತ ಸಾಧಿಸಲು ನೆರವಾಯಿತು. ಇದರ ನಡುವೆಯೂ ಜೆಮಿಮಾ ರೋಡ್ರಿಗಸ್ (30), ಮಾರಿಜನ್ ಕಪ್ (40), ನಿಕ್ಕಿ ಪ್ರಸಾದ್ (25) ಹೋರಾಟದ ಹೊರತಾಗಿಯೂ ವಿರೋಚಿತ ಸೋಲಿಗೆ ಶರಣಾಯಿತು. ನ್ಯಾಟ್ ಸೀವರ್ 3, ಅಮೆಲಿಕಾ ಕೇರ್ 2 ವಿಕೆಟ್ ಪಡೆದು ಮಿಂಚಿದರು.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner