ಬೆಂಗಳೂರಿನಲ್ಲಿ ಉದ್ಘಾಟನೆಗೆ ಸಜ್ಜಾದ ಹೊಸ ಎನ್‌ಸಿಎ: ಜಯ್ ಶಾ 500 ಕೋಟಿ ಕನಸು ಹೇಗಿದೆ ಗೊತ್ತೇ?
New NCA: ನಾಲ್ಕು ವರ್ಷಗಳ ಹಿಂದೆ ಆರಂಭವಾದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರ ಹೊಸ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಕನಸು ಇದೀಗ ನನಸಾಗುವ ಹಂತದಲ್ಲಿದೆ. ಶೀಘ್ರದಲ್ಲೇ ಅಕಾಡೆಮಿ ಉದ್ಘಾಟನೆಯಾಗಲಿದೆ. ಈ ತಿಂಗಳೊಳಗೆ ಅಕಾಡೆಮಿ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿದೆಯಂತೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಟೀಮ್ ಇಂಡಿಯಾದ ಆಟಗಾರರಿಗಾಗಿ ಏನೆಲ್ಲ ಸೌಲಭ್ಯ ನೀಡುತ್ತದೆ, ಎಷ್ಟು ಖರ್ಚು ಮಾಡುತ್ತದೆ ಎಂಬುದನ್ನು ಯಾರಿಂದಲೂ ಮುಚ್ಚಿಟ್ಟಿಲ್ಲ. ಅತ್ಯಧಿಕ ಸಂಬಳದಿಂದ ಹಿಡಿದು ವಿದೇಶಿ ಪ್ರವಾಸಗಳಿಗೆ ಚಾರ್ಟರ್ ವಿಮಾನಗಳ ವ್ಯವಸ್ಥೆ, ಟ್ರೋಫಿ ಗೆದ್ದವರಿಗೆ ಕೋಟಿಗಟ್ಟಲೆ ಬಹುಮಾನ ಹೀಗೆ ಅನೇಕ ಸೌಲಭ್ಯ ನೀಡಿದೆ. ಇದರೊಂದಿಗೆ ಬಿಸಿಸಿಐ ದೇಶದಲ್ಲಿ ಕ್ರಿಕೆಟ್ ಮಟ್ಟವನ್ನು ಸುಧಾರಿಸಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ. ಅಂತಹ ಒಂದು ಪ್ರಯತ್ನವು ಈಗ ಪೂರ್ಣಗೊಳ್ಳಲಿದೆ. ಇದು ಭಾರತೀಯ ಕ್ರಿಕೆಟ್‌ಗೆ ಬಹುದೊಡ್ಡ ಕೊಡುಗೆ ಆಗಲಿದೆ.
ನಾಲ್ಕು ವರ್ಷಗಳ ಹಿಂದೆ ಆರಂಭವಾದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರ ಹೊಸ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಕನಸು ಇದೀಗ ನನಸಾಗುವ ಹಂತದಲ್ಲಿದೆ. ಕಳೆದ 24 ವರ್ಷಗಳಿಂದ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಬಿಸಿಸಿಐ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ನಡೆಸುತ್ತಿದೆ, ಆದರೆ ಸಾಕಷ್ಟು ಸಮಯದಿಂದ ದೊಡ್ಡ ಅಕಾಡೆಮಿ ಸ್ಥಾಪಿಸಲು ಮಾತುಕತೆಗಳು ಮತ್ತು ಬೇಡಿಕೆಗಳು ಇದ್ದವು. 2020 ರಲ್ಲಿ, ಆಗಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಬೆಂಗಳೂರಿನಲ್ಲಿ ಇದಕ್ಕೆ ಅನುಮೋದನೆ ನೀಡಿದರು.
ನಂತರ ಫೆಬ್ರವರಿ 2022 ರಲ್ಲಿ ಇಬ್ಬರೂ ಒಟ್ಟಾಗಿ ಅದರ ಅಡಿಪಾಯವನ್ನು ಕೂಡ ಹಾಕಿದರು. ಅಂದಿನಿಂದ ಬೆಂಗಳೂರಿನಲ್ಲಿ ಅಕಾಡೆಮಿಯ ಕೆಲಸಗಳು ಅತ್ಯಂತ ವೇಗದಲ್ಲಿ ನಡೆಯುತ್ತಿದ್ದವು. ಅಕಾಡೆಮಿಯನ್ನು ನಿರ್ಮಿಸಲು ಎಷ್ಟು ವೆಚ್ಚವಾಗಲಿದೆ ಎಂಬುದನ್ನು ಬಿಸಿಸಿಐ ಅಧಿಕೃತವಾಗಿ ಬಹಿರಂಗಪಡಿಸಿಲ್ಲ, ಆದರೆ ಸುಮಾರು 500 ಕೋಟಿ ರೂಪಾಯಿ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗುವುದು ಎಂದು ವರದಿಯಲ್ಲಿ ಹೇಳಲಾಗಿತ್ತು. ಈ ಎನ್‌ಸಿಎ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿದ್ದು, ಆಟಗಾರರಿಗೆ ಟ್ರಾಫಿಕ್ ಕಿರಿಕಿರಿ ತಪ್ಪುತ್ತದೆ. ಬೆಂಗಳೂರಿನ ಸಿಂಗಹಳ್ಳಿ ಬಳಿ ಈ ಎನ್‌ಸಿಎ ಇದೆ.
ಹೊಸ NCA ಸಿದ್ಧ
ಇದೀಗ ಸುಮಾರು ಎರಡೂವರೆ ವರ್ಷಗಳ ನಂತರ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕ್ರಿಕೆಟಿಗರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಶನಿವಾರ, ಆಗಸ್ಟ್ 3 ರಂದು, ಶಾ ಅವರು ಅಕಾಡೆಮಿಯ ಕೆಲವು ಚಿತ್ರಗಳನ್ನು ತಮ್ಮ 'X' ನಲ್ಲಿ ಪೋಸ್ಟ್ ಮಾಡಿದ್ದಾರೆ ಮತ್ತು ಅಕಾಡೆಮಿ ಬಹುತೇಕ ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಶೀಘ್ರದಲ್ಲೇ ಅಕಾಡೆಮಿ ಉದ್ಘಾಟನೆಯಾಗಲಿದೆ ಎಂದು ತಿಳಿಸಿದ್ದಾರೆ. ಈ ತಿಂಗಳೊಳಗೆ ಅಕಾಡೆಮಿ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿದೆ. ಈ ಅಕಾಡೆಮಿ ಬಹಳ ದೊಡ್ಡದಾಗಿದೆ, ಇದು ಅನೇಕ ಆಧುನಿಕ ಸೌಲಭ್ಯಗಳನ್ನು ಸಹ ಹೊಂದಿದೆ.
ಹೊಸ ಅಕಾಡೆಮಿ ಮೂರು ವಿಶ್ವ ದರ್ಜೆಯ ಕ್ರಿಕೆಟ್ ಮೈದಾನಗಳನ್ನು ಹೊಂದಿದ್ದು, 45 ಎಕ್ರೆಯಲ್ಲಿ ಬರೋಬ್ಬರಿ 45 ಅಭ್ಯಾಸ ಪಿಚ್‌ಗಳನ್ನು ಹೊಂದಿರುತ್ತದೆ. ಅಷ್ಟೇ ಅಲ್ಲ, ಅಭ್ಯಾಸದ ಪಿಚ್‌ಗಳ ಹೊರತಾಗಿ, ಒಳಾಂಗಣ ಅಭ್ಯಾಸ ಸೌಲಭ್ಯಗಳೂ ಇಲ್ಲಿ ಇರುತ್ತವೆ. ಒಲಂಪಿಕ್ ಗಾತ್ರದ ಈಜುಕೊಳವೂ ಇರಲಿದ್ದು, ಇದರಲ್ಲಿ ಭಾರತೀಯ ಕ್ರಿಕೆಟಿಗರು ತಾಜಾತನವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಆಧುನಿಕ ತರಬೇತಿ ಮತ್ತು ಕ್ರೀಡಾ ವಿಜ್ಞಾನ ಸೌಲಭ್ಯಗಳು ಸಹ ಇರುತ್ತದೆ, ಇಲ್ಲಿ ಆಟಗಾರರ ಇಂಜುರಿ ನಿರ್ವಹಣೆ ನಡೆಯುತ್ತದಂತೆ.
ಈ ಮೂಲಕ ಬಿಸಿಸಿಐ ದೇಶದ ಪ್ರಸ್ತುತ ಮತ್ತು ಭವಿಷ್ಯದ ಕ್ರಿಕೆಟಿಗರು ತಮ್ಮನ್ನು ತಾವು ರೂಪಿಸಿಕೊಳ್ಳಲು ದೊಡ್ಡ ಮೆಟ್ಟಲು ಮಾಡಿಕೊಟ್ಟಿದೆ. ನಿಸ್ಸಂಶಯವಾಗಿ, ಇದು ದೇಶದ ಕ್ರಿಕೆಟಿಗರ ಭವಿಷ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದರಲ್ಲಿ ಅನುಮಾನವಿಲ್ಲ.
2000 ದಲ್ಲಿ ಮೊದಲ ಎನ್‌ಸಿಎ
ಬೆಂಗಳೂರಿನಲ್ಲಿ ಈಗಾಗಲೇ ಒಂದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಇದೆ. ಟೀಮ್ ಇಂಡಿಯಾದ ಯಾವುದೇ ಆಟಗಾರ ಗಾಯಗೊಂಡರೆ, ಅವರು ಚೇತರಿಸಿಕೊಳ್ಳಲು ಇಲ್ಲಿಗೆ ಬರುತ್ತಾರೆ. ಇದನ್ನು 2000 ದಲ್ಲಿ ಸ್ಥಾಪಿಸಲಾಯಿತು. ಇದು ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯೇ ಇದೆ. ಪ್ರಸ್ತುತ ಭಾರತದ ಮಾಜಿ ಕ್ರಿಕೆಟಿಗ ವಿಸಿಎಸ್ ಲಕ್ಷ್ಮಣ್ ಎನ್‌ಸಿಎ ಮುಖ್ಯಸ್ಥರಾಗಿದ್ದಾರೆ. ಆದರೆ, ಇವರ ಅಧಿಕಾರಾವಧಿ ಶೀಘ್ರದಲ್ಲೇ ಕೊನೆಗೊಳ್ಳಲಿದೆ. ಲಕ್ಷ್ಮಣ್ ಅವರು ವೈಯಕ್ತಿಕ ಮತ್ತು ಕೌಟುಂಬಿಕ ಕಾರಣಗಳಿಂದ ಹುದ್ದೆಯಲ್ಲಿ ಮುಂದುವರಿಯುವುದಿಲ್ಲ ಎಂದು ಈಗಾಗಲೇ ಇಚ್ಛೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಬಿಸಿಸಿಐ ಪ್ರಸ್ತುತ ಹೊಸ ಎನ್‌ಸಿಎ ಮುಖ್ಯಸ್ಥರ ಹುಡುಕಾಟದಲ್ಲಿದೆ.
(ವರದಿ: ವಿನಯ್ ಭಟ್)
ಇದನ್ನೂ ಓದಿ: ನಮ್ಮ ಭೇಟಿ ಅಪರೂಪ, ಆದರೆ ಸಿಕ್ಕಾಗೆಲ್ಲಾ..; ವಿರಾಟ್ ಕೊಹ್ಲಿ ಜತೆಗಿನ ಗೆಳೆತನದ ಕುರಿತು ಮಾತನಾಡಿದ ಎಂಎಸ್ ಧೋನಿ