ಕನ್ನಡ ಸುದ್ದಿ  /  Cricket  /  Nathan Lyon Takes 6 As Australia Thrash New Zealand By 172 Runs In First Test Cameron Green Nz Vs Aus 1st Test Prs

ನಾಥನ್ ಲಿಯಾನ್ ಸ್ಪಿನ್ ದಾಳಿಗೆ ನ್ಯೂಜಿಲೆಂಡ್ ಧೂಳೀಪಟ; ಮೊದಲ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಭರ್ಜರಿ ಗೆಲುವು

Australia vs New Zealand: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ 172 ರನ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಸರಣಿಯಲ್ಲಿ 1-0ರಲ್ಲಿ ಮುನ್ನಡೆ ಪಡೆದಿದೆ.

ಮೊದಲ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಭರ್ಜರಿ ಗೆಲುವು
ಮೊದಲ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಭರ್ಜರಿ ಗೆಲುವು (AFP)

ಕ್ಯಾಮರೂನ್ ಗ್ರೀನ್​ ಅವರ ಸಖತ್ ಶತಕ ಮತ್ತು ನಾಥನ್ ಲಿಯಾನ್ ಅದ್ಭುತ ಸ್ಪಿನ್​ ಬೌಲಿಂಗ್​ಗೆ ತತ್ತರಿಸಿದ ನ್ಯೂಜಿಲೆಂಡ್, ಆಸ್ಟ್ರೇಲಿಯಾ ಎದುರಿನ ಮೊದಲ ಟೆಸ್ಟ್​ ಪಂದ್ಯದಲ್ಲಿ ಹೀನಾಯ ಸೋಲನುಭವಿಸಿದೆ. ವೆಲ್ಲಿಂಗ್ಟನ್​​ನ ಬೇಸಿನ್ ರಿಸರ್ವ್​​ನಲ್ಲಿ ನಡೆದ ಟೆಸ್ಟ್​​​ನಲ್ಲಿ 172 ರನ್​ಗಳ ಜಯದ ನಗೆ ಬೀರಿದ ಪ್ರವಾಸಿ ತಂಡ ಆಸೀಸ್​ ಎರಡು ಪಂದ್ಯಗಳ ಟೆಸ್ಟ್​​ ಸರಣಿಯಲ್ಲಿ 1-0ರಲ್ಲಿ ಮುನ್ನಡೆ ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಪ್ರಥಮ ಇನ್ನಿಂಗ್ಸ್​​​ನಲ್ಲಿ ಕ್ಯಾಮರೂನ್ ಗ್ರೀನ್ ಅಜೇಯ 174 ರನ್ ನೆರವಿನಿಂದ​​ 383 ರನ್​ ಕಲೆ ಹಾಕಿತು. ಇದಕ್ಕೆ ಪ್ರತ್ಯುತ್ತರವಾಗಿ ಕಿವೀಸ್​ 179ಕ್ಕೆ ಕುಸಿತ ಕಂಡಿತ್ತು. ಇದರೊಂದಿಗೆ 204 ರನ್ ಮುನ್ನಡೆ ಪಡೆದ ಆಸೀಸ್, ಎರಡನೇ ಇನ್ನಿಂಗ್ಸ್​​​ನಲ್ಲಿ 164ಕ್ಕೆ ಸರ್ವಪತನ ಕಂಡಿತು. ಕೊನೆಗೆ 369 ರನ್​ ಗುರಿ ಪಡೆದ ಕಿವೀಸ್​​, 196ಕ್ಕೆ ಆಲೌಟ್​​ ಆಗಿ 172 ರನ್​​ಗಳಿಂದ ಶರಣಾಯಿತು.

ಕ್ಯಾಮರೂನ್ ಗ್ರೀನ್ 174 ರನ್

ಮೊದಲ ಇನ್ನಿಂಗ್ಸ್​ನಲ್ಲಿ ಬ್ಯಾಟಿಂಗ್ ಮಾಡಿದ ಆಸೀಸ್​, ತೀವ್ರ ಕುಸಿತ ಕಂಡಿತ್ತು. ಯಾವೊಬ್ಬ ಬ್ಯಾಟರ್​ ಸಹ ಅರ್ಧಶತಕದ ಗಡಿ ದಾಟಿರಲಿಲ್ಲ. ಕಿವೀಸ್​ ಬೌಲರ್​​ಗಳಿಗೆ ಮಂಕಾದರು. ಕ್ಯಾಮರೂನ್ ಗ್ರೀನ್​ ಸೊಗಸಾದ ಬ್ಯಾಟಿಂಗ್ ನಡೆಸಿ ತಂಡದ ಮೊತ್ತ 300ರ ಗಡಿ ದಾಟಿಸಿದ್ದಲ್ಲದೆ, ಅವರು ಸಹ ಭರ್ಜರಿ ಶತಕ ಸಿಡಿಸಿ ಗಮನ ಸೆಳೆದರು. 275 ಎಸೆತಗಳಲ್ಲಿ 33 ಬೌಂಡರಿ, 5 ಸಿಕ್ಸರ್​ ಸಹಿತ ಅಜೇಯ 174 ರನ್ ಕಲೆ ಹಾಕಿದರು.

ಕಿವೀಸ್ ಪರ ಹೆನ್ರಿ, ಫಿಲಿಪ್ಸ್ ಭರ್ಜರಿ ಬೌಲಿಂಗ್

ಮೊದಲ ಇನ್ನಿಂಗ್ಸ್​ನಲ್ಲಿ ಆಸೀಸ್ ವಿರುದ್ಧ ಮ್ಯಾಟ್ ಹೆನ್ರಿ ಮಿಂಚಿನ ಬೌಲಿಂಗ್ ದಾಳಿ ನಡೆಸಿದರು. 30.1 ಓವರ್​ಗಳಲ್ಲಿ 70 ರನ್ ಬಿಟ್ಟು ಕೊಟ್ಟು 5 ವಿಕೆಟ್ ಉರುಳಿಸಿದ್ದರು. ಎರಡನೇ ಇನ್ನಿಂಗ್ಸ್​​ನಲ್ಲೂ 3 ವಿಕೆಟ್ ಕಬಳಿಸಿದ್ದರು. ಅಲ್ಲದೆ, ಗ್ಲೆನ್ ಫಿಲಿಪ್ಸ್ ಸಹ 5 ವಿಕೆಟ್ ಪಡೆದು ಅಬ್ಬರಿಸಿದ್ದರು. ಹಾಗಾಗಿ 2ನೇ ಇನ್ನಿಂಗ್ಸ್​​ನಲ್ಲಿ ಆಸೀಸ್ 164 ರನ್​ಗಳಿಗೆ ಕುಸಿತ ಕಂಡಿತ್ತು.

ನಾಥನ್ ಲಿಯಾನ್ ಮಿಂಚಿನ ಬೌಲಿಂಗ್

ಇನ್ನು ಆಸೀಸ್​ ಪರ ಸ್ಪಿನ್ನರ್ ನಾಥನ್ ಲಿಯಾನ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ. ಪ್ರಥಮ ಇನ್ನಿಂಗ್ಸ್​​​ನಲ್ಲಿ ಕಿವೀಸ್ ಕಿವಿ ಹಿಂಡಿದ್ದ ಸ್ಪಿನ್ನರ್ 4 ವಿಕೆಟ್ ಕಬಳಿಸಿದರೆ, ಎರಡನೇ ಇನ್ನಿಂಗ್ಸ್​​ನಲ್ಲಿ 6 ವಿಕೆಟ್ ಉರುಳಿಸಿದ್ದಾರೆ. ಆ ಮೂಲಕ ನ್ಯೂಜಿಲೆಂಡ್​ಗೆ ತನ್ನ ತವರಿನ ಮೈದಾನದಲ್ಲೇ ಮುಖಭಂಗಕ್ಕೆ ಒಳಗಾಗುವಂತೆ ಮಾಡಿದರು. ಇನ್ನು ಎರಡನೇ ಟೆಸ್ಟ್ ಪಂದ್ಯ ಮಾರ್ಚ್ 8ರಂದು ಆರಂಭವಾಗುತ್ತದೆ.

ನ್ಯೂಜಿಲೆಂಡ್ ಪ್ಲೇಯಿಂಗ್ XI

ಟಾಮ್ ಲಾಥಮ್, ವಿಲ್ ಯಂಗ್, ಕೇನ್ ವಿಲಿಯಮ್ಸನ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಸ್ಕಾಟ್ ಕುಗ್ಲೆಯ್ನ್, ಮ್ಯಾಟ್ ಹೆನ್ರಿ, ಟಿಮ್ ಸೌಥಿ (ನಾಯಕ), ವಿಲಿಯಂ ಒಆರ್ಕೆ.

ಭಾರತ ಪ್ಲೇಯಿಂಗ್ XI

ಸ್ಟೀವನ್ ಸ್ಮಿತ್, ಉಸ್ಮಾನ್ ಖವಾಜಾ, ಮಾರ್ನಸ್ ಲಬುಶೇನ್, ಕ್ಯಾಮೆರಾನ್ ಗ್ರೀನ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹೇಜಲ್​ವುಡ್.