ಆಶುತೋಶ್ ಶರ್ಮಾ ವಿರೋಚಿತ ಹೋರಾಟಕ್ಕೆ ದಕ್ಕದ ಜಯ; ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದು ಬೀಗಿದ ಮುಂಬೈ ಇಂಡಿಯನ್ಸ್
Punjab Kings vs Mumbai Indians: 17ನೇ ಆವೃತ್ತಿಯ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 9 ರನ್ಗಳ ಅಂತರದಲ್ಲಿ ಗೆದ್ದು ಬೀಗಿದೆ. ಪಂಜಾಬ್ ಪರ ಆಶುತೋಷ್ ಹೋರಾಟ ನಡೆಸಿದರೂ ಜಯ ದಕ್ಕಲಿಲ್ಲ.
ಆಶುತೋಶ್ ಶರ್ಮಾ ಅವರ (61) ವಿರೋಚಿತ ಹೋರಾಟದ ನಡುವೆಯೂ ಪಂಜಾಬ್ ಕಿಂಗ್ಸ್ (Punjab Kings) ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಆರಂಭದಲ್ಲಿ ಹಿಡಿತ ಸಾಧಿಸಿ ನಂತರ ಸೋಲುವ ಭೀತಿಗೆ ಸಿಲುಕಿದ್ದ ಮುಂಬೈ ಇಂಡಿಯನ್ಸ್ (Mumbai Indians) ಕೊನೆಯ ಹಂತದಲ್ಲಿ ಮೇಲುಗೈ ಸಾಧಿಸಿ 9 ರನ್ಗಳ ಅಂತರದಿಂದ ಗೆದ್ದು ಬೀಗಿತು. ಬುಮ್ರಾ ಮತ್ತು ಜೆರಾಲ್ಡ್ ಕೊಯೆಟ್ಜಿ ಪಂಜಾಬ್ ಬ್ಯಾಟಿಂಗ್ ವಿಭಾಗವನ್ನು ಧೂಳಿಪಟಗೊಳಿಸಿ ಮುಂಬೈಗೆ 17ನೇ ಆವೃತ್ತಿಯಲ್ಲಿ ಮೂರನೇ ಗೆಲುವು ತಂದುಕೊಟ್ಟರು. ಪಂಜಾಬ್ಗೆ ಇದು 5ನೇ ಸೋಲು.
ಚಂಡೀಗಢದ ಮುಲ್ಲನ್ಪುರ್ದಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಇಂಡಿಯನ್ಸ್ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಸೂರ್ಯಕುಮಾರ್ ಯಾದವ್ (78) ಆರ್ಭಟಿಸಿದ ಕಾರಣ ಎಂಐ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಪಂಜಾಬ್, ಮುಂಬೈ ಬೌಲರ್ಗಳ ದಾಳಿಗೆ ತತ್ತರಿಸಿತು. ಆಶುತೋಶ್ ಶರ್ಮಾ ಮತ್ತು ಶಶಾಂಕ್ ಸಿಂಗ್ ಆರ್ಭಟದ ಫಲವಾಗಿಯೂ ಗೆಲುವು ದಕ್ಕಲಿಲ್ಲ.
ಆಶುತೋಶ್ ಶರ್ಮಾ ಹೋರಾಟ
193 ರನ್ಗಳ ಗುರಿ ಹಿಂಬಾಲಿಸಿದ ಪಂಜಾಬ್ ಕಿಂಗ್ಸ್, 2.1 ಓವರ್ಗಳಲ್ಲಿ 14 ರನ್ಗಳಿಸಿ ಪ್ರಮುಖ 4 ವಿಕೆಟ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಜಸ್ಪ್ರೀತ್ ಬುಮ್ರಾ ಮತ್ತು ಜೆರಾಲ್ಡ್ ಕೊಯೆಟ್ಜಿ ಪವರ್ ಪ್ಲೇನಲ್ಲೇ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಸ್ಯಾಮ್ ಕರಣ್ (6), ಪ್ರಭುಸಿಮ್ರಾನ್ ಸಿಂಗ್ (0), ರಿಲೀ ರೋಸೋ (1), ಲಿಯಾಮ್ ಲಿವಿಂಗ್ಸ್ಟನ್ (1) ನಿರಾಸೆ ಮೂಡಿಸಿದರು. ಹರ್ಪ್ರೀತ್ ಬ್ರಾರ್ 13 ರನ್ ಗಳಿಸಿದರೆ, ಜಿತೇಶ್ ಶರ್ಮಾ 9 ರನ್ಗೆ ಸುಸ್ತಾದರು. ಇದರೊಂದಿಗೆ ಪಿಬಿಕೆಎಸ್ 77ಕ್ಕೆ 6 ವಿಕೆಟ್ ಕಳೆದುಕೊಂಡಿತ್ತು.
ಆದರೆ, ಶಶಾಂಕ್ ಸಿಂಗ್ ಮತ್ತು ಆಶುತೋಶ್ ಜೋಡಿ ಮತ್ತೊಮ್ಮೆ ಮ್ಯಾಜಿಕ್ ನಡೆಸಿತು. ಮುಂಬೈ ಬಿಗಿ ಬೌಲಿಂಗ್ ದಾಳಿಯ ನಡುವೆಯೂ ಇಬ್ಬರು ಸಿಕ್ಸರ್-ಬೌಂಡರಿಗಳ ಸುರಿಮಳೆಗೈದರು. ಇದರ ನಡುವೆಯೂ ಶಶಾಂಕ್ (43 ರನ್, 25 ಎಸೆತ, 2 ಬೌಂಡರಿ, 3 ಸಿಕ್ಸರ್), ಬುಮ್ರಾ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಆದರೆ ಆಶುತೋಶ್ ಹೋರಾಟ ಮುಂದುವರೆಸಿ ಸೋಲುವ ಪಂದ್ಯವನ್ನೂ ಗೆಲ್ಲುವ ಹಂತಕ್ಕೆ ತಂದುಕೊಟ್ಟರು. ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಮುಂಬೈ ತಂಡಕ್ಕೆ ನಡುಕ ಹುಟ್ಟಿಸಿ ಚೊಚ್ಚಲ ಅರ್ಧಶತಕವನ್ನು ಪೂರೈಸಿದರು.
ಆದರೆ ವಿರೋಚಿತ ಹೋರಾಟ ನಡೆಸಿ ತಂಡಕ್ಕೆ ಬಹುತೇಕ ಗೆಲುವು ತಂದುಕೊಟ್ಟರು ಎನ್ನುವಷ್ಟರಲ್ಲಿ ಆಶುತೋಷ್ ವಿಕೆಟ್ ಒಪ್ಪಿಸಿದರು. ಜೆರಾಲ್ಡ್ ಕೊಯೆಟ್ಜಿ ಬೌಲಿಂಗ್ನಲ್ಲಿ ಔಟಾದರು. ಅವರು ಔಟಾದಾಗ ತಂಡಕ್ಕೆ 17 ಎಸೆತಗಳಲ್ಲಿ ಕೇವಲ 25 ರನ್ ಬೇಕಿತ್ತು. ಅಜಗಜಾಂತರ ರನ್ಗಳ ಅಂತರವನ್ನು ಕಡಿಮೆ ಅಂತರಕ್ಕೆ ತಗ್ಗಿಸುವಲ್ಲಿ ಯಶಸ್ಸು ಕಂಡರು. ಆದರೆ ಆತ ಔಟಾದ ಬಳಿಕ ಮುಂಬೈ ತಂಡದ ಮೇಲೆ ಹಿಡಿತ ಸಾಧಿಸಿತು. ಕೊನೆಯಲ್ಲಿ ಗೆದ್ದು ಬೀಗಿತು.
ಸೂರ್ಯಕುಮಾರ್ ಏಕಾಂಗಿ ಹೋರಾಟ
ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ, ಆರಂಭದಲ್ಲೇ ಇಶಾನ್ ಕಿಶನ್ (8) ವಿಕೆಟ್ ಕಳೆದುಕೊಂಡಿತು. ಬಳಿಕ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಎರಡನೇ ವಿಕೆಟ್ಗೆ 81 ರನ್ಗಳ ಜೊತೆಯಾಟವಾಡಿದರು. ಸೂರ್ಯನಿಗೆ ಸಾಥ್ ಕೊಡುತ್ತಿದ್ದ ರೋಹಿತ್ 36 ರನ್ ಗಳಿಸಿ (25 ಎಸೆತ, 2 ಬೌಂಡರಿ, 3 ಸಿಕ್ಸರ್) ಔಟಾದರು. ಇದೇ ವೇಳೆ ಸೂರ್ಯ ಪ್ರಸಕ್ತ ಐಪಿಎಲ್ನಲ್ಲಿ 2ನೇ ಅರ್ಧಶತಕ ಪೂರೈಸಿದರು.
ಅರ್ಧಶತಕದ ನಂತರ ಕೆಲಹೊತ್ತು ತಂಡಕ್ಕೆ ಆಸರೆಯಾದ ಸ್ಕೈ, 53 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ ಸಹಿತ 78 ರನ್ ಬಾರಿಸಿದರು. ತಿಲಕ್ ವರ್ಮಾ ಅಜೇಯ 34 ರನ್ ಸಿಡಿಸಿದರೆ, ಹಾರ್ದಿಕ್ ಪಾಂಡ್ಯ (10), ಟಿಮ್ ಡೇವಿಡ್ (14), ರೊಮಾರಿಯೊ ಶೆಫರ್ಡ್ (1), ಮೊಹಮ್ಮದ್ ನಬಿ (0) ನಿರಾಸೆ ಮೂಡಿಸಿದರು. ಹರ್ಷಲ್ ಪಟೇಲ್ ಮೂರು ವಿಕೆಟ್ ಉರುಳಿಸಿ ಮುಂಬೈ 200ರ ಗಡಿ ದಾಟದಂತೆ ನೋಡಿಕೊಂಡರು. ಸ್ಯಾಮ್ ಕರನ್ 2, ಕಗಿಸೋ ರಬಾಡ ಒಂದು ವಿಕೆಟ್ ಪಡೆದು ಸಾಥ್ ನೀಡಿದರು.