ನ್ಯಾಟ್ ಸೀವರ್ ಬ್ರಂಟ್ ಅಬ್ಬರ, ಮುಂಬೈ ಇಂಡಿಯನ್ಸ್​ಗೆ 5 ವಿಕೆಟ್ ಜಯ; ಗುಜರಾತ್ ಜೈಂಟ್ಸ್ ಸೋಲಿಸಿ ಖಾತೆ ತೆರೆದ ಹರ್ಮನ್ ಪಡೆ
ಕನ್ನಡ ಸುದ್ದಿ  /  ಕ್ರಿಕೆಟ್  /  ನ್ಯಾಟ್ ಸೀವರ್ ಬ್ರಂಟ್ ಅಬ್ಬರ, ಮುಂಬೈ ಇಂಡಿಯನ್ಸ್​ಗೆ 5 ವಿಕೆಟ್ ಜಯ; ಗುಜರಾತ್ ಜೈಂಟ್ಸ್ ಸೋಲಿಸಿ ಖಾತೆ ತೆರೆದ ಹರ್ಮನ್ ಪಡೆ

ನ್ಯಾಟ್ ಸೀವರ್ ಬ್ರಂಟ್ ಅಬ್ಬರ, ಮುಂಬೈ ಇಂಡಿಯನ್ಸ್​ಗೆ 5 ವಿಕೆಟ್ ಜಯ; ಗುಜರಾತ್ ಜೈಂಟ್ಸ್ ಸೋಲಿಸಿ ಖಾತೆ ತೆರೆದ ಹರ್ಮನ್ ಪಡೆ

Gujarat Giants vs Mumbai Indians: ವಡೋದರಾದ ಕೋಟಂಬಿ ಕ್ರಿಕೆಟ್ ಮೈದಾನದಲ್ಲಿ ನಡೆದ ಡಬ್ಲ್ಯುಪಿಎಲ್ 5ನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಸೋಲಿಸಿದ ಮುಂಬೈ ಇಂಡಿಯನ್ಸ್ ಗೆಲುವಿನ ಖಾತೆ ತೆರೆದಿದೆ.

ನ್ಯಾಟ್ ಸೀವರ್ ಬ್ರಂಟ್ ಅಬ್ಬರ; ಗುಜರಾತ್ ಜೈಂಟ್ಸ್ ವಿರುದ್ಧ ಸುಲಭ ಗೆಲುವು ಸಾಧಿಸಿದ ಮುಂಬೈ ಇಂಡಿಯನ್ಸ್
ನ್ಯಾಟ್ ಸೀವರ್ ಬ್ರಂಟ್ ಅಬ್ಬರ; ಗುಜರಾತ್ ಜೈಂಟ್ಸ್ ವಿರುದ್ಧ ಸುಲಭ ಗೆಲುವು ಸಾಧಿಸಿದ ಮುಂಬೈ ಇಂಡಿಯನ್ಸ್

ಹೀಲಿ ಮ್ಯಾಥ್ಯೂಸ್ ಅವರ ಮಾರಕ ಬೌಲಿಂಗ್ ದಾಳಿ (16/3) ಮತ್ತು ನ್ಯಾಟ್ ಸೀವರ್ ಬ್ರಂಟ್​ (57 ರನ್, 26/2) ಅವರು ನೀಡಿದ ಆಲ್​ರೌಂಡ್ ಪ್ರದರ್ಶನದಿಂದ ಮುಂಬೈ ಇಂಡಿಯನ್ಸ್, ಡಬ್ಲ್ಯುಪಿಎಲ್​ನಲ್ಲಿ ಮೊದಲ ಗೆಲುವು ದಾಖಲಿಸಿತು. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೊನೆಯ ಎಸೆತದಲ್ಲಿ ಸೋಲನುಭವಿಸಿದ್ದ ಹರ್ಮನ್ ಪಡೆ, ಇದೀಗ ಗುಜರಾತ್ ಜೈಂಟ್ಸ್ ತಂಡವನ್ನು 8 ವಿಕೆಟ್​ಗಳಿಂದ ಮಣಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದೆ. ಆದರೆ ಆರಂಭಿಕ ಸೋಲಿನಿಂದ ಹೊರಬಂದು 2ನೇ ಪಂದ್ಯದಲ್ಲಿ ಗೆದ್ದಿದ್ದ ಗುಜರಾತ್, ಇದೀಗ ತನ್ನ 3ನೇ ಪಂದ್ಯದಲ್ಲಿ 5 ವಿಕೆಟ್​ಗಳಿಂದ ಸೋಲಿಗೆ ಶರಣಾಗಿದೆ.

ವಡೋದರಾದ ಕೋಟಂಬಿ ಕ್ರಿಕೆಟ್ ಮೈದಾನದಲ್ಲಿ ನಡೆದ 5ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್, ಮುಂಬೈ ಬೌಲರ್​​ಗಳ ದಾಳಿಗೆ ಅಕ್ಷರಶಃ ತತ್ತರಿಸಿತು. ಹರ್ಲೀನ್ ಡಿಯೋಲ್ 32 ರನ್ ಗಳಿಸಿದ್ದೇ ಜಿಜಿ ಪರ ಗರಿಷ್ಠ ಸ್ಕೋರ್. ಹೀಲಿ ಮ್ಯಾಥ್ಯೂಸ್ 16ಕ್ಕೆ 3 ವಿಕೆಟ್ ಪಡೆದರೆ, ಬ್ರಂಟ್, ಅಮೆಲಿಯಾ ಕೇರ್ ತಲಾ 2 ವಿಕೆಟ್ ಕಿತ್ತು ಎದುರಾಳಿ ತಂಡವನ್ನು ಅಲ್ಪ ಮೊತ್ತಕ್ಕೆ ಹಾಕುವಲ್ಲಿ ಯಶಸ್ವಿಯಾದರು. 20 ಓವರ್​ಗಳಲ್ಲಿ 120 ರನ್ ಗಳಿಸಿ ಆಲೌಟ್ ಆಯಿತು. ಈ ಗುರಿ ಬೆನ್ನಟ್ಟಿದ ಮುಂಬೈ 16.1 ಓವರ್​​ಗಳಲ್ಲೇ 122 ರನ್ ಗಳಿಸಿ ಚೇಸ್ ಮಾಡಿತು.

ಗುಜರಾತ್ ಕಳಪೆ ಪ್ರದರ್ಶನ

ಮೊದಲು ಬ್ಯಾಟಿಂಗ್ ಆರಂಭಿಸಿದ ಗುಜರಾತ್ ಮೂರನೇ ಪಂದ್ಯದಲ್ಲೂ ಕೆಟ್ಟ ಆರಂಭ ಪಡೆಯಿತು. ಅಲ್ಲದೆ, ಪವರ್​ ಪ್ಲೇನಲ್ಲೇ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬೆತ್ ಮೂನಿ (1) ಮತ್ತು ಲಾರಾ ವೋಲ್ವಾರ್ಡ್ (2), ದಯಾಲನ್ ಹೇಮಲತಾ (9) ಮತ್ತೆ ನಿರಾಸೆ ಮೂಡಿಸಿದರೆ, ಕಳೆದ ಎರಡು ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿದ್ದ ನಾಯಕಿ ಆ್ಯಶ್ಲೆ ಗಾರ್ಡ್ನರ್​ 10 ರನ್​ಗೆ ಆಟ ಮುಗಿಸಿದರು. ಪವರ್​ಪ್ಲೇ ಬಳಿಕವೂ ತಂಡವು ಚೇತರಿಸಿಕೊಳ್ಳಲಿಲ್ಲ. ಹರ್ಲೀನ್ ಡಿಯೋಲ್ 31 ಎಸೆತಗಳಲ್ಲಿ 4 ಬೌಂಡರಿ ಸಹಿತ 32 ರನ್ ಗಳಿಸಿ ತಂಡದ ಪರ ಗರಿಷ್ಠ ಸ್ಕೋರರ್ ಆಗಿದ್ದಾರೆ. ಡಿಯೆಂಡ್ರಾ ಡಾಟಿನ್ 7, ಕಾಶ್ವೀ ಗೌತಮ್ 20 ರನ್ ಸಿಡಿಸಿ ವೈಫಲ್ಯ ಅನುಭವಿಸಿದರು. ಕೊನೆಯಲ್ಲಿ ತನುಜಾ ಕನ್ವರ್ ಮತ್ತು ಸಯಾಲಿ ಸತ್ಘರೆ ತಲಾ 13 ರನ್​ಗಳ ಕಾಣಿಕೆ ನೀಡಿದರು. ಪರಿಣಾಮ ತಂಡದ ಮೊತ್ತ 100ರ ಗಡಿ ದಾಟಲು ನೆರವಾಯಿತು.

ನ್ಯಾಟ್ ಸೀವರ್ ಅಬ್ಬರ

121 ರನ್​ಗಳ ಗುರಿ ಬೆನ್ನಟ್ಟಿದ ಮುಂಬೈ, ಅಬ್ಬರದ ಬ್ಯಾಟಿಂಗ್ ನಡೆಸಿತು. ಯಾಸ್ತಿಕಾ ಭಾಟಿಯಾ (9), ಹೀಲಿ ಮ್ಯಾಥ್ಯೂಸ್ (17) ಬೇಗನೇ ಔಟಾದ ಬಳಿಕ ಕಣಕ್ಕಿಳಿದ ನ್ಯಾಟ್ ಸೀವರ್ ಬ್ರಂಟ್ ಅಬ್ಬರದ ಬ್ಯಾಟಿಂಗ್ ಮಾಡಿದರು. ಬೌಲಿಂಗ್​ನಲ್ಲಿ 2 ವಿಕೆಟ್ ಕಿತ್ತಿದ್ದ ನ್ಯಾಟ್ ಸೀವರ್ ಬ್ರಂಟ್ ಬ್ಯಾಟಿಂಗ್​ನಲ್ಲೂ ದರ್ಬಾರ್ ನಡೆಸಿದರು. ಗುಜರಾತ್ ಬೌಲರ್​​ಗಳ ಮೇಲೆ ದಂಡಯಾತ್ರೆ ನಡೆಸಿದರು. 39 ಎಸೆತಗಳಲ್ಲಿ 11 ಬೌಂಡರಿ ಸಹಿತ 57 ರನ್ ಸಿಡಿಸಿ ಗೆಲುವಿಗೆ 7 ರನ್ ಬೇಕಿದ್ದಾಗ ಔಟ್ ಆದರು. ಅಮೆಲಿಯಾ ಕೇರ್​ 19 ರನ್, ಸಜೀವನ್ ಸಜನಾ ಅಜೇಯ 10, ಜಿ ಕಮಲಿನಿ ಅಜೇಯ 4 ರನ್ ಗಳಿಸಿ ಗೆಲುವಿನ ದಡ ಸೇರಿಸಿದರು. ಗೆದ್ದ ಮುಂಬೈ ಅಂಕಪಟ್ಟಿಯಲ್ಲಿ 4ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಜಿಗಿದೆ. ಆದರೆ ಮೂರನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಗುಜರಾತ್ ಕುಸಿದಿದೆ.

Prasanna Kumar P N

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner