ಮುಂಬೈ ಇಂಡಿಯನ್ಸ್ ದಾಖಲೆಯ 7ನೇ ಗೆಲುವಿಗೆ ಅಡ್ಡಿಯಾಗುತ್ತಾ ಗುಜರಾತ್ ಟೈಟನ್ಸ್; ಐಪಿಎಲ್‌ ಪಂದ್ಯದ 10 ಪ್ರಮುಖ ಅಂಶಗಳು
ಕನ್ನಡ ಸುದ್ದಿ  /  ಕ್ರಿಕೆಟ್  /  ಮುಂಬೈ ಇಂಡಿಯನ್ಸ್ ದಾಖಲೆಯ 7ನೇ ಗೆಲುವಿಗೆ ಅಡ್ಡಿಯಾಗುತ್ತಾ ಗುಜರಾತ್ ಟೈಟನ್ಸ್; ಐಪಿಎಲ್‌ ಪಂದ್ಯದ 10 ಪ್ರಮುಖ ಅಂಶಗಳು

ಮುಂಬೈ ಇಂಡಿಯನ್ಸ್ ದಾಖಲೆಯ 7ನೇ ಗೆಲುವಿಗೆ ಅಡ್ಡಿಯಾಗುತ್ತಾ ಗುಜರಾತ್ ಟೈಟನ್ಸ್; ಐಪಿಎಲ್‌ ಪಂದ್ಯದ 10 ಪ್ರಮುಖ ಅಂಶಗಳು

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್ ತಂಡವು 4-2 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಇದರಲ್ಲಿ ಕೊನೆಯ ಮೂರೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.‌ ಈ ಬಾರಿಯ ಐಪಿಎಲ್‌ನಲ್ಲಿಯೂ ಮೊದಲ ಮುಖಾಮುಖಿಯಲ್ಲಿ ಜಿಟಿ ಗೆದ್ದಿರುವುದು ವಿಶೇಷ.

ಮುಂಬೈ ಇಂಡಿಯನ್ಸ್ ದಾಖಲೆಯ 7ನೇ ಗೆಲುವಿಗೆ ಅಡ್ಡಿಯಾಗುತ್ತಾ ಗುಜರಾತ್ ಟೈಟನ್ಸ್
ಮುಂಬೈ ಇಂಡಿಯನ್ಸ್ ದಾಖಲೆಯ 7ನೇ ಗೆಲುವಿಗೆ ಅಡ್ಡಿಯಾಗುತ್ತಾ ಗುಜರಾತ್ ಟೈಟನ್ಸ್ (PTI)

ಐಪಿಎಲ್‌ 2025ರ ಅಂಕಪಟ್ಟಿಯಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿರುವ ತಂಡಗಳಾದ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟನ್ಸ್, ಮೇ 6ರ ಮಂಗಳವಾರ ನಡೆಯುವ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಈ ಪಂದ್ಯ ಗೆದ್ದ ತಂಡವು 16 ಅಂಕಗಳನ್ನು ಪಡೆಯುವ ಮೂಲಕ ಪ್ಲೇಆಫ್‌ ರೇಸ್‌ ಹಂತವನ್ನು ಬಹುತೇಕ ಖಚಿತಪಡಿಸಿಕೊಳ್ಳುತ್ತದೆ. ಉಭಯ ತಂಡಗಳಿಗೂ ಗೆಲುವು ಅನಿವಾರ್ಯವಾಗಿದೆ. ಆದರೆ, ಪಂದ್ಯವು ಮುಂಬೈನ ತವರು ಮೈದಾನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವುದರಿಂದ ಹಾರ್ದಿಕ್‌ ಪಾಂಡ್ಯ ಬಳಗಕ್ಕೆ ತವರಿನ ಲಾಭ ಹೆಚ್ಚು. ಪಂದ್ಯಕ್ಕೆ ಸಂಬಂಧಿಸಿದ 10 ಪ್ರಮುಖ ಅಂಶಗಳನ್ನು ನೋಡೋಣ.

  1. ಟೂರ್ನಿಯಲ್ಲಿ ಉಭಯ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಿದ್ದಾಗ ಮುಂಬೈ ತಂಡ ಸೋತಿತ್ತು. ಹೀಗಾಗಿ ಜಿಟಿ ವಿರುದ್ಧ ಇದು ಹಾರ್ದಿಕ್‌ ಪಾಂಡ್ಯ ಪಡೆಗೆ ಸೇಡಿನ ಪಂದ್ಯ. ಸತತ 6 ಪಂದ್ಯಗಳನ್ನು ಸಲೀಸಾಗಿ ಗೆದ್ದಿರುವ ತಂಡವು ಆತ್ಮವಿಶ್ವಾಸದಿಂದ ಬೀಗುತ್ತಿದೆ.
  2. ಗುಜರಾತ್‌ ವಿರುದ್ಧ ಗೆದ್ದರೆ, ಈ ಸೀಸನ್‌ನಲ್ಲಿ ಮುಂಬೈ ಸತತ 7 ಪಂದ್ಯ ಗೆದ್ದಂತಾಗುತ್ತದೆ. 2011ರಲ್ಲಿ ಆರ್‌ಸಿಬಿ ಹಾಗೂ 2013ರಲ್ಲಿ ಸಿಎಸ್‌ಕೆ ತಂಡವು ಸತತ ಏಳು ಪಂದ್ಯ ಗೆದ್ದ ದಾಖಲೆ ಮಾಡಿತ್ತು.
  3. ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಸೇರಿದಂತೆ ಮುಂಬೈ ತಂಡದ ಅನುಭವಿ ಆಟಗಾರರು ಭರ್ಜರಿಯಾಗಿ ಫಾರ್ಮ್‌ಗೆ ಮರಳಿದ್ದಾರೆ. ತಂಡದ ಬ್ಯಾಟಿಂಗ್‌ನಷ್ಟೇ ಬೌಲಿಂಗ್‌ ಕೂಡಾ ಬಲಿಷ್ಠವಾಗಿದೆ. ಹೀಗಾಗಿ ತವರಿನಲ್ಲಿ ಎಂಐ ಅನ್ನು ಸೋಲಿಸುವುದು ಅಷ್ಟು ಸುಲಭವಲ್ಲ.
  4. ಗುಜರಾತ್‌ ತಂಡವು ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದು, ಪ್ರಸ್ತುತ 10 ಪಂದ್ಯಗಳಲ್ಲಿ ಆಡಿ ಏಳರಲ್ಲಿ ಗೆದ್ದಿದೆ. ಮುಂದೆ ಅದು ಡೆಲ್ಲಿ, ಲಕ್ನೋ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಬೇಕಾಗಿದೆ.
  5. ಮುಂಬೈ ವಿರುದ್ಧ ಆಡಿದ ಪಂದ್ಯದಲ್ಲಿ ಗುಜರಾತ್‌ ತಂಡವು 4-2 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಇದರಲ್ಲಿ ಕೊನೆಯ ಮೂರೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
  6. ಬೆರಳಿನ ಗಾಯದಿಂದ ಬಳಲುತ್ತಿರುವ ಮುಂಬೈ ಎಡಗೈ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಅಭ್ಯಾಸದಲ್ಲಿ ಪಾಲ್ಗೊಂಡಿದ್ದಾರೆ. ಆದರೆ, ಜಿಟಿ ವಿರುದ್ಧ ಆಡುವ ಕುರಿತು ಖಚಿತ ಮಾಹಿತಿ ಇಲ್ಲ. ಕಿವೀಸ್‌ ಸ್ಪಿನ್ನರ್ ಇನ್ನೂ 100 ಪ್ರತಿಶತ ಪಂದ್ಯದ ಫಿಟ್ ಆಗಿಲ್ಲ ಎಂದು ಕೋಚ್ ಮಹೇಲ ಜಯವರ್ಧನೆ ತಿಳಿಸಿದ್ದಾರೆ.
  7. ತಾತ್ಕಾಲಿಕ ಅಮಾನತು ಶಿಕ್ಷೆಯ ನಂತರ ಕಗಿಸೊ ರಬಾಡ‌ ಗುಜರಾತ್ ತಂಡವನ್ನು ಮತ್ತೆ ಸೇರಿಕೊಂಡಿದ್ದಾರೆ. ಅವರಿಗೆ ಪಂದ್ಯದಲ್ಲಿ ಆಡುವ ಅನುಮತಿಯೂ ಸಿಕ್ಕಿದೆ. ಇದು ಜಿಟಿ ತಂಡ ಬೌಲಿಂಗ್‌ಗೆ ಆನೆಬಲ ತರಲಿದೆ. ಅತ್ತ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ಇಶಾಂತ್ ಶರ್ಮಾ, ಈ ಪಂದ್ಯಕ್ಕೆ ಲಭ್ಯವಿರುವ ಬಗ್ಗೆ ಇನ್ನೂ ಖಚಿತ ಮಾಹಿತಿ ಸಿಕ್ಕಿಲ್ಲ.
  8. ಪಂದ್ಯದಲ್ಲಿ ಬುಮ್ರಾ ಮತ್ತು ಬಟ್ಲರ್ ನಡುವಿನ ಮುಖಾಮುಖಿ ಕುತೂಹಲಕಾರಿಯಾಗಿದೆ. ಬುಮ್ರಾ ಅವರ 72 ಎಸೆತಗಳನ್ನು ಎದುರಿಸಿರುವ ಬಟ್ಲರ್ ಕೇವಲ ಒಂದು ಸಿಕ್ಸರ್ ಸಹಿತ 68 ರನ್ ಮಾತ್ರ ಗಳಿಸಿದ್ದಾರೆ. ಇದರಲ್ಲಿ ಎರಡು ಬಾರಿ ಔಟ್‌ ಆಗಿದ್ದಾರೆ.
  9. ಸೂರ್ಯಕುಮಾರ್ ಈ ಆವೃತ್ತಿಯಲ್ಲಿ ಸ್ಪಿನ್ ಬೌಲರ್‌ಗಳ ಎಸೆತಗಳಲ್ಲಿ 175.69ರ ಸ್ಟ್ರೈಕ್‌ ರೇಟ್‌ನಲ್ಲಿ ರನ್ ಗಳಿಸಿದ್ದಾರೆ. ಅದರಲ್ಲೂ ಜಿಟಿ ತಂಡದ ರಶೀದ್ ಖಾನ್ ವಿರುದ್ಧದ ಅವರ ದಾಖಲೆ ಉತ್ತಮವಾಗಿದೆ. 64 ಎಸೆತಗಳನ್ನು ಎದುರಿಸಿರುವ ಸೂರ್ಯ, 142.18ರ ಸ್ಟ್ರೈಕ್ ರೇಟ್‌ನಲ್ಲಿ 91 ರನ್‌ ಗಳಿಸಿದ್ದಾರೆ. ಒಮ್ಮೆಯೂ ಔಟ್‌ ಆಗಿಲ್ಲ.
  10. ಗುಜರಾತ್‌ ತಂಡಕ್ಕೆ ಅದರ ಅಗ್ರ ಕ್ರಮಾಂಕದ ಮೂವರು ಬ್ಯಾಟರ್‌ಗಳೇ ದೊಡ್ಡ ಬಲ. ಅತ್ತ ಮುಂಬೈ ತಂಡ ಆಲ್‌ರೌಂಡ್‌ ತಂಡವಾಗಿದ್ದು, ಬ್ಯಾಟಿಂಗ್‌ ಜೊತೆಗೆ ಮಾರಕ ಬೌಲರ್‌ಗಳು ಕೂಡಾ ತಂಡದಲ್ಲಿದ್ದಾರೆ.

ಇದನ್ನೂ ಓದಿ | ಲಕ್ನೋ ವಿರುದ್ಧ ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ನಿರಾಯಾಸದ ಗೆಲುವು; ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ನೆಗೆದ ಅಯ್ಯರ್‌ ಪಡೆ

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.