Hardik Pandya: ಹಾರ್ದಿಕ್ ಪಾಂಡ್ಯ-ನತಾಶಾ ಸ್ಟಾಂಕೋವಿಕ್ ಡಿವೋರ್ಸ್; ಕೊನೆಗೂ ಅಧಿಕೃತಗೊಳಿಸಿದ ಸ್ಟಾರ್ ದಂಪತಿ
Hardik Pandya - Natasa Stankovic divorce: ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹಾಗೂ ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ಅವರು ತಮ್ಮ ವಿಚ್ಛೇದನ ಸುದ್ದಿಯನ್ನು ಅಧಿಕೃತವಾಗಿ ಖಚಿತಪಡಿಸಿದ್ದಾರೆ.

ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಹಾಗೂ ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ಅವರು ವಿಚ್ಛೇದನ ಪಡೆದಿರುವ ಕುರಿತು ಇಬ್ಬರೂ ಅಧಿಕೃತವಾಗಿ ಘೋಷಣೆ ಹೊರಡಿಸುವ ಮೂಲಕ ಖಚಿತಪಡಿಸಿದ್ದಾರೆ. ಇದರೊಂದಿಗೆ ಕೆಲವು ತಿಂಗಳಿಂದ ಹರಡಿದ್ದ ವದಂತಿಯೂ ಕೊನೆಗೂ ನಿಜವಾಗಿದೆ. ಡಿವೋರ್ಸ್ ಪಡೆದಿರುವ ಸುದ್ದಿಯನ್ನು ಹಾರ್ದಿಕ್ ಮತ್ತು ನತಾಶಾ ಜುಲೈ 18ರ ಗುರುವಾರ ಸಂಜೆ ಸಾಮಾಜಿಕ ಮಾಧ್ಯಮದಲ್ಲಿ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಅವರು 'ಪರಸ್ಪರ ಬೇರ್ಪಡಲು ನಿರ್ಧರಿಸಿದ್ದೇವೆ' ಎಂದು ಬರೆದುಕೊಂಡಿದ್ದಾರೆ.
ನತಾಶಾ ತಮ್ಮ ಮಗ ಅಗಸ್ತ್ಯನೊಂದಿಗೆ ಮುಂಬೈನಿಂದ ಹೊರಟ ಕೆಲವೇ ಗಂಟೆಗಳ ನಂತರ ಈ ಬಗ್ಗೆ ಪೋಸ್ಟ್ ಮಾಡಲಾಗಿದೆ. '4 ವರ್ಷಗಳ ಕಾಲ ಒಟ್ಟಿಗೆ ಇದ್ದ ನಂತರ, ಹಾರ್ದಿಕ್ ಮತ್ತು ನಾನು ಪರಸ್ಪರ ಬೇರ್ಪಡಲು ನಿರ್ಧರಿಸಿದ್ದೇವೆ. ನಾವು ಒಟ್ಟಿಗೆ ನಮ್ಮ ಅತ್ಯುತ್ತಮ ಪ್ರಯತ್ನ ಮಾಡಿದ್ದೇವೆ. ನಾವು ಎಲ್ಲದನ್ನೂ ಅರ್ಪಿಸಿದ್ದೇವೆ. ಇದೀಗ ನಮ್ಮಿಬ್ಬರ ಹಿತದೃಷ್ಟಿಯಿಂದ ಒಟ್ಟಿಗೆ ಆನಂದಿಸಿದ ಸಂತೋಷ, ಪರಸ್ಪರ ಗೌರವ ಮತ್ತು ಒಡನಾಟವನ್ನು ಗಮನದಲ್ಲಿಟ್ಟುಕೊಂಡು ಮತ್ತು ನಾವು ಕುಟುಂಬವಾಗಿ ಬೆಳೆದಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲು ನಮಗೆ ಕಠಿಣ ನಿರ್ಧಾರವಾಗಿತ್ತು.
ನಾವು ಅಗಸ್ತ್ಯನನ್ನು ಪಡೆದಿದ್ದೇವೆ. ಅವನು ನಮ್ಮಿಬ್ಬರ ಜೀವನದ ಕೇಂದ್ರಬಿಂದುವಾಗಿ ಮುಂದುವರಿಯಲಿದ್ದಾನೆ. ಅವನ ಸಂತೋಷಕ್ಕಾಗಿ ನಾವು ಸಾಧ್ಯವಿರುವ ಎಲ್ಲವನ್ನೂ ನೀಡುತ್ತೇವೆ. ಈ ಕಷ್ಟಕರ ಮತ್ತು ಸೂಕ್ಷ್ಮ ಸಮಯದಲ್ಲಿ ನಮಗೆ ಗೌಪ್ಯತೆ ನೀಡಲು ನಿಮ್ಮ ಬೆಂಬಲ ಮತ್ತು ತಿಳುವಳಿಕೆಯನ್ನು ನಾವು ಪ್ರಾಮಾಣಿಕವಾಗಿ ವಿನಂತಿಸುತ್ತೇವೆ ಎಂದು ನತಾಶಾ ಸ್ಟಾಂಕೋವಿಕ್ ಇನ್ಸ್ಟಾ ಪೋಸ್ಟ್ನಲ್ಲಿ ಬರೆದಿದ್ದಾರೆ. ಹಾರ್ದಿಕ್ ಪಾಂಡ್ಯ ಇದೇ ಪೋಸ್ಟ್ ಹಾಕಿದ್ದು, ಡಿವೋರ್ಸ್ ಖಚಿತಪಡಿಸಿದ್ದಾರೆ. ನಾವು ಒಟ್ಟಿಗೆ ನಮ್ಮ ಅತ್ಯುತ್ತಮ ಪ್ರಯತ್ನ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಎರಡು ಬಾರಿ ಮದುವೆ
ಸರ್ಬಿಯಾದ ನತಾಶಾ ಸ್ಟಾಂಕೋವಿಕ್ ಅವರನ್ನು ಹಾರ್ದಿಕ್ ಪಾಂಡ್ಯ ಅವರನ್ನು ಮೇ 31, 2020 ರಂದು ಮದುವೆಯಾಗಿದ್ದರು. ಮದುವೆಗೂ ಮುನ್ನವೇ ಸ್ಟಾಂಕೋವಿಕ್ ಗರ್ಭಿಣಿಯಾಗಿದ್ದರು. ನಂತರ ಫೆಬ್ರವರಿ 2023ರಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಧರ್ಮದ ಆಚರಣೆಗಳ ಪ್ರಕಾರ ಈ ಜೋಡಿ, ತಮ್ಮ ಮಗ ಅಗಸ್ತ್ಯನ ಮುಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ವಿಚ್ಛೇದನ ಪಡೆದಿರುವ ಕುರಿತು ಪೋಸ್ಟ್ ಮಾಡುವ ಸಂದರ್ಭದಲ್ಲಿ ನತಾಶಾ ಮತ್ತು ಹಾರ್ದಿಕ್ ತಮ್ಮ ಕಾಮೆಂಟ್ಗಳನ್ನು ಸ್ವಿಚ್ ಆಫ್ ಮಾಡಿದ್ದರು. ಪೋಸ್ಟ್ ಮಾಡಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ನತಾಶಾ ವಿರುದ್ಧ ಹಾರ್ದಿಕ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಒಬ್ಬ ವ್ಯಕ್ತಿಯ ಜೀವನವನ್ನು ಹಾಳು ಮಾಡಿದ್ದೀರಿ ಎಂದು ಕಿಡಿಕಾರುತ್ತಿದ್ದಾರೆ.
ಕೆಲವು ತಿಂಗಳುಗಳ ಹಿಂದೆಯೇ ಪಾಂಡ್ಯ ಅವರ ಉಪನಾಮವನ್ನು ಇನ್ಸ್ಟಾಗ್ರಾಂನಲ್ಲಿ ತೆಗೆದು ಹಾಕುತ್ತಿದ್ದಂತೆ ವಿಚ್ಛೇದನದ ಕುರಿತು ಊಹಾಪೋಹ ಸುದ್ದಿಗಳು ಹರಿದಾಡಿದ್ದವು. ಅಂದು ಕೆಲವು ಖಚಿತ ಮೂಲಗಳು ಡಿವೋರ್ಸ್ ಆಗಿದ್ದನ್ನು ಖಚಿತಪಡಿಸಿದ್ದವು. ಆದರೂ ಅದು ವದಂತಿಯಾಗಿಯೇ ಉಳಿದಿತ್ತು. ಡಿವೋರ್ಸ್ ಬೆನ್ನಲ್ಲೇ ‘ನಂಬಲು ಕಷ್ಟ’ ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಹಾರ್ದಿಕ್ ಎಷ್ಟು ಒಳ್ಳೆಯವರು ಎಂಬುದು ಆಕೆಗೆ ಅರ್ಥವಾಗಲೇ ಇಲ್ಲ ಎಂದು ಕೆಲವರು ಪೋಸ್ಟ್ಗಳನ್ನು ಹಾಕುತ್ತಿದ್ದಾರೆ.
ಆಕೆಯನ್ನು ಬಿಡಿ ಸರ್ ನೀವು ಆಕೆಗಿಂತಲೂ ಉತ್ತಮವಾದದ್ದಕ್ಕೆ ಅರ್ಹರು ಎಂದು ಅಭಿಮಾನಿಗಳು ಪೋಸ್ಟ್ ಹಾಕಿದ್ದಾರೆ. ವಿಚ್ಛೇದನದಲ್ಲಿ ನತಾಶಾ ಎಷ್ಟು ಪಡೆಯುತ್ತಾರೆ ಎಂಬ ಬಗ್ಗೆ ಮತ್ತೊಮ್ಮೆ ಕಾಮೆಂಟ್ ಮಾಡಲು ಪ್ರಾರಂಭಿಸಿದ ಒಬ್ಬ ವ್ಯಕ್ತಿ, 'ನತಾಶಾ ಈಗ ನಿಮ್ಮ ಆಸ್ತಿಯ ಎಷ್ಟು ಭಾಗವನ್ನು ತೆಗೆದುಕೊಳ್ಳುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಹಾರ್ದಿಕ್ ತನ್ನ ಆಸ್ತಿಯ ಭಾಗದಲ್ಲಿ 50ರಷ್ಟು ತನ್ನ ತಾಯಿಯ ಹೆಸರಿಗೆ ಬರೆದಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ನತಾಶಾ ಜೀವನಾಂಶ ಪಡೆದಿದ್ದರೂ, ಹಾರ್ದಿಕ್ ಹೆಸರಿನಲ್ಲಿದ್ದ ಆಸ್ತಿಯಲ್ಲಿ ಮಾತ್ರ ಪಡೆಯಲು ಸಾಧ್ಯ.