ಆರ್‌ಸಿಬಿ vs ಆರ್‌ಆರ್, ಕೆಕೆಆರ್ vs ಎಸ್‌ಆರ್‌ಎಚ್ ಪ್ಲೇಆಫ್ ಪಂದ್ಯಗಳಿಗೆ ಮಳೆ ಆತಂಕ ಇದೆಯಾ? ಅಹಮದಾಬಾದ್ ಹವಾಮಾನ ವರದಿ ಹೀಗಿದೆ
ಅಹಮದಾಬಾದ್‌ನಲ್ಲಿ ಐಪಿಎಲ್ 2024ರ ಮೊದಲ ಕ್ವಾಲಿಫೈಯರ್ ಹಾಗೂ ಎಲಿಮನೇಟರ್ ಪಂದ್ಯಗಳು ನಡೆಯುತ್ತಿವೆ. ಅಭಿಮಾನಿಗಳಲ್ಲಿ ಮಳೆಯ ಆತಂಕ ಎದುರಾಗಿದೆ. ಹಾಗಿದ್ದರೆ ಮೇ 21 ಹಾಗೂ 22ರ ಪಂದ್ಯಗಳ ದಿನ ಅಹಮದಾಬಾದ್ ಹವಾಮಾನ ಮುನ್ಸೂಚನೆ ಹೇಗಿದೆ ಎಂಬುದನ್ನು ನೋಡೋಣ.
ಐಪಿಎಲ್ 2024ರ ಆವೃತ್ತಿಯ ಪ್ಲೇಆಫ್ ಪಂದ್ಯಗಳಿಗೆ ಕ್ಷಣಗಣನೆ ಆರಂಭವಾಗಿದೆ. ಅಗ್ರ ನಾಲ್ಕು ತಂಡಗಳಾಗಿ ಕೋಲ್ಕತ್ತಾ ನೈಟ್ ರೈಡರ್ಸ್, ಸನ್‌ರೈಸರ್ಸ್ ಹೈದರಾಬಾದ್, ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಪ್ಲೇಆಫ್ ಟಿಕೆಟ್ ಪಡೆದುಕೊಂಡಿವೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೊದಲ ಕ್ವಾಲಿಫೈಯರ್ ಹಾಗೂ ಎಲಿಮನೇಟರ್ ಪಂದ್ಯಗಳು ನಡೆಯುತ್ತಿವೆ. ಮೇ 21 ಹಾಗೂ 22ರಂದು ಪಂದ್ಯಗಳು ನಡೆಯುತ್ತಿದ್ದು, ಪಂದ್ಯದ ದಿನ ಅಹಮದಾಬಾದ್ ಹವಾಮಾನ ಹೇಗಿರಲಿದೆ ಎಂಬುದನ್ನು ನೋಡೋಣ.
ಕೆಕೆಆರ್ ಮತ್ತು ಎಸ್‌ಆರ್‌ಎಚ್ ತಂಡಗಳು ಮೇ 21ರ ಮಂಗಳವಾರ ಕ್ವಾಲಿಫೈಯರ್ 1ರಲ್ಲಿ ಮುಖಾಮುಖಿಯಾಗುತ್ತಿವೆ. ಆರ್‌ಆರ್ ಮತ್ತು ಆರ್‌ಸಿಬಿ ತಂಡಗಳು ಮೇ 22ರ ಬುಧವಾರ ಎಲಿಮಿನೇಟರ್ ಪಂದ್ಯದಲ್ಲಿ ಆಡುತ್ತಿವೆ. ಈ ಎರಡೂ ಪ್ಲೇಆಫ್ ಪಂದ್ಯಗಳು ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಆಗಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿವೆ. ಪಂದ್ಯವು ಸಂಜೆ 7.30ಕ್ಕೆ ಆರಂಭವಾಗಲಿದೆ.
ಅಹಮದಾಬಾದ್‌ನಲ್ಲಿ ಮಳೆ ಆತಂಕ ಇದೆಯಾ?
ಕಳೆದ ಮೇ 13ರಂದು ಇದೇ ಮೈದಾನಲ್ಲಿ ನಡೆಯಬೇಕಿದ್ದ ಗುಜರಾತ್ ಟೈಟಾನ್ಸ್ ಹಾಗೂ ಕೆಕೆಆರ್ ತಂಡಗಳ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಕನಿಷ್ಠ ಟಾಸ್ ಪ್ರಕ್ರಿಯೆಗೂ ಮಳೆ ಅವಕಾಶ ನೀಡಿರಲಿಲ್ಲ. ಹೀಗಾಗಿ ಪ್ಲೇಆಫ್ ಪಂದ್ಯಕ್ಕೆ ಮಳೆ ಅಡ್ಡಿಯಾಗುತ್ತಾ ಎಂಬ ಆತಂಕ ಎದುರಾಗಿದೆ.
ಆಕ್ಯೂವೆದರ್ ಪ್ರಕಾರ, ಮೇ 21ರ ಮಂಗಳವಾರದಂದು ಅಹಮದಾಬಾದ್ ನಗರದಲ್ಲಿ ಮಳೆಯ ಆತಂಕವಿಲ್ಲ. ಗುಜರಾತ್‌ನ ಅತಿ ದೊಡ್ಡ ನಗರದಲ್ಲಿ ತಾಪಮಾನವು 44 ಡಿಗ್ರಿ ಸೆಲ್ಸಿಯಸ್‌ಗೆ ಏರಲಿದೆ ಎಂದು ಹವಾಮಾನ ಮುನ್ಸೂಚನೆ ಹೇಳಿದೆ. ಮರುದಿನ, ಅಂದರೆ ಮೇ 22ರಂದು ಆರ್‌ಸಿಬಿ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವಿನ ಎಲಿಮಿನೇಟರ್ ಪಂದ್ಯದ ದಿನವೂ ತಾಪಮಾನವು ಸುಮಾರು 44 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ವರದಿ ಹೇಳಿದೆ. ಹಗಲಿನ ಹೊತ್ತು ಭಾರಿ ಬಿಸಿಲು ಇರಲಿದ್ದು, ಸಂಜೆ ಕೂಡಾ ಭಾರಿ ತಾಪಮಾನ ಇರಲಿದೆ.
ಭಾರತೀಯ ಹವಾಮಾನ ಇಲಾಖೆ ಹೇಳಿದ್ದೇನು?
ಅಹಮದಾಬಾದ್‌ನಲ್ಲಿ ಮುಂದಿನ ಮೂರು ದಿನಗಳ (ಮೇ 21ರಿಂದ 23) ಬಿಸಿಗಾಳಿ ಆವರಿಸುವ ಆತಂಕದ ಕುರಿತು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ನಗರದಲ್ಲಿ ಕನಿಷ್ಠ ತಾಪಮಾನವು ಸುಮಾರು 31 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ ತಾಪಮಾನವು ಸುಮಾರು 45 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗುತ್ತದೆ ಎಂದು ವರದಿ ಹೇಳಿದೆ. ನಗರದಲ್ಲಿ ಮೇ 23ರವರೆಗೆ ಶಾಖದ ಅಲೆ ಇರಲಿದೆ. ಆ ಬಳಿಕ ಮೇ 24ರಿಂದ ಮೇ 25ರವರೆಗೂ ಪ್ರಖರ ಬಿಸಿಲು ಇರಲಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ | ಐಪಿಎಲ್ 2024 ಲೀಗ್ ಹಂತ ಅಂತ್ಯ; ಆರೆಂಜ್, ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಯಾರಿದ್ದಾರೆ? ವಿರಾಟ್ ಹಿಂದಿಕ್ಕೋದು ಕಷ್ಟ ಕಷ್ಟ
ಹವಾಮಾನ ವರದಿಗಳ ಪ್ರಕಾರ, ಐಪಿಎಲ್ ಪಂದ್ಯಗಳ ಸಮಯದಲ್ಲಿ ನಗರದಲ್ಲಿ ಮಳೆಯಾಗುವ ಸಾಧ್ಯತೆ ಇಲ್ಲ. ಒಂದು ವೇಳೆ ಮಳೆ ಬರದಿದ್ದರೆ ಪಂದ್ಯಗಳು ನಡೆಯಲಿದೆ. ಹೀಗಾದರೆ ಕೆಕೆಆರ್ ಮತ್ತು ಎಸ್‌ಆರ್‌ಎಚ್, ಆರ್‌ಸಿಬಿ ಮತ್ತು ಆರ್‌ಆರ್ ತಂಡಗಳ ಪಂದ್ಯ ಆತಂಕವಿಲ್ಲದೆ ನಡೆಯುತ್ತದೆ.
ಇದನ್ನೂ ಓದಿ | ಐಪಿಎಲ್ ಪ್ಲೇಆಫ್ ಪಂದ್ಯಗಳ ವೇಳಾಪಟ್ಟಿ; ಕ್ವಾಲಿಫೈಯರ್ -1, ಎಲಿಮಿನೇಟರ್ ಎಲ್ಲಿ, ಯಾವಾಗ, ಎಷ್ಟೊತ್ತಿಗೆ? ಇಲ್ಲಿದೆ ವಿವರ
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)