ದಕ್ಷಿಣ ಆಫ್ರಿಕಾ ವಿರುದ್ಧ ಕೇವಲ 1 ರನ್‌ನಿಂದ ಸೋತ ನೇಪಾಳ; ನೋವಿಂದ ಕುಸಿದ ಆಟಗಾರರು, ಅಭಿಮಾನಿಗಳಿಗೆ ನಿರಾಶೆ
South Africa vs Nepal: ನೇಪಾಳ ವಿರುದ್ಧದ ಗೆಲುವಿನೊಂದಿಗೆ ಟಿ20 ವಿಶ್ವಕಪ್ 2024ರ ಗುಂಪು ಹಂತದಲ್ಲಿ ಆಡಿದ ಎಲ್ಲಾ 4 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಗೆಲುವು ಸಾಧಿಸಿದೆ. ಅತ್ತ ಈ ಸೋಲಿನೊಂದಿಗೆ ನೇಪಾಳ ಟೂರ್ನಿಯಿಂದ ಹೊರಬಿದ್ದಿದೆ.

ಸೇಂಟ್ ವಿನ್ಸೆಂಟ್‌ನ ಕಿಂಗ್ಸ್‌ಟನ್‌ನಲ್ಲಿ ನಡೆದ ಟಿ20 ವಿಶ್ವಕಪ್ 2024ರ ಪಂದ್ಯದಲ್ಲಿ ನೇಪಾಳ ವಿರುದ್ಧ ದಕ್ಷಿಣ ಆಫ್ರಿಕಾ ಕೇವಲ 1 ರನ್‌ಗಳ ರೋಚಕ ಜಯ ಸಾಧಿಸಿತು. ವಿಶ್ವಕಪ್ ಕೂಟದಲ್ಲಿ ಮೊಟ್ಟಮೊದಲ ಪಂದ್ಯ ಗೆದ್ದು ದಾಖಲೆ ನಿರ್ಮಿಸುವ ವಿಶ್ವಾದಲ್ಲಿದ್ದ ನೇಪಾಳವು, ಕೊನೆಯ ಹಂತದಲ್ಲಿ ಸ್ವಲ್ಪದರಲ್ಲೇ ಎಡವಿ ಗೆಲುವಿನಿಂದ ವಂಚಿತವಾಯ್ತು. ಕ್ರಿಕೆಟ್ ಪಾಲಿಗೆ ಶಿಶುಗಳಾಗಿರುವ ನೇಪಾಳಿಗರು ಅನುಭವಿ ಹಾಗು ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಕೊನೆಯವರೆಗೂ ಕಾಡಿದರು. ಆದರೆ, ಗೆಲುವು ಮಾತ್ರ ಸಾಧ್ಯವಾಗಲಿಲ್ಲ. ಸೋಲಿನಿಂದಾಗಿ ತಂಡದ ಆಟಗಾರರು, ಸಿಬ್ಬಂದಿ ಹಾಗೂ ಅಭಿಮಾನಿಗಳು ಭಾರಿ ನಿರಾಶರಾಗಿದ್ದಾರೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಆಫ್ರಿಕಾ, ಮತ್ತೊಮ್ಮೆ ಕಳಪೆ ಪ್ರದರ್ಶನ ನೀಡಿತು. ಏಳು ವಿಕೆಟ್ ಕಳೆದುಕೊಂಡು 115 ರನ್ ಮಾತ್ರವೇ ಕಲೆ ಹಾಕಿತು. ನೇಪಾಳದ ಸ್ಪಿನ್ನರ್‌ಗಳ ವಿರುದ್ಧ ಹರಿಣಗಳು ಬ್ಯಾಟ್ ಬೀಸಲು ಹೆಣಗಾಡಿದರು. ಕುಶಾಲ್ ಭುರ್ಟೆಲ್ 19 ರನ್ ಬಿಟ್ಟುಕೊಟ್ಟು 4 ಪ್ರಮುಖ ವಿಕೆಟ್ ಕಬಳಿಸಿ ಮಿಂಚಿದರು.
ಇದಕ್ಕೆ ಪ್ರತಿಯಾಗಿ ನೇಪಾಳ ಕೂಡಾ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್‌ಗೆ 36 ರನ್‌ಗಳನ್ನು ಜೊತೆಯಾಟ ಬಂತು. ಇನ್ನಿಂಗ್ಸ್‌ನ ಎಂಟನೇ ಓವರ್‌ನಲ್ಲಿ ತಬ್ರೈಜ್ ಶಮ್ಸಿ ಏಕಾಏಕಿ ಎರಡು ವಿಕೆಟ್‌ಗಳನ್ನು ಪಡೆದರು. ಈ ವೇಳೆ ಮತ್ತೆ ಚೇತರಿಕೊಂಡ ನೇಪಾಳಕ್ಕೆ ಆಸಿಫ್ ಶೇಖ್ ಮತ್ತು ಅನಿಲ್ ಶಾ ಆಸರೆಯಾದರು. ಮೂರನೇ ವಿಕೆಟ್ ಇವರಬ್ಬರು 36 ಎಸೆತಗಳಲ್ಲಿ 50 ರನ್‌ಗಳ ಜೊತೆಯಾಟವಾಡಿದರು. ತಂಡ ಮತ್ತೆ ಸ್ಥಿರ ಪ್ರದರ್ಶನ ಮುಂದುವರೆಸಿತು.
ಈ ವೇಳೆ ಗೆಲುವಿಗಾಗಿ ವಿಕೆಟ್ ಪಡೆಯುವುದು ದಕ್ಷಿಣ ಆಫ್ರಿಕಾಗೆ ಅನಿವಾರ್ಯವಾಯ್ತು. ಈ ವೇಳೆ ನೇಪಾಳಕ್ಕೆ ಕೊನೆಯ ನಾಲ್ಕು ಓವರ್‌ಗಳಲ್ಲಿ 21 ರನ್‌ಗಳ ಅವಶ್ಯಕತೆಯಿತ್ತು. 18ನೇ ಓವರ್‌ನಲ್ಲಿ ಶಮ್ಸಿ ಮತ್ತೆ 2 ವಿಕೆಟ್ ಕಬಳಿಸುವ ಮೂಲಕ ದಕ್ಷಿಣ ಆಫ್ರಿಕಾಕ್ಕೆ ಮುನ್ನಡೆ ತಂದುಕೊಟ್ಟರು. ಈ ನಡುವೆ ಸೋಮಪಾಲ್ ಕಾಮಿ 105 ಮೀಟರ್ ಸಿಕ್ಸರ್ ಸಿಡಿಸಿ ಪಂದ್ಯವನ್ನು ಮತ್ತೆ ಜೀವಂತಗೊಳಿಸಿದರು. ಆಗ ನೇಪಾಳ ಪ್ರೇಕ್ಷಕರು ಕೂಡಾ ಕುಣಿದು ಕುಪ್ಪಳಿಸಿರು. ಸಸ್ಪೆನ್ಸ್ ಗೆ ತಳ್ಳಿತು. ಮತ್ತೆ ಪಂದ್ಯಕ್ಕೆ ತಿರುವು ಸಿಕ್ಕಿತು. ಕೊನೆಯ 2 ಎಸೆತಗಳಲ್ಲಿ 2 ರನ್ ಅಗತ್ಯವಿತ್ತು.
ರೋಚಕ ಅಂತಿಮ ಓವರ್
ಟಿ20 ವಿಶ್ವಕಪ್‌ನಲ್ಲಿ ಐತಿಹಾಸಿಕ ಗೆಲುವಿಗೆ ನೇಪಾಳ ಸಜ್ಜಾಗಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ ಐತಿಹಾಸಿಕ ಗೆಲುವಿನ ಅಂಚಿನಲ್ಲಿ ಕೊನೆಯ ಎಸೆತದಲ್ಲಿ ಎಡವಿತು. ಒಟ್ನೀಲ್ ಬಾರ್ಟ್ಮನ್ ಒಂದು ಡಾಟ್ ಬಾಲ್ ಎಸೆದು ಅಂತಿಮ ಎಸೆತವನ್ನು ಇನ್ನೂ ರೋಚಕವಾಗಿಸಿದರು. ನೇಪಾಳ ಗೆಲುವಿಗೆ 1 ಎಸೆತದಿಂದ 2 ರನ್‌ಗಳ ಅಗತ್ಯವಿತ್ತು. ಈ ವೇಳೆ ಮತ್ತೊಂದು ಶಾರ್ಟ್ ಬಾಲ್ ಎಸೆದ ಬೌಲರ್, ಬ್ಯಾಟರ್ ಕನೆಕ್ಟ್ ಮಾಡಲು ಅವಕಾಶ ನೀಡಲಿಲ್ಲ. ರನ್ ಓಡಲು ಪ್ರಯತ್ನ ಹಾಕಿದ ನೇಪಾಳ ಬ್ಯಾಟರ್ ರನೌಟ್ ಆದರು. ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಶಾಂತವಾಗಿ ಚೆಂಡನ್ನು ಸಂಗ್ರಹಿಸಿ ಗುಲ್ಶನ್ ಅವರನ್ನು ಔಟ್ ಮಾಡಲು ಬೌಲರ್ ಇರುವ ಕಡೆ ಚೆಂಡನ್ನು ಎಸೆದರು. ಹೆನ್ರಿಚ್ ಕ್ಲಾಸೆನ್ ಚೆಂಡನ್ನು ಎತ್ತಿಕೊಂಡು ಸ್ಟಂಪ್ ಕಡೆಗೆ ಎಸೆದರು. ಸ್ವಲ್ಪವೇ ಅಂತರದಲ್ಲಿ ಬ್ಯಾಟರ್ ವಿಕೆಟ್ ಕಳೆದುಕೊಂಡರು.
ಗುಂಪು ಹಂತದಲ್ಲಿ ದಕ್ಷಿಣ ಆಫ್ರಿಕಾ ಆಡಿದ ಎಲ್ಲಾ 4 ಪಂದ್ಯಗಳಲ್ಲಿ ಗೆದ್ದು ಡಿ ಗುಂಪಿನಲ್ಲಿ ಅಗ್ರ ಸ್ಥಾನ ಪಡೆಯಿತು. ಅತ್ತ ನೇಪಾಳವು ಅಧಿಕೃತವಾಗಿ ವಿಶ್ವಕಪ್‌ನಿಂದ ಹೊರಬಿತ್ತು.
ಪಂದ್ಯದಲ್ಲಿ ಸೋಲುತ್ತಿದ್ದಂತೆಯೇ ನೇಪಾಳ ಬ್ಯಾಟರ್ ಗುಲ್ಶನ್ ಆಘಾತಕ್ಕೊಳಗಾದರು. ದಕ್ಷಿಣ ಆಫ್ರಿಕಾದ ಆಟಗಾರರು ಸಂಭ್ರಮಾಚರಣೆಯಲ್ಲಿ ತೊಡಗಿಕೊಂಡರು. ನೇಪಾಳ ಡಗೌಟ್‌ನಲ್ಲಿ ಸಿಬ್ಬಂದಿ ಕಣ್ಣಲ್ಲಿ ನೀಡು ಹರಿಯಿತು. ಸೋಲನ್ನು ಒಪ್ಪಿಕೊಳ್ಳಲಾಗದೆ ಅಭಿಮಾನಿಗಳು ನಿರಾಶರಾದರು.
ಟಿ20 ವಿಶ್ವಕಪ್ 2024ರ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ತಂಡವೇ 100 ರನ್ ಗಳಿಸುತ್ತಿದೆ; ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಕಳಪೆ ಫಾರ್ಮ್ ಕುರಿತು ದಿನೇಶ್ ಕಾರ್ತಿಕ್ ಮನದ ಮಾತು