ಕನ್ನಡ ಸುದ್ದಿ  /  Cricket  /  Mumbai Indians Snatch It In Last Over Thriller Sajeevan Sajana Wins It With Last Ball Six Against Delhi Capitals Prs

ಕೊನೆಯ ಎಸೆತಕ್ಕೆ 5 ರನ್, ಭರ್ಜರಿ ಸಿಕ್ಸರ್ ಸಿಡಿಸಿ ರೋಚಕ ಜಯ ತಂದುಕೊಟ್ಟ ಸಜನಾ; ಚೊಚ್ಚಲ ಪಂದ್ಯದಲ್ಲೇ ಮುಂಬೈಗೆ ಗೆಲುವು

Mumbai Indians beat Delhi Capitals : ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್​ ರಣರೋಚಕ ಗೆಲುವು ದಾಖಲಿಸಿದೆ.

ಕೊನೆಯ ಎಸೆತಕ್ಕೆ 5 ರನ್, ಭರ್ಜರಿ ಸಿಕ್ಸರ್ ಸಿಡಿಸಿ ರೋಚಕ ಜಯ ತಂದುಕೊಟ್ಟ ಸಜನಾ
ಕೊನೆಯ ಎಸೆತಕ್ಕೆ 5 ರನ್, ಭರ್ಜರಿ ಸಿಕ್ಸರ್ ಸಿಡಿಸಿ ರೋಚಕ ಜಯ ತಂದುಕೊಟ್ಟ ಸಜನಾ (PTI)

2ನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್​ನ (WPL 2024) ಉದ್ಘಾಟನಾ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್ ರಣರೋಚಕ ಜಯ ದಾಖಲಿಸಿತು. ಅಂತಿಮ ಎಸೆತದಲ್ಲಿ 5 ರನ್ ಬೇಕಿತ್ತು. ಈ ವೇಳೆ ಕಣಕ್ಕಿಳಿದ ಎಸ್​ ಸಜನಾ, ಲಾಂಗ್​ ಆನ್​ನಲ್ಲಿ ಭರ್ಜರಿ ಸಿಕ್ಸರ್​ ಚಚ್ಚುವ ಮೂಲಕ 4 ವಿಕೆಟ್​​ಗಳ ಭರ್ಜರಿ ಗೆಲುವು ಸಾಧಿಸಿತು. ಗೆಲುವಿನೊಂದಿಗೆ ಅಭಿಯಾನ ಆರಂಭಿಸಿದ ಮುಂಬೈ, ಡೆಲ್ಲಿ 3ನೇ ಬಾರಿಗೆ ಸೋಲುಣಿಸಿತು. ಆದರೆ ಡೆಲ್ಲಿ ಸೋಲಿನೊಂದಿಗೆ ಅಭಿಯಾನ ಆರಂಭಿಸಿತು.

ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್​, ಆರಂಭಿಕ ಆಘಾತ ಅನುಭವಿಸಿತು. ಸ್ಫೋಟಕ ಆಟಗಾರ್ತಿ ಶೆಫಾಲಿ ವರ್ಮಾ 8 ಎಸೆತಗಳಲ್ಲಿ 1 ರನ್ ಗಳಿಸಿ ವೈಫಲ್ಯ ಅನುಭವಿಸಿದರು. ಆದರೆ ಆ ಬಳಿಕ ನಾಯಕಿ ಮೆಗ್​ ಲ್ಯಾನಿಂಗ್​ ಮತ್ತು ಆಲಿಸ್ ಕ್ಯಾಪ್ಸಿ ಜೊತೆಯಾಗಿ ಅರ್ಧಶತಕದ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ಈ ವೇಳೆ ಲ್ಯಾನಿಂಗ್ 31 ರನ್ ಸಿಡಿಸಿ ಔಟಾದರು. ತದನಂತರ ಅಲೀಸ್ ಕ್ಯಾಪ್ಸಿ ಬಿರುಸಿನ ಬ್ಯಾಟಿಂಗ್ ನಡೆಸಿದರು.

ಮುಂಬೈ ಬೌಲರ್​​ಗಳಿಗೆ ಬೆಂಡೆತ್ತಿದರು. ಬೌಂಡರಿ ಸಿಕ್ಸರ್​ಗಳ ಸುರಿಮಳೆಗೈದರು. 53 ಎಸೆತಗಳಲ್ಲಿ 3 ಸಿಕ್ಸರ್​​, 9 ಬೌಂಡರಿ ಸಹಿತ 75 ರನ್ ಗಳಿಸಿದರು. ಇದರೊಂದಿಗೆ ಡೆಲ್ಲಿ ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಲು ನೆರವಾದರು. ಅಲ್ಲದೆ, ಜೆಮಿಮಾ ರೋಡ್ರಿಗಸ್ ಅವರೊಂದಿಗೆ ಹಾಫ್ ಸೆಂಚುರಿ ಪಾಲುದಾರಿಕೆ ಕೂಡ ನೀಡಿದರು. ಮರಿಜಾನ್ನೆ ಕಪ್ 16 ರನ್ ಸಿಡಿಸಿ ಅಜೇಯರಾಗಿ ಉಳಿದರು. ಕೊನೆಗೆ ಡೆಲ್ಲಿ 20 ಓವರ್​​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು. ಮುಂಬೈ ಪರ ಅಮೆಲಿಯಾ ಕೇರ್, ನಟಾಲಿ ಸೀವರ್ ತಲಾ 2 ವಿಕೆಟ್ ಪಡೆದರು.

ಈ ಗುರಿ ಬೆನ್ನಟ್ಟಿ ಮುಂಬೈ ಸಹ ಆರಂಭಿಕ ಆಘಾತಕ್ಕೆ ಒಳಗಾಯಿತು. ನಂಬಿಕಸ್ಥ ಆಟಗಾರ್ತಿ ಹೀಲಿ ಮ್ಯಾಥ್ಯೂಸ್ ಡಕೌಟ್​ಗೆ ಬಲಿಯಾಗಿ ನಿರ್ಗಮಿಸಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಟಾಲಿ ಸೀವರ್ ಸಹ 19 ರನ್​ಗೆ ಆಟ ಮುಗಿಸಿದರು. ಆದರೆ ಆರಂಭಿಕ ಆಟಗಾರ್ತಿ ಯಾಸ್ತಿಕಾ ಭಾಟಿಯಾ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಹರ್ಮನ್​ಪ್ರೀತ್ ಜೊತೆ ಸೇರಿ ಅರ್ಧಶತಕ ಪಾಲುದಾರಿಕೆ ನೀಡಿದರು. ಜೊತೆಗೆ ಅವರು ಸಹ ಹಾಫ್ ಸೆಂಚುರಿ ಬಾರಿಸಿದರು.

ಆದರೆ, ಅರ್ಧಶತಕ ಸಿಡಿಸಿದ ಬೆನ್ನಲ್ಲೇ ಔಟಾದರು. 45 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್​​ ಸಹಿತ 57 ರನ್ ಗಳಿಸಿ ಮುಂಬೈ ಗೆಲುವಿನ ಆಸೆ ಹೆಚ್ಚಿಸಿದರು. 50 ಎಸೆತಗಳಲ್ಲಿ 66 ರನ್​ಗಳು ಬೇಕಿದ್ದಾಗ ಮುಂಬೈ ಬಳಿಕ ಸಂಕಷ್ಟಕ್ಕೆ ಸಿಲುಕಿತು. ಕೊನೆಯ ಓವರ್​ಗಳಲ್ಲಿ ಹರ್ಮನ್​ಪ್ರೀತ್​ ಮತ್ತು ಅಮೆಲಿಯಾ ಕೇರ್ ಹೋರಾಟ ನಡೆಸಿದರು. 18 ಎಸೆತಗಳಲ್ಲಿ 30 ರನ್ ಬೇಕಿತ್ತು. ಆಗ ಅಮೆಲಿಯಾ ಕೇರ್ (24) ಔಟಾದರು. ಆದರೆ ಹರ್ಮನ್ ಪೈಪೋಟಿ ಮುಂದುವರೆಸಿದರು.

ಕೊನೆಯ ಓವರ್​​ನಲ್ಲಿ ರೋಚಕ ಗೆಲುವು

ಕೊನೆಯ ಓವರ್​ಗೆ ಮುಂಬೈ ಗೆಲುವಿಗೆ 12 ಬೇಕಿತ್ತು. ಅಂತಿಮ ಓವರ್​ನ ಮೊದಲ ಎಸೆತದಲ್ಲಿ ಪೂಜಾ ವಸ್ತ್ರಾಕರ್ ಔಟಾಗಿ ನಿರಾಸೆ ಮೂಡಿಸಿದರು. ನಂತರದ ಎರಡು ಎಸೆತಗಳಲ್ಲಿ ಮೂರು ರನ್ ಬಂತು. ಆಗ 3 ಎಸೆತಗಳಲ್ಲಿ 9 ರನ್ ಬೇಕಿತ್ತು. 4ನೇ ಬಾಲ್​​ನಲ್ಲಿ ಬೌಂಡರಿ ಬಾರಿಸಿದ ಹರ್ಮನ್​, ಅರ್ಧಶಕವನ್ನೂ ಪೂರೈಸಿದರು. ಆದರೆ ಮರು ಎಸೆತದಲ್ಲೇ ಕ್ಯಾಚ್​ ನೀಡಿ ನಿರ್ಗಮಿಸಿದರು. ಹೀಗಾಗಿ ಲಾಸ್ಟ್​ ಬಾಲ್​ಗೆ 5 ರನ್​ ಬೇಕಾಯಿತು. ಆದರೆ ಎಸ್​ ಸಜನಾ ಕೊನೆಯ ಎಸೆತದಲ್ಲಿ ಸಿಕ್ಸರ್​ ಬಾರಿಸಿ ಮುಂಬೈಗೆ ರಣರೋಚಕ ಗೆಲುವು ತಂದುಕೊಟ್ಟರು.