ರೋಹಿತ್‌ರನ್ನು ಮತ್ತೆ ನಾಯಕ ಮಾಡಿ ಎಂದು ಕೂಗಿದ ಅಭಿಮಾನಿ; ಎಂಐ ಮಾಲೀಕ ಅಂಬಾನಿ ಪ್ರತಿಕ್ರಿಯೆ ಹೀಗಿತ್ತು
Rohit Sharma: ರೋಹಿತ್ ಶರ್ಮಾರನ್ನು ಮತ್ತೆ ನಾಯಕನಾಗಿ ಮಾಡಿ ಎಂದು ಹೇಳಿದ ಅಭಿಮಾನಿಗೆ ಮುಂಬೈ ಇಂಡಿಯನ್ಸ್ ಮಾಲೀಕ ಆಕಾಶ್ ಅಂಬಾನಿ ಉತ್ತರ ಕೊಟ್ಟಿದ್ದಾರೆ.
ಐಪಿಎಲ್ 2024ರ ಆವೃತ್ತಿಗೂ ಮುನ್ನ ಮುಂಬೈ ಇಂಡಿಯನ್ಸ್ (Mumbai Indians) ತಂಡವು ಅಚ್ಚರಿಯ ನಿರ್ಧಾರಕ್ಕೆ ಬಂದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಯ್ತು. ಫ್ರಾಂಚೈಸಿಯು 5 ಐಪಿಎಲ್ ಟ್ರೋಫಿ ಗೆಲ್ಲುವತ್ತ ತಂಡವನ್ನು ಮುನ್ನಡೆಸಿದ್ದ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ, ಹಾರ್ದಿಕ್ ಪಾಂಡ್ಯ ಅವರಿಗೆ ಪಟ್ಟಾಭಿಷೇಕ ಮಾಡಿತು. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ ಹಿಟ್‌ಮ್ಯಾನ್ ಮುಂಬೈ ತಂಡದಲ್ಲೇ ಉಳಿಯುತ್ತಾರಾ ಎಂಬ ಚಿಂತೆ ಮತ್ತು ಗೊಂದಲ ಅಭಿಮಾನಿಗಳಿಗಿದೆ. ಈ ಕುರಿತು ಮುಂಬೈ ಇಂಡಿಯನ್ಸ್ ಮಾಲೀಕ ಆಕಾಶ್ ಅಂಬಾನಿ (Akash Ambani) ಸ್ಪಷ್ಟನೆ ನೀಡಿದ್ದಾರೆ.
ಡಿಸೆಂಬರ್ 19ರ ಮಂಗಳವಾರ ದುಬೈನಲ್ಲಿ ಐಪಿಎಲ್ 2024ರ ಮಿನಿ ಹರಾಜು ಪ್ರಕ್ರಿಯೆ ನಡೆಯಿತು. ಹರಾಜಿನಲ್ಲಿ ಮುಂಬೈ ತಂಡದ ಮಾಲೀಕ ಆಕಾಶ್ ಅಂಬಾನಿ ಭಾಗವಹಿಸಿದ್ದರು. ಕಾರ್ಯಕ್ರಮದ ಮಧ್ಯದಲ್ಲಿ, ಮುಂಬೈ ಇಂಡಿಯನ್ಸ್ ಅಭಿಮಾನಿಯೊಬ್ಬರು “ರೋಹಿತ್ ಶರ್ಮಾ ಕೋ ವಾಪಸ್ ಲಾವೋ” ಎಂದು ಕೂಗಿದರು. ಅಂದರೆ ರೋಹಿತ್ ಶರ್ಮಾರನ್ನು ಮತ್ತೆ ನಾಯಕನಾಗಿ ಮಾಡಿ ಎಂಬುದು ಅಭಿಮಾನಿಯ ಮಾತಾಗಿತ್ತು. ಇದಕ್ಕೆ ಅಂಬಾನಿ ಪ್ರತಿಕ್ರಿಯೆ ನೀಡಿದ್ದಾರೆ. ರೋಹಿತ್ ತಂಡದಲ್ಲೇ ಇರುತ್ತಾರೆ, ಚಿಂತಿಸಬೇಡಿ ಎಂದಿದ್ದಾರೆ.
ರೋಹಿತ್ ಬ್ಯಾಟಿಂಗ್ ಮಾಡ್ತಾರೆ
ಹರಾಜು ಪ್ರಕ್ರಿಯೆ ನಡುವೆ ಅಭಿಮಾನಿಯೊಬ್ಬರು ರೋಹಿತ್ ಶರ್ಮಾರನ್ನು ಮತ್ತೆ ಕರೆತನ್ನಿ ಎಂದು ಕೂಗಿದ್ದಕ್ಕೆ ಆಕಾಶ್ ಉತ್ತರ ನೀಡಿದ್ದಾರೆ. “ಚಿಂತಾ ಮತ್ ಕರೋ, ವೋ ಬ್ಯಾಟಿಂಗ್ ಕರೇಗಾ” ಎಂದು ಉತ್ತರಿಸಿದ್ದಾರೆ. ಅಂದರೆ, ಚಿಂತಿಸಬೇಡಿ, ಅವರು ಬ್ಯಾಟಿಂಗ್ ಮಾಡುತ್ತಾರೆ ಎಂಬುದು ಆಕಾಶ್ ಪ್ರತಿಕ್ರಿಯೆಯಾಗಿಯ್ತು.
ಇದನ್ನೂ ಓದಿ | ಮುಂಬೈ ಇಂಡಿಯನ್ಸ್ಗೆ ಮೊದಲ ಪ್ರಶಸ್ತಿ ಗೆದ್ದುಕೊಟ್ಟಿದ್ದು ರೋಹಿತ್ ಅಲ್ಲ; ಹಾಗಿದ್ದರೆ ಮತ್ಯಾರು?
ಈ ಹೇಳಿಕೆಯ ವಿಡಿಯೋ ಲಭ್ಯವಿಲ್ಲ. ಆದರೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ಕುರಿತು ವಿಡಿಯೋ ಶೇರ್ ಮಾಡಿಕೊಂಡಿದೆ. ಅದರಲ್ಲಿ ಈ ವಿದ್ಯಮಾನ ನಡೆದಿರುವುದು ಖಚಿತವಾಗಿದೆ.
ಲಕ್ಷ ಲಕ್ಷ ಫಾಲೋವರ್‌ಗಳನ್ನು ಕಳೆದುಕೊಂಡ ಮುಂಬೈ
10 ವರ್ಷ ಎಂಐ ತಂಡದ ನಾಯಕನಾಗಿ ಐದು ಪ್ರಶಸ್ತಿಗಳನ್ನು ಗೆದ್ದಿರುವ ರೋಹಿತ್ ಶರ್ಮಾ ಬದಲಿಗೆ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಫ್ರಾಂಚೈಸಿಯು ನೂತನ ಹೊಸ ನಾಯಕನಾಗಿ ನೇಮಿಸಿತು. ಇದಕ್ಕಾಗಿಯೇ ಗುಜರಾತ್ ಟೈಟಾನ್ಸ್ ತಂಡದಿಂದ ಪಾಂಡ್ಯರನ್ನು ಟ್ರೇಡ್ ಮಾಡಿದೆ. ಆದರೆ, ಪಾಂಡ್ಯಗೆ ಪಟ್ಟಾಭಿಷೇಕ ಮಾಡಿದ ನಿರ್ಧಾರಕ್ಕೆ ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ದಾಖಲೆ ಸಂಖ್ಯೆಯಲ್ಲಿ ಫಾಲೋವರ್‌ಗಳನ್ನು ಕಳೆದುಕೊಂಡಿದೆ.
ಇದನ್ನೂ ಓದಿ | IPL Auction 2024: ಜಸ್ಪ್ರೀತ್ ಬೂಮ್ರಾಗೆ ಭಲೆ ಜೋಡಿ ಹುಡುಕಿದ ಮುಂಬೈ ಇಂಡಿಯನ್ಸ್
2015ರ ಐಪಿಎಲ್ ಹರಾಜಿನಲ್ಲಿ 10 ಲಕ್ಷ ರೂಪಾಯಿ ಕೊಟ್ಟು ಹಾರ್ದಿಕ್ ಪಾಂಡ್ಯರನ್ನು ಮುಂಬೈ ಇಂಡಿಯನ್ಸ್ ಖರೀದಿ ಮಾಡಿತು. ರೋಹಿತ್ ಶರ್ಮಾ ನಾಯಕತ್ವದಲ್ಲಿ ಹಾರ್ದಿಕ್ ಕೂಡಾ ನಾಲ್ಕು ಐಪಿಎಲ್ ಟ್ರೋಫಿಗಳನ್ನು ಗೆದ್ದಿದ್ದಾರೆ. 2022ರಲ್ಲಿ ಮುಂಬೈ ಹಾರ್ದಿಕ್‌ರನ್ನು ರಿಲೀಸ್ ಮಾಡಿದ ಬಳಿಕ, ಗುಜರಾತ್ ಟೈಟಾನ್ಸ್ ತಂಡವು ಅವರನ್ನು ಖರೀದಿಸಿ ನಾಯಕತ್ವದ ಜವಾಬ್ದಾರಿ ನೀಡಿತು. ಮೊದಲ ಋತುವಿನಲ್ಲಿಯೇ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವ ಮೂಲಕ ಹಾರ್ದಿಕ್ ದಾಖಲೆ ಬರೆದರು.
ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ ತಂಡವು 2013, 2015, 2017, 2019 ಮತ್ತು 2020ರ ಐಪಿಎಲ್ ಟ್ರೋಫಿ ಗೆದ್ದಿದೆ. 2015ರ ಬಳಿಕ ತಂಡ ಚಾಂಪಿಯನ್ ಪಟ್ಟಕ್ಕೇರಿದ ಎಲ್ಲಾ ಸಂದರ್ಭಗಳಲ್ಲಿ ಪಾಂಡ್ಯ ಕೂಡಾ ತಂಡದೊಂದಿಗೆ ಇದ್ದರು.