ನಾಯಿಯನ್ನು ಚಿನ್ನದ ಸರಪಳಿಯಿಂದ ಕಟ್ಟಿ ಹಾಕಲಾಗಿದೆ; ಮುಂಬೈ ತಂಡದಲ್ಲಿ ರೋಹಿತ್ ಶರ್ಮಾ ಪರಿಸ್ಥಿತಿ ವಿವರಿಸಿದ ಸಿಕ್ಸರ್ ಸಿಧು
Navjot Singh Sidhu: ಮುಂಬೈ ಇಂಡಿಯನ್ಸ್ ಜೊತೆಗಿನ ರೋಹಿತ್ ಶರ್ಮಾ ಪ್ರಯಾಣದ ಕುರಿತ ವಿಡಿಯೋ ಹಂಚಿಕೊಂಡಿರುವ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು, ‘ನಾಯಿಯನ್ನು ಚಿನ್ನದ ಸರಪಳಿಯಿಂದ ಕಟ್ಟಿ ಹಾಕಲಾಗಿದೆ’ ಎಂದು ಕ್ಯಾಪ್ಶನ್ ಬರೆದಿದ್ದಾರೆ.
ಐಪಿಎಲ್ನಲ್ಲಿ ಐದು ಬಾರಿ ಟ್ರೋಫಿ ಗೆದ್ದಿರುವ ರೋಹಿತ್ ಶರ್ಮಾ (Rohit Sharma) ಬದಲಿಗೆ ಹಾರ್ದಿಕ್ ಪಾಂಡ್ಯ (Hardik Pandya) ಅವರಿಗೆ ನಾಯಕತ್ವ ನೀಡಿರುವುದಕ್ಕೆ ಮುಂಬೈ ಇಂಡಿಯನ್ಸ್ (Mumbai Indians) ಫ್ರಾಂಚೈಸಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ರೋಹಿತ್ ಬದಲಿಗೆ ಹಾರ್ದಿಕ್ಗೆ ಮಣೆ ಹಾಕಿದ್ದು, ವಿಶ್ವ ಕ್ರಿಕೆಟ್ನಲ್ಲೂ ಸದ್ದು ಮಾಡುತ್ತಿದೆ. ಹಿಟ್ಮ್ಯಾನ್ ಮತ್ತು ಮುಂಬೈ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಕೊತಕೊತೆ ಕುದಿಯುತ್ತಿದ್ದಾರೆ.
ಮುಂಬೈ ಆಡಿದ ಎರಡು ಸ್ಥಳಗಳಲ್ಲೂ ಹಾರ್ದಿಕ್ ಪಾಂಡ್ಯ ಅಭಿಮಾನಿಗಳ ಮೌಖಿಕ ದಾಳಿಯನ್ನು ಎದುರಿಸಬೇಕಾಯಿತು. ಪಂದ್ಯಗಳ ಸಮಯದಲ್ಲಿ 'ರೋಹಿತ್-ರೋಹಿತ್' ಘೋಷಣೆಗಳೊಂದಿಗೆ ಗೇಲಿ ಮಾಡುವುದು ಮತ್ತು ಟ್ರೋಲ್ ಮಾಡಿದ ಸಂದರ್ಭವನ್ನು ಹಾರ್ದಿಕ್ ಎದುರಿಸಿದ್ದಾರೆ. ಈಗ, ಐಪಿಎಲ್ ಕ್ರಿಕೆಟ್ ವೀಕ್ಷಕವಿವರಣೆಗೆ ಮರಳಿದ ಭಾರತದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು (Navjot Singh Sidhu), ಮುಂಬೈ ಇಂಡಿಯನ್ಸ್ ಪರಿಸ್ಥಿತಿ ಬಗ್ಗೆ ಎಕ್ಸ್ನಲ್ಲಿ ಗಮನಾರ್ಹ ಪೋಸ್ಟ್ ಹಂಚಿಕೊಂಡಿದ್ದಾರೆ.
ಮಾರ್ಚ್ 30ರಂದು ಸಿಧು ಅವರು ಮುಂಬೈ ತಂಡದ ಜೊತೆಗಿನ ರೋಹಿತ್ ಅವರ ಅಭಿಯಾನದ ಇಣುಕು ನೋಟಗಳನ್ನು ಒಳಗೊಂಡ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಸಿಕ್ಸರ್ ಸಿಧು ಅವರು ಪ್ರಸ್ತುತ ಭಾರತದ ನಾಯಕನನ್ನು ಶ್ಲಾಘಿಸಿದ್ದು, ‘ರೋಹಿತ್ನಂತಹ ಆಟಗಾರನನ್ನು ಹೊಂದಲು ಮುಂಬೈ ಅದೃಷ್ಟಶಾಲಿ’ ಎಂದು ಹೇಳಿದ್ದಾರೆ. ರೋಹಿತ್ ಅವರ ಆಟದ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದು, ತಮ್ಮ ಟ್ರೇಡ್ಮಾರ್ಕ್ ಕಾವ್ಯಾತ್ಮಕ ಶೈಲಿಯಲ್ಲಿ ಬಣ್ಣಿಸಿದ್ದಾರೆ.
ಚಿನ್ನದ ಸರಪಳಿಯಿಂದ ಕಟ್ಟಿ ಹಾಕಲಾಗಿದೆ ಎಂದ ಸಿಧು
ಆದಾಗ್ಯೂ, ಸಿಧು ಅವರು ಹಂಚಿಕೊಂಡಿರುವ ವಿಡಿಯೋಗೆ ನೀಡಿದ ಶೀರ್ಷಿಕೆ ಗಮನ ಸೆಳೆಯಿತು. ಪ್ರಸ್ತುತ ಮುಂಬೈ ಇಂಡಿಯನ್ಸ್ ಪರಿಸ್ಥಿತಿ ವಿವರಿಸುವ ಪ್ರಯತ್ನವನ್ನು ಮಾಡಿದ ಅವರು, ‘ಆನೆ ಧೂಳಿನಿಂದ ಆವೃತವಾಗಿದ್ದರೂ, ಅದನ್ನು ಇನ್ನೂ ಗೌರವಿಸಲಾಗುತ್ತದೆ. ನಾಯಿಯನ್ನು ಚಿನ್ನದ ಸರದಿಂದ ಕಟ್ಟುವುದು ಸಹ ಒಬ್ಬರನ್ನು ಗೌರವಾನ್ವಿತರನ್ನಾಗಿ ಮಾಡುವುದಿಲ್ಲ’ ಎಂದು ಹೇಳಿದ್ದಾರೆ. ಅಂದರೆ ತಂಡದಲ್ಲಿ ರೋಹಿತ್ ಪರಿಸ್ಥಿತಿ ಹೇಗಿದೆ ಎಂಬುದನ್ನು ವಿವರಿಸಿದ್ದಾರೆ
ಮುಂಬೈ ಇಂಡಿಯನ್ಸ್ ತಂಡದಲ್ಲಿ ಹಾರ್ದಿಕ್-ರೋಹಿತ್ ಪರಿಸ್ಥಿತಿಯ ಬಗ್ಗೆ ಸಿಧು ಪ್ರತಿಕ್ರಿಯಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವಾರ ಅಹಮದಾಬಾದ್ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಮುಂಬೈನ ಅಭಿಯಾನ ಪ್ರಾರಂಭವಾಗುವ ಮೊದಲು, ಸ್ಟಾರ್ ಸ್ಪೋರ್ಟ್ಸ್ನಲ್ಲಿ ಮಾತನಾಡಿದ ಸಿಧು, ಹಾರ್ದಿಕ್ ಅವರನ್ನು ನಾಯಕನನ್ನಾಗಿ ಹೆಸರಿಸುವ ಮುಂಬೈ ಚರ್ಚಾಸ್ಪದ ಕರೆಗೆ ಪ್ರತಿಕ್ರಿಯಿಸಿದ್ದರು.
ರೋಹಿತ್ ಚಿಕ್ಕವನಾಗಲ್ಲ ಎಂದಿದ್ದ ಸಿಕ್ಸರ್ ಸಿಧು
‘ನಾನು ಭಾರತೀಯ ತಂಡದಲ್ಲಿ ಆಡಿದ್ದೇನೆ. ಆ ತಂಡದಲ್ಲಿ ಐವರು ನಾಯಕರು ಒಟ್ಟಿಗೆ ಆಡುತ್ತಿದ್ದರು. ಕಪಿಲ್ ದೇವ್, ದಿಲೀಪ್ ವೆಂಗ್ಸರ್ಕರ್, ಸುನಿಲ್ ಗವಾಸ್ಕರ್, ಶ್ರೀಕಾಂತ್ ಮತ್ತು ರವಿ ಶಾಸ್ತ್ರಿ. ಆ ತಂಡದಲ್ಲಿ ಮೇಲೊಬ್ಬ, ಕೆಳಗೊಬ್ಬ ಎನ್ನುವಂತೆ ಕ್ಯಾಪ್ಟನ್ಗಳನ್ನು ನೀವು ಕಾಣಬಹುದು. ಅವರು ತಮ್ಮ ರಾಷ್ಟ್ರಕ್ಕಾಗಿ ಆಡುತ್ತಿರುವುದರಿಂದ ಯಾವುದೇ ಸಮಸ್ಯೆಗಳು ಇರಲಿಲ್ಲ. ದೇಶಕ್ಕಾಗಿ ಆಡಲು ಪ್ರೇರಣೆ ಇತ್ತು. ಆದ್ದರಿಂದ, ಹಾರ್ದಿಕ್ ಅಡಿಯಲ್ಲಿ ಆಡಿದರೆ ರೋಹಿತ್ ಚಿಕ್ಕವನಾಗಲ್ಲ’ ಎಂದು ಸಿಧು ಹೇಳಿದ್ದರು.
ಕಳೆದ ವರ್ಷ ಡಿಸೆಂಬರ್ನಲ್ಲಿ ಮುಂಬೈ ತನ್ನ ಹೊಸ ನಾಯಕನಾಗಿ ಹಾರ್ದಿಕ್ ಅವರನ್ನು ಹೆಸರಿಸಿತ್ತು. ಗುಜರಾತ್ ಟೈಟಾನ್ಸ್ ತಂಡದ ನಾಯಕನಾಗಿದ್ದ ಅವಧಿಯಲ್ಲಿ ಎರಡು ಋತುಗಳನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಹಾರ್ದಿಕ್, ಎರಡು ಬಾರಿಯೂ ತಂಡವನ್ನು ಫೈನಲ್ಗೇರಿಸಿದ್ದರು. ಅಲ್ಲದೆ, ಒಂದು ರನ್ನರ್ಅಪ್ ಆಗಿತ್ತು. 2024ರ ಐಪಿಎಲ್ಗೂ ಮುನ್ನ ಟ್ರೇಡ್ ಮೂಲಕ ಮುಂಬೈ ತಂಡವನ್ನು ಸೇರಿದ ಹಾರ್ದಿಕ್, ನಾಯಕತ್ವ ಕೂಡ ಪಡೆದರು.
ಇದರೊಂದಿಗೆ ರೋಹಿತ್ ಅವರ 11 ವರ್ಷಗಳ ನಾಯಕತ್ವದ ಅಧಿಕಾರಾವಧಿಯನ್ನು ಕೊನೆಯಾಯಿತು. 2013ರ ಋತುವಿನ ಮಧ್ಯದಲ್ಲಿ ಭಾರತದ ಆರಂಭಿಕ ಆಟಗಾರನನ್ನು ಮುಂಬೈ ಇಂಡಿಯನ್ಸ್ ನಾಯಕನನ್ನಾಗಿ ಹೆಸರಿಸಲಾಯಿತು. ರಿಕಿ ಪಾಂಟಿಂಗ್ ಅವರಿಂದ ಅಧಿಕಾರ ವಹಿಸಿಕೊಂಡ ರೋಹಿತ್, ಅಂದಿನಿಂದ 2023ರವರೆಗೂ ಫ್ರಾಂಚೈಸಿಗೆ ಒಟ್ಟು ಐದು ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ಹಾರ್ದಿಕ್ ನಾಯಕತ್ವದಲ್ಲಿ ಮುಂಬೈ ಐಪಿಎಲ್ 2024ರಲ್ಲಿ ಮೊದಲ ಎರಡು ಪಂದ್ಯಗಳನ್ನು ಸೋತಿದೆ. ಮುಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.