ಧೋನಿ ಹಿಡಿದಿದ್ದು ಬ್ಯಾಟಲ್ಲ, ಖಡ್ಗ ಎಂದ ರಾಯುಡು; ನಿಮ್ಮ ಆರಾಧ್ಯ ದೈವ ಊಸರವಳ್ಳಿ ಎಂದ ಸಿಕ್ಸರ್ ಸಿಧು, ವಿಡಿಯೋ
ಕನ್ನಡ ಸುದ್ದಿ  /  ಕ್ರಿಕೆಟ್  /  ಧೋನಿ ಹಿಡಿದಿದ್ದು ಬ್ಯಾಟಲ್ಲ, ಖಡ್ಗ ಎಂದ ರಾಯುಡು; ನಿಮ್ಮ ಆರಾಧ್ಯ ದೈವ ಊಸರವಳ್ಳಿ ಎಂದ ಸಿಕ್ಸರ್ ಸಿಧು, ವಿಡಿಯೋ

ಧೋನಿ ಹಿಡಿದಿದ್ದು ಬ್ಯಾಟಲ್ಲ, ಖಡ್ಗ ಎಂದ ರಾಯುಡು; ನಿಮ್ಮ ಆರಾಧ್ಯ ದೈವ ಊಸರವಳ್ಳಿ ಎಂದ ಸಿಕ್ಸರ್ ಸಿಧು, ವಿಡಿಯೋ

ಎಂಎಸ್ ಧೋನಿ ಹಿಡಿದಿರುವುದು ಬ್ಯಾಟಲ್ಲ, ಖಡ್ಗ ಎಂದು ಹೇಳಿದ ಅಂಬಾಟಿ ರಾಯುಡು ಅವರ ಹೇಳಿಕೆಗೆ ಅಪಹಾಸ್ಯ ಮಾಡಿದ ನವಜೋತ್​ಸಿಂಗ್ ಸಿಧು ಅವರು, 'ನಿಮ್ಮ ಆರಾಧ್ಯ ದೈವ ಊಸರವಳ್ಳಿ ಎಂದು ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಧೋನಿ ಹಿಡಿದಿದ್ದು ಬ್ಯಾಟಲ್ಲ, ಖಡ್ಗ ಎಂದ ರಾಯುಡು; ನಿಮ್ಮ ಆರಾಧ್ಯ ದೈವ ಊಸರವಳ್ಳಿ ಎಂದ ಸಿಕ್ಸರ್ ಸಿಧು, ವಿಡಿಯೋ
ಧೋನಿ ಹಿಡಿದಿದ್ದು ಬ್ಯಾಟಲ್ಲ, ಖಡ್ಗ ಎಂದ ರಾಯುಡು; ನಿಮ್ಮ ಆರಾಧ್ಯ ದೈವ ಊಸರವಳ್ಳಿ ಎಂದ ಸಿಕ್ಸರ್ ಸಿಧು, ವಿಡಿಯೋ

18ನೇ ಆವೃತ್ತಿಯ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ತಂಡವು ಹೀನಾಯ ಪ್ರದರ್ಶನ ನೀಡುತ್ತಿದೆ. ಆರಂಭಿಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವಿನ ನಗೆ ಬೀರಿದ್ದರ ಹೊರತಾಗಿಯೂ ಸತತ ನಾಲ್ಕು ಸೋಲಿಗೆ ಶರಣಾಗಿದೆ. ಏಪ್ರಿಲ್ 8ರಂದು ಜರುಗಿದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 18 ರನ್​ಗಳಿಂದ ಮಣಿದ ಸಿಎಸ್​ಕೆ ವಿರುದ್ಧ ತಮ್ಮ ಅಭಿಮಾನಿಗಳೇ ಆಕ್ರೋಶ ಹೊರಹಾಕಿದ್ದಾರೆ. ಈ ಪಂದ್ಯದ ಸೋಲಿನ ನಂತರ ಲೈವ್​ನಲ್ಲೇ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು ವಿರುದ್ಧ ಮತ್ತೊಬ್ಬ ಆಟಗಾರ ನವಜೋತ್​ಸಿಂಗ್ ಸಿಧು ಕಿಡಿಕಾರಿದ್ದಾರೆ.

ಚಂಡೀಗಢದ ಮುಲ್ಲನ್​ಪುರದಲ್ಲಿರುವ ಮಹಾರಾಜ ಯಾಧವೀಂದ್ರ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ತನ್ನ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿತು. ಪ್ರಿಯಾಂಶ್ ಆರ್ಯ ಶತಕದ ನೆರವಿನಿಂದ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಯಿತು. ಆದರೆ ಈ ಗುರಿ ಬೆನ್ನಟ್ಟಿದ ಸಿಎಸ್​ಕೆ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 201 ರನ್ ಪೇರಿಸಲಷ್ಟೇ ಶಕ್ತವಾಯಿತು. ಡೆವೋನ್ ಕಾನ್ವೆ ಅದ್ಭುತ ಪ್ರದರ್ಶನ ನೀಡುತ್ತಿದ್ದರ ಹೊರತಾಗಿಯೂ ರಿಟೈರ್ಸ್ ಔಟ್ ಆದರು. ಈ ನಿರ್ಧಾರವೂ ಟೀಕೆಗೆ ಗುರಿಯಾಗಿದೆ.

ಕಳೆದ ಪಂದ್ಯಗಳಲ್ಲಿ ತೀರಾ ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದು ಟೀಕೆಗೆ ಗುರಿಯಾಗಿದ್ದ ಎಂಎಸ್ ಧೋನಿ, ಪಂಜಾಬ್ ವಿರುದ್ಧ 5ನೇ ಕ್ರಮಾಂಕದಲ್ಲೇ ಬ್ಯಾಟಿಂಗ್​​ಗೆ ಬಂದರು. ಅರ್ಧಶತಕ ಸಿಡಿಸಿದ್ದ ಕಾನ್ವೆ ರಿಟೈರ್ಡ್ ಔಟಾದ ಬಳಿಕ ರವೀಂದ್ರ ಜಡೇಜಾ ಬಂದರೂ ಸಿಎಸ್​ಕೆ ಗೆಲುವು ಕಾಣಲಿಲ್ಲ. ಚೆನ್ನೈ ಸೋಲಿನ ನಂತರ ಅಂಬಾಟಿ ರಾಯುಡು ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪಹಾಸ್ಯ ಮಾಡಲಾಗುತ್ತಿದೆ. ಚೆನ್ನೈ ತಂಡವನ್ನು ಬೆಂಬಲಿಸಿ ನೀಡಿದ್ದ ಹೇಳಿಕೆ ಕುರಿತು ರಾಯುಡು ಅವರನ್ನು ಸಹ ವೀಕ್ಷಣೆ ವಿವರಣೆಗಾರರೇ ಅಪಹಾಸ್ಯ ಮಾಡಿದ್ದಾರೆ.

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅಂಬಾಟಿ ರಾಯುಡು ಮತ್ತು ನವಜೋತ್ ಸಿಂಗ್ ಸಿಧು ನಡುವೆ ವಾಗ್ವಾದ ನಡೆದಿತ್ತು. ಅದರ ವಿವರ ಇಂತಿದೆ.

ನವಜೋತ್​ ಸಿಂಗ್ ಸಿಧು: ಧೋನಿ ಇಂದು ಆಡೋಕೆ ಓಡಿಹೋಗುತ್ತಿದ್ದಾರೆ (ಧೋನಿ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಬಂದಾಗ ಹೇಳಿದ್ದು)

ಅಂಬಾಟಿ ರಾಯುಡು: ಹೌದು, ಧೋನಿಯ ನಡೆ ನೋಡಿ. ಅವರು ಬ್ಯಾಟ್ ಅನ್ನು ಒಯ್ಯುತ್ತಿಲ್ಲ, ಖಡ್ಗವನ್ನು ಒಯ್ಯುತ್ತಿದ್ದಾರೆ. ಇಂದು ಧೋನಿ ಖಡ್ಗ ಹಿಡಿದು ಘರ್ಜಿಸಲಿದ್ದಾರೆ.

ನವಜೋತ್​ ಸಿಂಗ್ ಸಿಧು: ಬ್ಯಾಟಿಂಗ್ ಹಿಡಿದು ಬ್ಯಾಟಿಂಗ್ ಮಾಡೋಕೆ ಬರ್ತಾರೋ ಅಥವಾ ಯುದ್ಧ ಮಾಡೋಕೆ ಬರ್ತಾರೋ?

ಅಂಬಾಟಿ ರಾಯುಡು: ನೀವು ತಂಡವನ್ನು ಬದಲಿಸಿದಕ್ಕಿಂತ ವೇಗವಾಗಿ ಊಸರವಳ್ಳಿ ಕೂಡ ತನ್ನ ಬಣ್ಣ ಬದಲಿಸುವುದಿಲ್ಲ. (ಸಿಧು ಮತ್ತೊಂದು ತಂಡಕ್ಕೆ ಬೆಂಬಲ ಕೊಟ್ಟಿದ್ದರಿಂದ ನೀಡಿದ್ದ ಹೇಳಿಕೆ)

ನವಜೋತ್​ ಸಿಂಗ್ ಸಿಧು: ಊಸರವಳ್ಳಿ ಯಾರಾದರೂ ಆಗಿದ್ದರೆ ಅದು ನಿಮ್ಮ ಆರಾಧ್ಯ ದೈವ. (ಧೋನಿಯನ್ನು ಗುರಿಯಾಗಿಸಿಕೊಂಡು ಸಿಧು ನೀಡಿರುವ ಹೇಳಿಕೆ ಇದು)

ವಾಸ್ತವವಾಗಿ, ಧೋನಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಅಂಬಾಟಿ ರಾಯುಡು ಬಲವಾಗಿ ಬೆಂಬಲಿಸುತ್ತಾರೆ. ದೀರ್ಘಕಾಲದಿಂದ ಚೆನ್ನೈ ಮತ್ತು ಧೋನಿಗೆ ನಿಷ್ಠರಾಗಿರುವ ಈತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನೂ ಸದಾ ಟೀಕಿಸುತ್ತಾರೆ. ಇತ್ತೀಚೆಗೆ, ರಾಯುಡು ಅವರು ಸಹ ವೀಕ್ಷಕವಿವರಣೆಗಾರ ಸಂಜಯ್ ಬಂಗಾರ್ ಅವರೊಂದಿಗೆ ವಾಗ್ವಾದ ನಡೆಸಿದ್ದರು. ಮುಂಬೈ ಇಂಡಿಯನ್ಸ್ ಕಾರ್ಯತಂತ್ರದ ಬಗ್ಗೆ ಇಬ್ಬರ ನಡುವೆ ಚರ್ಚೆ ನಡೆದಿತ್ತು. ಮುಂಬೈ ತಂಡವು ರೋಹಿತ್ ಶರ್ಮಾ ಅವರನ್ನು ಇಂಪ್ಯಾಕ್ಟ್ ಪ್ಲೇಯರ್​ ಆಗಿ ಕಣಕ್ಕಿಳಿಸಿದ ವಿಚಾರಕ್ಕೆ ಈ ಚರ್ಚೆ ಪ್ರಾರಂಭವಾಯಿತು.

ಫೀಲ್ಡಿಂಗ್ ಸಮಯದಲ್ಲಿ ರೋಹಿತ್ ಮೈದಾನದಲ್ಲಿ ಇಲ್ಲದೇ ಇರುವುದು ಮುಂಬೈ ಇಂಡಿಯನ್ಸ್​ಗೆ ನೋವುಂಟು ಮಾಡಿದೆ ಎಂದು ಭಾವಿಸುತ್ತೇನೆ. ಮೈದಾನದಲ್ಲಿ ಇದ್ದಿದ್ದರೆ ಹಾರ್ದಿಕ್ ಪಾಂಡ್ಯಗೆ ನೆರವಾಗುತ್ತಿದ್ದರು ಎಂದು ಸಂಜಯ್ ಬಂಗಾರ್ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅಂಬಾಟಿ ರಾಯುಡು, 'ಪಾಂಡ್ಯಗೆ ರೋಹಿತ್ ಇನ್ಪುಟ್ ಅಗತ್ಯವಿಲ್ಲ ಎಂದು ಹೇಳಿದ್ದರು. ಹಾರ್ದಿಕ್ ತಮ್ಮದೇ ದಾರಿಯಲ್ಲಿ ಹೋಗುತ್ತಾರೆ. ಅಷ್ಟೇ ಅಲ್ಲ, ಕೊಹ್ಲಿ ನಾಯಕನಾಗಿದ್ದಾಗ ಧೋನಿ ಕೂಡ ಎಲ್ಲದರ ಬಗ್ಗೆ ಸಲಹೆ ನೀಡಲಿಲ್ಲ ಎಂದು ರಾಯುಡು ಹೇಳಿದ್ದಾರೆ. ಸಂಜಯ್ ಬಂಗಾರ್ ಇನ್ನೇನು ಉತ್ತರಿಸಬೇಕು ಎನ್ನುವಾಗ ಮತ್ತೆ ಮಾತಾಡಿದ ರಾಯುಡು, ನಾಯಕನನ್ನು ಏಕಾಂಗಿಯಾಗಿ ಬಿಡಬೇಕು ಎಂದರು. ಬಳಿಕ ಬಂಗಾರ್ ಸುಮ್ಮನಾದರು.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner