ಗುಜರಾತ್ ಜೈಂಟ್ಸ್ ಸೋಲಿಸಿ ಫೈನಲ್ಗೆ ಲಗ್ಗೆ ಇಟ್ಟ ಹರ್ಮನ್ ಪಡೆ; ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ಪ್ರಶಸ್ತಿ ಫೈಟ್
WPL 2025: ಮಹಿಳಾ ಪ್ರೀಮಿಯರ್ ಲೀಗ್ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು 47 ರನ್ನಿಂದ ಸೋಲಿಸಿದ ಮುಂಬೈ ಇಂಡಿಯನ್ಸ್ 2ನೇ ಬಾರಿಗೆ ಫೈನಲ್ ಪ್ರವೇಶಿಸಿದೆ.

ಬ್ಯಾಟಿಂಗ್ ಜೊತೆಗೆ ಬೌಲಿಂಗ್ನಲ್ಲೂ ಮಿಂಚಿದ ಹೀಲಿ ಮ್ಯಾಥ್ಯೂಸ್ ಆಲ್ರೌಂಡ್ ಆಟ, ನ್ಯಾಟ್ ಸೀವರ್ ಬ್ರಂಟ್ ಮತ್ತು ಹರ್ಮನ್ಪ್ರೀತ್ ಕೌರ್ ಆರ್ಭಟಕ್ಕೆ ನಲುಗಿದ ಗುಜರಾತ್ ಜೈಂಟ್ಸ್ ತಂಡದ ವಿರುದ್ಧದ ಮಹಿಳಾ ಪ್ರೀಮಿಯರ್ ಲೀಗ್ ಎಲಿಮಿನೇಟರ್ ಪಂದ್ಯದಲ್ಲಿ 47 ರನ್ನಿಂದ ಜಯಿಸಿದ ಮುಂಬೈ ಇಂಡಿಯನ್ಸ್ 2ನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಮಾರ್ಚ್ 15ರಂದು ಶನಿವಾರ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮೆಗ್ ಲ್ಯಾನಿಂಗ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಉಭಯ ತಂಡಗಳು 2ನೇ ಬಾರಿಗೆ ಫೈನಲ್ನಲ್ಲಿ ಮುಖಾಮುಖಿಯಾಗುತ್ತಿವೆ. 2023ರ ಉದ್ಘಾಟನಾ ಆವೃತ್ತಿಯಲ್ಲಿ ಡಬ್ಲ್ಯುಪಿಎಲ್ ಫೈನಲ್ನಲ್ಲಿ ಡೆಲ್ಲಿ-ಮುಂಬೈ ತಂಡಗಳು ಮುಖಾಮುಖಿಯಾಗಿದ್ದವು. ಅಂದು ಗೆದ್ದು ಚೊಚ್ಚಲ ಚಾಂಪಿಯನ್ ಆಗಿತ್ತ ಮುಂಬೈ ಮತ್ತೊಂದು ಟ್ರೋಫಿ ನಿರೀಕ್ಷೆಯಲ್ಲಿದೆ.
ಮತ್ತೊಂದೆಡೆ ಚೊಚ್ಚಲ ಫೈನಲ್ ನಿರೀಕ್ಷೆಯಲ್ಲಿದ್ದ ಗುಜರಾತ್ ತನ್ನ ಕಳಪೆ ಫೀಲ್ಡಿಂಗ್, ಬೌಲಿಂಗ್ ಮತ್ತು ಬ್ಯಾಟಿಂಗ್ನಿಂದಾಗಿ ಭಾರಿ ಬೆಲೆ ತೆತ್ತಿತು. ಕ್ಯಾಚ್ ಡ್ರಾಪ್, ಕೆಲವೊಂದು ರನೌಟ್, ಮಿಸ್ ಫೀಲ್ಡಿಂಗ್ನಿಂದ ರನ್ ಲೀಕ್ ಮಾಡಿದ್ದು ಕೂಡ ತಂಡಕ್ಕೆ ದೊಡ್ಡ ಹಿನ್ನಡೆಯಾಯಿತು. ಇದರ ಲಾಭ ಪಡೆದ ಮುಂಬೈನ ಹೀಲಿ ಮ್ಯಾಥ್ಯೂಸ್ (77), ನ್ಯಾಟ್ ಸೀವರ್ ಬ್ರಂಟ್ (77) ಮತ್ತು ಹರ್ಮನ್ (36) ಅಬ್ಬರದ ಬ್ಯಾಟಿಂಗ್ ನಡೆಸಿದ ಪರಿಣಾಮ ಮುಂಬೈ, 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಸ್ಕೋರ್ ಬೋರ್ಡ್ನಲ್ಲಿ 213 ರನ್ಗಳ ಬೃಹತ್ ಮೊತ್ತವನ್ನು ಪೇರಿಸಿತು. ಈ ಗುರಿ ಬೆನ್ನಟ್ಟಿದ ಗುಜರಾತ್ಗೆ ಬ್ಯಾಟಿಂಗ್ನಲ್ಲಿ ಕಾಡಿದ್ದ ಮುಂಬೈ ಬೌಲಿಂಗ್ನಲ್ಲಿ ಕಾಡಿತು. ಡೇನಿಯಲ್ ಗಿಬ್ಸನ್ 34 ರನ್ ಗಳಿಸಿದ್ದೇ ಗುಜರಾತ್ ಪರ ಗರಿಷ್ಠ ಸ್ಕೋರರ್. ಮ್ಯಾಥ್ಯೂಸ್ 3 ವಿಕೆಟ್ ಕಿತ್ತು ಮಿಂಚಿದರು.
ಮ್ಯಾಥ್ಯೂಸ್-ಬ್ರಂಟ್ ದಾಖಲೆಯ ಜೊತೆಯಾಟ
ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಉತ್ತಮ ಆರಂಭ ಪಡೆಯಲಿಲ್ಲ. ಯಾಸ್ತಿಕಾ ಭಾಟಿಯಾ 15 ರನ್ ಗಳಿಸಿ ನಿರಾಸೆ ಮೂಡಿಸಿದರು. ಬಳಿಕ ಒಂದಾದ ಹೀಲಿ ಮ್ಯಾಥ್ಯೂಸ್ ಮತ್ತು ನ್ಯಾಟ್ ಸೀವರ್ ಬ್ರಂಟ್ ಗುಜರಾತ್ ಬೌಲರ್ಗಳ ದಂಡಯಾತ್ರೆ ನಡೆಸಿದರು. ಎರಡನೇ ವಿಕೆಟ್ಗೆ 133 ರನ್ಗಳ ದಾಖಲೆಯ ಜೊತೆಯಾಟವಾಡಿದರು. ಸತತ ವೈಫಲ್ಯ ಅನುಭವಿಸಿದ್ದ ಹೀಲಿ ಅವರು ಭರ್ಜರಿ ಅರ್ಧಶತಕ ಸಿಡಿಸಿ ಫೈನಲ್ಗೂ ಮುನ್ನ ಲಯಕ್ಕೆ ಮರಳಿ ತಂಡಕ್ಕೆ ಬಲ ತಂದರು. 50 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್ ಸಹಿತ 77 ರನ್ ಚಚ್ಚಿದ ವೆಸ್ಟ್ ಇಂಡೀಸ್ ಆಟಗಾರ್ತಿಯು ಕಾಶ್ವಿ ಗೌತಮ್ ಬೌಲಿಂಗ್ನಲ್ಲಿ ಔಟಾದರು. ಬಳಿಕ ಮತ್ತೊಂದು ಪ್ರಸಕ್ತ ಟೂರ್ನಿಯಲ್ಲಿ ಐದನೇ ಅರ್ಧಶತಕ ಚಚ್ಚಿದ ಬ್ರಂಟ್, 41 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್ ಸಹಿತ 77 ರನ್ ಬಾರಿಸಿದರು. ಕೊನೆಯಲ್ಲಿ ಹರ್ಮನ್ ಕೇವಲ 12 ಎಸೆತಗಳಲ್ಲಿ 36 ರನ್ ಬಾರಿಸಿದರು. ಅವರ ಇನ್ನಿಂಗ್ಸ್ನಲ್ಲಿ 4 ಸಿಕ್ಸರ್, 2 ಬೌಂಡರಿಗಳಿವೆ.
ಮ್ಯಾಥ್ಯೂಸ್-ಕೇರ್ ಮಿಂಚು, ಗುಜರಾತ್ ಬ್ಯಾಟಿಂಗ್ ವೈಫಲ್ಯ
ಚೊಚ್ಚಲ ಫೈನಲ್ ಪ್ರವೇಶಿಸುವ ಕನಸಿನಲ್ಲಿದ್ದ ಗುಜರಾತ್ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ ಹಿನ್ನೆಲೆ ಹೀನಾಯ ಸೋಲಿಗೆ ಶರಣಾಯಿತು. ಡೇನಿಯಲ್ ಗಿಬ್ಸನ್ 34 ರನ್ ಗಳಿಸಿದ್ದೇ ಗುಜರಾತ್ ಪರ ಗರಿಷ್ಠ ಸ್ಕೋರ್ ಆಗಿದೆ, ಇವರ ನಂತರ ಫೀಬಿ ಲಿಚ್ ಫೀಲ್ಡ್ 31 ರನ್, ಭಾರತಿ ಫುಲ್ಮಾಲಿ 30 ರನ್ ಗಳಿಸಿದ್ದಾರೆ. ಉಳಿದಂತೆ ಬೆತ್ ಮೂನಿ (6), ಹರ್ಲೀನ್ ಡಿಯೋಲ್ (8), ಆ್ಯಶ್ಲೆ ಗಾರ್ಡನರ್ (8), ಕಾಶ್ವಿ ಗೌತಮ್ (4) ತೀವ್ರ ನಿರಾಸೆ ಮೂಡಿಸಿದರು. ಹೀಲಿ ಮ್ಯಾಥ್ಯೂಸ್ 3.2 ಓವರ್ಗಳಲ್ಲಿ 31 ರನ್ ಬಿಟ್ಟುಕೊಟ್ಟು 3 ವಿಕೆಟ್ ಕಿತ್ತರು. ಅಮೆಲಿಯಾ ಕೇರ್ 4 ಓವರ್ಗಳಲ್ಲಿ 28 ರನ್ ಬಿಟ್ಟುಕೊಟ್ಟು 2 ವಿಕೆಟ್ ಪಡೆದರು. ಇವರ ಸ್ಪಿನ್ ದಾಳಿಗೆ ನಲುಗಿದ ಗುಜರಾತ್ 20 ಓವರ್ಗಳಲ್ಲಿ 166 ರನ್ಗೆ ಆಲೌಟ್ ಆಯಿತು. ಕಳೆದ ಎರಡು ಸೀಸನ್ಗಳಲ್ಲಿ 5ನೇ ಸ್ಥಾನದಲ್ಲಿ ಟೂರ್ನಿ ಮುಗಿಸಿದ್ದ ಜಿಜಿ, ಈ ಸಲ ಮೂರನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದೆ.
