Wankhede Stadium: ಭಾರತ ವಿಶ್ವಕಪ್ ಗೆದ್ದ ವಾಂಖೆಡೆ ಮೈದಾನಕ್ಕೆ ಹೊಸ ಟಚ್; ಕ್ರಿಕೆಟ್ ಹಬ್ಬಕ್ಕೆ ಸಜ್ಜಾಗಿದೆ 49 ವರ್ಷಗಳ ಇತಿಹಾಸದ ಸ್ಟೇಡಿಯಂ
Wankhede Cricket Stadium: ವಿಶ್ವಕಪ್ ಟೂರ್ನಿಗೆ ಭಾರತದ ಕ್ರಿಕೆಟ್ ಮೈದಾಗಳು ಸಜ್ಜಾಗಿವೆ. ಅದರಂತೆ ಮುಂಬೈನ ವಾಂಖೆಡೆ ಮೈದಾನ ಕೂಡ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸಿದ್ಧಗೊಂಡಿದೆ. ಈ ಮೈದಾನದ ವೈಶಿಷ್ಟ್ಯಗಳನ್ನೊಮ್ಮೆ ನೋಡೋಣ.
ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕ ದಿನಗಣನೆ ಆರಂಭವಾಗಿದೆ. ಅಕ್ಟೋಬರ್ 5ರಿಂದ ಶುರುವಾಗುವ ಕ್ರಿಕೆಟ್ ಜಾತ್ರೆಗೆ ಬಿಸಿಸಿಐ ಅಂತಿಮ ಹಂತದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಭಾರತದಲ್ಲಿ ಪ್ರಮುಖ 10 ಮೈದಾನಗಳಲ್ಲಿ ಮೆಗಾ ಟೂರ್ನಿ ನಡೆಯಲಿದ್ದು, ಅದರಲ್ಲಿ ಮುಂಬೈನ ವಾಂಖೆಡೆ ಮೈದಾನವೂ ಒಂದು. ಭಾರತೀಯ ಕ್ರಿಕೆಟ್ ಪ್ರೇಮಿಗಳು ಈ ಮೈದಾನವನ್ನು ಎಂದಿಗೂ ಮರೆಯುವುದಿಲ್ಲ. ಭಾರತ 2011ರ ಏಕದಿನ ವಿಶ್ವಕಪ್ ಗೆದ್ದಿದ್ದು ಇದೇ ಮೈದಾನದಲ್ಲಿ ಎಂಬುದು ವಿಶೇಷ.
ಏಕದಿನ ವಿಶ್ವಕಪ್ಗೆ ಆತಿಥ್ಯ ವಹಿಸುವ ಮೈದಾನಗಳಿಗೆ ಬಿಸಿಸಿಐ ವಿಶೇಷ ಅನುದಾನ ನೀಡಿದ್ದು, ನವೀಕರಣ ಮಾಡಿಸಿದೆ. ಅದರಂತೆ ವಾಂಖೆಡೆ ಮೈದಾನದ ನವೀಕರಣಕ್ಕೂ 100 ಕೋಟಿ ವೆಚ್ಚ ನೀಡಿದೆ. ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸಿದ್ಧವಾಗಿರುವ ವಾಂಖೆಡೆ, ಸೆಮಿಫೈನಲ್ ಸೇರಿ ಪ್ರಮುಖ ಐದು ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಪ್ರೇಕ್ಷಕರಿಗೆ ಸಮಸ್ಯೆ ಎದುರಾಗದಂತೆ, ಅಗತ್ಯ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಹಾಗಿದ್ದರೆ ವಿಶ್ವಕಪ್ಗೂ ಮುನ್ನ ಮೈದಾನದ ವಿಶೇಷತೆಗಳ ಕುರಿತು ತಿಳಿಯೋಣ.
- ಹೆಸರು: ವಾಂಖೆಡೆ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ
- ಸ್ಥಾಪನೆ: 1974
- ಸ್ಥಳ: ಮುಂಬೈ
- ಕ್ಯುರೇಟರ್ ಹೆಸರು: ಸುದೀರ್ ನಾಯಕ್
- ಪ್ರೇಕ್ಷಕರ ಸಾಮರ್ಥ್ಯ: 33,000
- ಪೆವಿಲಿಯನ್ ಎಂಡ್‌ಗಳು: ಗಾರ್ವೇರ್ ಪೆವಿಲಿಯನ್ ಎಂಡ್, ಟಾಟಾ ಎಂಡ್
- ಸ್ಟ್ಯಾಂಡ್ಗಳು: ಸುನಿಲ್ ಗವಾಸ್ಕರ್ ಸ್ಟ್ಯಾಂಡ್, ಉತ್ತರ ಸ್ಟ್ಯಾಂಡ್, ವಿಜಯ್ ಮರ್ಚೆಂಟ್ ಸ್ಟ್ಯಾಂಡ್, ಸಚಿನ್ ತೆಂಡೂಲ್ಕರ್ ಸ್ಟ್ಯಾಂಡ್, MCA ಸ್ಟ್ಯಾಂಡ್, ವಿಠ್ಠಲ್ ದಿವೇಚಾ ಸ್ಟ್ಯಾಂಡ್, ಗಾರ್ವೇರ್ ಸ್ಟ್ಯಾಂಡ್, ಗ್ರ್ಯಾಂಡ್ ಸ್ಟ್ಯಾಂಡ್
ವಾಂಖೆಡೆಯಲ್ಲಿ ನಡೆಯುವ ವಿಶ್ವಕಪ್ ಪಂದ್ಯಗಳು
- ಇಂಗ್ಲೆಂಡ್ vs ಸೌತ್ ಆಫ್ರಿಕಾ, ಅ.21, 20ನೇ ಪಂದ್ಯ
- ಸೌತ್ ಆಫ್ರಿಕಾ vs ಬಾಂಗ್ಲಾದೇಶ, ಅ.24, 23ನೇ ಪಂದ್ಯ
- ಭಾರತ vs ಶ್ರೀಲಂಕಾ, ನ.2, 33ನೇ ಪಂದ್ಯ
- ಆಸ್ಟ್ರೇಲಿಯಾ vs ಅಫ್ಘಾನಿಸ್ತಾನ, ನ.7, 39ನೇ ಪಂದ್ಯ
- ಮೊದಲ ಸೆಮಿಫೈನಲ್ ಪಂದ್ಯ, ನವೆಂಬರ್ 15
ಮುಂಬೈ 3 ವಿಭಿನ್ನ ಸ್ಥಳಗಳಲ್ಲಿ ಟೆಸ್ಟ್ ಪಂದ್ಯಗಳಿಗೆ ಆತಿಥ್ಯ ವಹಿಸಿದೆ. ಮೊದಲು ಜಿಮ್ಖಾನಾ ಮೈದಾನವನ್ನು ನಿರ್ಮಿಸಲಾಯಿತು. ಬಳಿಕ 2ನೇ ಮಹಾಯುದ್ಧದ ನಂತರ ಬ್ರಬೋರ್ನ್ ಕ್ರಿಕೆಟ್ ಸ್ಟೇಡಿಯಂ ಸ್ಥಾಪನೆ ಮಾಡಲಾಯಿತು. ಆದರೆ, ಕ್ರಿಕೆಟ್ ಪಂದ್ಯಗಳಿಗೆ ಟಿಕೆಟ್ ಹಂಚಿಕೆಗೆ ಸಂಬಂಧಿಸಿ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ (CCI) ಮತ್ತು ಮುಂಬೈ ಕ್ರಿಕೆಟ್ ಸಂಸ್ಥೆ (MCA) ನಡುವೆ ವಿವಾದ ಉಂಟಾಗಿತ್ತು. ಆಗ ಮತ್ತೊಂದು ಕ್ರೀಡಾಂಗಣ ನಿರ್ಮಿಸಲಾಯಿತು. ಅದೇ ವಾಂಖೆಡೆ.
ಈ ವಾಂಖೆಡೆ ಮೈದಾನ ನಿರ್ಮಿಸಲು ರಾಜಕಾರಣಿ ಮತ್ತು ಮುಂಬೈ ಕ್ರಿಕೆಟ್ ಅಸೋಸಿಯೇಶನ್‌ನ ಕಾರ್ಯದರ್ಶಿ ಎಸ್‌ಕೆ ವಾಂಖೆಡೆ ಅವರೇ ಮುಂದಾಳತ್ವ ವಹಿಸಿದ್ದರು. ಹಾಗಾಗಿ ಅವರ ಹೆಸರನ್ನೇ ಕ್ರೀಡಾಂಗಣಕ್ಕೆ ಇಡಲಾಗಿದೆ. ಕ್ರೀಡಾಂಗಣದ ಆರಂಭಿಕ ಸಾಮರ್ಥ್ಯ 45,000 ಆಗಿತ್ತು. 1974-75ರ ಋತುವಿನಲ್ಲಿ ವೆಸ್ಟ್ ಇಂಡೀಸ್ ಭಾರತ ಪ್ರವಾಸ ಕೈಗೊಂಡಾಗ ಮೊದಲ ಟೆಸ್ಟ್ ಪಂದ್ಯವನ್ನು ಇಲ್ಲಿ ನಡೆಸಲಾಯಿತು. ಆ ಬಳಿಕ ಅತ್ಯುನ್ನತ ನವೀಕರಣಗಳೊಂದಿಗೆ ಕಂಗೊಳಿತು.
2011ರ ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಮೈದಾನವನ್ನು ನವೀಕರಣ ಮಾಡಲಾಗಿತ್ತು. ವಿಶ್ವಕಪ್ಗೆ ಆತಿಥ್ಯ ವಹಿಸಿದ್ದ ಕಾರಣ 2010-2011ರಲ್ಲಿ ಮೇಲ್ಛಾವಣಿ, ಆಸನಗಳು, ಎಲಿವೇಟರ್ ಸೇರಿದಂತೆ ಹಲವು ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಾಯಿತು. ಆ ಕಾರಣದಿಂದ 45 ಸಾವಿರ ಸಾಮರ್ಥ್ಯವನ್ನು 33 ಸಾವಿರಕ್ಕೆ ಇಳಿಸಲಾಯಿತು. 2011ರ ಏಕದಿನ ವಿಶ್ವಕಪ್ ಫೈನಲ್ ಸೇರಿದಂತೆ ಲೀಗ್ನ ಹಲವು ಪಂದ್ಯಗಳಿಗೆ ವಾಂಖೆಡೆ ಆತಿಥ್ಯ ವಹಿಸಿತ್ತು.
ಪಿಚ್ ರಿಪೋರ್ಟ್
ವಾಂಖೆಡೆ ಪಿಚ್ ವೇಗಿಗಳು ಮತ್ತು ಸ್ಪಿನ್ನರ್ಸ್ಗೆ ಸಹಾಯ ಮಾಡುತ್ತದೆ. ಅರೇಬಿಯನ್ ಸಮುದ್ರದ ಸಮೀಪವಿರುವ ಸ್ಥಳವು ಸ್ವಿಂಗ್ ಬೌಲರ್ಸ್ಗೆ ಹೆಚ್ಚು ನೆರವಾಗುತ್ತದೆ. ಆದರೆ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಪಂದ್ಯ ಮುಂದುವರೆದಂತೆ, ಬ್ಯಾಟ್ಸ್ಮನ್ಗಳಿಗೆ ಹೆಚ್ಚು ನೆರವಾಗಲಿದೆ. ಸಂಜೆ ವೇಳೆ ಇಬ್ಬನಿ ಕಾಡುವ ಕಾರಣ, ಚೆಂಡು ಹೆಚ್ಚು ಸ್ವಿಂಗ್ ಆಗುವುದಿಲ್ಲ. ಹಾಗಾಗಿ ಈ ಬಾರಿ ನಡೆಯುವ ಪಂದ್ಯಗಳು ಕ್ರಿಕೆಟ್ ಪ್ರೇಮಿಗಳಿಗೆ ಹೆಚ್ಚು ಮನರಂಜನೆ ನೀಡುತ್ತವೆ ಎಂಬುದಲ್ಲಿ ಅನುಮಾನವೇ ಇಲ್ಲ.
ಈ ಮೈದಾನದಲ್ಲಿ ಏಕದಿನ ಕ್ರಿಕೆಟ್ ಅಂಕಿ-ಅಂಶಗಳು
- Iಈವರೆಗೂ ಈ ಮೈದಾನದಲ್ಲಿ ನಡೆದ ಒಟ್ಟು ಏಕದಿನ ಪಂದ್ಯಗಳು- 29
- ಮೊದಲು ಬ್ಯಾಟಿಂಗ್ ನಡೆಸಿದ ತಂಡಗಳು ಗೆದ್ದಿರುವುದು - 14 ಪಂದ್ಯಗಳು
- ಮೊದಲು ಬೌಲಿಂಗ್ ನಡೆಸಿದ ತಂಡಗಳು ಗೆದ್ದಿರುವುದು - 15 ಪಂದ್ಯಗಳು
- ಮೊದಲ ಇನ್ನಿಂಗ್ಸ್ನ ಸರಾಸರಿ ಮೊತ್ತ - 234
- ಎರಡನೇ ಇನ್ನಿಂಗ್ಸ್ನ ಸರಾಸರಿ ಮೊತ್ತ - 201
- ಈ ಮೈದಾನದಲ್ಲಿ ಗರಿಷ್ಠ ಮೊತ್ತ - 438/4 (ಭಾರತ vs ಸೌತ್ ಆಫ್ರಿಕಾ)
- ಈ ಮೈದಾನದಲ್ಲಿ ಕನಿಷ್ಠ ಮೊತ್ತ - 79/10 (ಭಾರತ vs ವೆಸ್ಟ್ ಇಂಡೀಸ್ ಮಹಿಳಾ ಪಂದ್ಯ)
- ಮಳೆ ಬಂದರೆ ನೀರು ನಿಲ್ಲದಂತೆ ವ್ಯವಸ್ಥೆ
ಈ ಹಿಂದೆ ಮಳೆ ಬಂದರೆ, ಪಿಚ್ ಅನ್ನು ಒಣಗಿಸಿ ಮುಂದುವರೆಸಲು ಸಾಕಷ್ಟು ಸಮಯ ಹಿಡಿಯುತ್ತಿತ್ತು. ಆದರೀಗ ವಾಂಖೆಡೆ ಸ್ಟೇಡಿಯಂ ಅನ್ನು ಮೇಲ್ದರ್ಜೆಗೇರಿಸಲಾಗಿದೆ. ಹೀಗಾಗಿ ಅಭಿಮಾನಿಗಳು ಮಳೆ ಬಂದು ಪಂದ್ಯ ಸ್ಥಗಿತಗೊಂಡರೆ ಹೆಚ್ಚು ಹೊತ್ತು ಕಾಯುವಂತಿಲ್ಲ. ಮೈದಾನದ ನೀರನ್ನು ಮಳೆ ನಿಂತ ತಕ್ಷಣವೇ ಹೊರ ಹಾಕಲು ವ್ಯವಸ್ಥೆ ಮಾಡಲಾಗಿದೆ. ಪಿಚ್ ನೆನೆದರೆ ಅದನ್ನೂ ತಕ್ಷಣವೇ ಒಣಗಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.