ಮುಂಬೈಗೆ ಲಕ್ನೋ ಸವಾಲು, ಕಳೆದ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಹಾರ್ದಿಕ್ ಪಡೆ; ಎಂಐ vs ಎಲ್​ಎಸ್​ಜಿ ಆಸಕ್ತಿದಾಯಕ ಅಂಶಗಳು
ಕನ್ನಡ ಸುದ್ದಿ  /  ಕ್ರಿಕೆಟ್  /  ಮುಂಬೈಗೆ ಲಕ್ನೋ ಸವಾಲು, ಕಳೆದ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಹಾರ್ದಿಕ್ ಪಡೆ; ಎಂಐ Vs ಎಲ್​ಎಸ್​ಜಿ ಆಸಕ್ತಿದಾಯಕ ಅಂಶಗಳು

ಮುಂಬೈಗೆ ಲಕ್ನೋ ಸವಾಲು, ಕಳೆದ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಹಾರ್ದಿಕ್ ಪಡೆ; ಎಂಐ vs ಎಲ್​ಎಸ್​ಜಿ ಆಸಕ್ತಿದಾಯಕ ಅಂಶಗಳು

ಇಂಡಿಯನ್ ಪ್ರೀಮಿಯರ್ ಲೀಗ್​ 45ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಈ ಪಂದ್ಯವು ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.

ಮುಂಬೈಗೆ ಲಕ್ನೋ ಸವಾಲು, ಕಳೆದ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಹಾರ್ದಿಕ್ ಪಡೆ; ಎಂಐ vs ಎಲ್​ಎಸ್​ಜಿ ಆಸಕ್ತಿದಾಯಕ ಅಂಶಗಳು
ಮುಂಬೈಗೆ ಲಕ್ನೋ ಸವಾಲು, ಕಳೆದ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಹಾರ್ದಿಕ್ ಪಡೆ; ಎಂಐ vs ಎಲ್​ಎಸ್​ಜಿ ಆಸಕ್ತಿದಾಯಕ ಅಂಶಗಳು

ಏಪ್ರಿಲ್ 27ರ ಭಾನುವಾರದ ಡಬಲ್ ಹೆಡ್ಡರ್​​ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಉಭಯ ತಂಡಗಳಿಗೂ ಇದು 2ನೇ ಮುಖಾಮುಖಿ. ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ನಡೆಯುವ 45ನೇ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಗೆಲ್ಲುವ ಫೇವರಿಟ್ ಎನಿಸಿಕೊಂಡಿದೆ. ಜೊತೆಗೆ ಮೊದಲ ಮುಖಾಮುಖಿಯಲ್ಲಿ ಸೋಲು ಕಂಡಿದ್ದಕ್ಕೆ ಲಕ್ನೋ ವಿರುದ್ಧ ಸೇಡು ತೀರಿಸಿಕೊಳ್ಳಲು ಇದು ಒಳ್ಳೆಯ ಅವಕಾಶವೂ ಹೌದು.

ಎರಡೂ ತಂಡಗಳು 9 ಪಂದ್ಯಗಳಿಂದ ತಲಾ ಐದು ಗೆಲುವುಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನ ಮಧ್ಯಭಾಗದಲ್ಲಿವೆ. ಆ ಐದು ಗೆಲುವುಗಳಲ್ಲಿ, ಪ್ರತಿ ತಂಡದ ಐದು ವಿಭಿನ್ನ ಆಟಗಾರರು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಮುಂಬೈ ಪರ ಅಶ್ವನಿ ಕುಮಾರ್ , ಕರಣ್ ಶರ್ಮಾ, ವಿಲ್ ಜಾಕ್ಸ್ , ರೋಹಿತ್ ಶರ್ಮಾ ಮತ್ತು ಟ್ರೆಂಟ್ ಬೌಲ್ಟ್ . ಎಲ್‌ಎಸ್‌ಜಿ ಪರ ಶಾರ್ದೂಲ್ ಠಾಕೂರ್, ದಿಗ್ವೇಶ್ ರಾಠಿ, ನಿಕೋಲಸ್ ಪೂರನ್, ಏಡನ್ ಮಾರ್ಕ್ರಮ್ ಮತ್ತು ಆವೇಶ್ ಖಾನ್ ಪಂದ್ಯಶ್ರೇಷ್ಠ ಗೆದ್ದಿದ್ದಾರೆ.

ಈಗ ವ್ಯತ್ಯಾಸಗಳ ಬಗ್ಗೆ ಮಾತನಾಡೋಣ. ಮುಂಬೈ ತಂಡವು ತನ್ನ ಅಭಿಯಾನವನ್ನು ನಿಧಾನಗತಿಯಲ್ಲಿ ಆರಂಭಿಸಿತು. ಮೊದಲ ಐದು ಪಂದ್ಯಗಳಲ್ಲಿ 4ರಲ್ಲಿ ಸೋಲು ಕಂಡಿತ್ತು. ಸತತ 4 ಗೆಲುವಿನೊಂದಿಗೆ ಪರಿಸ್ಥಿತಿ ಉತ್ತಮವಾಗಿದೆ. ರೋಹಿತ್ ಸತತ ಎರಡು 70 ರನ್‌ಗಳೊಂದಿಗೆ ಫಾರ್ಮ್‌ಗೆ ಮರಳಿದ್ದಾರೆ. ಟ್ರೆಂಟ್ ಬೋಲ್ಟ್ ಡೆತ್ ಓವರ್​ಗಳಲ್ಲಿ ನಿರೀಕ್ಷೆಗಳನ್ನು ಪೂರೈಸುತ್ತಿದ್ದಾರೆ. ಜಸ್ಪ್ರೀತ್ ಬುಮ್ರಾ ಮೊದಲ ನಾಲ್ಕು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು.

ಮತ್ತೊಂದೆಡೆ, ಎಲ್‌ಎಸ್‌ಜಿ ತನ್ನ ಕೊನೆಯ ಮೂರು ಪಂದ್ಯಗಳಲ್ಲಿ ಎರಡು ಸೋಲುಗಳನ್ನು ಎದುರಿಸಿದೆ. ಆರಂಭವು ಕಳಪೆಯಾಗಿದ್ದರೂ ಬಳಿಕ ಸತತ 3ರಲ್ಲಿ ಗೆಲುವು ಸಾಧಿಸಿತು. ಆದರೆ ಪ್ರಸ್ತುತ ಪರಿಸ್ಥಿತಿ ಚೆನ್ನಾಗಿಲ್ಲ. ರಿಷಭ್ ಪಂತ್ ಮತ್ತು ಡೇವಿಡ್ ಮಿಲ್ಲರ್ ಇನ್ನೂ ಉತ್ತಮ ಪ್ರದರ್ಶನ ನೀಡಿಲ್ಲ. ಇದು ಅವರ ಮಧ್ಯಮ ಕ್ರಮಾಂಕವನ್ನು ಲೀಗ್‌ನಲ್ಲಿ ಅತ್ಯಂತ ದುರ್ಬಲ ತಂಡಗಳಲ್ಲಿ ಒಂದನ್ನಾಗಿ ಮಾಡಿದೆ. ಋತುವಿನ ಭರ್ಜರಿ ಆರಂಭದ ನಂತರ, ಪೂರನ್ ತಮ್ಮ ಕೊನೆಯ ಮೂರು ಇನ್ನಿಂಗ್ಸ್‌ಗಳಲ್ಲಿ 8, 11 ಮತ್ತು 9 ರನ್‌ ಗಳಿಸಿದ್ದು, ಹಿನ್ನೆಡೆಗೆ ಕಾರಣವಾಗುತ್ತಿದೆ.

ಮುಖಾಮುಖಿ ದಾಖಲೆಯಲ್ಲಿ ಮುಂಬೈ ವಿರುದ್ಧ ಎಲ್​ಎಸ್​ಜಿ ಉತ್ತಮ ದಾಖಲೆ ಹೊಂದಿದೆ. 6-1 ಹೆಡ್-ಟು-ಹೆಡ್ ದಾಖಲೆ ಹೊಂದಿರುವುದು ಲಕ್ನೋ ಆತ್ಮವಿಶ್ವಾಸ ಹೆಚ್ಚಿಸಿದೆ. ಆದರೆ ಈ ಬಾರಿ ಎಂಐ ತವರಿನಲ್ಲಿ ಆಡಲಿದೆ. ಅಲ್ಲಿ ಮುಂಬೈ ಇಲ್ಲಿಯವರೆಗೆ ನಾಲ್ಕು ಪಂದ್ಯಗಳಲ್ಲಿ ಮೂರು ಗೆಲುವು ಸಾಧಿಸಿದೆ.

ಮುಂಬೈ ಇಂಡಿಯನ್ಸ್ ಸಂಭಾವ್ಯ XII

ರಿಯಾನ್ ರಿಕಲ್ಟನ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ, ವಿಲ್ ಜಾಕ್ಸ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹರ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ, ವಿಘ್ನೇಶ್ ಪುತ್ತೂರು.

ಲಕ್ನೋ ಸೂಪರ್ ಜೈಂಟ್ಸ್ ಸಂಭಾವ್ಯ XII

ಏಡನ್ ಮಾರ್ಕ್ರಾಮ್, ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್, ರಿಷಭ್ ಪಂತ್ (ಕ್ಯಾಪ್ಟನ್ & ವಿಕೆಟ್ ಕೀಪರ್), ಆಯುಷ್ ಬಡೋನಿ, ಡೇವಿಡ್ ಮಿಲ್ಲರ್, ಅಬ್ದುಲ್ ಸಮದ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್, ದಿಗ್ವೇಶ್ ರಾಠಿ, ಆವೇಶ್ ಖಾನ್, ಪ್ರಿನ್ಸ್ ಯಾದವ್.

ಅಂಕಿ-ಅಂಶಗಳು

ಐಪಿಎಲ್​ಗೂ ಮುನ್ನ ಸೂರ್ಯಕುಮಾರ್ ಫಾರ್ಮ್ ಬಗ್ಗೆ ಚರ್ಚೆ ನಡೆದಿತ್ತು. ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧ 5 ಟಿ20 ಪಂದ್ಯಗಳಲ್ಲಿ 116.66 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 28 ರನ್ ಗಳಿಸಿದ್ದರು. ಇದೀಗ ಐಪಿಎಲ್‌ನಲ್ಲಿ 9 ಇನ್ನಿಂಗ್ಸ್‌ಗಳಲ್ಲಿ ಕಣಕ್ಕಿಳಿದಿದ್ದು, ಅದ್ಬುತ ಪ್ರದರ್ಶನ ನೀಡಿದ್ದಾರೆ. 166.51 ಸ್ಟ್ರೈಕ್ ರೇಟ್‌ನಲ್ಲಿ 373 ರನ್ ಗಳಿಸುವ ಮೂಲಕ ಮುಂಬೈ ಪರ ಪ್ರಮುಖ ರನ್ ಗಳಿಸುವ ಆಟಗಾರರಾಗಿದ್ದಾರೆ.

2026ರ ಟಿ20 ವಿಶ್ವಕಪ್‌ಗೆ ಆಯ್ಕೆಯಾಗಲು ಈ ಐಪಿಎಲ್​ನಲ್ಲಿ ಅದ್ಭುತ ಪ್ರದರ್ಶನ ನೀಡುವುದು ಮುಖ್ಯ. ಆದರೆ ರಿಷಭ್ ಪಂತ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. 8 ಇನ್ನಿಂಗ್ಸ್‌ಗಳಲ್ಲಿ 96.36ರ ಸ್ಟ್ರೈಕ್ ರೇಟ್‌ನಲ್ಲಿ ಕೇವಲ 106 ರನ್‌ ಗಳಿಸಿದ್ದಾರೆ. ಐದು ಬಾರಿ ಅವರು ಒಂದಂಕಿಗೆ ಔಟಾಗಿದ್ದಾರೆ. ಪಂತ್ ಕಳಪೆ ಪ್ರದರ್ಶನ ತಂಡದ ಸೋಲಿನ ಮೇಲೆ ಪರಿಣಾಮ ಬೀರುತ್ತಿದೆ.

ಐಪಿಎಲ್‌ನಲ್ಲಿ ಬುಮ್ರಾ ಪಂತ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದಾರೆ. ಬುಮ್ರಾ ವಿರುದ್ಧ ಪಂತ್ 46 ಎಸೆತಗಳನ್ನು ಎದುರಿಸಿ ಕೇವಲ 55 ರನ್‌ ಸಿಡಿಸಿದ್ದಾರೆ. ಅಲ್ಲದೆ, 7 ಸಲ ಔಟ್ ಆಗಿದ್ದಾರೆ. 18 ಎಸೆತಗಳಲ್ಲಿ 2 ಬಾರಿ ಪೂರನ್ ಅವರನ್ನು ಔಟ್ ಮಾಡಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಪೂರನ್ ವಿರುದ್ಧ ಯಶಸ್ಸು ಕಂಡ ಅಪರೂಪದ ಎಡಗೈ ಸ್ಪಿನ್ನರ್‌ಗಳಲ್ಲಿ ಮಿಚೆಲ್ ಸ್ಯಾಂಟ್ನರ್ ಒಬ್ಬರು. ಅವರು 20 ಎಸೆತಗಳಲ್ಲಿ ಎರಡು ಬಾರಿ ಪೂರನ್ ಅವರನ್ನು ಔಟ್ ಮಾಡಿದ್ದಾರೆ. ಕೇವಲ 25 ರನ್ ಬಿಟ್ಟುಕೊಟ್ಟಿದ್ದಾರೆ.

ಹಾರ್ದಿಕ್ ಈ ಟೂರ್ನಮೆಂಟ್‌ನಲ್ಲಿ 37 ಎಸೆತಗಳಲ್ಲಿ ಮೂರು ಬಾರಿ ಅವೇಶ್‌ಗೆ ಔಟಾಗಿದ್ದು, ಕೇವಲ 32 ರನ್ ಗಳಿಸಿದ್ದಾರೆ.

ರೋಹಿತ್ ತಮ್ಮ ಕೊನೆಯ ಎರಡು ಇನ್ನಿಂಗ್ಸ್‌ಗಳಲ್ಲಿ ಔಟಾಗದೆ 76 ಮತ್ತು 70 ರನ್ ಗಳಿಸಿದ್ದಾರೆ. 2016ರ ನಂತರ ಅವರು ಐಪಿಎಲ್‌ನಲ್ಲಿ ಸತತ ಅರ್ಧಶತಕ ಗಳಿಸಿದ್ದು ಇದೇ ಮೊದಲು.

ಡೆತ್‌ನಲ್ಲಿ ಕನಿಷ್ಠ 5 ಓವರ್‌ಗಳನ್ನು ಬೌಲಿಂಗ್ ಮಾಡಿದವರಲ್ಲಿ, ರಾಠಿ (7.66) ಅತ್ಯುತ್ತಮ ಎಕಾನಮಿ ಹೊಂದಿದ್ದಾರೆ. ನಂತರ ಬುಮ್ರಾ (7.75), ಸ್ಥಾನ ಪಡೆದಿದ್ದಾರೆ.

ಪಿಚ್ ಮತ್ತು ಹವಾಮಾನದ ವರದಿ

ಈ ಋತುವಿನಲ್ಲಿ ವಾಂಖೆಡೆ ಕ್ರೀಡಾಂಗಣವು ಇಲ್ಲಿಯವರೆಗೆ ನಾಲ್ಕು ಪಂದ್ಯಗಳನ್ನು ಆಯೋಜಿಸಿದೆ. ಎಲ್ಲವೂ ರಾತ್ರಿ ಪಂದ್ಯಗಳು. ಮುಂಬೈ ಪ್ರತಿ ಬಾರಿಯೂ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ವಾಂಖೆಡೆ ಕ್ರೀಡಾಂಗಣದ ಪಿಚ್ ಸಾಮಾನ್ಯವಾಗಿ ಬ್ಯಾಟ್ಸ್‌ಮನ್‌ಗಳಿಗೆ ಸಹಾಯಕವಾಗಿದೆ. ಇದು ಹೆಚ್ಚಿನ ಸ್ಕೋರಿಂಗ್ ಮೈದಾನವಾಗಿದೆ. ಮೊದಲು ಬೌಲಿಂಗ್ ಮಾಡುವುದು ಸೂಕ್ತವಾಗಿದ್ದು, ಪಂದ್ಯ ಮುಂದುವರೆದಂತೆ ಇಬ್ಬನಿಯೂ ಒಂದು ಪಾತ್ರವನ್ನು ವಹಿಸಬಹುದು. ಪಂದ್ಯದ ಆರಂಭದಲ್ಲಿ ವಾಂಖೆಡೆಯ ಕೆಂಪು ಮಣ್ಣಿನ ಪಿಚ್‌ನಿಂದ ಬೌಲರ್‌ಗಳು ಬೌನ್ಸ್ ಪಡೆಯುತ್ತಾರೆ. ಹೀಗಿದ್ದಾಗ ಸರಿಯಾದ ಲೈನ್-ಲೆಂತ್‌ನಲ್ಲಿ ಬೌಲಿಂಗ್ ಮಾಡಿದರೆ, ಬ್ಯಾಟ್ಸ್‌ಮನ್‌ಗಳು ತೊಂದರೆಗೆ ಸಿಲುಕಿಸಬಹುದು. ಪಿಚ್​​ನಿಂದ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ಸಿಗುವ ನಿರೀಕ್ಷೆಯಿಲ್ಲ. ಮುಂಬೈನಲ್ಲಿ ಟಾಸ್ ಪ್ರಮುಖ ಪಾತ್ರ ವಹಿಸಲಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ಇದುವರೆಗೆ 120 ಐಪಿಎಲ್ ಪಂದ್ಯಗಳು ನಡೆದಿವೆ. ಈ ಅವಧಿಯಲ್ಲಿ, ಮೊದಲು ಬ್ಯಾಟ್ ಮಾಡಿದ ತಂಡಗಳು 55 ಪಂದ್ಯಗಳನ್ನು ಗೆದ್ದಿವೆ. ಬೆನ್ನಟ್ಟಿದ ತಂಡಗಳು 65 ಪಂದ್ಯಗಳನ್ನು ಗೆದ್ದಿವೆ. ಹೆಚ್ಚುವರಿಯಾಗಿ, ಟಾಸ್ ಗೆದ್ದ ತಂಡಗಳು 63 ಪಂದ್ಯಗಳನ್ನು ಗೆದ್ದಿದ್ದರೆ, ಟಾಸ್ ಸೋತ ತಂಡಗಳು 57 ಪಂದ್ಯಗಳನ್ನು ಗೆದ್ದಿವೆ. ವಾಂಖೆಡೆ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗಳಿಸಿದ ಅತಿ ಹೆಚ್ಚು ಮೊತ್ತ (235/1 vs ಮುಂಬೈ ಇಂಡಿಯನ್ಸ್, 2015) ಮತ್ತು ಕಡಿಮೆ ಮೊತ್ತ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ (67 vs ಮುಂಬೈ ಇಂಡಿಯನ್ಸ್, 2008) ಗಳಿಸಿದೆ.

ಪಂದ್ಯದ ಸಮಯದಲ್ಲಿ ಮುಂಬೈನಲ್ಲಿ ಮಳೆ ಬರುವ ಮುನ್ಸೂಚನೆ ಇಲ್ಲ. ಆದ್ದರಿಂದ, ಎಂಐ ಮತ್ತು ಎಲ್​ಎಸ್​ಜಿ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿಲ್ಲ. ತಾಪಮಾನವು 30 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರುತ್ತದೆ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.