ಮುಂಬೈ ಇಂಡಿಯನ್ಸ್ ವಿರುದ್ಧ ಮೂರಕ್ಕೆ ಮೂರು ಸೋತ ಆರ್ಸಿಬಿ; ಬ್ಯಾಟಿಂಗ್ನಲ್ಲಿ ಮತ್ತೆ ವೈಫಲ್ಯ ಅನುಭವಿಸಿದ ಮಂಧಾನ ಪಡೆ
Royal Challengers Bangalore vs Mumbai Indians: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮುಂಬೈ ಇಂಡಿಯನ್ಸ್ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.

ಬ್ಯಾಟಿಂಗ್ ಮತ್ತು ಬೌಲಿಂಗ್ ಕಳಪೆ ಪ್ರದರ್ಶನ ತೋರಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಸಕ್ತ ಡಬ್ಲ್ಯುಪಿಎಲ್ ಟೂರ್ನಿಯಲ್ಲಿ ಸತತ ಎರಡನೇ ಸೋಲು ಕಂಡಿದೆ. ಅಲ್ಲದೆ, ಈವರೆಗೂ ಮುಂಬೈ ಇಂಡಿಯನ್ಸ್ ವಿರುದ್ಧ ಆಡಿದ ಮೂರನೇ (ಕಳೆದ ಸಲ 2 ಸೋಲು) ಪಂದ್ಯದಲ್ಲೂ ಪರಾಭವಗೊಂಡಿದೆ. ಬೆಂಗಳೂರು ಎದುರು ಅಜೇಯ ದಾಖಲೆ ಹೊಂದಿರುವ ಮುಂಬೈ ಚಿನ್ನಸ್ವಾಮಿ ಮೈದಾನದಲ್ಲಿ 7 ವಿಕೆಟ್ ಭರ್ಜರಿ ಗೆಲುವು ದಾಖಲಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ ಪರ ಘಟಾನುಘಟಿ ಆಟಗಾರ್ತಿಯರೇ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಮುಂಬೈ ಬೌಲಿಂಗ್ ಎದುರು ತತ್ತರಿಸಿದ್ದಲ್ಲದೆ, ರನ್ ಗಳಿಸಲು ಪರದಾಟ ನಡೆಸಿದರು. ಕಳೆದ ಪಂದ್ಯದ ಅರ್ಧಶತಕ ಸಿಡಿಸಿ ಫಾರ್ಮ್ನಲ್ಲಿ ಸ್ಮೃತಿ ಮಂಧಾನ 9 ರನ್ಗಳಿಗೆ ಹೊರ ನಡೆದರು. ಸ್ಫೋಟಕ ಆಟಗಾರ್ತಿ ಸೋಫಿ ಡಿವೈನ್ (9) ಈ ಪಂದ್ಯದಲ್ಲೂ ನಿರಾಸೆ ಮೂಡಿಸಿದರು. ಉತ್ತಮ ಲಯದಲ್ಲಿದ್ದ ಸಬ್ಬಿನೇನಿ ಮೇಘನಾ ಸಹ 11ಕ್ಕೆ ಸುಸ್ತಾದರು.
ಎಲಿಸ್ ಪೆರ್ರಿ ಹೋರಾಟ, ವೇರ್ಹ್ಯಾಮ್ ಸಾಥ್
ಅಗ್ರ ಕ್ರಮಾಂಕದ ಆಟಗಾರ್ತಿಯರು ಮಾತ್ರವಲ್ಲ, ಮಧ್ಯಮ ಕ್ರಮಾಂಕದಲ್ಲೂ ನಿರೀಕ್ಷಿತ ಪ್ರದರ್ಶನ ಹೊರ ಬಂದಿಲ್ಲ. ಆದರೆ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಎಲಿಸ್ ಪೆರ್ರಿ ಹೋರಾಟ ನಡೆಸಿದರು. ಅವರಿಗೆ ಜಾರ್ಜಿಯಾ ವೇರ್ಹ್ಯಾಮ್ ಅರ್ಧಶತಕದ ಸಾಥ್ ನೀಡಿದರು. ರಿಚಾ ಘೋಷ್ 7, ಸೋಫಿ ಮೊಲಿನಿಕ್ಸ್ 12 ರನ್ ಗಳಿಸಿದರು. ಮುಂಬೈ ಬೌಲರ್ಗಳನ್ನು ದಿಟ್ಟವಾಗಿ ಎದುರಿಸಿ ಪೆರ್ರಿ ಕೊನೆಯ ತನಕ ಕ್ರೀಸ್ನಲ್ಲಿದ್ದರು. ಆ ಮೂಲಕ ತಂಡವನ್ನು 100 ಗಡಿ ದಾಟಿಸಿದರು.
ಪೆರ್ರಿ 38 ಎಸೆತಗಳಲ್ಲಿ 5 ಬೌಂಡರಿ ಸಹಿತ 44 ರನ್ ಗಳಿಸಿದರೆ, ವೇರ್ಹ್ಯಾಮ್ 20 ಎಸೆತಗಳಲ್ಲಿ 3 ಬೌಂಡರಿ ಸಹಿತ 27 ರನ್ ಗಳಿಸಿದರು. ಇನ್ನು ಕೊನೆಯಲ್ಲಿ ಶ್ರೇಯಾಂಕಾ ಪಾಟೀಲ್ ಅಜೇಯ 7 ರನ್ ಗಳಿಸಿದರು. ಮುಂಬೈ ಪರ ನಟಾಲಿ ಸೀವರ್, ಪೂಜಾ ವಸ್ತ್ರಕರ್ ತಲಾ 2 ವಿಕೆಟ್ ಪಡೆದು ಆರ್ಸಿಬಿ ಓಟಕ್ಕೆ ಬ್ರೇಕ್ ಹಾಕಿದರು. ಅಂತಿಮವಾಗಿ ಆರ್ಸಿಬಿ 6 ವಿಕೆಟ್ ನಷ್ಟಕ್ಕೆ 131 ರನ್ ಕಲೆ ಹಾಕಿತು.
29 ಎಸೆತಗಳನ್ನು ಬಾಕಿ ಉಳಿಸಿದ ಮುಂಬೈ
132 ರನ್ಗಳ ಅಲ್ಪ ಗುರಿಯನ್ನು ಹಿಂಬಾಲಿಸಿದ ಮುಂಬೈ, ಭರ್ಜರಿ ಆರಂಭ ಪಡೆಯಿತು. ಮೊದಲ ಓವರ್ನಿಂದಲೇ ಬೌಂಡರಿ-ಸಿಕ್ಸರ್ಗಳ ಸುರಿಮಳೆಗೈದಿತು. ಯಾಸ್ತಿಕಾ ಭಾಟಿಯಾ ಬಿರುಸಿನ ಬ್ಯಾಟಿಂಗ್ ನಡೆಸಿದರು. ಕ್ರೀಸ್ನಲ್ಲಿದ್ದ ಕೆಲವೇ ಹೊತ್ತಲ್ಲಿ ಸ್ಕೋರ್ ಒಂದೇ ಸಮನೆ ಏರಿಸಿದರು. 15 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಿತ 31 ರನ್ ಚಚ್ಚಿದರು. ಮತ್ತೊಂದು ಎಂಡ್ನಲ್ಲಿದ್ದ ಹೀಲಿ ಮ್ಯಾಥ್ಯೂಸ್, 21 ಎಸೆತಗಳಲ್ಲಿ 3 ಎಸೆತಗಳಲ್ಲಿ 1 ಸಿಕ್ಸರ್ ಸಹಿತ 26 ರನ್ ಗಳಿಸಿದರು.
ಅದಾಗಲೇ ಮುಂಬೈ ಇಂಡಿಯನ್ಸ್ 7.4 ಓವರ್ಗಳಲ್ಲಿ 69ಕ್ಕೆ 2ಕ್ಕೆ ವಿಕೆಟ್ ಕಳೆದುಕೊಂಡಿತು. ಇನ್ನು ನಟಾಲಿ ಸೀವರ್ 25 ಎಸೆತಗಳಲ್ಲಿ 4 ಬೌಂಡರಿ ನೆರವಿನಿಂದ 27 ರನ್ ಕಲೆ ಹಾಕಿದರು. ಹಾಗೆಯೇ ಅಮೆಲಿಯಾ ಕೆರ್ ಸಹ ಅದ್ಭುತ ಬ್ಯಾಟಿಂಗ್ ನಡೆಸಿದರು. 24 ಎಸೆತಗಳಲ್ಲಿ 7 ಬೌಂಡರಿ ಸಹಿತ ಅಜೇಯ 40 ರನ್ ಗಳಿಸಿದರು. ಪೂಜಾ ವಸ್ತ್ರಕರ್ ಅಜೇಯ 8 ರನ್ ಕಲೆ ಹಾಕಿ ಅಜೇಯರಾಗಿ ಉಳಿದರು. ಇನ್ನೂ 29 ಎಸೆತಗಳು ಬಾಕಿ ಇರುವಂತೆಯೇ ಮುಂಬೈ ಗೆದ್ದು ಬೀಗಿತು.
