ಡೆಲ್ಲಿ ಕ್ಯಾಪಿಟಲ್ಸ್ ಮಣಿಸಿ 11ನೇ ಬಾರಿಗೆ ಐಪಿಎಲ್ ಪ್ಲೇಆಫ್ ಪ್ರವೇಶಿಸಿದ ಮುಂಬೈ ಇಂಡಿಯನ್ಸ್; ಡಿಸಿ ಕನಸು ಮತ್ತೆ ಭಗ್ನ
ಇಂಡಿಯನ್ ಪ್ರೀಮಿಯರ್ ಲೀಗ್ನ 63ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 59 ರನ್ಗಳ ಅಂತರದಿಂದ ಜಯಿಸಿದ ಮುಂಬೈ ಇಂಡಿಯನ್ಸ್ ಪ್ಲೇಆಫ್ಗೆ ಲಗ್ಗೆ ಇಟ್ಟಿದೆ.

ನಾಕೌಟ್ ಎಂದೇ ಹೇಳಲಾಗಿದ್ದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 59 ರನ್ಗಳ ಭರ್ಜರಿ ಗೆಲುವಿನೊಂದಿಗೆ 18ನೇ ಆವೃತ್ತಿಯ ಐಪಿಎಲ್ನಲ್ಲಿ ನಾಲ್ಕನೇ ತಂಡವಾಗಿ ಪ್ಲೇಆಫ್ಗೆ ಲಗ್ಗೆ ಇಟ್ಟಿದೆ. ಕಳೆದ ವರ್ಷ ನಾಯಕತ್ವ ಬದಲಾವಣೆ ಹಿನ್ನೆಲೆ ಭಾರೀ ಟೀಕೆಗೆ ಗುರಿಯಾಗಿದ್ದ ಮುಂಬೈ ಇದೀಗ ಆರನೇ ಟ್ರೋಫಿ ಲೋಡಿಂಗ್ನಲ್ಲಿ ಇಟ್ಟಿದೆ. ಐಪಿಎಲ್ ಇತಿಹಾಸದಲ್ಲಿ 11ನೇ ಸಲ ಪ್ಲೇಆಫ್ ಪ್ರವೇಶಿಸಿದಂತಾಗಿದೆ. ಪ್ರಸಕ್ತ ಆವೃತ್ತಿಯಲ್ಲಿ ಮುಂಬೈಗೂ ಮುನ್ನ ಗುಜರಾತ್ ಟೈಟಾನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಪ್ಲೇಆಫ್ಗೆ ಲಗ್ಗೆ ಇಟ್ಟಿದ್ದವು. ಆದರೆ ಈಗ ಡೆಲ್ಲಿ ಮತ್ತೊಮ್ಮೆ ಅಗ್ರ-4ರೊಳಗೆ ಪ್ರವೇಶಿಸಲು ವಿಫಲವಾಯಿತು. ಇದರೊಂದಿಗೆ ತನ್ನ ಚೊಚ್ಚಲ ಟ್ರೋಫಿ ಕನಸೂ ಭಗ್ನವಾಯಿತು.
ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ಜರುಗಿದ ಮೊದಲ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ತಂಡವು ಸೂರ್ಯಕುಮಾರ್ ಯಾದವ್ ಅವರ ಅಜೇಯ 73 ರನ್ಗಳ ಆರ್ಭಟದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿಗೆ ಹಾರ್ದಿಕ್ ಪಡೆ ಶಾಕ್ ನೀಡಿತು. ಮಿಚೆಲ್ ಸ್ಯಾಂಟ್ನರ್ ಮತ್ತು ಜಸ್ಪ್ರೀತ್ ಬುಮ್ರಾ ಅವರು ತಲಾ 3 ವಿಕೆಟ್ ಉರುಳಿಸಿ ಪಂದ್ಯದ ಚಿತ್ರಣವನ್ನೇ ಬದಲಿಸಿದರು. 18.2 ಓವರ್ಗಳಲ್ಲಿ 121 ರನ್ಗೆ ಡೆಲ್ಲಿ ಆಲೌಟ್ ಆಯಿತು. ಇದರೊಂದಿಗೆ 59 ರನ್ಗಳಿಂದ ಶರಣಾಯಿತು. ಈ ಪಂದ್ಯದೊಂದಿಗೆ ಐಪಿಎಲ್ ಪ್ಲೇಆಫ್ ತಂಡಗಳು ಮತ್ತು ಹೊರಬಿದ್ದ ತಂಡಗಳು ಸ್ಪಷ್ಟವಾಗಿವೆ. ಆದರೀಗ ಅಗ್ರ-2ರಲ್ಲಿ ಸ್ಥಾನ ಪಡೆಯಲು ಪ್ಲೇಆಫ್ ಪ್ರವೇಶಿಸಿದ ಎಲ್ಲಾ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ.
ಸೂರ್ಯಕುಮಾರ್ ಅಬ್ಬರ
ಮೊದಲು ಬ್ಯಾಟಿಂಗ್ ನಡೆಸಿದ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 7 ಓವರ್ಗಳಲ್ಲೇ 58 ರನ್ ಗಳಿಸಿ 3 ವಿಕೆಟ್ ನಷ್ಟವಾಗಿತ್ತು. ರೋಹಿತ್ ಶರ್ಮಾ (5), ರಿಯಾನ್ ರಿಕಲ್ಟನ್ (25) ಮತ್ತು ವಿಲ್ ಜಾಕ್ಸ್ (21) ಅಲ್ಪ ರನ್ಗಳ ಕಾಣಿಕೆಯೊಂದಿಗೆ ನಿರ್ಗಮಿಸಿದರು. ಈ ಹಂತದಲ್ಲಿ ಸೂರ್ಯಕುಮಾರ್ ಮಿಂಚಿದರು. ಇವರೊಂದಿಗೆ ತಿಲಕ್ ವರ್ಮಾ ಅದ್ಭುತ ಇನ್ನಿಂಗ್ಸ್ ಕಟ್ಟಿದರೂ 24 ರನ್ಗೆ ಆಟ ಮುಗಿಯಿತು. ಇದು ಸೂರ್ಯ ಜೊತೆಗೆ ಅರ್ಧಶತಕದ ಪಾಲುದಾರಿಕೆಗೆ ಕಾರಣವಾಯಿತು. ಬಳಿಕ ತಿಲಕ್ ಔಟಾದರೂ ಆರ್ಭಟ ನಿಲ್ಲಿಸದ ಸೂರ್ಯ, ನಮನ್ ಜೊತೆಗೂಡಿ ಮುರಿಯದ 6ನೇ ವಿಕೆಟ್ಗೆ ಅಜೇಯ 57 ರನ್ ಗಳಿಸಿತು. ಸ್ಕೈ 43 ಬಾಲ್ಗಳಲ್ಲಿ 7 ಬೌಂಡರಿ, 4 ಸಿಕ್ಸರ್ ಸಹಿತ 73 ರನ್ ಗಳಿಸಿದರು. ನಮನ್ ಧೀರ್ 8 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಸಹಿತ ಅಜೇಯ 24 ರನ್ ಗಳಿಸಿದರು.
ಇದನ್ನೂ ಓದಿ: ಆರ್ಆರ್-ಸಿಎಸ್ಕೆ 10 ಸೋಲು; ಇದು ಐಪಿಎಲ್ ಲೀಗ್ ಹಂತದಲ್ಲಿ ಹತ್ತು ಅಥವಾ ಅದಕ್ಕಿಂತ ಹೆಚ್ಚು ಪಂದ್ಯ ಸೋತ ತಂಡಗಳ ಪಟ್ಟಿ
ಡೆಲ್ಲಿ ಕಳಪೆ ಬ್ಯಾಟಿಂಗ್, ಬುಮ್ರಾ ಅಬ್ಬರ
181 ರನ್ಗಳ ಗುರಿ ಬೆನ್ನಟ್ಟಿದ ಡೆಲ್ಲಿ ನಿರಾಸೆ ಮೂಡಿಸಿತು. ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿತು. ಅಕ್ಷರ್ ಪಟೇಲ್ ಅಲಭ್ಯತೆಯಲ್ಲಿ ಫಾಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ಕಣಕ್ಕಿಳಿದ ಡೆಲ್ಲಿ ಕಳಪೆ ಆರಂಭ ಪಡೆಯಿತು. ಪವರ್ಪ್ಲೇನಲ್ಲಿ ಪ್ರಮುಖ 3 ವಿಕೆಟ್ ಪಡೆಯಿತು. ಕೆಎಲ್ ರಾಹುಲ್ (11), ಫಾಫ್ ಡು ಪ್ಲೆಸಿಸ್ (6) ಮತ್ತು ಅಭಿಷೇಕ್ ಪೊರೆಲ್ (6) ಬೇಗನೇ ಔಟಾದರು. ಬಳಿಕ ಬಂದ ಬ್ಯಾಟರ್ಗಳು ಅಲ್ಪಸ್ವಲ್ಪ ಕಾಣಿಕೆ ನೀಡಿದರಾದರೂ ಅದು ಗೆಲುವಿಗೆ ಸಾಧ್ಯವಾಗಲಿಲ್ಲ. ಮತ್ತೊಂದೆಡೆ ಜಸ್ಪ್ರೀತ್ ಬುಮ್ರಾ, ಮಿಚೆಲ್ ಸ್ಯಾಂಟ್ನರ್ ಮಾರಕ ದಾಳಿ ನಡೆಸಿದರು. ತಲಾ 3 ವಿಕೆಟ್ ಉರುಳಿಸಿ ಮಿಂಚಿದರು. ಸಮೀರ್ ರಿಜ್ವಿ 39 ರನ್ ಗಳಿಸಿದರೆ, ವಿಪ್ರಜ್ ನಿಗಮ್ 20 ರನ್ ಗಳಿಸಿದರು. ಸ್ಟಬ್ಸ್ (2), ಅಶುತೋಷ್ ಶರ್ಮಾ (18), ಮಾಧವ್ ತಿವಾರಿ (3), ದುಷ್ಮಂತಾ ಚಮೀರಾ (8) ನಿರಾಸೆ ಮೂಡಿಸಿದರು.