T20 Record: ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ; ರೋಹಿತ್ ಶರ್ಮಾ ದಾಖಲೆ ಮುರಿದ ನಮೀಬಿಯಾ ಆಟಗಾರ-namibia batter jan nicol loftie eaton breaks rohit sharma record smashes fastest t20i century in 33 balls vs nepal jra ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  T20 Record: ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ; ರೋಹಿತ್ ಶರ್ಮಾ ದಾಖಲೆ ಮುರಿದ ನಮೀಬಿಯಾ ಆಟಗಾರ

T20 Record: ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ; ರೋಹಿತ್ ಶರ್ಮಾ ದಾಖಲೆ ಮುರಿದ ನಮೀಬಿಯಾ ಆಟಗಾರ

Jan Nicol Loftie Eaton: ನಮೀಬಿಯಾದ ಬ್ಯಾಟರ್ ಜಾನ್ ನಿಕೋಲ್ ಲಾಫ್ಟಿ ಈಟನ್ ನೇಪಾಳ ವಿರುದ್ಧ ದಾಖಲೆಯ ಶತಕ ಸಿಡಿಸಿದ್ದಾರೆ. ಕೇವಲ 33 ಎಸೆತಗಳಲ್ಲಿ ಮೂರಂಕಿ ಮೊತ್ತ ತಲುಪಿ, ಅತ್ಯಂತ ವೇಗದ ಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ. ಇದರೊಂದಿಗೆ ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ ರೆಕಾರ್ಡ್‌ ಬ್ರೇಕ್‌ ಮಾಡಿದ್ದಾರೆ.

ರೋಹಿತ್ ಶರ್ಮಾ ದಾಖಲೆ ಮುರಿದ ನಮೀಬಿಯಾ ಆಟಗಾರ
ರೋಹಿತ್ ಶರ್ಮಾ ದಾಖಲೆ ಮುರಿದ ನಮೀಬಿಯಾ ಆಟಗಾರ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇನ್ನೂ ಅಂಬೆಗಾಲಿಡುತ್ತಾ ಬೆಳೆಯುತ್ತಿರುವ ನಮೀಬಿಯಾ (Namibia) ದೇಶದ ಆಟಗಾರನೊಬ್ಬ ದಾಖಲೆ ನಿರ್ಮಿಸಿದ್ದಾರೆ. ನೇಪಾಳ ವಿರುದ್ಧದ ಟಿ20 ಪಂದ್ಯದಲ್ಲಿ (Nepal vs Namibia) ದಾಖಲೆಯ ಹಾಗೂ ರೋಚಕ ಶತಕದೊಂದಿಗೆ ನಮೀಬಿಯಾದ ಬ್ಯಾಟರ್‌ ವಿಶ್ವ ಕ್ರಿಕೆಟ್‌ನ ಗಮನ ಸೆಳೆದಿದ್ದಾರೆ. ಪುರುಷರ ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ಸಿಡಿಸಿದ ರೋಹಿತ್ ಶರ್ಮಾ ಅವರ ಅಮೋಘ ದಾಖಲೆಯನ್ನು ನಮೀಬಿಯಾ ಆಟಗಾರ ಮುರಿದಿದ್ದಾರೆ.

ನಮೀಬಿಯಾದ ಬ್ಯಾಟರ್‌ ಜಾನ್ ನಿಕೋಲ್ ಲಾಫ್ಟಿ-ಈಟನ್ (Jan Nicol Loftie-Eaton) ನೇಪಾಳ ತ್ರಿಕೋನ ಟಿ20 ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಈ ದಾಖಲೆ ನಿರ್ಮಿಸಿದ್ದಾರೆ. ಕೇವಲ 33 ಎಸೆತಗಳಲ್ಲಿ ಶತಕ ಗಳಿಸಿ ಅಚ್ಚರಿಯ ರೆಕಾರ್ಡ್‌ ಮಾಡಿದ್ದಾರೆ.

ಇದನ್ನೂ ಓದಿ | ಹಿಮ್ಮಡಿ ಶಸ್ತ್ರಚಿಕಿತ್ಸೆಗೆ ಒಳಗಾದ ಮೊಹಮ್ಮದ್ ಶಮಿ, ಚೇತರಿಕೆಗೆ ಬೇಕು ಸಮಯ; ಐಪಿಎಲ್‌, ವಿಶ್ವಕಪ್‌ ಆಡೋದು ಡೌಟ್

ಕೀರ್ತಿಪುರದ ತ್ರಿಭುವನ್ ಯೂನಿವರ್ಸಿಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ನೇಪಾಳ ವಿರುದ್ಧದ ಪಂದ್ಯದಲ್ಲಿ, ಒಂದು ಹಂತದಲ್ಲಿ ನಮೀಬಿಯಾ ತಂಡವು 11 ಓವರ್‌ ವೇಳೆಗೆ 3 ವಿಕೆಟ್ ಕಳೆದುಕೊಂಡು ಕೇವಲ 62 ರನ್ ಗಳಿಸಿ ಸಂಕಷ್ಟದಲ್ಲಿತ್ತು. ಈ ವೇಳೆ ಮೈದಾನಕ್ಕೆ ಬಂದ ಲಾಫ್ಟಿ-ಈಟನ್ ದಾಖಲೆಯ ಶತಕ ಬಾರಿಸಿದಾರೆ. ಒಟ್ಟು 36 ಎಸೆತಗಳಲ್ಲಿ 11 ಬೌಂಡರಿ ಮತ್ತು 8 ಸ್ಫೋಟಕ ಸಿಕ್ಸರ್‌ ಸಹಿತ 101 ರನ್ ಗಳಿಸಿದ್ದಾರೆ. ತಮ್ಮ ಇನ್ನಿಂಗ್ಸ್‌ನ 33ನೇ ಎಸೆತದಲ್ಲಿ ಬೌಂಡರಿಯೊಂದಿಗೆ ಮೂರಂಕಿ ಗಡಿ ದಾಟಿ ರೆಕಾರ್ಡ್‌ ಮಾಡಿದರು.

ಪುರುಷರ ಟಿ20 ಕ್ರಿಕೆಟ್‌ಲ್ಲಿ ಅತ್ಯಂತ ವೇಗದ ಶತಕ ಸಿಡಿಸಿದ ದಾಖಲೆಯು ನೇಪಾಳದ ಕುಶಾಲ್ ಮಲ್ಲಾ ಹೆಸರಲ್ಲಿತ್ತು. ಕಳೆದ ವರ್ಷ ಮಂಗೋಲಿಯಾ ವಿರುದ್ಧ ಅವರು ಕೇವಲ 34 ಎಸೆತಗಳಲ್ಲಿ ಶತಕ ಬಾರಿಸಿದ್ದರು.

ಇದನ್ನೂ ಓದಿ | ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಿವೀಸ್‌ ವೇಗಿ ನೀಲ್ ವ್ಯಾಗ್ನರ್ ವಿದಾಯ; ಆಸೀಸ್ ವಿರುದ್ಧದ ಟೆಸ್ಟ್‌ ಸರಣಿಗೆ ಆಲಭ್ಯ

ಪೂರ್ಣ ಸದಸ್ಯ ರಾಷ್ಟ್ರಗಳ ಪೈಕಿ ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ 35 ಎಸೆತಗಳಲ್ಲಿ ಸೆಂಚುರಿ ಬಾರಿಸಿದ್ದರು. 2017ರಲ್ಲಿ ಬಾಂಗ್ಲಾದೇಶದ ವಿರುದ್ಧ ಅವರು ಈ ಸಾಧನೆ ಮಾಡಿದ್ದರು. ಭಾರತ ತಂಡದ ನಾಯಕ ರೋಹಿತ್ ಶರ್ಮಾ, 2017ರಲ್ಲಿ ಶ್ರೀಲಂಕಾ ವಿರುದ್ಧ 35 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಇದೀಗ ಈ ದಾಖಲೆಗಳು ಹಳೆಯದಾಗಿವೆ.

ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ

1. ಜಾನ್ ನಿಕೋಲ್ ಲೋಫ್ಟಿ-ಈಟನ್ (ನಮೀಬಿಯಾ) - 33 ಎಸೆತ

2. ಕುಶಾಲ್ ಮಲ್ಲ (ನೇಪಾಳ) - 34 ಎಸೆತ

3. ಡೇವಿಡ್ ಮಿಲ್ಲರ್ (ದಕ್ಷಿಣ ಆಫ್ರಿಕಾ) - 35 ಎಸೆತ

4. ರೋಹಿತ್ ಶರ್ಮಾ (ಭಾರತ) - 35 ಎಸೆತ

5. ಸುದೇಶ್ ವಿಕ್ರಮಶೇಖರ (ಜೆಕ್ ರಿಪಬ್ಲಿಕ್) - 35 ಎಸೆತ

ಲಾಫ್ಟಿ ಈಟನ್ ಆಟದ ನೆರವಿಂದ, ಮೊದಲು ಬ್ಯಾಟಿಂಗ್‌ ಮಾಡಿದ ನಮೀಬಿಯಾ ನಾಲ್ಕು ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ನೇಪಾಳ ತಂಡವು 186 ರನ್‌ಳಿಗೆ ಆಲೌಟ್ ಆಯಿತು. ಲಾಫ್ಟಿ ಈಟನ್ ಬೌಲಿಂಗ್‌ನಲ್ಲೂ ಅಬ್ಬರಿಸಿ ಎರಡು ವಿಕೆಟ್ ಉರುಳಿಸಿದರು. 18.5 ಓವರ್‌ಗಳಲ್ಲಿ ನೇಪಾಳ ಆಲೌಟ್‌ ಆಗುವುದರೊಂದಿಗೆ 7 ಎಸೆತಗಳು ಬಾಕಿ ಇರುವಂತೆಯೇ ನಮೀಬಿಯಾ 20 ರನ್‌ಗಳಿಂದ ಗೆದ್ದು ಬೀಗಿತು. ಶತಕವೀರ ಲಾಫ್ಟಿ ಈಟನ್ ಪಂದ್ಯಶ್ರೇಷ್ಠರಾದರು.

ಇದನ್ನೂ ಓದಿ | WPL 2024: ಆರ್‌ಸಿಬಿ vs ಗುಜರಾತ್‌ ಜೈಂಟ್ಸ್‌ ಮುಖಾಮುಖಿ ದಾಖಲೆ; ಲೈವ್‌ ಸ್ಟ್ರೀಮಿಂಗ್‌ ವಿವರ

ಮುಂದಿನ ಪಂದ್ಯದಲ್ಲಿ ನಮೀಬಿಯಾ ತಂಡವು ಗುರುವಾರ ನೆದರ್ಲೆಂಡ್ಸ್ ವಿರುದ್ಧ ಆಡಲಿದೆ. ನೇಪಾಳ ಬುಧವಾರ ಡಚ್ಚರ ವಿರುದ್ಧ ಮೈದಾನಕ್ಕಿಳಿಯಲಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)