ಕರುಣ್ ಅಬ್ಬರಕ್ಕೂ ಕರುಣೆ ತೋರದ ಗೆಲುವು, ಹ್ಯಾಟ್ರಿಕ್ ರನೌಟ್ ಮಾಡಿದ ಮುಂಬೈಗೆ ರೋಚಕ ಗೆಲುವು; ಡೆಲ್ಲಿಗೆ ಮೊದಲ ಸೋಲು
ಕನ್ನಡ ಸುದ್ದಿ  /  ಕ್ರಿಕೆಟ್  /  ಕರುಣ್ ಅಬ್ಬರಕ್ಕೂ ಕರುಣೆ ತೋರದ ಗೆಲುವು, ಹ್ಯಾಟ್ರಿಕ್ ರನೌಟ್ ಮಾಡಿದ ಮುಂಬೈಗೆ ರೋಚಕ ಗೆಲುವು; ಡೆಲ್ಲಿಗೆ ಮೊದಲ ಸೋಲು

ಕರುಣ್ ಅಬ್ಬರಕ್ಕೂ ಕರುಣೆ ತೋರದ ಗೆಲುವು, ಹ್ಯಾಟ್ರಿಕ್ ರನೌಟ್ ಮಾಡಿದ ಮುಂಬೈಗೆ ರೋಚಕ ಗೆಲುವು; ಡೆಲ್ಲಿಗೆ ಮೊದಲ ಸೋಲು

DC vs MI, IPL 2025: 18ನೇ ಆವೃತ್ತಿಯ ಐಪಿಎಲ್​ನ 30ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 12 ರನ್​ಗಳ ರೋಚಕ ಗೆಲುವು ಸಾಧಿಸಿದೆ.

ಕರುಣ್ ಅಬ್ಬರಕ್ಕೂ ತೋರದ ಗೆಲುವಿನ ಕರುಣೆ, ಹ್ಯಾಟ್ರಿಕ್ ರನೌಟ್ ಮಾಡಿದ ಮುಂಬೈಗೆ ರೋಚಕ ಗೆಲುವು; ಡೆಲ್ಲಿಗೆ ಮೊದಲ ಸೋಲು
ಕರುಣ್ ಅಬ್ಬರಕ್ಕೂ ತೋರದ ಗೆಲುವಿನ ಕರುಣೆ, ಹ್ಯಾಟ್ರಿಕ್ ರನೌಟ್ ಮಾಡಿದ ಮುಂಬೈಗೆ ರೋಚಕ ಗೆಲುವು; ಡೆಲ್ಲಿಗೆ ಮೊದಲ ಸೋಲು (PTI)

2022ರ ನಂತರ ಇದೇ ಮೊದಲ ಬಾರಿಗೆ ಐಪಿಎಲ್ ಪಂದ್ಯವನ್ನಾಡಿದ ಕನ್ನಡಿಗ ಕರುಣ್ ನಾಯರ್ ತನಗೆ ಅವಕಾಶ ಸಿಕ್ಕ ಮೊದಲ ಪಂದ್ಯದಲ್ಲೇ ಅಬ್ಬರಿಸಿ ಬೊಬ್ಬಿರಿದರು. ಆದರೆ ಅವರ ಆರ್ಭಟದ ಹೊರತಾಗಿಯೂ ಗೆಲುವು ಕರುಣೆ ತೋರಲಿಲ್ಲ. ಪ್ರಸಕ್ತ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್​​ ಮೊದಲ ಸೋಲಿನ ರುಚಿ ಕಂಡಿದೆ. ದೇಶೀಯ ಕ್ರಿಕೆಟ್​​ನ ಕಳೆದ ಸೀಸನ್​​ ಎಲ್ಲಾ ಸ್ವರೂಪದಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ್ದ ಕರುಣ್​ ಭರ್ಜರಿ ಅರ್ಧಶತಕದ (89) ಸಹಾಯದಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವಿನ ಸನಿಹಕ್ಕೆ ಬಂದು 12 ರನ್ನಿಂದ ಪರಾಭವಗೊಂಡಿದೆ. 19ನೇ ಓವರ್​ನಲ್ಲಿ ನಡೆದ ಹೈಡ್ರಾಮಾದಲ್ಲಿ ಹ್ಯಾಟ್ರಿಕ್ ರನೌಟ್ ಮಾಡಿದ ಮುಂಬೈ ರೋಚಕ ಗೆಲುವಿಗೆ ಸಾಕ್ಷಿಯಾಯಿತು.

19ನೇ ಓವರ್​​ನ 4, 5, 6ನೇ ಎಸೆತಗಳಲ್ಲಿ ಕ್ರಮವಾಗಿ ಅಶುತೋಷ್ ಶರ್ಮಾ, ಕುಲ್ದೀಪ್ ಯಾದವ್, ಮೋಹಿತ್​ ಶರ್ಮಾ ರನೌಟ್ ಆದರು. ಗೆಲ್ಲಲು 15 ರನ್ ಬೇಕಿದ್ದಾಗ ಈ ಮೂರು ರನೌಟ್​ಗಳು ಆಗಿದ್ದು, ಪಂದ್ಯದ ಚಿತ್ರಣವನ್ನೇ ಬದಲಿಸಿತು. ಇದಕ್ಕೂ ಮುನ್ನ ಕರುಣ್ ಶರ್ಮಾ ಪ್ರಮುಖ ವಿಕೆಟ್​ಗಳನ್ನೇ ಉರುಳಿಸಿದ್ದೂ ಗೇಮ್​ ಚೇಂಜಿಂಗ್ ಪ್ರದರ್ಶನವಾಗಿತ್ತು. ಪರಿಣಾಮ ಡೆಲ್ಲಿ 193ಕ್ಕೆ ಆಲೌಟ್ ಆಯಿತು. ಅಕ್ಷರ್ ನೇತೃತ್ವದ ಡೆಲ್ಲಿ ಇದೇ ಮೊದಲ ಬಾರಿಗೆ ಆರಂಭಿಕ ಐದೂ ಪಂದ್ಯಗಳನ್ನೂ ಗೆದ್ದು ದಾಖಲೆ ಬರೆಯಲು ಸಾಧ್ಯವಾಗಲಿಲ್ಲ. 5 ಟ್ರೋಫಿ ಗೆದ್ದಿರುವ ಹಾರ್ದಿಕ್ ನೇತೃತ್ವದ ತಂಡಕ್ಕಿದು ಪ್ರಸಕ್ತ ಆವೃತ್ತಿಯಲ್ಲಿ 2ನೇ ಗೆಲುವು. ಸೋತ ಡೆಲ್ಲಿ ಅಂಕ ಪಟ್ಟಿಯ ಅಗ್ರಸ್ಥಾನದಿಂದ 2ನೇ ಸ್ಥಾನಕ್ಕೆ ಕುಸಿಯಿತು. ಆದರೆ ಮುಂಬೈ 9 ರಿಂದ 7ನೇ ಸ್ಥಾನಕ್ಕೆ ಜಿಗಿದಿದೆ.

ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ, ತಿಲಕ್ ವರ್ಮಾ (59) ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 205 ರನ್ ಪೇರಿಸಿತು. ತಿಲಕ್ ಜೊತೆಗೆ ನಮನ್ ಧೀರ್​ ಕೂಡ ಅದ್ಭುತ ಕಾಣಿಕೆ ನೀಡಿದರು. ಡೆಲ್ಲಿ ಪರ ವಿಪ್ರಜ್ ನಿಗಮ್ ಮತ್ತು ಕುಲ್ದೀಪ್ ಯಾದವ್ ತಲಾ 2 ವಿಕೆಟ್ ಕಿತ್ತು ಮಿಂಚಿದರು. ಈ ಗುರಿ ಬೆನ್ನಟ್ಟಿದ ಡೆಲ್ಲಿ ತಂಡವು 19 ಓವರ್​​ಗಳಲ್ಲಿ 193 ರನ್​ಗೆ ಆಲೌಟ್ ಆಯಿತು. ಕರುಣ್​​ರ​ ಬಿರುಸಿನ ಅರ್ಧಶತಕ ಸಿಡಿಸಿದರೂ ಗೆಲುವು ಸಾಧ್ಯವಾಗಲಿಲ್ಲ. ಕರಣ್ ಶರ್ಮಾ 3 ವಿಕೆಟ್ ಕಿತ್ತು ಪಂದ್ಯದ ಚಿತ್ರಣವನ್ನೇ ಬದಲಿಸಿದರು.

ಕರುಣ್ ಅಬ್ಬರದ ನಡುವೆಯೂ ಮುಂಬೈಗೆ ಗೆಲುವು

ದೇಶೀಯ ಕ್ರಿಕೆಟ್​ನಲ್ಲಿ ರನ್ ಹೊಳೆ ಹರಿಸಿದ್ದ ಕರುಣ್ ನಾಯರ್​, ಇದೀಗ 3 ವರ್ಷಗಳ ನಂತರ ಐಪಿಎಲ್​ನಲ್ಲಿ ಆಡಲು  ಕಣಕ್ಕಿಳಿದು ಸಿಕ್ಕ ಅವಕಾಶವನ್ನು ಎರಡೂ  ಕೈಗಳಿಂದ ಬಾಚಿಕೊಂಡಿದ್ದಾರೆ. ಮುಕೇಶ್ ಕುಮಾರ್​​ಗೆ ಬದಲಿಯಾಗಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಲಿಳಿದು ಪವರ್​​ ಫುಲ್ ಇನ್ನಿಂಗ್ಸ್ ಕಟ್ಟಿದ್ದಾರೆ. ಡೆಲ್ಲಿ ಚೇಸಿಂಗ್ ಮಾಡುವ ವೇಳೆ ಇನ್ನಿಂಗ್ಸ್​​ನ ಮೊದಲ ಎಸೆತದಲ್ಲೇ ಜೇಕ್​ ಫ್ರೇಸರ್ ಮೆಕ್​ಗುರ್ಕ್ ಗೋಲ್ಡನ್ ಡಕ್ ಆಗಿ ಹೊರ ನಡೆದರು. ಆಗ ಕಣಕ್ಕಿಳಿದ ಕರುಣ್, ಮುಂಬೈ ಬೌಲರ್​​ಗಳ ಮೇಲೆ ಕರುಣೆಯೇ ತೋರದೆ ಚೆಂಡಾಡಿದರು. ವಿಶ್ವಶ್ರೇಷ್ಠ ಜಸ್ಪ್ರೀತ್ ಬುಮ್ರಾ ಬೌಲಿಂಗ್​​ನಲ್ಲೂ ರನ್ ಮಳೆ ಸುರಿಸಿದ ಕರುಣ್, 21 ಎಸೆತಗಳಲ್ಲೇ ಅರ್ಧಶತಕ ಪೂರೈಸಿದರು.

ಅಭಿಷೇಕ್ ಪೊರೆಲ್ ಜೊತೆಗೆ 2ನೇ ವಿಕೆಟ್​ಗೆ 119 ರನ್​ಗಳ ಜೊತೆಯಾಟವಾಡಿದ ಕರುಣ್ 40 ಎಸೆತಗಳಲ್ಲಿ 12 ಬೌಂಡರಿ, 5 ಸಿಕ್ಸರ್ ಸಹಿತ 89 ರನ್ ಚಚ್ಚಿದರು. ಆದರೆ ಪಂದ್ಯವನ್ನು ಸುಸ್ಥಿತಿಗೆ ತಂದಿಟ್ಟು ಕರುಣ್ ಔಟಾದರು. ಅವರು 2018ರ ನಂತರ ಸಿಡಿಸಿದ ಅರ್ಧಶತಕ ಇದು. ಆದರೆ ಚೊಚ್ಚಲ ಶತಕ ಸಿಡಿಸುವ ಅವಕಾಶ ಕಳೆದುಕೊಂಡರು. ಅಭಿಷೇಕ್ ಪೊರೆಲ್ 33 ರನ್ ಸಿಡಿಸಿ ತಂಡಕ್ಕೆ ನೆರವಾಗಿದ್ದರು. ಆದರೆ ಆ ನಂತರ ಕಣಕ್ಕಿಳಿದ ಆಟಗಾರರು ನಿರಾಸೆ ಮೂಡಿಸಿದರು. ಕೆಎಲ್ ರಾಹುಲ್ (15), ಅಕ್ಷರ್ ಪಟೇಲ್ (9), ಟ್ರಿಸ್ಟಾನ್ ಸ್ಟಬ್ಸ್ (1) ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಇದು ಡೆಲ್ಲಿ ತಂಡವನ್ನು ಸಂಕಷ್ಟಕ್ಕೆ ತಂದು ನಿಲ್ಲಿಸಿತು. ಬಳಿಕ ವಿಪ್ರಜ್ ನಿಗಮ್ ಸ್ಟಂಪ್ ಆದರು. ಕೊನೆಯಲ್ಲಿ ಅಶುತೋಷ್ ಶರ್ಮಾ ಫಿನಿಷ್ ಮಾಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.

ಆದರೆ 19ನೇ ಓವರ್​​ನ 2, 3ನೇ ಎಸೆತದಲ್ಲಿ ಸತತ ಬೌಂಡರಿ ಸಿಡಿಸಿದ್ದ ಅಶುತೋಷ್, 4ನೇ ಎಸೆತದಲ್ಲಿ ರನೌಟ್ ಆದರು. ಇವರ ಬಳಿಕ ಕುಲ್ದೀಪ್ ಮತ್ತು ಮೋಹಿತ್​ ಶರ್ಮಾ ಸಹ ರನೌಟ್ ಆದರು. ಇದರೊಂದಿಗೆ ತಂಡವು ಆಲೌಟ್ ಆಯಿತು. 

ತಿಲಕ್ ವರ್ಮಾ ಅಬ್ಬರ

ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ಉತ್ತಮ ಆರಂಭ ಪಡೆಯಿತು. ಪವರ್​ಪ್ಲೇನಲ್ಲಿ 59 ರನ್ ಬಂದಿತ್ತು. ಆದರೆ ಬಿರುಸಿನ ಆಟಕ್ಕೆ ಕೈ ಹಾಕಿದ್ದ ರೋಹಿತ್​ ಶರ್ಮಾ ಅನಗತ್ಯ ಹೊಡೆತಕ್ಕೆ ಯತ್ನಿಸಿದರು. ಆದರೆ ಚೆಂಡು ಬ್ಯಾಟ್​ಗೆ ತಾಗದೆ ಎಲ್​ಬಿಡಬ್ಲ್ಯು  ಆದರು. ಹಿಟ್​ಮ್ಯಾನ್ 15ಕ್ಕೆ ಆಟ ಮುಗಿಸಿದರು. ಆ ಬಳಿಕ ರಿಯಾನ್ ರಿಕಲ್ಟನ್ (41) ಜೊತೆಯಾದ ಸೂರ್ಯಕುಮಾರ್​ (40) ಕೂಡ ಸ್ಕೋರ್ ಬೋರ್ಡ್​​​ನಲ್ಲಿ ರನ್ ಏರಿಸಿದರು. ಇವರಲ್ಲದೆ, ತಿಲಕ್ ವರ್ಮಾ ಕೊನೆತನಕ ಕ್ರೀಸ್​ನಲ್ಲಿ ಉಳಿದು 200ರ ಗಡಿದಾಟಿಸಲು ನೆರವಾದರು. 33 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಸಹಿತ 59 ರನ್ ಗಳಿಸಿದರು. ನಮನ್ ಧೀರ್ ಅಜೇಯ 38 ರನ್ ಕಲೆ ಹಾಕುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಹಾರ್ದಿಕ್ ಪಾಂಡ್ಯ 2 ರನ್ ಗಳಿಸಿ ನಿರಾಸೆ ಮೂಡಿಸಿದರು.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner